ಬೆಂಗಳೂರು: ಹಾಸನ ಸಂಸದ, ಎನ್‌ಡಿಎ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಹೋಗಿರುವುದಕ್ಕೂ ನನಗೂ ಸಂಬಂಧವಿಲ್ಲ. ಅವರು ವಿದೇಶಕ್ಕೆ ಹೋಗಿದ್ದರೆ ಎಸ್‌ಐಟಿ ಅಧಿಕಾರಿಗಳು ಕರೆದುಕೊಂಡು ಬರುತ್ತಾರೆ. ಉಪ್ಪು ತಿಂದವರು ನೀರು ಕುಡಿಯಲೇ ಬೇಕು, ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿ ಎಂದು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಪ್ರಜ್ವಲ್ ರೇವಣ್ಣ ವಿರುದ್ಧ ಕೇಳಿ ಬಂದಿರುವ ಲೈಂಗಿಕ ಪ್ರಕರಣ ಆರೋಪವನ್ನು ಈಗಾಗಲೇ ಮುಖ್ಯಮಂತ್ರಿಗಳು ಎಸ್‌ಐಟಿಗೆ ತನಿಖೆಗೆ ಆದೇಶ ಮಾಡಿದ್ದಾರೆ ಅದರಲ್ಲಿ ಸತ್ಯ ಬಹಿರಂಗವಾಗಿ ಪ್ರಜ್ವಲ್ ತಪ್ಪು ಮಾಡಿರುವುದು ಸಾಬೀತಾದರೆ ಶಿಕ್ಷೆಯಾಗಲಿ ಎಂದು ಹೇಳಿದ್ದಾರೆ.
ಇನ್ನು ನಾನು ಮತ್ತು ದೇವೇಗೌಡ ಅವರು ಹೆಣ್ಣು ಮಕ್ಕಳ ವಿಚಾರದಲ್ಲಿ ಅತ್ಯಂತ ಗೌರವದಿಂದ ನಡೆದುಕೊಂಡಿದ್ದೇವೆ. ಕಷ್ಟದಲ್ಲಿ ಬರುವ ಹೆಣ್ಣು ಮಕ್ಕಳಿಗೆ ಸಹಾಯ ಮಾಡಿ ಗೌರವದಿಂದ ಕಂಡಿದ್ದೇವೆ. ಹಾಸನದ ಚುನಾವಣೆ ಸಂದರ್ಭದಲ್ಲಿ ಈ ಪ್ರಕರಣವು ಹೊರ ಬಂದಿದೆ. ಈ ಬಗ್ಗೆ ಸರ್ಕಾರ ಎಸ್‌ಐಟಿ ತನಿಖೆಗೆ ಆದೇಶಿದ್ದು, ಅದರ ಸಂಪೂರ್ಣ ವರದಿ ಬರಲಿ ಎಂದರು.
ಈ ನೆಲದ ಕಾನೂನಿನಲ್ಲಿ ಅವರಿಗೆ ಶಿಕ್ಷೆಯಾಗಬೇಕು. ತನಿಖೆಯ ವರದಿ ಬಂದ ನಂತರ ನಾನು ಮಾತನಾಡುತ್ತೇನೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.
ಇನ್ನು ರಾಜ್ಯದಲ್ಲಿ ಮೊದಲ ಹಂತದ ಲೋಕಸಭಾ ಚುನಾವಣಾ ಅಖಾಡ ಅಣಿಯಾಗುತ್ತಿದ್ದಂತೆ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ತುಣುಕುಗಳು ರಾಜ್ಯಾದ್ಯಂತ ವಿಶೇಷವಾಗಿ, ಹಾಸನ ಜಿಲ್ಲೆಯಲ್ಲಿ ಹರಿದಾಡುತ್ತಿದ್ದವು.
ಈ ವಿಡಿಯೋ ತುಣುಕುಗಳು ಚುನಾವಣಾ ಪ್ರಚಾರ ಕಣದಲ್ಲಿ ದೊಡ್ಡ ಸದ್ದು ಮಾಡಿದ್ದವು. ಖಾಸಗಿ ಮೊಬೈಲ್‌ನಲ್ಲಿ ಚಿತ್ರೀಕರಿಸಲಾಗಿದೆ ಎನ್ನಲಾದ ವಿಡಿಯೋ ತುಣುಕುಗಳು ಸಾವಿರಾರು ಪೆನ್‌ಡ್ರೈವ್‌ಗಳ ಮೂಲಕ ಜನಸಾಮಾನ್ಯರನ್ನು ತಲುಪಿದ್ದರಲ್ಲಿ ಕೆಲವು ಪ್ರಮುಖ ನಾಯಕರ ಪಾತ್ರ ಇರುವ ಗುಮಾನಿಯ ಕೇಳಿಬಂದಿದೆ.