ಕಲಬುರಗಿ: ಗೆಳೆಯರ ನಡುವೆ ನಡೆಯುತ್ತಿದ್ದ ಜಗಳ ಬಿಡಿಸಲು ಹೋದ ಸ್ನೇಹಿತನನ್ನೇ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಚಿಂಚೋಳಿ ತಾಲೂಕಿನ ಕೊಳ್ಳುರ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಶಿವಕುಮಾರ್ ಗಾರಲೋರ (25) ಹತ್ಯೆಯಾದ ಯುವಕ. ಚಂದ್ರಕಾಂತ ಮತ್ತು ಬಸವರಾಜ್ ಕೊಲೆ ಮಾಡಿ ಪರಾರಿಯಾಗಿರುವ ಆರೋಪಿಗಳು. ಈ ಮೂವರು ಸ್ನೇಹಿತರಾಗಿದ್ದರು. ಕ್ಷುಲ್ಲಕ ಕಾರಣಕ್ಕೆ ಚಂದ್ರಕಾಂತ ಹಾಗೂ ಬಸವರಾಜ್ ಮಧ್ಯೆ ಗಲಾಟೆ ಶುರುವಾಗಿದೆ. ಗಲಾಟೆ ತಾರಕಕ್ಕೇರಿದ್ದು ದೊಣ್ಣೆ ತೆಗೆದುಕೊಂಡು ಹೊಡೆದಾಡುತ್ತಿದ್ದರು.
ಈ ವೇಳೆ ಸ್ನೇಹಿತರ ನಡುವೆ ಆಗುತ್ತಿದ್ದ ಜಗಳವನ್ನು ಯುವಕ ಬಿಡಿಸಲು ಹೋಗಿದ್ದಾನೆ. ಆದರೆ ಆರೋಪಿಗಳಿಬ್ಬರೂ ಒಬ್ಬರಿಗೊಬ್ಬರಿ ಬಡಿದಾಡಿಕೊಳ್ಳುವಾಗ ಶಿವಕುಮಾರ್‌ಗೆ ದೊಣ್ಣೆಯಿಂದ ಹೊಡೆದ್ದಾರೆ. ದೊಣ್ಣೆಯಿಂದ ಬಿದ್ದ ಹೊಡೆತಕ್ಕೆ ಶಿವಕುಮಾರ್ ವಿಲವಿಲ ಒದ್ದಾಡಿ ಜೀವ ಬಿಟ್ಟಿದ್ದಾನೆ.
ಇದನ್ನು ಗಮನಿಸಿದ ಆರೋಪಿಗಳು ಕೂಡಲೇ ಸ್ಥಳದಿಂದ ಪರಾರಿಯಾಗಿದ್ದಾರೆ. ಈ ಸಂಬಂಧ ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.