NEWSನಮ್ಮಜಿಲ್ಲೆನಮ್ಮರಾಜ್ಯ

ವೇತನ ಹೆಚ್ಚಳ, 38 ತಿಂಗಳ ಹಿಂಬಾಕಿಗಾಗಿ ಪತ್ರ ಚಳವಳಿಗೆ ಮುಂದಾದ ಸಾರಿಗೆ ನೌಕರರು: ಹೈ ಕೋರ್ಟ್‌ ಸಿಜೆಗೆ ಲೆಟರ್ ಬರೆಯಲು ಕರೆ !

ಸಾರಿಗೆ ನೌಕರರು ಸದಾ ನ್ಯಾಯಾಲಯದ ಆದೇಶಗಳಿಗೆ ಗೌರವ ನೀಡಿ, ಕಾನೂನುಬದ್ಧ ಹಾಗೂ ಶಾಂತಿಯುತ ಮಾರ್ಗದಲ್ಲಿಯೇ ತಮ್ಮ ನ್ಯಾಯಯುತ ಬೇಡಿಕೆಗಳನ್ನು ಮಂಡಿಸುತ್ತಿರುವುದು ಸ್ಪಷ್ಟವಾಗುತ್ತದೆ. ಇದಲ್ಲದೆ, 2004 ಮತ್ತು 2008 ರಲ್ಲಿಯೂ ಸಹ ಸರ್ಕಾರವೂ ಸಾರಿಗೆ ನೌಕರರಿಗೆ ಕ್ರಮವಾಗಿ ಕೇವಲ ಶೇ.5 ಮತ್ತು ಶೇ.8 ರಷ್ಟು ಮಾತ್ರ ಏಕಪಕ್ಷೀಯ ವೇತನ ಹೆಚ್ಚಳ ನೀಡಿರುವ ಪರಿಣಾಮವಾಗಿ ರಾಜ್ಯ ಸರ್ಕಾರಿ ನೌಕರರು ಹಾಗೂ ಸಾರಿಗೆ ನೌಕರರ ವೇತನದಲ್ಲಿ ಅಜಗಜಾಂತರ ವ್ಯತ್ಯಾಸ ಉಂಟಾಗಲು ಕಾರಣವಾಗಿದೆ.

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ಪ್ರತಿಯೊಬ್ಬ ಅಧಿಕಾರಿಗಳು/ನೌಕರರು ಎಲ್ಲ ಸಿಬ್ಬಂದಿ ವರ್ಗದವರು ಈ ಪತ್ರದಲ್ಲಿ ತಮ್ಮ ಹೆಸರು ಬಿಲ್ಲೆ ಸಂಖ್ಯೆ ಯಾವ ಘಟಕ ದೂರವಾಣಿ ನಂಬರ್ ಅನ್ನು ಹಾಕಿ ಕರ್ನಾಟಕ ಉಚ್ಚನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳಿಗೆ ರಿಜಿಸ್ಟರ್ ಪೋಸ್ಟ್ ಅಥವಾ ಸ್ಪೀಡ್ ಪೋಸ್ಟ್ ಮಾಡಬೇಕೆಂದು ವಿನಂತಿಸಿಕೊಳ್ಳುವ ಪಿಡಿಎಫ್‌ ಲೆಟರ್‌ವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಅದರಲ್ಲಿ ಏನಿದೆ?:
ಗೆ,
ಮಾನ್ಯ ಮುಖ್ಯನ್ಯಾಯಮೂರ್ತಿಗಳವರಿಗೆ, High Court of Karnataka High Court Buildings, Opposite to Vidhana Soudha, Ambedkar Veedhi, Bengaluru – 560001.

ವಿಷಯ: ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರ ವೇತನ ಭದ್ರತೆ, ನ್ಯಾಯಯುತ ವೇತನ ಪರಿಷ್ಕರಣೆ, ಹಿಂಬಾಕಿ ಪಾವತಿ ಹಾಗೂ ಜೀವನೋಪಾಯ ರಕ್ಷಣೆಗೆ ನ್ಯಾಯ ಕೋರಿ ವಿನಮ್ರ ಮನವಿ.

ಮಾನ್ಯರೇ,
ಅಧೋಲಿಖಿತನಾದ (“ಕೆಳಗೆ ಬರೆಯಲಾದ” ಅಥವಾ “ಕೆಳಗೆ ಸಹಿ ಮಾಡಲಾದ” ಎಂದರ್ಥ) ನಾನು ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ಸೇವೆ ಸಲ್ಲಿಸುತ್ತಿರುವ ಸಾಮಾನ್ಯ ನೌಕರನಾಗಿದ್ದು, ಸಮಸ್ತ ಸಾರಿಗೆ ನೌಕರರ ಪರವಾಗಿ ಅತ್ಯಂತ ಗೌರವ ಹಾಗೂ ವಿಶ್ವಾಸದಿಂದ ಈ ವಿನಮ್ರ ಮನವಿ ಪತ್ರವನ್ನು ತಮ್ಮ ಸನ್ನಿಧಿಗೆ ಸಲ್ಲಿಸುತ್ತಿದ್ದೇನೆ.

ರಾಜ್ಯದ ಲಕ್ಷಾಂತರ ಸಾರ್ವಜನಿಕರಿಗೆ ಪ್ರತಿದಿನ ಸುರಕ್ಷಿತ ಹಾಗೂ ನಿರಂತರ ಸಾರಿಗೆ ಸೇವೆ ಒದಗಿಸುವ ಜವಾಬ್ದಾರಿಯನ್ನು ಹೊತ್ತುಕೊಂಡಿರುವ ಸಾರಿಗೆ ನೌಕರರು ಹಗಲು-ರಾತ್ರಿ, ಮಳೆ-ಚಳಿ ಬಿಸಿಲೆನ್ನದೆ ಸಾರ್ವಜನಿಕ ಸೇವೆಯನ್ನು ನಿಷ್ಠೆಯಿಂದ ನಿರ್ವಹಿಸುತ್ತಿದ್ದಾರೆ. ಸಾರ್ವಜನಿಕರ ಅನುಕೂಲಕ್ಕಾಗಿ ತಮ್ಮ ಕುಟುಂಬ, ಆರೋಗ್ಯ ಹಾಗೂ ವೈಯಕ್ತಿಕ ಜೀವನವನ್ನೂ ತ್ಯಾಗ ಮಾಡಿ ಸೇವೆ ಸಲ್ಲಿಸುತ್ತಿರುವ ನೌಕರರು ಇಂದು ತೀವ್ರ ಆರ್ಥಿಕ ಹಾಗೂ ಮಾನಸಿಕ ಸಂಕಷ್ಟವನ್ನು ಎದುರಿಸುತ್ತಿದ್ದಾರೆ.

ಕಳೆದ ಹಲವು ವರ್ಷಗಳಿಂದ ಸಾರಿಗೆ ನೌಕರರ ವೇತನ ಪರಿಷ್ಕರಣೆ, ವೇತನ ಭದ್ರತೆ ಮತ್ತು ಸೇವಾ ಸೌಲಭ್ಯಗಳ ವಿಷಯದಲ್ಲಿ ಸರ್ಕಾರವು ಸಮರ್ಪಕ ಸ್ಪಂದನೆ ನೀಡದೆ ಮಲತಾಯಿ ಧೋರಣೆ ಅನುಸರಿಸುತ್ತಿರುವುದರಿಂದ ನೌಕರರಲ್ಲಿ ತೀವ್ರ ಬೇಸರ ಮತ್ತು ನಿರಾಶೆ ಉಂಟಾಗಿದೆ. ಸಾರಿಗೆ ನೌಕರರಿಗೆ ನ್ಯಾಯಯುತವಾಗಿ ದಿನಾಂಕ: 01/01/2024 ರಿಂದ ವೇತನ ಹೆಚ್ಚಳ ಜಾರಿಯಾಗಬೇಕಾಗಿದ್ದರೂ ಸಹ ಸರ್ಕಾರವು ಕೇವಲ ಶೇ.12.5 ರಷ್ಟು ಏಕಪಕ್ಷೀಯ ವೇತನ ಹೆಚ್ಚಳವನ್ನು ಘೋಷಿಸಿ, ಅದನ್ನು 01/04/2025 ರಿಂದ ಜಾರಿಗೆ ಬರುವಂತೆ ಆದೇಶ ಹೊರಡಿಸಿರುವುದು ಸಾವಿರಾರು ನೌಕರರಿಗೆ ಗಂಭೀರ ಅನ್ಯಾಯವಾಗಿದೆ. ಈ ಕ್ರಮದಿಂದ ಸುಮಾರು 15 ತಿಂಗಳ ವೇತನ ಲಾಭವನ್ನು ನೌಕರರಿಂದ ವಂಚಿಸಿರುವಂತಾಗಿದೆ.

ಇದಲ್ಲದೆ, ನೌಕರರಿಗೆ ನ್ಯಾಯಯುತವಾಗಿ ಸಲ್ಲಬೇಕಾದ 38 ತಿಂಗಳ ವೇತನ ಹಿಂಬಾಕಿಯನ್ನು ಸರ್ಕಾರವೂ ಸಂಪೂರ್ಣವಾಗಿ ಪಾವತಿಸದೆ, ಕೇವಲ 26 ತಿಂಗಳ ಹಿಂಬಾಕಿ ಪಾವತಿಸುವುದಾಗಿ ಆದೇಶಿಸಿರುವುದರಿಂದ ನೌಕರರಿಗೆ ನ್ಯಾಯಯುತವಾಗಿ ಸಿಗಬೇಕಾದ 12 ತಿಂಗಳ ವೇತನ ಹಿಂಬಾಕಿಯನ್ನು ಸರ್ಕಾರ ವಂಚಿಸಿರುತ್ತದೆ. ಇಂದಿನ ಬೆಲೆ ಏರಿಕೆ, ಕುಟುಂಬ ನಿರ್ವಹಣೆ, ಮಕ್ಕಳ ಶಿಕ್ಷಣ, ವೈದ್ಯಕೀಯ ವೆಚ್ಚ ಹಾಗೂ ದಿನನಿತ್ಯದ ಜೀವನ ವೆಚ್ಚಗಳನ್ನು ಪರಿಗಣಿಸಿದರೆ ನೌಕರರು ಅತ್ಯಂತ ಸಂಕಷ್ಟದ ಪರಿಸ್ಥಿತಿಯಲ್ಲಿ ಜೀವನ ಸಾಗಿಸುತ್ತಿದ್ದಾರೆ.

ಮಾನ್ಯರೇ, ಕಳೆದ ಸುಮಾರು ಮೂರು ವರ್ಷಗಳಿಂದ ಸಾರಿಗೆ ನೌಕರರು ತಮ್ಮ ನ್ಯಾಯಯುತ ಬೇಡಿಕೆಗಳನ್ನು ಶಾಂತಿಯುತ ಹಾಗೂ ಕಾನೂನುಬದ್ಧ ರೀತಿಯಲ್ಲಿ ಸರ್ಕಾರದ ಗಮನಕ್ಕೆ ತರುವ ಪ್ರಯತ್ನ ಮಾಡುತ್ತಾ ಬಂದಿದ್ದೇವೆ. ಮನವಿ ಪತ್ರಗಳು, ಪ್ರತಿಭಟನೆಗಳು ಹಾಗೂ ಮಾತುಕತೆಗಳ ಮೂಲಕ ಸಮಸ್ಯೆ ಪರಿಹಾರಕ್ಕೆ ಹಲವು ಬಾರಿ ಪ್ರಯತ್ನಿಸಿದರೂ ಸಹ ಸರ್ಕಾರದಿಂದ ಯಾವುದೇ ಶಾಶ್ವತ ಹಾಗೂ ನ್ಯಾಯಯುತ ಪರಿಹಾರ ದೊರಕಿಲ್ಲ.

ಹೀಗಾಗಿ ಈ ಹಿಂದೆ ದಿನಾಂಕ: 05/08/2025 ರಂದು ಸಾರಿಗೆ ನೌಕರರು ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಮುಷ್ಕರಕ್ಕೆ ಕರೆ ನೀಡಿದ ಸಂದರ್ಭದಲ್ಲಿಯೂ ಸಹ ಮಾನ್ಯ High Court of Karnatakaನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ದಾಖಲಾಗಿತ್ತು. ಆ ಸಂದರ್ಭದಲ್ಲಿ ಮಾನ್ಯ ನ್ಯಾಯಾಲಯದ ನಿರ್ದೇಶನ ಮತ್ತು ನ್ಯಾಯಾಂಗದ ಮೇಲಿನ ಗೌರವದ ಹಿನ್ನೆಲೆಯಲ್ಲಿ ಸಾರಿಗೆ ನೌಕರರು ಮುಷ್ಕರವನ್ನು ಹಿಂತೆಗೆದುಕೊಂಡಿರುತ್ತಾರೆ. ಅದೇ ರೀತಿ, ದಿನಾಂಕ: 20/05/2026 ರಂದು ಮತ್ತೊಮ್ಮೆ ಶಾಂತಿಯುತ ಮುಷ್ಕರಕ್ಕೆ ಕರೆ ನೀಡಿದ ಸಂದರ್ಭದಲ್ಲಿಯೂ ಸಹ ಮುಷ್ಕರ ತಡೆ ಕೋರಿ ದಿನಾಂಕ: 18/05/2026 ರಂದು ಮಾನ್ಯ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ಸಲ್ಲಿಕೆಯಾಗಿರುತ್ತದೆ. ಆ ಸಂದರ್ಭದಲ್ಲಿಯೂ ಸಹ ಮಾನ್ಯ ನ್ಯಾಯಾಲಯದ ನಿರ್ದೇಶನವನ್ನು ಗೌರವಿಸಿ ಸಾರಿಗೆ ನೌಕರರು ಮುಷ್ಕರವನ್ನು ಹಿಂಪಡೆದಿರುತ್ತಾರೆ.

ಈ ಮೂಲಕ ಸಾರಿಗೆ ನೌಕರರು ಸದಾ ನ್ಯಾಯಾಲಯದ ಆದೇಶಗಳಿಗೆ ಗೌರವ ನೀಡಿ, ಕಾನೂನುಬದ್ಧ ಹಾಗೂ ಶಾಂತಿಯುತ ಮಾರ್ಗದಲ್ಲಿಯೇ ತಮ್ಮ ನ್ಯಾಯಯುತ ಬೇಡಿಕೆಗಳನ್ನು ಮಂಡಿಸುತ್ತಿರುವುದು ಸ್ಪಷ್ಟವಾಗುತ್ತದೆ. ಇದಲ್ಲದೆ, 2004 ಮತ್ತು 2008 ರಲ್ಲಿಯೂ ಸಹ ಸರ್ಕಾರವೂ ಸಾರಿಗೆ ನೌಕರರಿಗೆ ಕ್ರಮವಾಗಿ ಕೇವಲ ಶೇ.5 ಮತ್ತು ಶೇ.8 ರಷ್ಟು ಮಾತ್ರ ಏಕಪಕ್ಷೀಯ ವೇತನ ಹೆಚ್ಚಳ ನೀಡಿರುವ ಪರಿಣಾಮವಾಗಿ ರಾಜ್ಯ ಸರ್ಕಾರಿ ನೌಕರರು ಹಾಗೂ ಸಾರಿಗೆ ನೌಕರರ ವೇತನದಲ್ಲಿ ಅಜಗಜಾಂತರ ವ್ಯತ್ಯಾಸ ಉಂಟಾಗಲು ಕಾರಣವಾಗಿದೆ.

ಈ ಅನ್ಯಾಯದ ಪರಿಣಾಮ ಇಂದು ಸಾರಿಗೆ ನೌಕರರ ಆರ್ಥಿಕ ಪರಿಸ್ಥಿತಿ ಅತ್ಯಂತ ಹೀನಾಯ ಸ್ಥಿತಿಗೆ ತಲುಪಿರುತ್ತದೆ. ಹೀಗಾಗಿ ಸರ್ಕಾರವೂ ಕಾಲ ಕಾಲಕ್ಕೆ ಸೂಕ್ತ ವೇತನ ಭದ್ರತೆ ನೀಡದೆ ಇರುವುದರಿಂದ ಸಾರಿಗೆ ನೌಕರರ ನ್ಯಾಯಯುತವಾದ ಬೇಡಿಕೆಗಳ ಈಡೇರಿಕೆಗಾಗಿ ಮುಷ್ಕರವೂ ಸಾರಿಗೆ ನೌಕರರಿಗೆ ಅನಿವಾರ್ಯವಾಗಿರುತ್ತದೆ.

ಆದುದರಿಂದ ಮಾನ್ಯ ದಯಾಳುಗಳಾದ ತಾವುಗಳು ನ್ಯಾಯ, ಸಮಾನತೆ ಹಾಗೂ ಮಾನವೀಯತೆಯ ದೃಷ್ಟಿಯಿಂದ ಲಕ್ಷಾಂತರ ಸಾರಿಗೆ ನೌಕರರು ಹಾಗೂ ಅವರ ಕುಟುಂಬಗಳ ಜೀವನೋಪಾಯವನ್ನು ಪರಿಗಣಿಸಿ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡುವ ಮೂಲಕ ಅಥವಾ ತಮ್ಮ ಅಮೂಲ್ಯ ಮಧ್ಯಸ್ಥಿಕೆಯಲ್ಲಿ ಈ ವ್ಯಾಜ್ಯವನ್ನು ಸೌಹಾರ್ದಯುತವಾಗಿ ಬಗೆಹರಿಸಿ ಸಾರಿಗೆ ನೌಕರರಿಗೆ ನ್ಯಾಯ ದೊರಕಿಸಿಕೊಡುವಂತೆ ಅತ್ಯಂತ ವಿನಮ್ರವಾಗಿ ಪ್ರಾರ್ಥಿಸುತ್ತೇನೆ.

ಆದ್ದರಿಂದ, ಮಾನ್ಯ ಘನ ನ್ಯಾಯಾಲಯವು ದಯವಿಟ್ಟು ಕೆಳಕಂಡಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ತಮ್ಮಲ್ಲಿ ಕೋರುತ್ತೇನೆ:
1. ಸಾರಿಗೆ ನೌಕರರ ವೇತನ ಪರಿಷ್ಕರಣೆಯನ್ನು ದಿನಾಂಕ: 01/01/2024 ರಿಂದ ಜಾರಿಗೆ ತರಲು ಸರ್ಕಾರಕ್ಕೆ ನಿರ್ದೇಶನ ನೀಡುವುದು.

2. ಪ್ರಸ್ತುತ ಬೆಲೆ ಏರಿಕೆ ಮತ್ತು ಜೀವನ ವೆಚ್ಚಗಳಿಗೆ ಅನುಗುಣವಾಗಿ ನ್ಯಾಯಯುತವಾಗಿ ಶೇ.25 ರಷ್ಟು ವೇತನ ಹೆಚ್ಚಳ ಮಾಡುವಂತೆ ಸರ್ಕಾರದ ಆದೇಶವನ್ನು ಮರುಪರಿಶೀಲಿಸಲು ಸೂಚಿಸುವುದು.

3. ನೌಕರರಿಗೆ ಸಲ್ಲಬೇಕಾದ ಸಂಪೂರ್ಣ 38 ತಿಂಗಳ ವೇತನ ಹಿಂಬಾಕಿಯನ್ನು ಪಾವತಿಸಲು ಸರ್ಕಾರಕ್ಕೆ ನಿರ್ದೇಶನ ನೀಡುವುದು.

4. ಸಾರಿಗೆ ನೌಕರರು ಹಾಗೂ ರಾಜ್ಯ ಸರ್ಕಾರಿ ನೌಕರರ ವೇತನ ವ್ಯತ್ಯಾಸವನ್ನು ಸಮರ್ಪಕವಾಗಿ ಮರುಪರಿಶೀಲಿಸಲು ಸರ್ಕಾರಕ್ಕೆ ನಿರ್ದೇಶನ ನೀಡುವುದು.

5. ಸಾರಿಗೆ ನೌಕರರ ಜೀವನೋಪಾಯ, ಮಾನವೀಯ ಗೌರವ ಹಾಗೂ ಸಂವಿಧಾನಬದ್ಧ ಹಕ್ಕುಗಳನ್ನು ರಕ್ಷಿಸುವುದು.

6. ಸರ್ಕಾರ ಮತ್ತು ಸಾರಿಗೆ ನೌಕರರ ನಡುವಿನ ವಿವಾದವನ್ನು ನ್ಯಾಯಾಲಯದ ಮಧ್ಯಸ್ಥಿಕೆಯಲ್ಲಿ ಸೌಹಾರ್ದಯುತವಾಗಿ ಬಗೆಹರಿಸಲು ಕ್ರಮ ಕೈಗೊಳ್ಳುವುದು.

ಮಾನ್ಯರೇ, ಸಾರಿಗೆ ನೌಕರರು ಸಮಾಜದ ಸಾಮಾನ್ಯ ಕುಟುಂಬಗಳಿಂದ ಬಂದವರಾಗಿದ್ದು, ತಮ್ಮ ಕುಟುಂಬದ ಭವಿಷ್ಯ ಮತ್ತು ಜೀವನೋಪಾಯಕ್ಕಾಗಿ ಪ್ರಾಮಾಣಿಕವಾಗಿ ದುಡಿಯುತ್ತಿರುವ ಸಾರ್ವಜನಿಕ ಸೇವಕರು. ನ್ಯಾಯ ಮತ್ತು ಸಮಾನತೆಯ ಆಶಯದೊಂದಿಗೆ ತಮ್ಮ ಸನ್ನಿಧಿಯಲ್ಲಿ ಈ ಮನವಿಯನ್ನು ಸಲ್ಲಿಸುತ್ತಿದ್ದು, ತಮ್ಮ ದಯಾಮಯ ಹಾಗೂ ನ್ಯಾಯಸಮ್ಮತ ಮಧ್ಯಸ್ಥಿಕೆಯಿಂದ ನಮಗೆ ನ್ಯಾಯ ದೊರಕುತ್ತದೆ ಎಂಬ ಅಪಾರ ವಿಶ್ವಾಸ ಹೊಂದಿದ್ದೇವೆ.

ಹೀಗಾಗಿ, ಸಮಸ್ತ ಸಾರಿಗೆ ನೌಕರರ ಹಿತದೃಷ್ಟಿಯಿಂದ ಅಗತ್ಯ ಕ್ರಮ ಕೈಗೊಂಡು ನ್ಯಾಯ ಒದಗಿಸುವಂತೆ ತಮ್ಮಲ್ಲಿ ಮತ್ತೊಮ್ಮೆ ವಿನಮ್ರವಾಗಿ ಪ್ರಾರ್ಥಿಸುತ್ತೇನೆ.

ಗೌರವಪೂರ್ವಕವಾಗಿ.

ಸ್ಥಳ:

ದಿನಾಂಕ:

ವಿನಮ್ರವಾಗಿ ಸಲ್ಲಿಸುವವರು,

ಹೆಸರು:…………………………………..

ಹುದ್ದೆ,ಬಿ,ಸಂಖ್ಯೆ…………………….

ವಿಭಾಗ / ಘಟಕ:……………………..

ಮೊಬೈಲ್ ಸಂಖ್ಯೆ:…………….

ಸಹಿ;………………………………..

24 May 2026 ಸಾರಿಗೆ ನೌಕರರಿಂದ ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರ ಚಳವಳಿ ಯ ಪಿಡಿಎಫ್‌ ಲೆಟರ್‌

Megha
the authorMegha

Leave a Reply

error: Content is protected !!
Latest news
ಹೈ ಕೋರ್ಟ್‌ CJಗೆ ಪತ್ರ ಬರೆದ ನೌಕರರು: ಸಮಾನ ಕೆಲಸಕ್ಕೆ ಸಮಾನ ವೇತನ ಬೇಕು! ಸಾರಿಗೆ ನಿಗಮ ನೌಕರರಿಗೆ ನ್ಯಾಯ ಬೇಕು! ವೇತನ ಹೆಚ್ಚಳ, 38 ತಿಂಗಳ ಹಿಂಬಾಕಿಗಾಗಿ ಪತ್ರ ಚಳವಳಿಗೆ ಮುಂದಾದ ಸಾರಿಗೆ ನೌಕರರು: ಹೈ ಕೋರ್ಟ್‌ ಸಿಜೆಗೆ ಲೆಟರ್ ಬರೆಯಲು ... ತಂದೆ-ತಾಯಿ ಇಬ್ಬರೂ IAS ಆಗಿದ್ದರೆ ಮಕ್ಕಳಿಗೆ ಮೀಸಲಾತಿ ಸೌಲಭ್ಯ ಏಕೆ ಮುಂದುವರಿಯ -ಬೇಕು: ಸುಪ್ರೀಂ ಕೋರ್ಟ್‌ ಮಹತ್ವದ ಪ್... KARNATAKA GOVT: ಕಾರ್ಮಿಕರ ಕನಿಷ್ಠ ವೇತನ ನಿಗದಿ ಮಾಡಿ ಸರ್ಕಾರದ ಆದೇಶ- ಮೇ 22ರಿಂದಲೇ ಜಾರಿ- ಕಾರ್ಮಿಕ ಅಧಿಕಾರಿ ತುಳಸ... ಕಲ್ಲಿದ್ದಲು ಗಣಿಯಲ್ಲಿ ಗ್ಯಾಸ್‌ ಸ್ಫೋಟ: 90 ಜನರು ಮೃತ, 100ಕ್ಕೂ ಹೆಚ್ಚು ಕಾರ್ಮಿಕರಿಗೆ ಗಾಯ KSRTC ತುಮಕೂರು ಡಿಸಿಗೆ ಲಂಚ ಸಂಗ್ರಹ ಆರೋಪ: ಸಂಬಂಧಿಕರ ಫೋನ್‌ ಪೇ ಬಳಸಿ ಸಿಕ್ಕ ಬಿದ್ದ ನೌಕರ ಆತ್ಮಹತ್ಯೆಗೆ ಯತ್ನ- ಪಾರ... ಬಿಎಂಟಿಸಿ ಹೊಸ ವೇಗದೂತ ಬಸ್‌ಗಳ ಸೇವೆಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಚಾಲನೆ ಕಾವೇರಿ ನದಿಯಲ್ಲಿ ಈಜಲು ಹೋಗಿದ್ದ ಇಬ್ಬರು ಯುವಕರು ನೀರಿನಲ್ಲಿ ಮುಳುಗಿ ಸಾವು ನಿವೇಶನ ರಹಿತ 500 ಬಡ ಕುಟುಂಬಗಳಿಗೆ ಜೂನ್ ತಿಂಗಳಲ್ಲಿ ನಿವೇಶನ ವಿತರಣೆ: ಸಚಿವ ಮುನಿಯಪ್ಪ ಸಿಬಿಎಸ್‌ಇ ತ್ರಿಭಾಷಾ ನೀತಿ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ ಪಾಲಕರು: ಮುಂದಿನ ವಾರ ವಿಚಾರಣೆ