ಬೀದರ್: ನೊವೆಲ್ ಕರೋನಾ ವೈರಸ್ ಕೋವಿಡ್-19 ವೈರಸ್ ಸೋಂಕು ತಡೆಗಟ್ಟಲು ಹಾಗೂ ನಿಯಂತ್ರಿಸಲು 1ರಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ ರಜೆ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ, ಪ್ರಸ್ತುತ ರಜಾ ಅವಧಿಯಲ್ಲಿ ಕೂಡ ಮಧ್ಯಾಹ್ನದ ಬಿಸಿಊಟ ಒದಗಿಸಲು ಸರ್ಕಾರ ಆದೇಶಿಸಿದೆ.
ಸರ್ಕಾರದಿಂದ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ ಒದಗಿಸಲು ಪ್ರತಿ ಮಗುವಿಗೆ ದಿನವೊಂದಕ್ಕೆ ನಿಗದಿಯಾದ ಆಹಾರ ಪದಾರ್ಥದ ಪರಿಮಾಣದಂತೆ ಒಟ್ಟು 21 ದಿನಗಳಿಗೆ ಲೆಕ್ಕಾಚಾರ ಮಾಡಿ ಅಕ್ಕಿ ಮತ್ತು ತೊಗರಿ ಬೇಳೆ ಆಹಾರ ಪದಾರ್ಥಗಳನ್ನು ಒಂದೇ ಬಾರಿಗೆ ಆಯಾ ಮಕ್ಕಳ ಮನೆಗೆ ನೀಡಬೇಕು ಎಂದು ತಿಳಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಈ ಪ್ರಕ್ರಿಯೆ ಎಲ್ಲಾ ಜಿಲ್ಲೆಗಳ ಆಯಾ ಶಾಲೆಗಳಲ್ಲಿ ಹೇಗೆ ನಡೆಯುತ್ತಿದೆ?. ಮುಖ್ಯ ಶಿಕ್ಷಕರು ಮತ್ತು ಶಿಕ್ಷಕರು ಕಡ್ಡಾಯ ಹಾಜರಿದ್ದು ಆಹಾರ ಧಾನ್ಯ ವಿತರಣೆಗೆ ಕ್ರಮ ವಹಿಸುತ್ತಿದ್ದಾರೋ? ಇಲ್ಲವೋ? ಎಂಬುದರ ಬಗ್ಗೆ ಪರಿಶೀಲನೆ ನಡೆಸಲು ಜಿಲ್ಲಾ ಮಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿವಿಧ ಶಾಲೆಗಳಿಗೆ ಖುದ್ದು ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ.
ಅದರಂತೆ ಬೀದರ ನೌಬಾದ್ ಪ್ರದೇಶದಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆ, ಹಿಮಾಲಯ ಕಾನ್ವೆಂಟ್ ಪ್ರೈಮರಿ ಶಾಲೆ ಮತ್ತು ಅಲಿಯಾಬಾದ್ ಗ್ರಾಮದಲ್ಲಿ ಇರುವ ಸರ್ಕಾರಿ ಪ್ರಾಥಮಿಕ (ಕನ್ನಡ ಮತ್ತು ಉರ್ದು) ಶಾಲೆಗಳಿಗೆ ಭೇಟಿ ನೀಡಿದ ಸಿಇಒ ಜ್ಞಾನೇಂದ್ರ ಗಂಗವಾರ ಆಹಾರಧಾನ್ಯ ವಿತರಣೆಗೆ ನಡೆಯುತ್ತಿರುವ ಪ್ರಕ್ರಿಯೆ ಮತ್ತು ಮೇಲುಸ್ತುವಾರಿ ಕ್ರಮಗಳನ್ನು ಪರಿಶೀಲಿಸಿದರು.
ಪ್ರತಿ ಮಗುವಿಗೂ ಒಟ್ಟು 21 ದಿನಗಳ ಸಂಖ್ಯೆಗೆ ಅನುಗುಣವಾಗಿ ಸಮರ್ಪಕವಾಗಿ ತೂಕ ಮಾಡಿ ಆಹಾರ ಧಾನ್ಯಗಳನ್ನು ಸಣ್ಣ ಪ್ಯಾಕೇಟ್ ಬ್ಯಾಗ ಅಥವಾ ಚೀಲಗಳಲ್ಲಿ ಮನೆಮನೆಗೆ ಹೋಗಿ ವಿತರಿಸಬೇಕು. ಸಂಬಂಧಿಸಿದ ಸಿಆರ್ ಸಿ ಗಳು ಅವರ ಕ್ಲಸ್ಟರ್ ವ್ಯಾಪ್ತಿಯಲ್ಲಿ ಎಲ್ಲಾ ಶಾಲೆಗಳಿಂದ ವರ್ಗವಾರು ಆಹಾರ ಧಾನ್ಯಗಳು ವಿತರಿಸಿದ ಪಟ್ಟಿಯನ್ನು ತಾಪಂನ ಮದ್ಯಾಹ್ನ ಉಪಹಾರ ಯೋಜನೆಯ ಸಹಾಯಕ ನಿರ್ದೇಶಕರಿಗೆ ಸಲ್ಲಿಸಬೇಕು.
ಯಾವುದೇ ಕಾರಣಕ್ಕೆ ಕರೋನಾ ವೈರಸ್ ಹರಡದಂತೆ ದೇಶಾದ್ಯಂತ ನಿರ್ದೇಶಿಸಿರುವ ಎಚ್ಚರಿಕೆಯ ಎಲ್ಲ ಕ್ರಮಗಳನ್ನು ಪಾಲಿಸಬೇಕು. ಶಾಲಾ ಹಂತದಲ್ಲಿ ಪಾಲಕರ ಮತ್ತು ಗುಂಪುಗೊಳ್ಳುವ ಅವಕಾಶ ನೀಡಬಾರದು. ಮನೆಮನೆಗೆ ಹೋಗಿ ಧಾನ್ಯಗಳನ್ನು ವಿತರಿಸುವ ಸಂದರ್ಭದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಮುಖ್ಯ ಶಿಕ್ಷಕರು, ತರಗತಿ ಶಿಕ್ಷಕರು ಮತ್ತು ಸಿಆರ್ ಪಿಗಳು ಈ ಬಗ್ಗೆ ಗಮನ ಹರಿಸಿ, ಅಹಾರ ಧಾನ್ಯಗಳ ವಿತರಣೆಯಲ್ಲಿ ಯಾವುದೇ ಲೋಪವಾಗದಂತೆ ನೋಡಿಕೊಳ್ಳಬೇಕು ಎಂದು ಸಿಇಒ ತಿಳಿಸಿದರು. ಈ ವೇಳೆ ಮಧ್ಯಾಹ್ನ ಬಿಸಿಯೂಟ ಯೋಜನೆಯ ಅಧಿಕಾರಿ ಇನಾಯತ್ ಅಲಿ ಶಿಂಧೆ ಇದ್ದರು.
ಅಂಗನವಾಡಿಗೂ ಸಿಇಒ ಭೇಟಿ
ಸಿಇಒ ಗಂಗವಾರ ನೌಬಾದ್ ಪ್ರದೇಶದಲ್ಲಿನ ಅಂಗನವಾಡಿಗಳಿಗೂ ಭೇಟಿ ನೀಡಿದರು. ಮಕ್ಕಳು ಗುಂಪಾಗಿ ಬರುವ ಕಾರಣ ಕೊರೊನಾ ವೈರಸ್ ಸೋಂಕು ಹರಡುವ ಕಾರಣದಿಂದ 1ರಿಂದ 9ನೇ ಮಕ್ಕಳಿಗೆ ಪ್ರಸ್ತುತ ರಜಾ ಅವಧಿಯಲ್ಲಿ ಮಧ್ಯಾಹ್ನದ ಉಪಾಹಾರದ ಆಹಾರ ಧಾನ್ಯಗಳನ್ನು ಒಂದೇ ಬಾರಿಗೆ ಮಕ್ಕಳ ಮನೆಗೆ ನೀಡುವ ಮಾದರಿಯಲ್ಲಿಯೇ ಅಂಗನವಾಡಿ ಮಕ್ಕಳಿಗೂ ಕೂಡ ಅವರ ಮನೆಗೆ ಆಹಾರ ಧಾನ್ಯಗಳ ವಿತರಣೆಗೆ ಕ್ರಮ ವಹಿಸಬೇಕು ಎಂದು ತಿಳಿಸಿದರು.
![](https://vijayapatha.in/wp-content/uploads/2024/02/QR-Code-VP-1-1-300x62.png)