
ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ನೌಕರರು/ಅಧಿಕಾರಿಗಳಿಗೆ ಮಾರ್ಚ್ 1ನೇ ತಾರೀಖಿನಂದು ಫೆಬ್ರವರಿ ತಿಂಗಳ ವೇತನ ಪಾವತಿಸಲು ವ್ಯವಸ್ಥಾಪಕ ನಿರ್ದೇಶಕರು ಆದೇಶ ಮಾಡಿರುವ ಹಿನ್ನೆಲೆ ಸಂಸ್ಥೆಯ ಎಲ್ಲ ವಿಭಾಗಗಳ ವಿಭಾಗ ನಿಯಂತ್ರಣಾಧಿಕಾರಿಗಳು ಅತೀ ಜರೂರಾಗಿ ಈ ಬಗ್ಗೆ ಕೆಲಸ ಮಾಡಬೇಕು ಎಂದು ಲೆಕ್ಕಪತ್ರ ಇಲಾಖೆಯ ಮುಖ್ಯ ಲೆಕ್ಕಾಧಿಕಾರಿ ಸೂಚನೆ ನೀಡಿದ್ದಾರೆ.
ಪ್ರತಿ ತಿಂಗಳು 1 ನೇ ತಾರೀಖಿನಂದು ಎಲ್ಲ ವರ್ಗದ ಸಿಬ್ಬಂದಿಗಳ ವೇತನ ಪಾವತಿ ಮಾಡಬೇಕಿದೆ. ಹೀಗಾಗಿ ಸಂಸ್ಥೆಯಲ್ಲಿ ಉಲ್ಲೇಖಿತ ಸುತ್ತೋಲೆಯನ್ವಯ ಪ್ರತಿ ಮಾಹೆಯು 1 ನೇ ತಾರೀಖಿನಂದು ವೇತನ ಪಾವತಿ ಮಾಡುವ ಪದ್ಧತಿಯನ್ನು ಫೆಬ್ರವರಿ-2025 ನೇ ಮಾಹೆಯಿಂದ ಜಾರಿಗೆ ತರಲಾಗಿದೆ.
ಆದ್ದರಿಂದ ಫೆಬ್ರವರಿ-2025 ನೇ ಮಾಹೆಯಲ್ಲಿ 25/02/2025 ರಂದು ಹಾಜರಾತಿಯನ್ನು ವಾಸ್ತವಿಕ ಹಾಜರಾತಿಯನ್ನಯ ಪೂರ್ಣಗೊಳಿಸಿ ಉಳಿದ 3 ದಿನಗಳಲ್ಲಿ ವೇತನ ಬಿಲ್ಲಿನ ತಯಾರಿಕೆ ಕಾರ್ಯವನ್ನು ಮಾಡಬೇಕಾದ ಕಾರಣ ತಮ್ಮ ವಲಯದ ಘಟಕಗಳ ಒಟಿ ಭತ್ಯೆಗಳ ಮಂಜೂರಾತಿ, ರಜೆ ಆದೇಶಗಳನ್ನು ಕೂಡಲೇ ಮಂಜೂರಾತಿ ಮಾಡಬೇಕು ಎಂದು ಸೂಚಿಸಿದ್ದಾರೆ.
ಇನ್ನು ಮಂಜೂರಾತಿ ಪಡೆದ ಪಟ್ಟಿಯನ್ನು 25.02.2025 ರಂದು ತಪ್ಪದೇ ಘಟಕದ ಲೆಕ್ಕಪತ್ರ ಇಲಾಖೆಗೆ/ ವೇತನ ಬಿಲ್ಲು ತಯಾರಿಸುವ ವಿಷಯ ನಿರ್ವಾಹಕರಿಗೆ ನೀಡಲು ಕ್ರಮ ಕೈಗೊಳ್ಳಲು ತಮ್ಮ ಎಲ್ಲ ಅಧೀನ ಅಧಿಕಾರಿ/ ಅಧೀಕ್ಷಕರು/ ಮೇಲ್ವಿಚಾರಕರಿಗೆ ಸೂಚನೆಯನ್ನು ನೀಡಬೇಕು ಎಂದು ತಿಳಿಸಿದ್ದಾರೆ.
ಎಲ್ಲ ಹಿರಿಯ/ಘಟಕ ವ್ಯವಸ್ಥಾಪಕರು, ಘಟಕದ ಸಂಚಾರ ಮೇಲ್ವಿಚಾರಕರು ಹಾಗೂ ಸಿಬ್ಬಂದಿ ಮೇಲ್ವಿಚಾರಕರು ತಮಗೆ ಸಂಬಂಧಪಟ್ಟ ವೇತನ ಸಂಬಂಧಿತ ಒಟಿ ಹಾಗೂ ರಜೆ ಆದೇಶಗಳನ್ನು ಕೂಡಲೇ ಸೂಕ್ತಾಧಿಕಾರಿಗಳ ಮಂಜೂರಾತಿ ಪಡೆದು ಘಟಕದ ಲೆಕ್ಕಪತ್ರ ಶಾಖೆಗೆ ನೀಡಬೇಕು ಎಂದು ತಿಳಿಸಿದ್ದಾರೆ.