
ತಿ.ನರಸೀಪುರ: ತಾಲೂಕಿನ ಕೇತಹಳ್ಳಿ ಗ್ರಾಮದಲ್ಲಿ ಶ್ರೀ ಬಸವೇಶ್ವರ ರಥೋತ್ಸವ ಹಾಗೂ ಶ್ರೀ ಮಾರಮ್ಮ ಜಾತ್ರೆ ಹಬ್ಬದ ಸಂಭ್ರಮ ಕಳೆಗಟ್ಟಿದ್ದು, ಹಬ್ಬದ ಪ್ರಯುಕ್ತ ಬುಧವಾರ ಬೆಳಗ್ಗೆ ರಥೋತ್ಸವ ವಿಜೃಂಭಣೆಯಿಂದ ನಡೆಯಿತು.
ಗ್ರಾಮದಲ್ಲಿ ಶ್ರೀ ಬಸವೇಶ್ವರ ಹಾಗೂ ಶ್ರೀ ಮಾರಮ್ಮನ ಹಬ್ಬ ನಿನ್ನೆಯಿಂದ ಸಡಗರದಿಂದ ಆಯೋಜನೆಗೊಂಡಿದ್ದು, ಬೆಳಗ್ಗೆಯಿಂದಲೇ ಎರಡೂ ದೇವಾಲಯಳಲ್ಲಿಯೂ ವಿಶೇಷ ಪೂಜೆ, ಮಹಾ ಮಂಗಳಾರತಿ ನೆರವೇರಿದವು.
ಬಳಿಕ ಗ್ರಾಮದ ಪ್ರಮುಖ ಬೀದಿಗಳಲ್ಲಿ ಉತ್ಸವ ಮೂರ್ತಿಗಳ ಮೆರವಣಿಗೆ ಹಾಗೂ ಶ್ರೀ ಬಸವೇಶ್ವರ ರಥೋತ್ಸವ ನಡೆಯಿತು. ಸಹಸ್ರಾರು ಸಂಖ್ಯೆಯಲ್ಲಿ ನೆರೆದಿದ್ದ ಗ್ರಾಮಸ್ಥರು ಹಾಗೂ ಭಕ್ತಾದಿಗಳು ಹಣ್ಣು ಜವನ ಎಸೆದು ಹರದೆಂದು ಪ್ರಾರ್ಥಿಸಿದರು. ಯುವಕರು ಕುಣಿದು ಕುಪ್ಪಳಿಸಿ, ಸಂಭ್ರಮಿಸಿದರು.
ಮಧ್ಯಾಹ್ನದ ಬಳಿಕ ಗ್ರಾಮದಲ್ಲಿ ಶ್ರೀ ಮಾರಮ್ಮನ ಮೆರವಣಿಗೆ ನಡೆಯಿತು. ಅರ್ಚಕರ ಮೈ ಮೇಲೆ ಅವತರಿಸುವ ಮಾರಮ್ಮ ನೆರೆದಿದ್ದ ಭಕ್ತ ಸಮೂಹಕ್ಕೆ ದರ್ಶನ ನೀಡಿದಳು. ಮೆರವಣಿಗೆ ಹಾದಿಯ ಉದ್ದಕ್ಕೂ ನಿಂತಿದ್ದ ಭಕ್ತರು ಇಡುಗಾಯಿ ಒಡೆದು, ಕರ್ಪೂರ ಹಚ್ಚಿ, ಅಡ್ಡ ಮಲಗಿ ಇಷ್ಟಾರ್ಥವನ್ನು ನೆರವೇರಿಸುವಂತೆ ಪ್ರಾರ್ಥಿಸಿ, ಪೂಜೆ ಸಲ್ಲಿಸಿದರು.
ಶ್ರೀ ಮಾರಮ್ಮ ಉತ್ಸವ ತಲೆಯ ಮೇಲೆ ಇಡುಗಾಯಿ ಹಾಗೂ ಬಾಯಿ ಬೀಗ ಹರಕೆ ಸಲ್ಲಿಸಿದರು. ಅದ್ದೂರಿಯಾಗಿ ನೆರವೇರಿದ ಜಾತ್ರಾ ಮಹೋತ್ಸವದಲ್ಲಿ ಅಕ್ಕ ಪಕ್ಕದ ಗ್ರಾಮದ ಸಾವಿರಾರು ಜನ ಭಾಗವಹಿಸಿ ಭಕ್ತಿ ಭಾವ ಮೆರೆದರು.