ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳಲ್ಲೂ ಕಳೆದ 2021ರ ಏಪ್ರಿಲ್ 7ರಿಂದ 21ರವರೆಗೂ ನಡೆದ ಮುಷ್ಕರದ ವೇಳೆ ವಜಾಗೊಂಡಿರುವ ನೌಕರರನ್ನು ಅತೀ ಶೀಘ್ರದಲ್ಲೇ ವಾಪಸ್ ತೆಗೆದುಕೊಳ್ಳುತ್ತೇವೆ ಎಂದು ನೂತನ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ಈ ಹಿಂದಿನ ಸರ್ಕಾರವಿದ್ದಾಗಲೂ ಈ ಸಂಬಂಧ ಸಾರಿಗೆ ನೌಕರರ ಸಂಘಟನೆಗಳ ಮುಖಂಡರು ಅಂದಿನ ಸಚಿವರಿಗೆ ವಜಾಗೊಂಡಿರುವ ನೌಕರರನ್ನು ವಾಪಸ್ ತೆಗೆದುಕೊಳ್ಳಬೇಕು ಎಂದು ಮನವಿ ಸಲ್ಲಿಸಿದ್ದರು. ಆದರೆ ಅದು ಇನ್ನು ಪೂರ್ಣಗೊಂಡಿಲ್ಲ ಹೀಗಾಗಿ ನಾವು ಶೀಘ್ರದಲ್ಲೇ ವಜಾಗೊಂಡಿರುವ ಎಲ್ಲ ನೌಕರರನ್ನು ವಾಪಸ್ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.
ಇನ್ನು ನೌಕರರ ವಿರುದ್ಧ ದಾಖಲಾಗಿರುವ ಎಲ್ಲ ಪೊಲೀಸ್ ಪ್ರಕರಣಗಳನ್ನು ಪರಿಶೀಲನೆ ಮಾಡಲಾಗುತ್ತಿದ್ದು, ಅದರಲ್ಲಿ ಯಾರು ತಪ್ಪಿತಸ್ಥರು ಯಾರನ್ನು ಸುಖಸುಮ್ಮನೇ ಟಾರ್ಗೆಟ್ ಮಾಡಲಾಗಿದೆ ಎಂಬುದರ ಬಗ್ಗೆಯೂ ತಿಳಿದುಕೊಂಡು ನೌಕರರಿಗೆ ಅನುಕೂಲ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಕ್ರಮ ಜರುಗಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.
ಕಳೆದ 2022ರ ಡಿಸೆಂಬರ್ 31ರ ಶನಿವಾರದಂದು ಅಂದಿನ ಸಾರಿಗೆ ಸಚಿವ ಬಿ.ಶ್ರೀರಾಮುಲು ಭರವಸೆ ನೀಡಿದ್ದರು. ಆ ಬಳಿಕ ಹಲವಾರು ಬಾರಿ ಭರವಸೆ ನೀಡಿಕೊಂಡೆ ಬಂದರೆ ಹೊರತು ವಜಾಗೊಂಡ ನೌಕರರನ್ನು ಮರು ನೇಮಕ ಮಾಡಿಕೊಳ್ಳುವ ಬಗ್ಗೆ ಯಾವುದೇ ಕ್ರಮಕ್ಕೂ ಮುಂದಾಗಲಿಲ್ಲ.
ಈ ನಡುವೆ ಕೋರ್ಟ್ ತಾಕೀತು ಮಾಡಿದ ಮೇಲೆ ವಜಾಗೊಂಡಿದ್ದ ಕೆಲ ನೌಕರರನ್ನು ಮರು ನೇಮಕ ಮಾಡಿಕೊಳ್ಳಲಾಯಿತು. ಆದರೆ, ವಜಾಗೊಂಡವರಲ್ಲಿ ಪೊಲೀಸ್ ಪ್ರಕರಣಗಳಿರುವ ನೌಕರರನ್ನು ಇನ್ನೂ ವಾಪಸ್ ತೆಗೆದುಕೊಂಡಿಲ್ಲ. ಹೀಗಾಗಿ ಈ ಬಗ್ಗೆ ಪರಿಶೀಲನೆ ಮಾಡಿ ಎಲ್ಲರನ್ನೂ ವಾಪಸ್ ತೆಗೆದುಕೊಳ್ಳುತ್ತೇವೆ ಎಂದು ರಾಮಲಿಂಗಾರೆಡ್ಡಿ ನೌಕರರಿಗೆ ಭರವಸೆ ನೀಡಿದ್ದಾರೆ.
ಬಿಜೆಪಿ ರಾಜ್ಯ ಸರ್ಕಾರ ಸಾರಿಗೆ ನೌಕರರ ಬಗ್ಗೆ ತಾರತಮ್ಯ ನೀತಿ ಅನುಸರಿಸಿತ್ತು. ಅಲ್ಲದೆ ಒಂದು ರೀತಿ ಅಸಡ್ಡೆಯಿಂದಲೇ ನಡೆದುಕೊಂಡಿತ್ತು. ನೌಕರರಿಗೆ ಅನ್ಯಾಯವಾದಾಗ ಸರಿಪಡಿಸಬೇಕಾದರ ಜವಾಬ್ದಾರಿ ಸ್ಥಾನದಲ್ಲಿದ್ದ ಬಿಜೆಪಿ ನೇತೃತ್ವದ ಸರ್ಕಾರವೇ ಅವರನ್ನು ಕೀಳಾಗಿ ನಡೆಸಿಕೊಂಡಿದ್ದು ಈಗ ಇತಿಹಾಸ. ಆದರೆ, ಅದೇ ದಾರಿಯಲ್ಲಿ ಕಾಂಗ್ರೆಸ್ ಸರ್ಕಾರ ನಡೆಯದೆ ನೌಕರರಿಗೆ ಕಾನೂನು ರೀತಿಯಲ್ಲೇ ಒಳ್ಳೇದು ಮಾಡುವತ್ತ ಮನಸ್ಸು ಮಾಡಬೇಕಿದೆ.