ಯಾದಗಿರಿ: ಬಸ್‌ಗಾಗಿ ಕಾದು ಕುಳಿತು ಬೇಸರಗೊಂಡಿದ್ದ ವಿದ್ಯಾರ್ಥಿಗಳು ಬಸ್ ಬಂದ ಕೂಡಲೇ ಕೈ ಮಾಡಿ ನಿಲ್ಲಿಸುವುದಕ್ಕೆ ಹೇಳಿದ್ದಾರೆ. ಆದರೆ ಬಸ್ ನಿಲ್ಲಿಸದೆ ಹೋಗುತ್ತಿದ್ದರಿಂದ ಕೋಪಗೊಂಡ ಅವರು ಬಸ್ ಗಾಜನ್ನೇ ಪುಡಿಗಟ್ಟಿದ್ದಾರೆ.
ಯಾದಗಿರಿ ತಾಲೂಕಿನ ಅಲ್ಲಿಪುರ ಗ್ರಾಮದಲ್ಲಿ ಇಂದು ಘಟನೆ ನಡೆದಿದೆ. ಶಾಲೆಗೆ ತೆರಳಲು ಬಸ್‌ಗಾಗಿ ಕಾದು ಕುಳಿತಿದ್ದ ಹತ್ತಾರು ವಿದ್ಯಾರ್ಥಿಗಳು ಕಲಬುರಗಿಯಿಂದ ಯಾದಗಿರಿ ಕಡೆ ಬರ್ತಾಯಿದ್ದ ಬಸ್ ನಿಲ್ಲಿಸುವಂತೆ ಕೈ ಮಾಡಿದ್ದಾರೆ. ಆದರೆ ಬಸ್ ಮುಂದಕ್ಕೆ ಸಾಗಿದ್ದಕ್ಕೆ ಕಲ್ಹೊಡೆದಿದ್ದಾರೆ.
ಶಕ್ತಿ ಯೋಜನೆ ಎಫೆಕ್ಟ್‌ನಿಂದಾಗಿ ಸಾರಿಗೆಯ ಬಹುತೇಕ ಎಲ್ಲ ಬಸ್‌ಗಳು ಪ್ರಯಾಣಿಕರಿಂದ ತುಂಬಿ ಹೋಗುತ್ತಿವೆ. ಈ ನಡುವೆ ವಿದ್ಯಾರ್ಥಿಗಳು ಮತ್ತು ಡ್ಯೂಟಿಗೆ ಹೋಗುವವರಿಗೆ ಭಾರಿ ತೊಂದರೆ ಆಗುತ್ತಿದೆ. ಈ ಸಮಸ್ಯೆಯಿಂದಾಗಿ ಬಸ್ ಗಾಜಿಗೆ ಕಲ್ಲು ಹೊಡೆದು ವಿದ್ಯಾರ್ಥಿಗಳು ತಮ್ಮ ಕೋಪ ತೀರಿಸಿಕೊಂಡಿದ್ದಾರೆ.
ಆದರೆ, ಅದರ ನಷ್ಟವನ್ನು ಈಗ ಯಾರು ಭರಿಸುತ್ತಾರೆ? ನಿಗಮದ ಅಧಿಕಾರಿಗಳ ಪ್ರಕಾರ ಬಸ್ ಗಾಜು ಒಡೆದು ಹೋದರೆ ಅದರ ನಷ್ಟವನ್ನು ಚಾಲರೆ ಭರಿಸಬೇಕು. ಆದರೆ ಇದರಲ್ಲಿ ಚಾಲಕನ ತಪ್ಪೇನಿದೆ ಎಂಬುವುದು ಈಗ ಎದ್ದಿರುವ ಪ್ರಶ್ನೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಶಕ್ತಿ ಯೋಜನೆಗೆ ವಿನೂತನವಾಗಿ ಜೂನ್ 11 ರಂದು ಚಾಲನೆ ನೀಡಿದರು. ಆದರೆ, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ ಅವಕಾಶ ನೀಡುವ ಯೋಜನೆ ಜಾರಿಯಾದ ಬಳಿಕ ಹಲವು ರೀತಿಯ ಅವಘಡಗಳು ನಡೆಯುತ್ತಲೇ ಇವೆ.
ಶಕ್ತಿ ಯೋಜನೆ ಜಾರಿಯಾದ ಬಳಿಕ ಸರ್ಕಾರಿ ಬಸ್‌ಗಳು ಹಿಂದಿಗಿಂತಲೂ ಹೆಚ್ಚು ರಶ್ ಆಗುತ್ತಿವೆ. ಇನ್ನು ಕೆಲವು ಕಡೆಗಳಲ್ಲಿ ಬಸ್‌ಗಳಿಗೆ ಗಂಟೆಗಟ್ಟಲೇ ಕಾದು ನಿಲ್ಲಬೇಕಾದ ಪರಿಸ್ಥಿತಿ ಎದುರಾಗಿದೆ. ಇದರಿಂದ ಕುಪಿತಗೊಂಡ ಕೊಪ್ಪಳದ ಮಹಿಳೆಯೊಬ್ಬರು ಬಸ್‌ಗಾಗಿ ನಾಲ್ಕು ಗಂಟೆಗಳ ಕಾದು ಬಸ್ ನಿಲ್ಲಿಸದ ಹಿನ್ನಲೆಯಲ್ಲಿ ಬಸ್‌ಗೆ ಕಲ್ಹೊಡೆದಿದ್ದರು.
ಕೊಪ್ಪಳ ತಾಲೂಕಿನ ಮುನಿರಾಬಾದ್ ಬಳಿ ಘಟನೆ ನಡೆದಿತ್ತು. ಮಹಿಳೆ ಎಸೆದ ಕಲ್ಲಿಗೆ ಬಸ್‌ನ ಗ್ಲಾಸ್ ಪುಡಿಪುಡಿಯಾಗಿತ್ತು. ಇದರಿಂದ ಬಸ್ ಚಾಲಕ ಬಸ್ ನಿಲ್ಲಿಸಿ ಕಲ್ಲು ಎಸೆದ ಮಹಿಳೆಯನ್ನು ಬಸ್‌ನಲ್ಲಿ ಹತ್ತಿಸಿಕೊಂಡು ಪ್ರಯಾಣಿಕರ ಸಮೇತ ಮುನಿರಾಬಾದ್ ಪೊಲೀಸ್ ಠಾಣೆಗೆ ತೆಗೆದುಕೊಂಡು ಹೋಗಿದ್ದರು.
ಬಸ್ ಗ್ಲಾಸ್ ಡ್ಯಾಮೇಜ್ ಆಗಿರುವುದರಿಂದ 5000 ರೂ. ದಂಡ ನೀಡಬೇಕೆಂದು ಬಸ್ ಡಿಪೋ ಮ್ಯಾನೇಜರ್ ಕೇಳಿದರು. ಆಕೆ ಕ್ಷಮೆ ಕೇಳಿ 5,000 ರೂ. ದಂಡ ಪಾವತಿಸಿದ್ದರು. ಇನ್ನು ಹಲವೆಡೆ ಬಸ್ ಡೋರ್ ಮುರಿದಿರುವುದು, ಚಾಲಕನ ಡೋರ್ ಮೂಲಕ ಬಸ್‌ನೊಳಕ್ಕೆ ಹತ್ತಿ ಹೋಗುತ್ತಿರುವುದನ್ನು ನಾವು ನೋಡುತ್ತಿದ್ದೇವೆ.
ಇದೇನೆ ಇರಲಿ ಬಸ್‌ಗಳು ಪ್ರಯಾಣಿಕರಿಂದ ಡ್ಯಾಮೇಜ್ ಆದರೆ, ಅದರ ದಂಡವನ್ನು ಚಾಲನಾ ಸಿಬ್ಬಂದಿ ಮೇಲೆ ಹಾಕದೆ ಡ್ಯಾಮೇಜ್ ಮಾಡಿದವರಿಂದ ವಸೂಲಿ ಮಾಡಬೇಕು. ಇದನ್ನು ಬಿಟ್ಟು ಚಾಲನಾ ಸಿಬ್ಬಂದಿಗೆ ದಂಡ ಹಾಕಿ ಅವರನ್ನು ಪೇಚಿಗೆ ಸಿಲುಕಿಸಬೇಡಿ ಎಂಬುವುದು ನೌಕರರು ಮನವಿ ಮಾಡಿಕೊಂಡಿದ್ದಾರೆ.