
ಬೆಂಗಳೂರು: ಎರಡು ಬಿಎಂಟಿಸಿ ಬಸ್ಗಳ ಮಧ್ಯೆ ಸಿಲುಕಿದ ಆಟೋ ಅಪ್ಪಚ್ಚಿಯಾಗಿದ್ದು, ಈ ಭೀಕರ ಅಪಘಾತದಲ್ಲಿ ಆಟೋ ಚಾಲಕ ಮತ್ತು ಪ್ರಯಾಣಿಕ ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಹೊಸಕೆರೆಹಳ್ಳಿ ಕ್ರಾಸ್ನಲ್ಲಿ ಸಂಭವಿಸಿದೆ.
ಹನುಮಂತನಗರದ ಸೀತಾ ಸರ್ಕಲ್ ಬಳಿ ಶುಕ್ರವಾರ ಬಿಎಂಟಿಸಿ ಬಸ್ ಆಟೋರಿಕ್ಷಾಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ. ಪರಿಣಾಮ ಮುಂದೆ ನಿಂತಿದ್ದ ಮತ್ತೊಂದು ಬಿಎಂಟಿಸಿ ಬಸ್ಗೆ ಆಟೋ ಗುದ್ದಿದೆ ಆ ರಭಸಕ್ಕೆ ಆಟೋ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ.
ಈ ವೇಳೆ ಆಟೋ ಚಾಲಕ ಮತ್ತು ಪ್ರಯಾಣಿಕ ಇಬ್ಬರೂ ಸ್ಥಳದಲ್ಲೇ ಅಸುನೀಗಿದ್ದಾರೆ. ಇಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ಈ ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ ಆಟೋ ಚಾಲಕ ಅನಿಲ್ ಕುಮಾರ್(50) ಹಾಗೂ ಪ್ರಯಾಣಿಕ ವಿಷ್ಣುರಾವ್(70) ಎಂಬುವವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮುಂದೆ ಇದ್ದ ಬಿಎಂಟಿಸಿ ಬಸ್ ಚಾಲಕ ಮುಂದೆ ಹೋಗುತ್ತಿದ್ದ ಕಾರು ನಿಂತ ಕಾರಣ ಅವರು ಬಸ್ ಬ್ರೇಕ್ ಹಾಕಿದ್ದಾರೆ. ಹೀಗಾಗಿ ಹಿಂದೆ ಬರುತ್ತಿದ್ದ ಆಟೋಕೂಡ ನಿಧಾನವಾಗಿ ಚಲಿಸುತ್ತಿತ್ತು. ಈ ವೇಳೆ ಹಿಂದೆ ಬರುತ್ತಿದ್ದ ಮತ್ತೊಂದು ಬಿಎಂಟಿಸಿ ಬಸ್ ಆಟೋಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಎರಡು ಬಸ್ಗಳ ಮಧ್ಯೆ ಆಟೋ ಸಿಲುಕಿ ಅಪ್ಪಚ್ಚಿಯಾಗಿ ಚಾಲಕ ಹಾಗೂ ಪ್ರಯಾಣಿಕ ಮೃತಪಟ್ಟಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿ ಆಟೋದಲ್ಲಿ ಸಿಲುಕಿಗೊಂಡಿದ್ದ ಇಬ್ಬರ ಮೃತದೇಹಗಳನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಬನಶಂಕರಿ ಸಂಚಾರಿ ಪೊಲೀಸರು, ಬಿಎಂಟಿಸಿ ಬಸ್ ಜಪ್ತಿ ಮಾಡಿ ಚಾಲಕನನ್ನು ವಶಕ್ಕೆ ಪಡೆದುಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಘಟನೆ ನಡೆದಿದ್ದೇಗೆ?: ಆಯುರ್ವೇದ ವೈದ್ಯರಾಗಿದ್ದ ವಿಷ್ಣುರಾವ್, ಅನಿಲ್ಕುಮಾರ್ ಆಟೋದಲ್ಲಿ ಶುಕ್ರವಾರ ಬೆಳಗ್ಗೆ 11.35ರ ಸುಮಾರಿಗೆ ಸೀತಾ ಸರ್ಕಲ್ ಕಡೆ ಪ್ರಯಾಣಿಸುತ್ತಿದ್ದರು. ಮಾರ್ಗ ಮಧ್ಯೆ ಆಟೋ ಮುಂದೆ ಹೋಗುತ್ತಿದ್ದ ಬಿಎಂಟಿಸಿ ಬಸ್ ಚಾಲಕ ಹೊಸಕೆರೆಹಳ್ಳಿ ಕ್ರಾಸ್ನಲ್ಲಿ ಕಾರೊಂದು ಎಡ ತಿರುವು ಪಡೆಯುತ್ತಿದ್ದ ಕಾರಣ ಚಾಲನೆಯಲ್ಲಿ ಸ್ವಲ್ಪ ನಿಧಾನ ಮಾಡಿದ್ದರು.
ಹೀಗಾಗಿ, ಹಿಂದೆ ಅನಿಲ್ಕುಮಾರ್ ಕೂಡ ಆಟೋ ವೇಗ ತಗ್ಗಿಸಿದ್ದಾರೆ. ಈ ವೇಳೆ ಹಿಂದಿನಿಂದ ವೇಗವಾಗಿ ಬಂದ ಬಿಎಂಟಿಸಿ ಬಸ್ ಆಟೋಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಆಟೋ ಮುಂದಿದ್ದ ಬಿಎಂಟಿಸಿಗೆ ಡಿಕ್ಕಿಯಾಗಿದ್ದು ಸ್ಥಳದಲ್ಲಿಯೇ ಚಾಲಕ ಅನಿಲ್ಕುಮಾರ್ ಹಾಗೂ ವಿಷ್ಣು ರಾವ್ ಮೃತಪಟ್ಟಿದ್ದಾರೆ.
ಬಿಎಂಟಿಸಿ ಚಾಲಕನ ವಿರುದ್ಧ ಪ್ರಕರಣ: ಅಪಘಾತ ಸಂಬಂಧ ಮೃತ ವಿಷ್ಣುರಾವ್ ಪುತ್ರಿ ಸ್ಮೃತಿ ರಾಜೇಶ್ ದೂರಿನನ್ವಯ ಅಪಘಾತವೆಸಗಿದ ಬಿಎಂಟಿಸಿ ಚಾಲಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಚಾಲಕ ಪ್ರಸನ್ನ ಎಂಬುವವರನ್ನು ಬಂಧಿಸಿ ಬಸ್ ಜಪ್ತಿ ಮಾಡಲಾಗಿದೆ. ಪ್ರಕರಣದ ಹೆಚ್ಚಿನ ತನಿಖೆ ಮುಂದುವರಿಸಲಾಗಿದೆ ಎಂದು ಬನಶಂಕರಿ ಸಂಚಾರ ಠಾಣೆ ಪೊಲೀಸರು ತಿಳಿಸಿದ್ದಾರೆ.