
ಬೆಂಗಳೂರು: ನಗರದ ಎಲ್ಲ ರಸ್ತೆಗಳನ್ನು ಸ್ವಚ್ಛಗೊಳಿಸುವ ಮಹಿಳೆಯರಿಗೆ (ಪೌರಕಾರ್ಮಿಕರಿಗೆ) ದಿಟ್ಟ ಮಹಿಳಾ ಪ್ರಶಸ್ತಿ ಧಕ್ಕಬೇಕು ಎಂದು ಚಲನ ಚಿತ್ರ ಹಿರಿಯ ನಟಿ ವಿನಯಾ ಪ್ರಸಾದ್ ಹೇಳಿದರು.
ಬಿಬಿಎಂಪಿ ಕೇಂದ್ರ ಕಚೇರಿಯ ಡಾ. ರಾಜ್ ಕುಮಾರ್ ಗಾಜಿನ ಮನೆಯಲ್ಲಿ ಇಂದು ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘದ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮವನ್ನು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಚಾಲನೆ ನೀಡಿದ ಬಳಿಕ ವಿನಯಾ ಪ್ರಸಾದ್ ಮಾತನಾಡಿದರು.
ಮಳೆ, ಬಿಸಿಲು, ಗಾಳಿ, ಧೂಳು ಏನೇ ಇದ್ದರೂ ಪೌರಕಾರ್ಮಿಕರು ಸಂತೋಷದಿಂದ ಪ್ರತಿನಿತ್ಯ ತಮ್ಮ ಕಾರ್ಯನಿರ್ವಹಿಸುತ್ತಾರೆ ಇಂಥ ಮಹಿಳೆಯರಿಗೆ ಪ್ರಶಸ್ತಿಗಳು ಸಿಗುವಂತಾಗಬೇಕು ಎಂದರು.
ತಾಯಿಯ ತ್ಯಾಗ ಬಹಳ ದೊಡ್ಡದ್ದಾಗಿದ್ದು, ಹೆಣ್ಣು ತನ್ನ ದಿಟ್ಟತನವನ್ನು ರೂಪಿಸಿಕೊಳ್ಳಲು ದಿಟ್ಟತನದಿಂದಲೇ ಇರಬೇಕು. ಆಗಲೇ ಈ ಜೀವನದ ಹೋರಾಟದಲ್ಲಿ ಗೆಲ್ಲಲು ಸಾಧ್ಯವೆಂದು ಮತ್ತೊಬ್ಬ ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಅಭಿಪ್ರಾಯಪಟ್ಟರು.
ವೇದ, ಪುರಾಣ ಕಾಲದಿಂದಲು ಹೆಣ್ಣಿನ ಶಕ್ತಿ ಏನೆಂಬುದು ತಿಳಿದಿದೆ. ಹೆಣ್ಣು ಎಂದರೆ ಜೀವನಪೂರ್ತಿ ತ್ಯಾಗವೆ ಆಗಿದೆ. ಅಮ್ಮ ಎಂದರೆ ನೋವು ನುಂಗಿಕೊಂಡು ತ್ಯಾಗ ಮಾಡಿ ದಿಟ್ಟತನ ತೋರಿಸುತ್ತಾಳೆ ಎಂದು ಹೇಳಿದರು.
ಮಹಿಳೆಯರು ಎಲ್ಲರೂ ಅಭಿನಂದನಾ ಅರ್ಹರಾಗಿದ್ದು, ಬೆಳಗ್ಗೆ ಎದ್ದು ನಗರ ಸ್ವಚ್ಚತೆ ಮಾಡುವ ಪೌರ ಕಾರ್ಮಿಕ ಮಹಿಳೆಯರು ಇನ್ನೊಬ್ಬರ ಬದುಕು ಹಸನ ಮಾಡುವ ಸ್ವಚ್ಚತಾ ವಾರಿಯರ್ಸ್ ಗಳು. ಯಾವುದಕ್ಕೂ ಧೃತಿಗೆಡದೆ ದಿಟ್ಟತನದಿಂದ ಮಹಿಳೆಯರು ಸಾಗಬೇಕು ಎಂದು ನಟಿ ಜಯಮಾಲ ಸಲಹೆ ನೀಡಿದರು.
ಸಂಘದ ಅಧ್ಯಕ್ಷ ಅಮೃತ್ ರಾಜ್ ಮಾತನಾಡಿ, ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘವು ನಾಡು, ನುಡಿ ಮತ್ತು ಸಮಾಜ ಸೇವೆಯನ್ನು ಮಾಡುತ್ತಾ ಬರುತ್ತಿದೆ. ಕನ್ನಡ ಭಾಷೆ ಉಳಿಸಿ, ಬೆಳಸಲು ರಾಜ್ಯ, ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಕರ್ನಾಟಕ ರಾಜ್ಯೋತ್ಸವ ಆಚರಿಸಿಕೊಂಡು ಬರಲಾಗುತ್ತಿದೆ ಎಂದು ತಿಳಿಸಿದರು.
ದಿಟ್ಟ ಮಹಿಳಾ ಪ್ರಶಸ್ತಿ ಪಡೆದವರ ವಿವರ: ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕಿಯರು, ಚಲನಚಿತ್ರ ನಟಿಯರಾದ ಭಾರತಿ ವಿಷ್ಣುವರ್ಧನ್, ಜಯಮಾಲ ರಾಮಚಂದ್ರ, ಸರಿತಾ, ಅಂಬಿಕಾ, ಗೀತಾ, ನಿರ್ಮಾಪಕಿಯರಾದ ಲಕ್ಷ್ಮಿ ಗೋವಿಂದರಾಜು, ಪೂರ್ಣಿಮ ರಾಮ್ ಕುಮಾರ್, ಸಹಾಯಕ ಪೊಲೀಸ್ ಆಯುಕ್ತರಾದ ಗೀತಾ, ದೂರದರ್ಶನ ಮುಖ್ಯಸ್ಥರಾದ ಆರತಿ ಎಚ್.ಎಸ್., ಪೊಲೀಸ್ ಇನ್ಸ್ ಪೆಕ್ಟರ್ ಪ್ರಶೀಲ.
ಬೆಂಗಳೂರು ನಗರ ಜಿಲ್ಲಾ ಚೆಸ್ ಅಸೋಸಿಯೇಷನ್ ಅಧ್ಯಕ್ಷೆ ಸೌಮ್ಯ, ಖ್ಯಾತ ವಕೀಲೆ ಶೃತಿ, ಟಿ.ವಿ.9 ನಿರೂಪಕಿ ಮಧು ನಾಗರಾಜ್, ಜೀ ಕನ್ನಡ ನಿರೂಪಕಿ ಕಾವಶ್ರೀ ರಾಘವಸೂರ್ಯ, ಸುವರ್ಣ ನ್ಯೂಸ್ ನಿರೂಪಕಿ ಪ್ರಗತಿ, ರಶ್ಮಿ(ರ್ಯಾಪಿಡ್ ರಶ್ಮಿ), ಸಮೃದ್ದಿ ಚಿಕಿತ್ಸಾ ಕೇಂದ್ರ ಡಾ. ಪೂರ್ವಿ ಜಯರಾಜ್ ಹಾಗೂ ಬಿಬಿಎಂಪಿ ಮಹಿಳಾ ಅಧಿಕಾರಿ/ನೌಕರರಿಗೆ ದಿಟ್ಟ ಮಹಿಳಾ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಈ ವೇಳೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ, ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ, ವಿಶೇಷ ಆಯುಕ್ತರಾದ ಡಾ. ಕೆ. ಹರೀಶ್ ಕುಮಾರ್, ಪ್ರೀತಿ ಗೆಹ್ಲೋಟ್, ವಲಯ ಆಯುಕ್ತರುಗಳಾದ ಕರೀಗೌಡ, ಕೆ.ಎನ್ ರಮೇಶ್, ಸ್ನೇಹಲ್ ಆರ್, ಅರ್ಚನಾ ಎಂ.ಎಸ್, ಉಪ ಆಯುಕ್ತರಾದ ಮಂಜುನಾಥ ಸ್ವಾಮಿ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.