ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾಗೆ ಕಳಶಪ್ರಯಾಯವಾದ ಗಜಪಡೆಗಳು ಮೇವಿನ ವಿಚಾರದಲ್ಲಿ ಒಂದಕ್ಕೊಂದು ದಾಳಿ ಮಾಡಿಕೊಂಡ ಘಟನೆ ಶುಕ್ರವಾರ ರಾತ್ರಿ ಅರಮನೆ ಆವರಣದಲ್ಲಿ ನಡೆದಿದೆ.
ಆನೆ ಧನಂಜಯ ಮತ್ತೊಂದು ಆನೆ ಕಂಜನ್ ಮೇಲೆ ದಾಳಿ ಮಾಡಿದೆ. ಈ ದಾಳಿಗೆ ತತ್ತರಿಸಿದ ಕಂಜನ್ ಆನೆ ದಿಕ್ಕೆ ಕಾಣದಂತೆ ಅರಮನೆ ಆವರಣದಿಂದ ಹೊರ ಓಡಿದೆ.
ಕಂಜನ್ ತನ್ನ ಕಾಲಿಗೆ ಕಟ್ಟಿದ್ದ ಸರಪಳಿಯನ್ನು ಬಿಡಿಸಿಕೊಂಡು ಅರಮನೆಯಾಚೆಗೆ ಬಂದಿರುವ ಹಾಗೂ ಅವನನ್ನು ಹಿಡಿದು ತರಲು ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಮಾವುತರು ಹರಸಾಹಸ ಪಡುತ್ತಿರುವ ದೃಶ್ಯಗಳೂ ಸೆರೆಯಾಗಿದ್ದು,‘ಮಹೇಂದ್ರ’ ಆನೆ ಕಂಜನ್ನನ್ನು ನಿಯಂತ್ರಿಸಲು ಹಿಂದಿನಿಂದ ಓಡಿತು. ಜನರು ಆನೆ ಓಡಿಬರುವುದನ್ನು ನೋಡಿ ಹೆದರಿ ದಿಕ್ಕಾಪಾಲಾಗಿ ಕಿರುಚಿಕೊಂಡು ಓಡಿದರು.
ದೊಡ್ಡಕೆರೆ ಮೈದಾನದ ಬೆಂಗಳೂರು- ನೀಲಗಿರಿ ರಸ್ತೆಯಲ್ಲಿ ವಾಹನಗಳನ್ನು ನೋಡುತ್ತಿದ್ದಂತೆ ಕಂಜನ್ ಬೆದರಿ ನಿಂತನು. ಬಳಿಕ ಮಾವುತರು ಕಾವಾಡಿಗರು ಸಮಾಧಾನ ಪಡಿಸಿದರು. ಯಾವುದೇ ಅನಾಹುತ ಸಂಭವಿಸಿಲ್ಲ. ಘಟನೆಯು ರಾತ್ರಿ 8ರ ಸುಮಾರು ನಡೆದಿದ್ದು, ಅರಮನೆ ಆವರಣದ ಒಳಗೆ ಇದ್ದ ದಸರಾ ಆನೆ ಧನಂಜಯ ಆನೆ ಕಂಜನ್ ಮೇಲೆ ದಾಳಿ ಮಾಡಿ ಅಟ್ಟಾಡಿಸುವ ವಿಡಿಯೋವನ್ನು ಅರಮನೆಯ ಗೈಡ್ ಯೋಗೇಶ್ ತನ್ನ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ.
ಈ ಬಗ್ಗೆ ಡಿಸಿಎಫ್ ಪ್ರಭುಗೌಡ ಮಾತನಾಡಿ, ಈ ಎರಡು ಆನೆಗಳು ಒಂದೇ ಶಿಬಿರದ ಆನೆಗಳು. ಅಲ್ಲೂ ಕೂಡ ಆಗಾಗ ಇವು ಜಗಳ ಆಡುತ್ತವೆ. ಅದೇ ಜಗಳ ಇಲ್ಲೂ ಮುಂದುವರಿದಿದೆ. ಮೇವಿಗಾಗಿ ಬಂದ ವೇಳೆ ಧನಂಜಯ, ಕಂಜನ್ ಮೇಲೆ ಗಲಾಟೆ ಶುರು ಮಾಡಿದ, ಆಗ ಕಂಜನ್ನ ಮಾವುತ ಕೆಳಗೆ ಬಿದ್ದ. ನಂತರ ಧನಂಜಯನ ಆರ್ಭಟ ಹೆಚ್ಚಾಯ್ತು ಎಂದು ತಿಳಿಸಿದ್ದಾರೆ.
ಧನಂಜಯ ಮತ್ತು ಕಂಜನ್ ದುಬಾರೆ ಶಿಬಿರದ ಆನೆಗಳು. ಆನೆಗಳ ನಡುವಿನ ಫೈಟ್ ಇದೇ ಮೊದಲಲ್ಲ, ಕೊನೆಯೂ ಅಲ್ಲ. ಈ ಎರಡು ಆನೆಗಳು ದುಬಾರೆ ಆನೆ ಶಿಬಿರದಲ್ಲೂ ಇದೇ ರೀತಿ ಪದೇಪದೇ ಜಗಳವಾಡುತ್ತವೆ. ಒಂದು ಬಾರಿ ಕಂಜನ್ ಆನೆ ಧನಂಜಯ ಆನೆ ಮೇಲೆ ಅಟ್ಯಾಕ್ ಮಾಡಿದರೆ ಮತ್ತೊಂದು ಬಾರಿ ಧನಂಜಯ, ಕಂಜನ್ ಮೇಲೆ ಅಟ್ಯಾಕ್ ಮಾಡ್ತಾನೆ. ಅಲ್ಲದೇ ಗಂಡಾನೆಗಳು ಆಗಾಗ್ಗೆ ಶೌರ್ಯ ಪ್ರದರ್ಶನ ಮಾಡೋದು, ತುಂಟಾಟ ಆಡೋದು ಕಾಮನ್, ಅವೆಲ್ಲವನ್ನೂ ಕಂಟ್ರೋಲ್ ಮಾಡುವ ಸಾಮರ್ಥ್ಯ ನಮ್ಮ ಮಾವುತರಿಗೆ ಇದೆ ಎಂದು ಹೇಳಿದ್ದಾರೆ.
ನಿನ್ನೆ ಬ್ಯಾರಿಕೇಡ್ ಓಪನ್ ಇದ್ದ ಕಾರಣ ಕಂಜನ್ ಅದನ್ನ ತಳ್ಳಿಕೊಂಡು ಹೋಗಿದ್ದಾನೆ. ಹೊರಗೆ ಜನಸಮೂಹ ನೋಡಿದ ಕೂಡಲೇ ತಣ್ಣಗಾಗಿದ್ದಾನೆ. ಅಷ್ಟರಲ್ಲಿ ನಮ್ಮ ಮಾವುತರು ಕೂಡ ಕಂಟ್ರೋಲ್ ಮಾಡಿದ್ದಾರೆ. ಕಂಜನ್ ಆನೆ ಓಡುವ ಸ್ಪೀಡ್ಗೆ ಮಾವುತ ಜಿಗಿದೇ ಬಿಟ್ಟ. ಆದ್ರೆ ಧನಂಜಯ ಆನೆ ಮಾವುತನ ಧೈರ್ಯ ಮೆಚ್ಚಲೇಬೇಕು. ಆನೆ ಓಡಿದರೂ ಅದರ ಮೇಲೆ ಕುಳಿತು ಕಂಟ್ರೋಲ್ ಮಾಡುವ ಕೆಲಸ ಮಾಡಿಲ್ಲ. ದೇವರ ದಯೆಯಿಂದ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಜನ ಆತಂಕ ಪಡುವ ಅವಶ್ಯಕತೆಯಿಲ್ಲ ಎಂದು ಹೇಳಿದ್ದಾರೆ.
ದಸರಾದಲ್ಲಿ 18 ಆನೆಗಳು ಭಾಗಿ: ಈ ಬಾರಿ ದಸರಾದಲ್ಲಿ 14 ಆನೆಗಳು ಸಕ್ರಿಯವಾಗಿ ಭಾಗಿಯಾಗುತ್ತಿವೆ. ಇನ್ನು ನಾಲ್ಕು ಆನೆಗಳನ್ನು ಮೀಸಲು ಆನೆಗಳನ್ನಾಗಿ ಆಯ್ಕೆ ಮಾಡಲಾಗಿದೆ. ಒಂದು ವೇಳೆ ಈ 14 ಆನೆಗಳ ಆರೋಗ್ಯದಲ್ಲಿ ಏನಾದರೂ ವ್ಯತ್ಯಾಸವಾದರೆ ಮೀಸಲು ಆನೆಗಳನ್ನು ಬಳಸಲು ತೀರ್ಮಾನಿಸಲಾಗಿದೆ.