Please assign a menu to the primary menu location under menu

NEWSನಮ್ಮಜಿಲ್ಲೆಲೇಖನಗಳುಸಂಸ್ಕೃತಿ

ಕಳ್ಳನಿಗೆ ಕಾಣಿಸಿದ ಹರಿ ದಾಸರಿಗೆ ಕಾಣಿಸಲಿಲ್ಲ: ಬರೀ ಭಕ್ತಿ ಶ್ರದ್ಧೆ ಅಲ್ಲ ನಂಬಿಕೆಯೂ ಇರಬೇಕು

ವಿಜಯಪಥ ಸಮಗ್ರ ಸುದ್ದಿ

ಒಂದೂರಲ್ಲಿ, ಮಹಾ ಹರಿಭಕ್ತನೊಬ್ಬನಿದ್ದ. ಅವನೆಷ್ಟು ಹರಿಭಕ್ತ ನೆಂದರೆ, ಅವನದೇಹವನ್ನು ಸೀಳಿದರೆ, ರಕ್ತದ ಬದಲು ಹರಿನಾಮವೇ ಹರಿಯುವುದೇನೋ ಅನ್ನುವಷ್ಟರ ಮಟ್ಟಿಗೆ ಆತನಲ್ಲಿ ಹರಿ ಭಕ್ತಿ ಇದ್ದಿತು.

ನಿಂತರೆ ಕೂತರೆ ಹರಿನಾಮವನ್ನು ಬಿಟ್ಟು ಅವನ ಬಾಯಲ್ಲಿ ಮತ್ತೇನೂ ಬರುತ್ತಿರಲಿಲ್ಲ. ಒಮ್ಮೆ ಅದೇ ಊರಿನ ಮುಖಂಡನೊಬ್ಬನಿಗೆ ಊರಿನಲ್ಲಿ ಭಾಗವತ ಸಪ್ತಾಹ ಮಾಡಿಸಿದರೆ ಊರಿಗೆ ಒಳ್ಳೆಯದಾಗುತ್ತದೆ ಎಂದು ಯಾರೋ ಸಲಹೆ ಕೊಟ್ಟರು.
ಯಾರನ್ನು ಕರೆಸುವುದೆಂದು ಯೋಚಿಸಿದಾಗ, ನಮ್ಮ ಊರಲ್ಲೇ ಇರುವ ಹರಿಭಕ್ತನಿಗಿಂತ ಇನ್ಯಾರು ಬೇಕೆಂದು ಕೊಂಡು ಈ ಹರಿಭಕ್ತನಿಗೇ ಸಪ್ತಾಹ ನಡೆಸಿಕೊಡುವಂತೆ ಕೇಳಿದರು. ಅವನು ಅದಕ್ಕೆ ಒಪ್ಪಿಕೊಂಡು ಸಪ್ತಾಹ ಶುರುವಾಗುತ್ತದೆ.

ಸಪ್ತಾಹ ಶುರುವಾಗಿ ಮೂರುದಿನ ಕಳೆದಿರುತ್ತದೆ. ನಾಲ್ಕನೇ ದಿನ ಹರಿದಾಸರು ಕೃಷ್ಣ ಮತ್ತು ಬಲರಾಮರ ಬಾಲ್ಯವನ್ನು ವಿವರಿಸುತ್ತಾ, ಬಾಲಕರ ಸೌಂದರ್ಯ, ಅವರು ಧರಿಸುತ್ತಿದ್ದ ಬಟ್ಟೆ ಬರೆಗಳು, ಹಾಕಿಕೊಳ್ಳುತ್ತಿದ್ದ ಒಡವೆಗಳು, ವಜ್ರದ ಕಿರೀಟ ಚಿನ್ನದ ಹಾಗೂ ಮುತ್ತಿನ ಹಾರಗಳು, ಕಾಲ್ಗಡಗಗಳ ಬಗ್ಗೆ ವರ್ಣನೆ ಮಾಡುತ್ತಿದ್ದರು.

ಸಾಹುಕಾರನ ಮನೆಯಲ್ಲಿ ಕಳ್ಳತನಕ್ಕೆಂದು ಬಂದಿದ್ದ ಕಳ್ಳನಿಗೆ, ಹರಿದಾಸರು ಹೇಳಿದ ಮಕ್ಕಳ ಒಡವೆಗಳ ವರ್ಣನೆಯು ತಲೆಯಲ್ಲಿ ಕೂತುಬಿಡುತ್ತದೆ. ಆತ ಮನದಲ್ಲಿ “ಅಲ್ಲಾ, ನಾನು ಈ ರೀತಿ ಸಣ್ಣ ಪುಟ್ಟ ಕಳ್ಳತನ ಮಾಡುವುದಕ್ಕಿಂತ ಒಂದು ಸಲ ಈ ಹರಿದಾಸರು ಹೇಳುತ್ತಿರುವ ಹುಡುಗರ ಒಡವೆ ಕದ್ದರೆ, ಜೀವನ ಪರ್ಯಂತ ಸುಖವಾಗಿರಬಹುದಲ್ಲಾ!” ಎಂಬ ಯೋಚನೆ ಹೊಳೆಯುತ್ತದೆ. ಏನಾದ್ರೂ ಮಾಡಿ ಈ ಹರಿದಾಸನಲ್ಲಿ ಆ ಹುಡುಗರು ಎಲ್ಲಿ ಸಿಗುತ್ತಾರೆ ಎಂಬುದನ್ನು ಕೇಳಿ ತಿಳಿದುಕೊಳ್ಳಬೇಕೆಂದು ನಿಶ್ಚಯಿಸಿದ.

ಹರಿದಾಸರು ಹರಿಕಥೆ ಮುಗಿಸಿ ಕೈಯಲ್ಲಿ ಪುಳಿಯೋಗರೆ ಪ್ರಸಾದವನ್ನು ಹಿಡಿದುಕೊಂಡು ಮನೆಕಡೆ ಹೊರಟರು. ಇದನ್ನೇ ಕಾಯುತ್ತಿದ್ದ ಕಳ್ಳ ಹರಿದಾಸರನ್ನು ಹಿಂಬಾಲಿಸಿ ಅಡ್ಡಗಟ್ಟಿ, ಸ್ವಾಮಿಗಳೇ ಇವತ್ತು ನೀವು ಇಬ್ಬರು ಚೆಂದದ ಮಕ್ಕಳ ಬಗ್ಗೆ ಹೇಳಿದರಲ್ಲಾ ಅವರು ಎಲ್ಲಿ ಇರುತ್ತಾರೆ, ಸ್ವಲ್ಪ ತಿಳಿಸಿ ಎಂದು ಕೇಳಿದ.

“ಎಲೆ ಮೂರ್ಖ ಅದು ಬರೀ ಕತೆ ಕಣೋ, ನಾನೇ ನಲವತ್ತು ವರ್ಷದಿಂದ ಕಾಯ್ತಿದೀನಿ, ನಂಗೇ ಅವನು ಇನ್ನೂ ಕಂಡಿಲ್ಲಾ, ನಿನಗೆ ಸಿಗ್ತಾನಾ? ತುಂಬಾ ರಾತ್ರಿಯಾಗಿದೆ, ಸುಮ್ನೆ ಮನೆಗೆ ನಡಿ,” ಎಂದರು ಹರಿದಾಸರು. “ನೀವು ಹೇಳಿಲ್ಲಾಂದ್ರೆ, ನಿಮಗೆ ಈಗ್ಲೇ ಇಲ್ಲೇ ಚೂರಿ ಹಾಕಿ ಬಿಡ್ತೀನಿ, ಮೊದಲೇ ನಾನು ಕಳ್ಳ, ನನ್ಹತ್ರ ಈಥರ ಆಟವೆಲ್ಲಾ ನೆಡೆಯೋಲ್ಲ” ಎಂದು ಗದರಿಸಿದ.

ಹರಿದಾಸರಿಗೆ ತುಂಬಾ ಭಯವಾಗತೊಡಗಿತು. ಬೇರೆದಾರಿ ಕಾಣದೇ ಎದುರಲ್ಲಿದ್ದ ಒಂದು ತುಳಸಿ ವೃಂದಾವನವನ್ನು ತೋರಿಸಿ, ಇಲ್ಲಿ ಇರ್ತಾರೆ, ಈಗ ಇರಲ್ಲಾ, ಬೆಳಗಿನ ಜಾವದ ಹೊತ್ತಿಗೆ ಬರ್ತಾರೆ, ಈಗ ಮನೆಗೆ ಹೋಗಿ, ಬೆಳಗಿನ ಜಾವದ ಹೊತ್ತಿಗೆ ಬಾ”, ಎಂದು ಹೇಳಿ ಇವನ ಕಾಟ ತಪ್ಪಿದರೆ ಸಾಕೆಂದು, ಅವರು ಅಲ್ಲಿಂದ ಜಾರಿಕೊಂಡರು.

ಈ ಸರಿ ರಾತ್ರಿಯಲ್ಲಿ ಮನೆಗೆ ಹೋಗಿ ಮಲಗಿದರೆ, ಬೆಳಗಿನ ಜಾವ ಎಚ್ಚರ ವಾಗದೇ ಇರಬಹುದೆಂದು ಯೋಚಿಸಿದ ಕಳ್ಳ, ಅಲ್ಲೇ ಇದ್ದ ಒಂದು ಮರದಮೇಲೆ ಕೂತು ರಾತ್ರಿ ಕಳೆಯುತ್ತೇನೆ ಎಂದು ಅಲ್ಲಿಯೇ ಕುಳಿತನು. ಬೆಳಗಿನ ಜಾವ ಚುಮು ಚುಮು ಇಬ್ಬನಿ ಬೀಳುತ್ತಿರುವಾಗ, ಇಬ್ಬರು ಬಾಲಕರು ನಗುತ್ತಾ, ಹರಟೆ ಹೊಡೆಯುತ್ತಾ ವೃಂದಾವನದತ್ತ ಬರುತ್ತಿರುವುದು ಕಳ್ಳನಿಗೆ ಕಾಣಿಸಿತು.

ಮರದಿಂದಿಳಿದು ಆ ಬಾಲಕರತ್ತ ಹೋದನು‌. ಆ ಬಾಲಕರು ನೋಡಲು ತುಂಬಾ ಮುದ್ದಾಗಿ, ಹರಿದಾಸರು ಹೇಳಿದಂತೆ, ಒಡವೆಗಳನ್ನು ಹಾಕಿಕೊಂಡಿದ್ದರು. ಅವರನ್ನು ನೋಡಿ ಕಳ್ಳನಿಗೆ ಅವರನ್ನು ಮುದ್ದು ಮಾಡಬೇಕೆನಿಸುತ್ತದೆ. “ಎಷ್ಟು ಚೆಂದದ ಮಕ್ಕಳು.
ಇವುಗಳ ಒಡವೆಗಳನ್ನು ನಾನು ತೆಗೆದುಕೊಂಡರೆ, ಆ ಶಿವಾ ಮೆಚ್ಚಿಯಾನೇ,” ಎಂದುಕೊಂಡು ಮಕ್ಕಳನ್ನು ಕಣ್ತುಂಬ ನೋಡಿ ಅಲ್ಲಿಂದ ಹೊರಟನು.

ಆಗ ಆ ಮಕ್ಕಳು ಅವನನ್ನು ಕೂಗಿ ಕರೆದು, ರಾತ್ರಿಯಲ್ಲಾ ನಮಗಾಗಿ ಕಾದಿದ್ದೆಯಲ್ಲ, ತಗೋ ಎಂದು ತಮ್ಮ ಒಡವೆಗಳನ್ನು ಬಿಚ್ಚಿ ಕಳ್ಳನಿಗೆ ಕೊಡಲು ಬಂದವು. ಕಳ್ಳನಿಗೆ ನಾಚಿಕೆಯಾಗಿ ಅದೆಲ್ಲಾ ಏನೂ ಬೇಡ ಎಂದ. ಆದರೂ ಆ ಬಾಲಕರು ಬಿಡದೇ, ಕಳ್ಳ ತನ್ನ ತಲೆಗೆ ಸುತ್ತಿದ್ದ ರುಮಾಲನ್ನು ಎಳೆದು ಅದರಲ್ಲಿ ತಮ್ಮ ಎಲ್ಲಾ ಒಡವೆಗಳನ್ನೂ ಹಾಕಿ ಗಂಟು ಹಾಕಿ ಕೊಟ್ಟರು. ಕಳ್ಳ ಸಂತೋಷದಿಂದ ಮನೆ ಸೇರಿದ.

ಮಾರನೇ ದಿನ ರಾತ್ರಿ ಹರಿದಾಸರು ಹರಿಕಥೆ ಮುಗಿಸಿ ಮನೆಗೆ ಹೊರಟಾಗ, ಕಳ್ಳ ಎದುರಾಗಿ, “ಸ್ವಾಮಿಗಳೇ ನೀವು ಹೇಳಿದ ಆ ಬಾಲಕರು ನನಗೆ ಸಿಕ್ಕಿದ್ರು,”ಎಂದ. “ಏನಂದೆ? ನಲವತ್ತು ವರ್ಷಗಳಿಂದ ಕಾಯ್ತಾ ಇರುವ ನನಗೇ ಸಿಕ್ಕಿಲ್ಲ, ನಿನ್ನಂತ ಕಳ್ಳಂಗೆ ಹೇಗೆ ಸಿಕ್ತಾನೆ?”
ಎಂದರು ದಾಸರು. “ನಾನೇನು ಸುಳ್ಳು ಹೇಳುತ್ತಿಲ್ಲ, ಬೇಕಾದರೆ ನೀವೇ ನೋಡಿ, ಇವೆಲ್ಲ ನೀವೇ ಹೇಳಿದ ಒಡವೆಗಳು, ಇದನ್ನು ನನಗೆ ಅವರೇ ಒತ್ತಾಯಿಸಿ ಕೊಟ್ಟರು” ಎಂದ ಕಳ್ಳ.

ಒಡವೆಗಳನ್ನು ನೋಡಿ ಹರಿದಾಸರು ಮೂರ್ಛೆ ತಪ್ಪಿ ಬಿದ್ದರು. ಸ್ವಲ್ಪ ಸಮಯದ ನಂತರ ಎಚ್ಚರಗೊಂಡು, ಕಳ್ಳನ ಕಾಲು ಹಿಡಿದು, ತನಗೂ ಆ ಮಕ್ಕಳನ್ನು ತೋರಿಸೆಂದು ಅಂಗಲಾಚಿದರು. ಕಳ್ಳ “ಏಳಿ ಸ್ವಾಮಿಗಳೇ, ನೀವು ಹೀಗೆಲ್ಲಾ ನನ್ನ ಕಾಲು ಮುಟ್ಟಬಾರದು, ನೀವು ಹೇಳಿದ ಹಾಗೆ ಬೆಳಗಿನ ಜಾವ ಆ ಬಾಲಕರು ಬಂದೇ ಬರ್ತಾರೆ ಈಗ ಮನೆಗೆ ಹೋಗಿ ಮಲಗಿ, ಬೆಳಗ್ಗೆ ನಾನೂ ನಿಮ್ಮೊಟ್ಟಿಗೆ ಬರುತ್ತೇನೆ ಎಂದು ಅವರನ್ನು ಮನೆಗೆ ಕರೆತಂದು ಬಿಟ್ಟನು.

ರಾತ್ರಿಯೆಲ್ಲಾ ಹರಿದಾಸರಿಗೆ ನಿದ್ರೆ ಬರಲಿಲ್ಲ, ಬೆಳಕು ಹರಿಯುವ ಮೊದಲು ಕಳ್ಳನೊಂದಿಗೆ, ವೃಂದಾವನದತ್ತ ಓಡಿ ಬಂದರು. “ಎಲ್ಲಿ ಬಾಲಕರು?” ಎಂದು ಕಳ್ಳನನ್ನು ಕೇಳಿದರು, “ಅಲ್ಲೇ ಬರ್ತಿದಾರಲ್ಲಾ ನೋಡಿ ಸ್ವಾಮಿಗಳೇ” ಎಂದ ಕಳ್ಳ. ಎಷ್ಟು ದೂರ ಕಣ್ಣು ಹಾಯಿಸಿದರೂ ಹರಿದಾಸರಿಗೆ ಬಾಲಕರು ಕಾಣುತ್ತಿಲ್ಲ. “ಅಲ್ಲೇ ಎದುರಲ್ಲೇ ಇದ್ದಾರಲ್ಲ. ಸ್ವಾಮಿಗಳೇ, ಅದ್ಯಾಕೆ ಹೀಗೆ ಆಡ್ತೀರಿ” ಎಂದ ಕಳ್ಳ.

ಹರಿದಾಸರಿಗೆ ಬಾಲಕರು ಕಾಣಲಿಲ್ಲ, ನಿರಾಸೆಯಿಂದ ಪಕ್ಕದಲ್ಲಿದ್ದ ಬಂಡೆಗೆ ತಲೆ ಚಚ್ಚಿಕೊಳ್ಳುತ್ತಾ,”ನಲವತ್ತು ವರ್ಷಗಳಿಂದ, ಹಗಲು ರಾತ್ರಿ ಬಿಡದೇ ನಿನ್ನದೇ ಜಪ ಮಾಡುತ್ತಿರುವ ನನ್ನ ಕಣ್ಣಿಗೆ ಕಾಣಿಸದೆ, ಆ ಕಳ್ಳನಿಗೆ ನೀನು ಕಾಣುತ್ತಿರುವೆಯಲ್ಲಾ, ಇಷ್ಟು ವರ್ಷಗಳ ಕಾಲ ನಿನ್ನ ಜಪ ಮಾಡಿದ್ದಕ್ಕೆ, ನೀನು ಮಾಡಿದ್ದಾದರೂ ಏನು?” ಎಂದು ಒಂದೇ ಸಮನೆ ಅಳುತ್ತಾ ಬಂಡೆಗೆ ತಲೆ ಚಚ್ಚಿಕೊಳ್ಳತೊಡಗಿದರು.

ಆಗ ಶ್ರೀಹರಿಯು ಪ್ರತ್ಯಕ್ಷ ನಾಗಿ, ನಗುತ್ತಾ ಹೇಳಿದ. “ನೀನು ನಲವತ್ತು ವರ್ಷಗಳಿಂದ ಬರೀ ನನ್ನ ಜಪ ಮಾತ್ರ ಮಾಡಿ ನನ್ನನ್ನು ಬರೀ ಕಥೆಯೆಂದು ತಿಳಿದೆ. ಆದರೆ ಈ ಕಳ್ಳ ನನ್ನನ್ನು ನಿಜವೆಂದು ತಿಳಿದು ನನಗಾಗಿ ಕಾಯುತ್ತಿದ್ದ. ನಿನಗೂ ಅವನಿಗೂ ಇರುವ ವ್ಯತ್ಯಾಸ ಇದು. ಬರೀ ಭಕ್ತಿ ಶ್ರಧ್ಧೆ, ಇದ್ದರೆ ಮಾತ್ರ ಸಾಲದು, ಜೊತೆಯಲ್ಲಿ ನಂಬಿಕೆಯೂ ಇರಬೇಕು. ನಂಬಿಕೆ ಇಲ್ಲದೇ ನೀನು ಏನೇ ಮಾಡಿದರೂ ಅವೆಲ್ಲವೂ ಕೂಡಾ ವ್ಯರ್ಥವೇ ಎಂದು ಹೇಳಿ ಶ್ರೀಹರಿಯು ಅದೃಶ್ಯನಾದನು.

Leave a Reply

error: Content is protected !!
LATEST
ನಮ್ಮ ಕ್ಲಿನಿಕ್ ಹೆಸರಲ್ಲಿ ನೂರಾರು ಕೋಟಿ ಗುಳುಂ: ಎಎಪಿ ಉಷಾ ಮೋಹನ್ KSRTC- ಫೋನ್‌ ಪೇ ಹಗರಣ- ₹20 ಸಾವಿರ ಲಂಚ ಕೊಟ್ಟ ಡಿಸಿ, ಡಿಟಿಒ ಅಮಾನತುಮಾಡಿ: ಎಂಡಿ ಭೇಟಿ ಮಾಡಿದ ನಾಗರಾಜ್‌ ಇಂದು ಸಾರಿಗೆ ನಿಗಮಗಳಲ್ಲಿ ಚಾಲಕರ ದಿನದ ಸಂಭ್ರಮ - ಘಟಕಗಳಲ್ಲಿ ಹೂಗುಚ್ಛ ನೀಡಿ ಶುಭ ಕೋರಿದ ಸಹೋದ್ಯೋಗಿಗಳು KSRTC ಬಸ್ ನಿಲ್ದಾಣದ ಅವ್ಯವಸ್ಥೆ ಕಂಡು ಡಿಸಿ ಬೆವರಿಳಿಸಿದ  ಉಪಲೋಕಾಯುಕ್ತರು BMTC: ಅತೀ ಶೀಘ್ರದಲ್ಲೇ ಸಂಸ್ಥೆಯ ನೌಕರರಿಗೆ ನಗದು ರಹಿತ ವೈದ್ಯಕೀಯ ಚಿಕಿತ್ಸಾ ಸೌಲಭ್ಯ- ಎಂಡಿ ರಾಮಚಂದ್ರನ್‌ KKRTC ಬಸ್‌-ಟ್ರ್ಯಾಕ್ಟರ್‌ ನಡುವೆ ಡಿಕ್ಕಿ: ಯುವತಿ ಸಾವು, 18ಮಂದಿಗೆ ಗಾಯ KSRTC: ಭ್ರಷ್ಟಾಚಾರ ಬಯಲು ಮಾಡದಂತೆ ದೂರುದಾರನ ಬಾಯಿ ಮುಚ್ಚಿಸಲು ATI ಮೂಲಕ ₹20 ಸಾವಿರ ಕೊಟ್ಟರೇ ಡಿಸಿ, ಡಿಟಿಒ! ಮಗನ ಎದುರೇ ಪೆಟ್ರೋಲ್‌ ಸುರಿದು ಪತ್ನಿಗೆ ಬೆಂಕಿ ಹಚ್ಚಿದ KSRTC ಮೆಕ್ಯಾನಿಕ್‌ ಚಾಲಕನ ನಿಯಂತ್ರಣ ತಪ್ಪಿ ಹಣ್ಣು ತರಕಾರಿ ತುಂಬಿದ ಲಾರಿ ಪಲ್ಟಿ: 14 ಜನ ಮೃತ 2026ಕ್ಕೆ ರಾಜ್ಯ ಸರ್ಕಾರಿ ನೌಕರರಿಗೆ ಕೇಂದ್ರ ಮಾದರಿ ವೇತನ ಜಾರಿ ಸಾಧ್ಯತೆ: ರಾಜ್ಯಾಧ್ಯಕ್ಷ ಷಡಾಕ್ಷರಿ