
ತಿ.ನರಸೀಪುರ: ತಾಲೂಕಿನ ಬಿಲಿಗೆರೆಹುಂಡಿ ಗ್ರಾಮದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಮನ್ನೇಹುಂಡಿ ಎಂ.ಶೇಖರ್, ಉಪಾಧ್ಯಕ್ಷರಾಗಿ ಡಣಾಯಕನಪುರ ಪಿ. ಚಿನ್ನಬುದ್ದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ವರುಣ ವಿಧಾನಸಭಾ ಕ್ಷೇತ್ರದ ಬಿಲಿಗೆರೆಹುಂಡಿ ಗ್ರಾಮದಲ್ಲಿ ಆರಂಭಗೊಂಡಿರುವ ಸಹಕಾರ ಸಂಘದ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ಚೊಚ್ಚಲ ಚುನಾವಣೆ ಸಭೆಯನ್ನು ಕರೆಯಲಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಎಂ.ಶೇಖರ್ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಪಿ.ಚಿನ್ನಬುದ್ಧಿ ಅವರಿಬ್ಬರೇ ಉಮೇದುವಾರಿಕೆ ಸಲ್ಲಿಸಿದ್ದರಿಂದ ಅವಿರೋಧವಾಗಿ ಆಯ್ಕೆಯಾದರು.
ಚುನಾವಣಾ ಸಭೆಯಲ್ಲಿ ಸಂಘದ 12 ನಿರ್ದೇಶಕರು ಭಾಗವಹಿಸಿದ್ದರು. ಚುನಾವಣಾ ಅಧಿಕಾರಿಯಾಗಿ ಸುನಿತಾ ಅವರು ಕಾರ್ಯನಿರ್ವಹಿಸಿದರು. ಅವಿರೋಧ ಆಯ್ಕೆ ಪ್ರಕಟಗೊಳ್ಳುತ್ತಿದ್ದಂತೆ ಅಧ್ಯಕ್ಷ, ಉಪಾಧ್ಯಕ್ಷರ ಬೆಂಬಲಿಗರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.
ಚುನಾವಣೆ ಬಳಿಕ ನೂತನ ಅಧ್ಯಕ್ಷ ಎಂ.ಶೇಖರ್ ಮಾತನಾಡಿ, ಹಿಂದುಳಿದ ಗ್ರಾಮೀಣ ಪ್ರದೇಶಗಳನ್ನು ಕೇಂದ್ರೀಕರಿಸಿ, ಈ ಭಾಗದ ರೈತರಿಗೆ ಸಾಲ ಸೌಲಭ್ಯ ಮತ್ತು ರಸಗೊಬ್ಬರ – ಬಿತ್ತನೆ ಬೀಜಗಳನ್ನು ಸ್ಥಳೀಯವಾಗಿ ಒದಗಿಸಲು ಕೃಷಿಪತ್ತಿನ ಸಹಕಾರಿ ಸಂಘವನ್ನ ಪ್ರಾರಂಭಿಸಿದ್ದೇವೆ.
ನೂತನ ಸಂಘಕ್ಕೆ ಸ್ವಂತ ನಿವೇಶನ ಹಾಗೂ ಕಟ್ಟಡ ನಿರ್ಮಾಣಕ್ಕೆ ಈ ಭಾಗದ ಶಾಸಕರಾಗಿರುವ ಸಿಎಂ ಸಿದ್ದರಾಮಯ್ಯ ಹಾಗೂ ವಿಧಾನಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಅವರ ನೆರವನ್ನು ಪಡೆಯಲಾಗುವುದು. ಎಲ್ಲ ಸಮುದಾಯಗಳ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಂಘವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲು ಎಲ್ಲರೊಟ್ಟಿಗೆ ದುಡಿಯುತ್ತೇನೆ ಎಂದು ತಿಳಿಸಿದರು.
ನಿರ್ದೇಶಕರಾದ ಎಂ.ಎಸ್.ಮಹದೇವಸ್ವಾಮಿ, ಎಸ್.ಬಸವಣ್ಣ, ಎಂ. ವೆಂಕಟೇಶ್, ಎಸ್.ರಾಜೀವ್, ವಸಂತ, ಗೌರಮ್ಮಣ್ಣಿ, ಕೆ.ಎಂ.ದೇವರಾಜು, ಎನ್.ಅಶ್ವಿನ್, ನಾಗರಾಜು, ಮಹದೇವ, ಕಾರ್ಯನಿರ್ವಾಹಕ ಅಧಿಕಾರಿ ಬಿ.ಸಿದ್ದರಾಜು, ತಾ.ಪಂ ಮಾಜಿ ಸದಸ್ಯ ಎಂ.ರಮೇಶ್, ಮುಖಂಡರಾದ ಎಸ್. ಸಿದ್ದರಾಜು ಟೀ ಅಂಗಡಿ, ನಂಜುಂಡೇಗೌಡ, ರಾಜುಬುದ್ಧಿ, ಅರುಣ್ ಗೌಡ, ಏಳುಮಲೆ ಮಂಜು, ರಾಜಶೇಖರ್ ಮಹದೇವಸ್ವಾಮಿ, ಶಿವರಾಜು, ಪಾಪ ನಾಯಕ ಹಾಗೂ ಇತರರು ಇದ್ದರು.