ಯಾದಗಿರಿ: ಅಶ್ಲೀಲ ವೀಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದ ಪ್ರಜ್ವಲ್ ರೇವಣ್ಣನನ್ನು ಜೆಡಿಎಸ್ ಪಕ್ಷದಿಂದ ಅಮಾನತು ಮಾಡಬೇಕು ಎಂದು ಗುರುಮಠಕಲ್ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಶಾಸಕ ಶರಣಗೌಡ ಕಂದಕೂರ ಒತ್ತಾಯ ಮಾಡಿದ್ದಾರೆ.
ಈ ಸಂಬಂಧ ಪಕ್ಷದ ವರೀಷ್ಠ ಎಚ್.ಡಿ.ದೇವೇಗೌಡ ಅವರಿಗೆ ಪತ್ರ ಬರೆದಿದ್ದು, ಅತ್ಯಂತ ಹಿರಿಯರಾದ ತಮಗೆ ನಾನು ಸಲಹೆ ಕೊಡುವಷ್ಟು ದೊಡ್ಡವನಲ್ಲ. ನಾನು ಪತ್ರ ಬರೆದು ನನ್ನ ಅಂತರಾಳದ ಅಭಿಪ್ರಾಯವನ್ನು ಮುಕ್ತ ಮನಸ್ಸಿನಿಂದ ವ್ಯಕ್ತಪಡಿಸ್ತಿದ್ದೇನೆ ಎಂದು ಹೇಳುತ್ತಾ ಮನವಿ ಮಾಡಿದ್ದಾರೆ.
ಪತ್ರದಲ್ಲಿ ಏನಿದೆ?: ಕೆಲದಿನಗಳಿಂದ ರಾಜ್ಯಾದ್ಯಂತ ಹರಿದಾಡ್ತಿರುವ ಕೆಲ ಅಶ್ಲೀಲ ವಿಡಿಯೋ ಪಕ್ಷಕ್ಕೆ ಮುಜುಗರ ಉಂಟು ಮಾಡಿದೆ. ಆ ವಿಡಿಯೋದಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಕಾಣಿಸಿಕೊಂಡಿದ್ದಾರೆ. ಮೇಲ್ನೋಟಕ್ಕೆ ಪ್ರಜ್ವಲ್ ರೇವಣ್ಣ ತಪ್ಪಿಸ್ಥರೆಂಬ ಭಾವನೆ ಉಂಟಾಗಿದೆ. ಹೀಗಾಗಿ ಕೂಡಲೇ ಅವರನ್ನು ಪಕ್ಷದಿಂದ ಅಮಾನತು ಮಾಡಬೇಕು.
ಪ್ರಧಾನಿಯಾದ ಮೊದಲ ಕನ್ನಡಿಗ ಎಂಬ ಅಭಿಮಾನ ತಮ್ಮದಾಗಿದೆ. ಹೆಣ್ಣು ಸಾಕ್ಷಾತ್ ಕಪಿಲ ಸಿದ್ದರಾಮ ಮಲ್ಲಿಕಾರ್ಜುನ ಎಂಬ ಶರಣರ ವಾಣಿಯಂತೆ ಹೆಣ್ಣು ಮಕ್ಕಳನ್ನ ಅತ್ಯಂತ ಗೌರವದಿಂದ ನೋಡಿಕೊಂಡು ಬಂದಿದ್ದೀರಿ. ತಮ್ಮ ಪಕ್ಷದ ಚಿಹ್ನೆಯೂ ತೆನೆ ಹೊತ್ತ ಮಹಿಳೆಯಾಗಿದ್ದು, ನಿಮಗೆ ಮಹಿಳೆಯರ ಮೇಲಿರುವ ಗೌರವವನ್ನ ಇದು ಪ್ರತಿನಿಧಿಸುತ್ತದೆ ಎಂದು ಎಲ್ಲರೂ ಭಾವಿಸಿರುತ್ತಾರೆ.
ಈ ಎಲ್ಲ ಹಿನ್ನೆಲೆಯಲ್ಲಿ ಪರಂಪರೆ ಹೊಂದಿರುವ ಪಕ್ಷಕ್ಕೆ ವಿಡಿಯೋ ಪ್ರಕರಣ ತೀವ್ರ ಮುಜುಗರ ತಂದಿರುವುದಂತೂ ಸುಳ್ಳಲ್ಲ. ತಾವು ಪಕ್ಷದಲ್ಲಿ ಆಂತರಿಕ ಸಮಿತಿ ರಚನೆ ಮಾಡಿ. ತಾಯಂದಿರಿಗೆ ಅದರ ಸತ್ಯ ಗೊತ್ತು ಮಾಡುವಂತಾಗಲಿ ಎಂದು ಉಲ್ಲೇಖಿಸಿದ್ದಾರೆ.