ಬೆಂಗಳೂರು: ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕೊರೊನಾ ಪರಿಸ್ಥಿತಿಯಲ್ಲಿ ಸಾಮಾನ್ಯ ಜನರೊಂದಿಗೆ ನಡೆದುಕೊಳ್ಳುತ್ತಿರುವ ಬಗ್ಗೆ ಜನ ಜಾಗೃತಿ ಮೂಡಿಸುವ ಜತೆಗೆ ಜೆಡಿಎಸ್ ಪಕ್ಷ ಸಂಘಟನೆಯತ್ತ ಕಾರ್ಯಕರ್ತರು ಮುಂದಾಗಬೇಕು ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷರೂ ಆದ, ರಾಜ್ಯಸಭಾ ಸದಸ್ಯ ಎಚ್.ಡಿ.ದೇವೇಗೌಡರು ಪತ್ರ ಬರೆಯುವ ಮೂಲಕ ಕರೆ ನೀಡಿದ್ದಾರೆ.
ಗೌಡರು ಬರೆದ ಪತ್ರ ಹೀಗಿದೆ ನೋಡಿ
ಆತ್ಮೀಯರಾದ ಪಕ್ಷದ ನಿಷ್ಠಾವಂತ, ಕಾರ್ಯಕರ್ತರೆ, ನಾಯಕರೆ , ಇದು ನಿಮಗೆ ನಾನು ಬಹಳ ಯೋಚಿಸಿ ವೈಯಕ್ತಿಕವಾಗಿ ಬರೆಯುತ್ತಿರುವ ಪತ್ರ. 2018ರ ವಿಧಾನಸಭಾ ಚುನಾವಣೆಯಲ್ಲಿ ನೀವು ನಮ್ಮ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದಿರಿ. ಪಕ್ಷದ ನಿಷ್ಠೆಗಾಗಿ ನೀವು ಪಕ್ಷ ಮಾಡಿರಬಹುದಾದ ಸಹಾಯವನ್ನೂ ಮೀರಿ ನಿಮ್ಮದೇ ಆದ ಸಂಪನ್ಮೂಲಗಳಿಂದ ಪಕ್ಷದ ಧ್ವಜವನ್ನು ಎತ್ತಿ ಹಿಡಿಯಲು ಹೋರಾಟ ಮಾಡಿದರ ಬಗ್ಗೆ ನಾನು ನಿಮಗೆ ಪಕ್ಷದ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.
ಚುನಾವಣೆಯಲ್ಲಿ ಸೋಲು-ಗೆಲುವು ಸಹಜ. ಆದರೂ ಆರ್ಥಿಕ ಸಂಕಷ್ಟಗಳ ಸವಾಲುಗಳ ಮಧ್ಯೆಯೇ ನೀವು ನಿಮ್ಮ ಕ್ಷೇತ್ರದಲ್ಲಿ ಪಕ್ಷದ ಪರವಾಗಿ ಕೆಲಸ ಮಾಡುತ್ತಾ ಬಂದಿದ್ದೀರಿ. 2019ರ ಲೋಕಸಭಾ ಚುನಾವಣೆಯಲ್ಲಿ ನೀವು ಕಾಂಗ್ರೆಸ್ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದರಿಂದ ಉಂಟಾದ ವೈಪರೀತ್ಯಗಳು ಮತ್ತು ವಿರೋಧಾಭಾಸಗಳ ಮಧ್ಯದಲ್ಲೂ ನೀವು ಮುಜುಗರಕ್ಕೊಳಗಾದರೂ ಪಕ್ಷದ ತೀರ್ಮಾನಕ್ಕೆ ಬದ್ಧರಾಗಿ ಕೆಲಸ ಮಾಡಿದ್ದೀರಿ.
ಈಗ ವಿಧಾನಸಭಾ ಚುನಾವಣೆ ಮುಗಿದು ಎರಡೂವರೆ ವರ್ಷಗಳಾಗಿವೆ. ಇನ್ನು ಒಂದು ವರ್ಷದ ನಂತರ ಚುನಾವಣೆಯ ಬಿಸಿ ಆರಂಭವಾಗುತ್ತದೆ. ಪಕ್ಷದ ತತ್ವ ಸಿದ್ಧಾಂತಗಳಿಗೆ ಬದ್ಧರಾಗಿ ಪಕ್ಷ ನಿಷ್ಠರಾಗಿ ಇಷ್ಟು ವರ್ಷ ನನ್ನೊಂದಿಗೆ ಕೆಲಸ ಮಾಡುತ್ತಾ ಬಂದಿರುವ ನಿಮ್ಮ ಭವಿಷ್ಯ ಉಜ್ವಲವಾಗಿರಬೇಕು ಎಂಬುದು ನನ್ನ ಅಪೇಕ್ಷೆ. ದುರದೃಷ್ಟವಶಾತ್ ಸಮ್ಮಿಶ್ರ ಸರ್ಕಾರದಲ್ಲಿ ನಮ್ಮ ಪಕ್ಷ ಪಾಲುದಾರ ಪಕ್ಷವಾಗಿ ನಮ್ಮ ಪಕ್ಷದ ಎಚ್.ಡಿ.ಕುಮಾರಸ್ವಾಮಿಯವರೇ ಮುಖ್ಯಮಂತ್ರಿಗಳಿದ್ದಾಗ್ಯೂ ನಿಮ್ಮಗಳ ಹಿತವನ್ನು ರಕ್ಷಿಸುವಲ್ಲಿ ನಾವು ಎಡವಿದ್ದೇವೆ ಮತ್ತು ತಪ್ಪು ಮಾಡಿದ್ದೇವೆಂಬುದನ್ನು ನಾನು ಪ್ರಾಂಜಲ ಮನಸ್ಸಿನಿಂದ ಒಪ್ಪಿಕೊಳ್ಳುತ್ತೇನೆ. ಹಾಗಾಗಿ ನೀವು ಅಷ್ಟರಮಟ್ಟಿಗೆ ನಿಮ್ಮ ಉತ್ಸಾಹ ಮತ್ತು ಸ್ಥೈರ್ಯವನ್ನು ಕಳೆದುಕೊಂಡಿರುವುದರಿಂದ ಅದು ಪಕ್ಷಕ್ಕೆ ಅಷ್ಟರಮಟ್ಟಿಗೆ ದೊಡ್ಡ ಹಾನಿಯನ್ನೇ ಮಾಡಿದೆ.
ಹೀಗೆ ಸ್ವಲ್ಪ ಮಂಕಾಗಿರುವ ಮತ್ತು ನಿಸ್ತೇಜವಾಗಿರುವ ಪಕ್ಷವನ್ನು ಇನ್ನು ಒಂದು ವರ್ಷ ಅವಧಿಯಲ್ಲಿ ಚುರುಕುಗೊಳಿಸಲೇ ಬೇಕಾಗಿದೆ. ಇದರ ಅನಿವಾರ್ಯತೆಯನ್ನು ನೀವು ಅರ್ಥ ಮಾಡಿಕೊಳ್ಳುತ್ತೀರೆಂದು ನಾನು ನಂಬಿದ್ದೇನೆ.
ದುರದೃಷ್ಟವಶಾತ್, ಜಗತ್ತೇ ಕೊರೊನಾ ಹೆಮ್ಮಾರಿಯಿಂದ ಕಂಗೆಟ್ಟಿದೆ. ಇದಕ್ಕೆ ನಮ್ಮ ರಾಜ್ಯವೂ ಹೊರತಾಗಿಲ್ಲ. ಲಾಕ್‌ಡೌನ್, ಸೀಲ್‌ಡೌನ್, ನಿಷೇಧ, ನಿರ್ಬಂಧ, ಇವುಗಳಿಂದಾಗಿ ನಮ್ಮ ವೈಯಕ್ತಿಕ ಚಟುವಟಿಕೆಗಳಷ್ಟೇ ಅಲ್ಲ ಪಕ್ಷದ ರಾಜಕಿಯ ಚಟುವಟಿಕೆಗಳೂ ಸ್ತಬ್ಧಗೊಂಡು ಸ್ಥಗಿತಗೊಂಡಿವೆ. ನಿಮ್ಮನ್ನು ಖುದ್ದಾಗಿ ಬರಮಾಡಿಕೊಂಡು ನಿಮ್ಮೊಂದಿಗೆ ನೇರವಾಗಿ ಮನಬಿಚ್ಚಿ ಮಾತನಾಡಬೇಕೆಂಬ ನನ್ನ ಆಲೋಚನೆಯನ್ನು ಅನುಷ್ಠಾನಕ್ಕೆ ತರಲು ಲಾಕ್‌ಡೌನ್ ಅಡ್ಡಿಯಾಯಿತು. ಹಾಗಾಗಿ ಈ ಪತ್ರ ಬರೆಯುವುದು ಅನಿವಾರ್ಯವಾಯಿತು. ಲಾಕ್‌ಡೌನ್ ಯಾವಾಗ ಮುಗಿಯುತ್ತದೋ ಹೇಳಲು ಬರುವಂತಿಲ್ಲ. ಕೊರೊನಾ ಪರಿಸ್ಥಿತಿ ಮತ್ತಷ್ಟು ತಿಂಗಳು ಮುಂದುವರಿಯುತ್ತದೋ ಗೊತ್ತಿಲ್ಲ. ಹಾಗೆಂದು ನಾವು ನೀವು ಕೈಕಟ್ಟಿಕೊಂಡು ಕುಳಿತುಕೊಳ್ಳಲು ಸಾಧ್ಯವಿಲ್ಲ.
ಆದುದರಿಂದ ನೀವು 2018ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಮಟ್ಟಿಗಾದರೂ ಕ್ರಿಯಾಶೀಲರಾಗಿರಬೇಕು. ಕ್ಷೇತ್ರದಲ್ಲಿ ನಿರಂತರ ಜನಸಂಪರ್ಕವನ್ನು ಕಾಯ್ದುಕೊಂಡು ಬರಬೇಕು. ಜನಗಳ ಮಧ್ಯೆ ಇದ್ದೇನೆ ಎಂಬುದನ್ನು ತೋರಿಸಲು ಹೋಬಳಿ ಮಟ್ಟಗಳಲ್ಲಿ ಗ್ರಾಮ ಪಂಚಾಯತಿ ಮಟ್ಟಗಳಲ್ಲಿ ಒಂದಿಲ್ಲೊಂದು ಕಾರ್ಯಕ್ರಮ, ಚಟುವಟಿಕೆಗಳನ್ನು ಹಾಕಿಕೊಳ್ಳಬೇಕು.
ಲಾಕ್‌ಡೌನ್ ಇರುವುದರಿಂದ ಜನರನ್ನೂ ಸೇರಿಸಿ ಕಾರ್ಯಕ್ರಮವನ್ನು ಮಾಡಲಾಗದಿದ್ದರೂ ಸಾಮಾಜಿಕ ಜಾಲತಾಣಗಳ ಮೂಲಕ ನಿಮ್ಮ ಅಸ್ತಿತ್ವ ಮತ್ತು ಕ್ರಿಯಾಶೀಲತೆಯನ್ನು, ಪಕ್ಷದ ಕಾರ್ಯಕರ್ತರಿಗೆ ಮತ್ತು ತನ್ಮೂಲಕ ನಿಮ್ಮ ಕ್ಷೇತ್ರದ ಮತದಾರರಿಗೆ ತಲುಪಿಸುವ ಕಾರ್ಯಕ್ಕೆ ನೀವು ಮುಂದಾಗಬೇಕು. ಕೊರೊನಾ ವಿಷಯದಲ್ಲಿ ಸರ್ಕಾರಿ ಕಾರ್ಯಕ್ರಮಗಳು ಒಂದು ಕಡೆಯಾದರೆ, ಪಕ್ಷದ ವತಿಯಿಂದ ಮತ್ತು ವೈಯಕ್ತಿಕವಾಗಿ ನೀವು ಈ ಸಂದರ್ಭದಲ್ಲಿ ಜನರ ಸಂಕಷ್ಟಗಳಿಗೆ ಸ್ಪಂದಿಸುತ್ತೀರಿ ಎಂಬ ಭಾವನೆ ಮೂಡುವಂತೆ ನಿಮ್ಮ ನಿಮ್ಮ ಕ್ಷೇತ್ರಕ್ಕೆ ಹೊಂದಿಕೆಯಾಗುವಂತಹ ಕಾರ್ಯಕ್ರಮಗಳನ್ನು ಹಾಕಿಕೊಳ್ಳಬೇಕು.
ಜತೆಗೆ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಗಳು ಬಡವರ ವಿರೋಧಿಯಾಗಿ ಮತ್ತು ರೈತರ ವಿರೋಧಿಯಾಗಿ ತೆಗೆದುಕೊಂಡಿರುವ ನಿರ್ಧಾರಗಳ ವಿರುದ್ಧ ಪ್ರಚಾರ ಮಾಡಬೇಕು. ಜಾತ್ಯತೀತತೆ, ಸಾಮಾಜಿಕ ನ್ಯಾಯ, ಪ್ರಾದೇಶಿಕತೆ, ಇವುಗಳಿಗೆ ಹೇಗೆ ನಿಮ್ಮ ಪಕ್ಷ ಎರಡು ರಾಷ್ಟ್ರೀಯ ಪಕ್ಷಗಳಿಗಿಂತ ಅನಿವಾರ್ಯ ಎಂಬುದನ್ನು ತಿಳಿಸಿ ಹೇಳುವ ಕೆಲಸ ಮಾಡಬೇಕು.
ಉದಾಹರಣೆಗೆ ಭೂ ಸುಧಾರಣಾ ಕಾಯಿದೆಗೆ ಬಿಜೆಪಿ ಸರ್ಕಾರ ತಂದಿರುವ ತಿದ್ದುಪಡಿ ಹೇಗೆ ರೈತ ವಿರೋಧಿ ಮತ್ತು ಬಂಡವಾಳಶಾಹಿಗಳ ಪರ ಎಂಬುದನ್ನು ನಾವು ರೈತರಿಗೆ ಮತ್ತು ವಿದ್ಯಾವಂತ ತರುಣರಿಗೆ ಮನಗಾಣಿಸಿಕೊಡಬೇಕು. ಎಪಿಎಂಸಿ ತಿದ್ದುಪಡಿಯೂ ಅಷ್ಟೆ. ಹೇಗೆ ರೈತರಿಗೆ ಮಾರಕವಾಗಿದೆ ಎಂಬುದನ್ನು ಹೇಳಬೇಕು,. ಇತ್ತೀಚೆಗೆ ಕೇಂದ್ರ ಸರ್ಕಾರ ಶೈಕ್ಷಣಿಕ ಸಂಸ್ಥೆಗಳು ಮುಚ್ಚಿರುವ ಕಾರಣ ಪಠ್ಯವಿಷಯಗಳನ್ನು ಕಡಿಮೆಗೊಳಿಸುವ ನೆಪದಲ್ಲಿ ನಮ್ಮ ಸಂವಿಧಾನದ ಮೂಲ ಆಶಯಗಳಾದ ಜಾತ್ಯತೀತತೆ, ಸಾಮಾಜಿಕ ನ್ಯಾಯ, ಸಮಾನತೆ, ಜನತಂತ್ರ, ಮೊದಲಾದ ಮೂಲಭೂತ ಸಂಗತಿಗಳಿಗೆ ಕತ್ತರಿ ಹಾಕುವ ಪ್ರಯತ್ನಕ್ಕೆ ಮುಂದಾಗಿದೆ. ಇದು ಮುಂಬರುವ ದಿನಗಳಲ್ಲಿ ಸರ್ವಾಧಿಕಾರಿ ಆಡಳಿತಕ್ಕೆ ದಾರಿಯಾಗಬಹುದು. ಈ ಬಗ್ಗೆಯೂ ಜನಜಾಗೃತಿ ಮೂಡಿಸಬೇಕಾಗಿದೆ.
ಆದುದರಿಂದ ತಾವು ದಯಮಾಡಿ ಈ ವಿಷಯವನ್ನು ನಿಮ್ಮ ಭವಿಷ್ಯ ಮತ್ತು ಪಕ್ಷದ ಭವಿಷ್ಯ ಎರಡೂ ಅಡಗಿದೆ ಎಂಬುದನ್ನು ಅರ್ಥ ಮಾಡಿಕೊಂಡು ನಿಮ್ಮ ನಿಮ್ಮ ಕ್ಷೇತ್ರದಲ್ಲಿ ಚುರುಕಾಗಿ ಪಕ್ಷದ ಸಂಘಟನೆ, ಜನಸ್ಪಂದನೆ ಮತ್ತು ಜನಜಾಗೃತಿಯ ಜನಪರ ಕಾರ್ಯಕ್ರಮಗಳ ಬಗ್ಗೆ ಯೋಚಿಸಬೇಕೇಂದು ಹಾಗೂ ಕೊರೊನಾ ವಾತಾವರಣ ತಿಳಿಯಾಗುವವರೆಗೆ ಸಾಮಾಜಿಕ ಜಾಲತಾಣಗಳನ್ನು ಹೆಚ್ಚು ಹೆಚ್ಚು ಬಳಕೆ ಮಾಡಿಕೊಳ್ಳಬೇಕೆಂದು ನಾನು ಕೋರುತ್ತೇನೆ. ನನ್ನ ಭಾವನೆಗಳನ್ನು ಅರ್ಥ ಮಾಡಿಕೊಳ್ಳುತ್ತೀರೆಂಬ ವಿಶ್ವಾಸ ನನಗಿದೆ ಎಂದು ದೇವೇಗೌಡರು ತಿಳಿಸಿದ್ದಾರೆ.