
ಬೆಂಗಳೂರು: ಬೆಳಗಾವಿಯಲ್ಲಿ ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಹಿರಿಯ ನಿರ್ವಾಹಕರ ಮೇಲೆ ಹಲ್ಲೆ ಮಾಡಿರುವ ಕಿಡಿಗೇಡಿಗಳ ವಿರುದ್ಧ ಗಂಭೀರ ಕ್ರಮ ಕೈಗೊಳ್ಳಬೇಕು ಎಂದು ಸಾರಿಗೆ ಸಚಿವರು ರಾಮಲಿಂಗಾರೆಡ್ಡಿ ಅವರಿಗೆ ಬಿಎಂಟಿಸಿ ನೌಕರರ ಕನ್ನಡ ಕೃಷಿ ಪ್ರತಿಷ್ಠಾನದ ಪದಾಧಿಕಾರಿಗಳು ಮನವಿ ಸಲ್ಲಿಸಿದರು.
ಶನಿವಾರ ಸಚಿವರ ಕಚೇರಿಗೆ ಅಧ್ಯಕ್ಷ ಕೆ.ಎಸ್.ಪ್ರೀತಮ್ ನೇತೃತ್ವದಲ್ಲಿ ಹೋದ ಪ್ರತಿಷ್ಠಾನದ ಪದಾಧಿಕಾರಿಗಳು ಮನವಿ ಪತ್ರ ಸಲ್ಲಿಸಿ ಆರೋಪಿಗಳಿಗೆ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿದರು.
ಬೆಳಗಾವಿಯಲ್ಲಿ ಕರ್ತವ್ಯ ನಿರತ ಹಿರಿಯ ನಿರ್ವಾಹಕ ಟಿಕೆಟ್ ನೀಡುವ ಸಂದರ್ಭದಲ್ಲಿ ನನಗೆ ಮರಾಠಿ ಬರುವುದಿಲ್ಲ ಕನ್ನಡ ಮಾತಾಡಿ ಎಂದು ಹೇಳಿದ್ದಕ್ಕೆ ನಿರ್ವಾಹಕ ಮತ್ತು ಚಾಲಕರ ಮೇಲೆ ಮನಸೋ ಇಚ್ಛೆ ಹಲ್ಲೆ ಮಾಡಿರುವುದನ್ನು ಸಮಸ್ತ ಸಾರಿಗೆ ನೌಕರರು ತೀವ್ರವಾಗಿ ಖಂಡಿಸುತ್ತೇವೆ.
ಕರ್ನಾಟಕದ ಅಧಿಕೃತ ಭಾಷೆ ಕನ್ನಡ, ರಾಜ್ಯ ರಸ್ತೆ ಸಾರಿಗೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೂರಕ್ಕೆ ನೂರುರಷ್ಟು ಕನ್ನಡಿಗರೇ ಇದ್ದೇವೆ, ಕನ್ನಡ ನಮ್ಮ ಮಾತೃಭಾಷೆ ಅಷ್ಟೇ ಅಲ್ಲ ನಮ್ಮ ಅನ್ನದ ಭಾಷೆ ಕನ್ನಡ ಕರ್ನಾಟಕದ ಅಧಿಕೃತ ಭಾಷೆಯಲ್ಲಿ ವ್ಯವಹರಿಸುವುದು ನಮ್ಮ ಕರ್ತವ್ಯ, ಆದರೆ ಮರಾಠಿ ಮಾತನಾಡು ಎಂದು ನಿರ್ವಾಹಕನ ಮೇಲೆ ಹಲ್ಲೆ ಮಾಡಿರುವುದು ಖಂಡನೀಯ ಕೃತ್ಯ.
ಇಂಥ ಕಿಡಿಗೇಡಿಗಳ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲ ಪುಂಡರನ್ನು ಬಂಧಿಸಿ ಜೈಲಿಗೆ ಕಳುಹಿಸಬೇಕು ಮತ್ತು ನಿರ್ವಾಹಕನ ವಿರುದ್ಧ ದಾಖಲಿಸಿರುವ ಸುಳ್ಳು ಪೋಕ್ಸೋ ಪ್ರಕರಣವನ್ನು ಕೈಬಿಡಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಇನ್ನು ಇತ್ತೀಚಿನ ದಿನಗಳಲ್ಲಿ ಇಂತಹ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಕೂಡಲೇ ರಾಜ್ಯ ಸರ್ಕಾರ ಸಾರಿಗೆ ನೌಕರರ ಸಂರಕ್ಷಣಾ ಕಾಯ್ದೆ ಎಂಬ ಕಠಿಣ ಕಾಯ್ದೆ ಜಾರಿಗೆ ತರಲು ಕ್ರಮಕೈಗೊಳ್ಳಬೇಕು ಎಂದು ಸಚಿವರಲ್ಲಿ ಮನವಿ ಮಾಡಿದರು.