ಬೆಂಗಳೂರು: ಭಾರತೀಯರು ಮುಸ್ಲಿಮರನ್ನು ಅವಹೇಳನ ಮಾಡುತ್ತಿದ್ದಾರೆ ಎಂದೇ ಈ ರೀತಿ ಸಂದೇಶವನ್ನು ಹರಿಯ ಬಿಡುತ್ತಿದ್ದಾರೆ ಎಂಬ ಮಾಹಿತಿ ಇರುವುದಾಗಿ ವಿಪಕ್ಷ ನಾಯಕ ಆರ್.ಅಶೋಕ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂಬೈ ತಾಜ್ ಹೋಟೆಲ್ ಮೇಲಿನ ದಾಳಿ ಮಾದರಿಯಲ್ಲೇ ನಗರದ ಶಾಲೆಗಳ ಮೇಲೆ ಅಟ್ಯಾಕ್ ಮಾಡುವ ಬೆದರಿಕೆ ಸಂದೇಶಗಳು ಬಂದಿವೆ. ಇದು ಭಾರತೀಯರಿಗೆ ಬೆದರಿಕೆ ಒಡ್ಡುವ ಸಂದೇಶವಾಗಿದೆ. ಯಾರು ಈ ರೀತಿ ಸಂದೇಶ ಕಳುಹಿಸಿದ್ದಾರೆ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಬೆದರಿಕೆ ಸಂದೇಶದಿಂದ ಶಾಲೆಯ ಮಕ್ಕಳ ಪಾಲಕರು ಆತಂಕಕ್ಕೆ ಒಳಗಾಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಇನ್ನು ಬಾಂಬ್ ಬೆದರಿಕೆ ಸಂದೇಶ ಬಂದಿರುವ ಶಾಲೆಗಳ ಬಳಿ ಪರಿಸ್ಥಿತಿ ವೀಕ್ಷಣೆಗೆ ಅಶೋಕ್ ತೆರಳಿದ್ದಾರೆ. ಇಂದು ಬೆಳಗ್ಗೆ 7 ಗಂಟೆ ಸುಮಾರಿಗೆ ಇ- ಮೇಲ್ ಮೂಲಕ ಬಸವೇಶ್ವರ ನಗರದ ನ್ಯಾಪಲ್, ವಿದ್ಯಾಶಿಲ್ಪ ಸೇರಿದಂತೆ ನಗರದ 20ಕ್ಕೂ ಹೆಚ್ಚು ಶಾಲೆಗಳಿಗೆ ಆಗಂತುಕರು ಬಾಂಬ್ ಬೆದರಿಕೆ ಹಾಕಿದ್ದಾರೆ.
ಬಾಂಬ್ ಬೆದರಿಕೆಯ ಹಿನ್ನೆಲೆಯಲ್ಲಿ ಸ್ಥಳಕ್ಕೆ ಪೊಲೀಸರು, ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ತೆರಳಿದ್ದು ಪರಿಶೀಲನೆ ನಡೆಸುತ್ತಿದ್ದಾರೆ. ಇತ್ತ ಗೃಹ ಸಚಿವರು ಕೂಡ ಪಾಲಕರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.
ಯಾವ ಸಂಘಟನೆ ಹೆಸರಲ್ಲಿ ಇ-ಮೇಲ್?: ಖಾರಿಜೈಟ್ಸ್ ಎಂಬ ಮೂಲಭೂತವಾದಿ ಸಂಘಟನೆ ಹೆಸರಲ್ಲಿ ಇ-ಮೇಲ್ ಬಂದಿದೆ. ಎಲ್ಲ ಶಾಲೆಗೂ ಒಂದೇ ರೀತಿಯ ಇ- ಮೇಲ್ ಬಂದಿರುವ ಮಾಹಿತಿ ಲಭ್ಯವಾಗಿದೆ.
ಇ-ಮೇಲ್‍ನಲ್ಲಿ ಏನಿದೆ..?: ನಿಮ್ಮನ್ನು ನಿಮ್ಮ ಮಕ್ಕಳನ್ನು ಕೊಲ್ಲುತ್ತೇವೆ. ತಾಜ್ ಮೇಲೆ ದಾಳಿ ಮಾಡಿದಂತೆ ದಾಳಿ ಮಾಡುತ್ತೇವೆ . ಇಸ್ಲಾಂಗೆ ಮತಾಂತರವಾಗಿ ಇಲ್ಲವೇ ಸಾಯಲು ಸಿದ್ಧರಾಗಿ ಎಂದು ಕೆಂಗೇರಿಯ ಚಿತ್ರಕೂಟ ಶಾಲೆಗೆ ಬಂದ ಬೆದರಿಕೆ ಇ-ಮೇಲ್‌ನಲ್ಲಿ ತಿಳಿಸಲಾಗಿದೆ.
ಸದ್ಯ ಎಲ್ಲ ಶಾಲೆಗಳಿಲ್ಲಿಯೂ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ, ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಇತ್ತ ವಿಚಾರ ತಿಳಿಯುತ್ತಿದ್ದಂತೆಯೇ ಪೋಷಕರು ಶಾಲೆ ಬಳಿ ಓಡೋಡಿ ಬಂದಿದ್ದಾರೆ. ಅಲ್ಲದೇ ಮಕ್ಕಳನ್ನು ಮನೆಗೆ ಕರೆದುಕೊಂಡು ಹೋಗುತ್ತಿದ್ದಾರೆ.