
ಬೆಂಗಳೂರು: ರಾಜ್ಯದ ಜನರಿಗೆ ಸರ್ಕಾರ ಹಾಲಿನ ದರದ ಬಿಸಿಶಾಕ್ ನೀಡಲು ಮುಂದಾಗುತ್ತಿದೆ. ಈವರೆಗೂ ಲೀಟರ್ ಮತ್ತು ಅರ್ಧ ಲೀಟರ್ ಹಾಲಿನ ಜತೆಗೆ ಬರುತ್ತಿದ್ದ ಹೆಚ್ಚುವರಿ ಹಾಲಿಗೂ ಕತ್ತರಿ ಹಾಕುವ ಜತೆಗೆ ದರವನ್ನು ಏರಿಸುವುದಕ್ಕೆ ಸಜ್ಜಾಗುತ್ತಿದೆ.
ಹೌದು ಜನ ಸಾಮಾನ್ಯರಿಗೆ ಸದ್ಯದಲ್ಲೇ ಹಾಲಿನ ದರ ಏರಿಕೆ ಶಾಕ್ ನೀಡುತ್ತೇವೆ ಎಂದು ಸರ್ಕಾರವೇ ಸುಳಿವು ನೀಡಿದೆ. ಈ ಮಧ್ಯೆ ಐದಾರು ತಿಂಗಳಿನಿಂದ ಪ್ರತಿ ಲೀಟರ್ ಹಾಲಿನ ಪ್ಯಾಕೆಟ್ನಲ್ಲೂ ಹೆಚ್ಚುವರಿಯಾಗಿ ನೀಡುತ್ತಿದ್ದ ಹಾಲನ್ನೂ ಕೂಡ ಕಡಿತ ಮಾಡುವ ನಿಟ್ಟಿನಲ್ಲಿ ಕೆಎಂಎಫ್ ಚಿಂತನೆ ನಡೆಸಿದೆ.
ಅಲ್ಲದೆ ಇದರ ಜತೆಗೆ ಸದ್ಯ ಹೆಚ್ಚುವರಿ ಹಾಲಿಗೆ ನೀಡುತ್ತಿರುವ ಹಣಕ್ಕೆ ಹೆಚ್ಚುವರಿ ದರ ಏರಿಕೆ ಮಾಡಿ, ಹಾಲನ್ನು ಕಡಿತಗೊಳಿಸುವ ಬಗ್ಗೆ ಕೆಎಂಎಫ್ ಚಿಂತನೆ ನಡೆಸುತ್ತಿದ್ದು ಅತೀ ಶೀಘ್ರದಲ್ಲೇ ಸರ್ಕಾರದಿಂದ ಅನುಮೋದನೆ ಪಡೆದು ಜನರಿಗೆ ಶಾಕ್ ಕೊಡಲು ಸಿದ್ಧತೆ ನಡೆಸುತ್ತಿದೆ.
ಐದಾರು ತಿಂಗಳ ಹಿಂದೆ ಪ್ರತಿನಿತ್ಯ ಒಂದು ಕೋಟಿ ಸಮೀಪ ಹಾಲು ಉತ್ಪಾದನೆಯಾಗುತ್ತಿದ್ದ ಕಾರಣ ಹಾಲನ್ನು ಪ್ರತಿ ಅರ್ಧ ಲೀಟರ್ ಮತ್ತು ಒಂದು ಲೀಟರ್ ಪ್ಯಾಕೆಟ್ಗಳಲ್ಲಿ ಕ್ರಮವಾಗಿ 50 ಎಂಎಲ್, ಮತ್ತು 100 ಎಂಎಲ್ ಹೆಚ್ಚುವರಿಯಾಗಿ ಸೇರಿಸಿ, ಹೆಚ್ಚುವರಿಯಾಗಿ ದರ ಪರಿಷ್ಕರಣೆ ಮಾಡಲಾಗಿತ್ತು.
ಆದರೆ ಈಗ ಬೇಸಿಗೆ ಆರಂಭವಾಗಿರುವುದರಿಂದ ಹಿಂದೆ ಉತ್ಪಾದನೆ ಆಗುತ್ತಿದ್ದಷ್ಟೇ ಪ್ರಮಾಣದಲ್ಲಿ ಈಗ ಹಾಲಿನ ಉತ್ಪಾದನೆ ಕಷ್ಟವಾಗಲಿದ್ದು, ಶೇ.10 ರಿಂದ ಶೇ.15ರಷ್ಟು ಹಾಲಿನ ಉತ್ಪಾದನೆ ಇಳಿಕೆಯಾಗುವ ಸಾಧ್ಯತೆ ಇದೆ. ಇದರಿಂದ ಹೆಚ್ಚುವರಿಯಾಗಿ ನೀಡುತ್ತಿದ್ದ ಹಾಲನ್ನು ಕಡಿತ ಮಾಡುವ ಸಾಧ್ಯತೆ ಇದೆ. ಆದರೆ ಹಾಲು ಕಡಿತ ಆದರೂ ಹೆಚ್ಚುವರಿ ಹಾಲಿಗೆ ಪಡೆಯುತ್ತಿದ್ದ ಹೆಚ್ಚುವರಿ ಹಣವನ್ನು ಕಡಿತ ಮಾಡುತ್ತಾ ಅನ್ನೋದರ ಬಗ್ಗೆ ಸ್ಪಷ್ಟವಾಗಿಲ್ಲ.
ಪ್ರಸ್ತುತ ದರ ಏರಿಕೆಗೆ ಚಿಂತನೆ ಮಾಡಿರುವ ಸರ್ಕಾರ, ಹೆಚ್ಚುವರಿ ಹಾಲು ಕಡಿತವಾದರೂ ಅದೇ ದರಕ್ಕೆ ಮತ್ತೆ ಹೊಸ ದರ ಏರಿಕೆ ಮಾಡುವ ಸಾಧ್ಯತೆ ಇದೆ. ಈ ಬಗ್ಗೆ ಸಭೆ ಮಾಡಿ ತೀರ್ಮಾನ ಮಾಡಲು ಕೆಎಂಎಫ್ ನಿರ್ಧಾರ ಮಾಡಿದ್ದು, ದರ ಏರಿಕೆಗೂ ಮುನ್ನವೇ ಈ ಬಗ್ಗೆ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಬಲ್ಲ ಮೂಲಗಳು ಹೇಳುತ್ತಿವೆ.