ನ್ಯೂಡೆಲ್ಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ದೂರದೃಷ್ಟಿ ಮತ್ತು ದೃಢಸಂಕಲ್ಪದಿಂದಾಗಿ 10ನೇ ಅಂತಾರಾಷ್ಟ್ರೀಯ ಯೋಗ ದಿನವು ಅತ್ಯಂತ ಯಶಸ್ವಿಯಾಗಿದೆ ಎಂದು ಕೇಂದ್ರ ಬೃಹತ್ ಕೈಗಾರಿಕ ಸಚಿವ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.
ನೊಯ್ಡಾದ ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ ಟೌನ್‌ಶಿಪ್‌ನಲ್ಲಿ ಭಾರೀ ಕೈಗಾರಿಕೆಗಳ ಸಚಿವಾಲಯ ಇಂದು ದೆಹಲಿಯಲ್ಲಿ ಆಯೋಜಿಸಿದ್ದ ಯೋಗ ದಿನಾಚರಣೆಯಲ್ಲಿ ಯೋಗ ಮಾಡಿದ ಬಳಿಕ ಮಾತನಾಡಿದರು.
2014 ರಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಯೋಗವನ್ನು ಆಚರಿಸಲಾಗುತ್ತಿದೆ. ಮೈಸೂರಿನ ಅರಮನೆ ಮೈದಾನದಲ್ಲಿ ಮೋದಿ ಅವರು ಮೊದಲ ಬಾರಿಗೆ ಯೋಗ ಮಾಡಿದರು. ಯೋಗಕ್ಕೆ ಪ್ರಧಾನಿಗಳ ಪ್ರೋತ್ಸಾಹ ಹೆಚ್ಚು ಪ್ರಚುರಪಡಿಸಿದೆ. ಕಾಯಿಲೆಗಳಿಗೆ ಯೋಗ ಸ್ವಲ್ಪ ಮುಕ್ತಿ ನೀಡುತ್ತದೆ. ಯೋಗಕ್ಕೆ ನಮ್ಮ ಸಂಸ್ಕೃತಿಯಲ್ಲಿ ವಿಶೇಷ ಸ್ಥಾನವಿದೆ. ಆರೋಗ್ಯವಂತರಾಗಿರಲು ನಿತ್ಯ ಯೋಗ ಅಳವಡಿಸಿಕೊಳ್ಳಬೇಕು. ಕಾಶ್ಮೀರದಲ್ಲಿ ಮೋದಿ ಅವರು ಯೋಗ ಮಾಡುತ್ತಿದ್ದಾರೆ. ಇದು ಒಳ್ಳೆಯ ಸಂದೇಶ, ಪ್ರೇರಣೆ ಎಂದರು.
ಮದ್ಯದ ದರ ಇಳಿಕೆಗೆ ಸರ್ಕಾರದ ಅಧಿಸೂಚನೆ ಕುರಿತು ಪ್ರತಿಕ್ರಿಯಿಸಿ, ದರ ಇಳಿಸ್ತಾರ? ಜ್ಞಾನೋದಯ ಆಗಿದಿಯಾ ಅಂತಾ? ಆಸೆಯೇ ದುಃಖಕ್ಕೆ ಕಾರಣ ಎಂದು ಬುದ್ಧ ಒಂದು ಮಾತು ಹೇಳಿದ್ದರು. ಗ್ಯಾರಂಟಿಯೇ ಬೆಲೆ ಏರಿಕೆಗೆ ಮೂಲ ಎನ್ನುವುದು ನಮ್ಮ ಮುಖ್ಯಮಂತ್ರಿಗಳ ಸಂದೇಶ ಎನ್ನುವುದು ನನ್ನ ಅಭಿಪ್ರಾಯ ಎಂದು ಟಾಂಗ್ ಕೊಟ್ಟರು.
ಡಿಸಿಎಂ ಒಂದೂವರೆ ವರ್ಷದಿಂದ ಚನ್ನಪಟ್ಟಣಕ್ಕೆ ಹೋಗಿಲ್ಲ. ಈಗ ಚನ್ನಪಟ್ಟಣದ ಬಗ್ಗೆ ಮಮತೆ ಬಂದಿದೆ. ಅಭಿವೃದ್ಧಿ ಬಗ್ಗೆ ಮಾತನಾಡುತ್ತಿದ್ದಾರೆ. ಇಲ್ಲಿವರೆಗೂ ಅಭಿವೃದ್ಧಿ ಮಾಡಬೇಡಿ ಎಂದು ತಡೆದವರು ಯಾರು? ಸಂಸದರಾಗಿ ಅವರ ಸಹೋದರನ ಕೊಡುಗೆ ಏನು? ಅವರು ಯಾರು ಬೇಕಾದರೂ ಅಭ್ಯರ್ಥಿಯಾಗಬಹುದು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು ಬೇಕಾದರೂ ಅಭ್ಯರ್ಥಿ ಆಗಬಹುದು. ನಮ್ಮ ಕಡೆಯಿಂದ ಅಭ್ಯರ್ಥಿ ಯಾರು ಎಂದು ಕಾಲ ನಿರ್ಧರಿಸಲಿದೆ ಎಂದರು.
ಕೇಂದ್ರ ಸಚಿವರಾದ ಬಳಿಕ ಇದೇ ಮೊದಲ ಬಾರಿಗೆ ಸರ್ಕಾರಿ ಕಾರ್ಯಕ್ರಮದಲ್ಲಿ ಎಚ್‌ಡಿಕೆ ಭಾಗಿಯಾದರು. ಭಾರೀ ಕೈಗಾರಿಕೆಗಳ ಸಚಿವಾಲಯದ ಕಾರ್ಯದರ್ಶಿ ಕಮ್ರಾನ್ ರಿಜ್ವಿ, BHEL India ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಕೆ.ಸದಾಶಿವಮೂರ್ತಿ, ಸಂಸ್ಥೆಯ ನಿರ್ದೇಶಕರು, ಹಿರಿಯ ಅಧಿಕಾರಿಗಳು ಸೇರಿದಂತೆ ಹಲವರು ಯೋಗಾಭ್ಯಾಸದಲ್ಲಿ ಪಾಲ್ಗೊಂಡಿದ್ದರು.