ಮೈಸೂರು: ಮೈಸೂರು ದಸರಾ ಜಂಬೂಸವಾರಿಯ ರೂವಾರಿಗಳಾದ ಗಜಪಡೆಯ ಎರಡನೇ ತಂಡ ಅರಮನೆ ಪ್ರವೇಶ ಮಾಡಿವೆ. ಮೊದಲನೇ ತಂಡ ಈಗಾಗಲೇ ಆಗಮಿಸಿ ತಾಲೀಮು ಆರಂಭಿಸಿದೆ. ಇದೀಗ ಆಗಮಿಸಿರುವ ಎರಡನೇ ತಂಡದ ಗಜಪಡೆಗಳು ತಾಲೀಮು ಆರಂಭಿಸಲಿವೆ.
ಸೋಮವಾರ ಸಂಜೆ ಆಗಮಿಸಿದ ಎರಡನೇ ತಂಡದ ಗಜಪಡೆಯಲ್ಲಿ ಸುಗ್ರೀವ, ಪ್ರಶಾಂತ, ಲಕ್ಷ್ಮೀ, ರೋಹಿತ್ ಮತ್ತು ಹಿರಣ್ಯಾ ಆನೆಗಳಿದ್ದು, ಟ್ರಕ್‌ಗಳ ಮೂಲಕ ನೇರವಾಗಿ ಅರಮನೆ ಅಂಗಳವನ್ನು ಪ್ರವೇಶಿಸಿವೆ. ಬಳಿಕ ಇವುಗಳಿಗೆ ಅರಮನೆ ಆವರಣದಲ್ಲಿರುವ ಕೋಡಿ ಸೋಮೇಶ್ವರನಾಥ ದೇವಾಲಯದ ಬಳಿ ಪಾದ ತೊಳೆದು, ಅರಿಶಿನ-ಕುಂಕುಮ ಹಚ್ಚಿ ಸೇವಂತಿಗೆ ಹೂ ಮುಡಿಸಿ ಬಳಿಕ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ಎಲ್ಲಾ ಆನೆಗಳಿಗೂ ಕಬ್ಬು-ಬೆಲ್ಲ ನೀಡಲಾಯಿತು.
9 ಆನೆಗಳ ಮೊದಲ ತಂಡವು ಕ್ಯಾಪ್ಟನ್ ಅಭಿಮನ್ಯು ನೇತೃತ್ವದಲ್ಲಿ ಸೆ.1ರಂದು ಆಗಮಿಸಿದ್ದು, ಈಗಾಗಲೇ ತಾಲೀಮು ನಡೆಸುತ್ತಿವೆ. ಇನ್ನು ಸೋಮವಾರ ಅರಮನೆಗೆ ಬಂದಿಳಿದ 5 ಆನೆಗಳ ಪೈಕಿ 3 ಹೊಸ ಆನೆಗಳಾಗಿವೆ. ರಾಂಪುರ ಆನೆ ಶಿಬಿರದ ಹಿರಣ್ಯಾ, ರೋಹಿತ್, ದೊಡ್ಡಹರವೆ ಶಿಬಿರದ ಲಕ್ಷ್ಮಿ ಆನೆಗಳು ಇದೇ ಮೊದಲ ಬಾರಿಗೆ ದಸರಾ ಉತ್ಸವದಲ್ಲಿ ಪಾಲ್ಗೊಳ್ಳುತ್ತಿವೆ. ಉಳಿದಂತೆ ದುಬಾರೆ ಶಿಬಿರದ ಪ್ರಶಾಂತ ಮತ್ತು ಸುಗ್ರೀವ ಆನೆಗಳು ಈ ಹಿಂದಿನ ದಸರಾ ಉತ್ಸವದಲ್ಲಿ ಪಾಲ್ಗೊಂಡಿರುವ ಅನುಭವಿ ಆನೆಗಳಾಗಿವೆ.
ಮೊದಲ ತಂಡದಲ್ಲಿ ಆಗಮಿಸಿದ್ದ ಮತ್ತಿಗೋಡು ಶಿಬಿರದ ಕ್ಯಾಪ್ಟನ್ ಅಭಿಮನ್ಯು, ಮಹೇಂದ್ರ, ಭೀಮ, ವರಲಕ್ಷ್ಮಿದುಬಾರೆ ಶಿಬಿರದ ಧನಂಜಯ, ಗೋಪಿ, ಕಂಜನ್, ಬಳ್ಳೆ ಶಿಬಿರದ ಅರ್ಜುನ, ರಾಂಪುರದ ವಿಜಯಾ ಆನೆಗಳು ಸೆ.5ರಂದು ಅರಮನೆ ಪ್ರವೇಶ ಮಾಡಿದ್ದು, ನಿತ್ಯ ತಾಲೀಮಿನಲ್ಲಿ ಭಾಗವಹಿಸುತ್ತಿವೆ. ಈ ನಡುವೆ ಅಂಬಾರಿ ಆನೆ ಅಭಿಮನ್ಯವಿಗೆ 750 ಕೆ.ಜಿ ಭಾರ ಹಾಕಿ ಅರಮನೆಯಿಂದ ಬನ್ನಿಮಂಟಪದವರೆಗೆ ತಾಲೀಮು ನಡೆಸಲಾಗಿದೆ
ದಸರಾ ಉತ್ಸವದಲ್ಲಿ ಪಾಲ್ಗೊಳ್ಳಲು ಆಗಮಿಸಿರುವ ಗಜಪಡೆಯ 2ನೇ ತಂಡವನ್ನು ಸ್ವಾಗತಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಫ್ ಸೌರಭ್‌ಕುಮಾರ್ 2ನೇ ತಂಡದಲ್ಲಿ ಐದು ಆನೆಗಳು ಮೈಸೂರಿಗೆ ಬಂದಿದ್ದು, ಗಜಪಡೆಯಲ್ಲೀಗ 14 ಆನೆಗಳಿವೆ. ಮೊದಲ ತಂಡದಲ್ಲಿ ಕರೆ ತಂದಿದ್ದ 9 ಆನೆಗಳಿಗೆ ಪೌಷ್ಟಿಕ ಆಹಾರ ನೀಡುವ ಜತೆಗೆ ನಿತ್ಯ ತಾಲೀಮು ನಡೆಸಲಾಗುತ್ತಿದೆ. ಅಭಿಮನ್ಯು, ಮಹೇಂದ್ರ, ಧನಂಜಯ, ಭೀಮ ಮತ್ತು ಕಂಜನ್ ಆನೆಗಳಿಗೆ 550 ಕೆ.ಜಿ ಭಾರ ಹಾಕಿ ತಾಲೀಮು ನಡೆಸಿದ್ದು, ಎಲ್ಲಾ ಆನೆಗಳು ತಾಲೀಮನ್ನು ಯಶಸ್ವಿಗೊಳಿಸಿವೆ.
ಸೋಮವಾರ ಅಭಿಮನ್ಯವಿಗೆ 750 ಕೆಜಿ ಭಾರ ಹೊರಿಸಿ ತಾಲೀಮು ನಡೆಸಿದ್ದು, ನಿರಾಯಾಸವಾಗಿ ಬನ್ನಿಮಂಟಪಕ್ಕೆ ತೆರಳಿದ್ದಾನೆ. ಮಂಗಳವಾರ ಮಹೇಂದ್ರ, ಧನಂಜಯ ಆನೆಗಳಿಗೂ ಈ ತಾಲೀಮು ನಡೆಸುವ ಮೂಲಕ 2ನೇ ಹಂತದ ಅಂಬಾರಿ ಆನೆಗಳಾಗಿ ಸಜ್ಜುಗೊಳಿಸಲಾಗುತ್ತಿದೆ. 2ನೇ ತಂಡದ ಆನೆಗಳಿಗೆ ಎರಡು ದಿನ ವಿಶ್ರಾಂತಿ ನೀಡಿ ಬಳಿಕ ತಾಲೀಮಿನಲ್ಲಿ ಸೇರಿಸಿಕೊಳ್ಳಲಾಗುತ್ತದೆ. ಹೊಸ ಆನೆ ಕಂಜನ್ ಕೂಡ ನಗರ ವಾತಾವರಣಕ್ಕೆ ಒಗ್ಗಿಕೊಂಡಿದೆ ಎಂದರು.
ಆನೆಗಳೊಂದಿಗೆ ಆಗಮಿಸಿರುವ ಮಾವುತ ಮತ್ತು ಕಾವಡಿಗಳ ಕುಟುಂಬ ಉಳಿದುಕೊಳ್ಳಲು ಟೆಂಟ್ ನಿರ್ಮಿಸಲಾಗಿದೆ. ಜತೆಗೆ ಅವರುಗಳ ಮಕ್ಕಳ ಕಲಿಕೆಗೆ ಅನುಕೂಲವಾಗಲು ಟೆಂಟ್ ಶಾಲೆ ಆರಂಭಿಸಲಾಗುತ್ತಿದ್ದು, ಶೀಘ್ರವೇ ಸಚಿವರು ಚಾಲನೆ ನೀಡಲಿದ್ದಾರೆ ಎಂದರು.