ಸರಿಸಮಾನ ವೇತನದ ನಿರ್ಧಾರ: ನಮಗೆ ಸಾರಿಗೆ ಸಚಿವರು ಕೊಟ್ಟ ಭರವಸೆ ಶೀಘ್ರ ಈಡೇರಲಿದೆ ಎಂದ ಅಧಿಕಾರಿ, ಮೇಲ್ವಿಚಾರಕರ ಮುಖಂಡರು
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ನಿವೃತ್ತ ನೌಕರರಿಗೆ (2020 ಜನವರಿ 1ರಿಂದ 2023 ಫೆಬ್ರವರಿ 28) ಕೊಡಬೇಕಿರುವ ಗ್ರಾಚ್ಯುಟಿ, ರಜೆ ನಗಧೀಕರಣ ಸೇರಿದಂತೆ ಇತರ ಎಲ್ಲವುಗಳನ್ನು ನವೆಂಬರ್ ತಿಂಗಳ ಒಳಗಾಗಿ ಕೊಡಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
2024ರ ಅಕ್ಟೋಬರ್ 9ರಂದು ವಿಧಾನಸೌಧದಲ್ಲಿ ನಡೆದ ಸಾರಿಗೆ ನೌಕರರ ಪರ ಸಂಘಟನೆಗಳ ಸಭೆಯ ಅಧ್ಯಕ್ಷತೆಯಲ್ಲಿ ಮಾತನಾಡಿದ ಅವರು, ನೌಕರರಿಗೆ ನ್ಯಾಯಯುತವಾಗಿ ಸಿಗಬೇಕಿರುವ ಸೌಲಭ್ಯಗಳನ್ನು ನಮ್ಮ ಸರ್ಕಾರ ಕೊಡುವುದಕ್ಕೆ ಹಿಂದೆ ಮುಂದೆ ನೋಡುವುದಿಲ್ಲ ನಾವು ನೌಕರರ ಬೇಡಿಕೆಗಳನ್ನು ಗಮನಿಸಿದ್ದು ನಾವು ಕೂಡ ಎಲ್ಲ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಪ್ರಯತ್ನ ಪಡುತ್ತಿದ್ದೇವೆ ಎಂದು ಸಚಿವರು ತಿಳಿಸಿದ್ದಾರೆ.
ಇನ್ನು ಮುಖ್ಯವಾಗಿ ಕೂಡಲೇ ಅಂದರೆ ಒಂದು ತಿಂಗಳ ಒಳಗಾಗಿ ಸುಮಾರು 11 ಸಾವಿರ ನಿವೃತ್ತ ನೌಕರರಿಗೆ (2020-2023 ಮತ್ತು ನಂತರ ನಿವೃತ್ತರಾದ ಎಲ್ಲ ನೌಕರರಿಗೂ) ಸಿಗಬೇಕಿರುವ ಸೌಲಭ್ಯಗಳನ್ನು ಕೊಡಲಾಗುವುದು ಎಂದು ಸಭೆಯಲ್ಲಿ ತೀರ್ಮಾನ ತೆಗೆದುಕೊಂಡಿದ್ದಾರೆ.
ಆದರೆ, ಹಾಲಿ ಕರ್ತವ್ಯದಲ್ಲಿರುವ ನೌಕರರಿಗೆ ಆಗುತ್ತಿರುವ 4 ವರ್ಷಕ್ಕೊಮ್ಮೆಯ ವೇತನ ಬಗೆಗಿನ ಹೋರಾಟಕ್ಕೆ ಪೂರ್ಣ ವಿರಾಮ ನೀಡುವ ನಿಟ್ಟಿಲ್ಲಿ ನಮ್ಮ ಸರ್ಕಾರ ದೃಢ ನಿರ್ಧಾರ ತೆಗೆದುಕೊಳ್ಳಲಿದೆ. ಈ ಬಗ್ಗೆ ನೌಕರರಿಗಾಗಲಿ ಅಥವಾ ನೌಕರರ ಪರ ಸಂಘಟನೆಗಳಿಗಾಗಲಿ ಯಾವುದೇ ಗೊಂದಲ ಬೇಡ ಎಂದು ಸಭೆಯಲ್ಲಿ ಸಚಿವರು ಸ್ಪಷ್ಟಪಡಿಸಿದ್ದರು.
ಇನ್ನು ನೌಕರರ ಸಂಘಟನೆಗಳಲ್ಲಿ ಕೆಲ ಸಂಘಟನೆಗಳ ಮುಖಂಡರು ಸರಿ ಸಮಾನ ವೇತನ ಬೇಡ ಇದರಿಂದ ನೌಕರರಿಗೆ ಆರ್ಥಿಕವಾಗಿ ನಷ್ಟವಾಗುತ್ತದೆ. ಹೀಗಾಗಿ 4 ವರ್ಷಕ್ಕೊಮ್ಮೆ ಆಗುತ್ತಿರುವ ವೇತನ ಪರಿಷ್ಕರಣೆಯನ್ನೆ ಮಾಡಬೇಕು ಎಂದು ಸಭೆಯಲ್ಲಿ ಒತ್ತಾಯ ಮಾಡಿದ್ದರು. ಅದಕ್ಕೆ ಸಚಿವರು ಈ ಬಗ್ಗೆ ನೌಕರರಲ್ಲಿ ಅಸಮಾಧಾನವಿದೆ ಆದ್ದರಿಂದ ನಾವು ಚುನಾವಣೆಯಲ್ಲಿ ಕೊಟ್ಟಿರುವ ಭರವಸೆಯನ್ನು ಈಡೇರಿಸುವ ನಿಟ್ಟಿನಲ್ಲಿ ಗಮನಹರಿಸುತ್ತಿದ್ದೇವೆ ಎಂದು ಸೂಕ್ಷ್ಮವಾಗಿ ತಿಳಿಸಿದ್ದಾರೆ.
ಇದಕ್ಕೆ ಇಲ್ಲ 2024ರ ವೇತನ ಪರಿಷ್ಕರಣೆ ಆಗಲೇ ಬೇಕು ಎಂದು ಮನವಿ ಮಾಡಿದ್ದಾರೆ. ಅದಕ್ಕೆ ಸರ್ಕಾರ ಸ್ಪಂದಿಸಿಲ್ಲ ಕಾರಣ ಡಿಸೆಂಬರ್ 9ರಂದು ಬೆಳಗಾವಿಗೆ ತೆರಳಲು ಜಂಟಿ ಕ್ರಿಯಾ ಸಮಿತಿ ಪದಾಧಿಕಾರಿಗಳು ನಿರ್ಧರಿಸಿದ್ದು, ನೌಕರರನ್ನು ಕರೆಯುತ್ತಿದ್ದಾರೆ. ಆದರೆ ಶೇ.96ರಷ್ಟು ನೌಕರರು ಮತ್ತು 100ಕ್ಕೆ 100ರಷ್ಟು ಅಧಿಕಾರಿಗಳು ಮತ್ತು ಮೇಲ್ವಿಚಾರಕ ಸಿಬ್ಬಂದಿಗಳು ಇದನ್ನು ಒಪ್ಪುತ್ತಿಲ್ಲ.
ಬಹುತೇಕ ನೌಕರರು ಮತ್ತು ಪ್ರಸ್ತುತ ಅಧಿಕಾರಿಗಳು ಕೂಡ ಹಲವು ದಶಕಗಳ ಬಳಿಕ ಅಂದರೆ 7ನೇ ವೇತನ ಆಯೋಗ ಮಾದರಿಯಲ್ಲೇ ನಮಗೂ ವೇತನ ಕೊಡಬೇಕು ಎಂಬ ಬೇಡಿಕೆಗೆ ಅಚಲವಾಗಿ ನಿಂತಿದ್ದಾರೆ. ಆದರೂ ತೆರೆ ಮರೆಯಲ್ಲಿ ನಾವು ಅಗ್ರಿಮೆಂಟ್ ಮೂಲಕವೇ ವೇತನ ಪರುಷ್ಕರಣೆ ಮಾಡಿಸಬೇಕು ಎಂದು ನೌಕರರ ವಿರುದ್ಧವಾಗಿಯೇ ಮುಷ್ಕರ ಮಾಡುವುದಕ್ಕೆ ಕ್ರಿಯಾ ಸಮಿತಿ ಪದಾಧಿಕಾರಿಗಳು ಮುಂದಾಗಿದ್ದಾರೆ.
ಆದರೆ ಇತ್ತ ಅಧಿಕಾರಿಗಳು-ನೌಕರರು ಮಾತ್ರ ಜಂಟಿಯವರ ಕರೆ ತಿರಸ್ಕರಿಸುತ್ತಿದ್ದು, ಸರ್ಕಾರಿ ನೌಕರರಿಗೆ ಸರಿ ಸಮಾನವಾದ ಅಂದರೆ ಸಮಾನ ಕೆಲಸಕ್ಕೆ ಸಮಾನ ವೇತನ ಕೊಡಬೇಕು. ಜತೆಗೆ ನೀವೆ ಕೊಟ್ಟಿರುವ ಭರವಸೆಯನ್ನು ಈಡೇರಿಸಬೇಕು. ಈ ಜಂಟಿಯವರ ಹೋರಾಟಕ್ಕೆ ಸರ್ಕಾರ ಮಣಿಯಬಾರದು ಎಂದು ಮನವಿ ಮಾಡುತ್ತಿದ್ದಾರೆ.
ಅಲ್ಲದೆ ಹಲವು ದಶಕಗಳಿಂದ ಅಧಿಕಾರಿಗಳು ಮತ್ತು ನೌಕರರನ್ನು ಕಾಡುತ್ತಿದ್ದ ಒಗ್ಗಟ್ಟಿನ ಮಂತ್ರವು ಈಗ ಫಲಿಸುವ ಕಾಲ ಕೂಡಿ ಬಂದಿದ್ದು ಸಮಸ್ತ ಸಾರಿಗೆ ಅಧಿಕಾರಿಗಳು- ಸಿಬ್ಬಂದಿಗಳು ಸರಿ ಸಮಾನ ವೇತನ ಪಡೆಯುವುದಕ್ಕೆ ಸಜ್ಜಾಗಿದ್ದಾರೆ. ಹೀಗಾಗಿ ವೇತನ ಸಮಸ್ಯೆಗೆ ಅತೀ ಶೀಘ್ರದಲ್ಲೇ ಪೂರ್ಣವಿರಾಮ ಬೀಳಲಿದೆ. ನೌಕರರಿಗೆ ಮುಂದಿನ ದಿನಗಳಲ್ಲಿ ಸಿಹಿ ಸುದ್ದಿ ಸಿಗುವುದರಲ್ಲಿ ಯಾವುದೇ ಡೌಟ್ ಇಲ್ಲ ಎಂದು ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘ ಹಾಗೂ ಸಂಚಾರ ಮೇಲ್ವಿಚಾರಕ ಸಿಬ್ಬಂದಿಗಳ ಕ್ಷೇಮಾಭಿವೃದ್ಧಿ ಸಂಘದ ಮುಖಂಡರು ಆಶಾಭಾವನೆ ವ್ಯಕ್ತಪಡಿಸಿದ್ದಾರೆ.