
ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ವತಿಯಿಂದ ರಸ್ತೆಗಿಳಿಯುವ ಎಸಿ ಎಲೆಕ್ಟ್ರಿಕ್ ಬಸ್ಗಳನ್ನು ಏಜೆನ್ಸಿಗೆ ವಹಿಸಿರುವುದರಿಂದ ಎಜೆನ್ಸಿ ಮೂಲಕ ಡ್ಯೂಟಿ ಮಾಡಲು ಚಾಲಕರು ಬರುತ್ತಿಲ್ಲ, ಹೀಗಾಗಿ 320 ಎಸಿ ಎಲೆಕ್ನಿಕ್ ಬಸ್ಗಳ ಸಂಚಾರಕ್ಕೆ ವಿಘ್ನವಾಗಿದೆ.
ರಾಜ್ಯ ರಾಜಧಾನಿಯಲ್ಲಿ ವಾಯುಮಾಲಿನ್ಯದ ಪ್ರಮಾಣವನ್ನು ನಿಯಂತ್ರಿಸುವ ಸಲುವಾಗಿ ಬಿಎಂಟಿಸಿಯು 320 ಎಸಿ ಎಲೆಕ್ಟ್ರಿಕ್ ಬಸ್ಗಳನ್ನು ಖರೀದಿಸಿದೆ. ಆದರೆ, ಚಾಲಕರು ಸಿಗುತ್ತಿಲ್ಲ ಎಂಬ ಕಾರಣಾಂತರಗಳಿಂದಾಗಿ ಆ 320 ಬಸ್ಗಳ ಸಂಚಾರ ಇನ್ನೂ ಆರಂಭವಾಗಿಲ್ಲ.
ಆಶೋಕ್ ಲೇಲ್ಯಾಂಡ್ನಿಂದ ಬಿಎಂಟಿಸಿಯು 320 ಬಸ್ಗಳನ್ನು ಗುತ್ತಿಗೆ ಆಧಾರದಲ್ಲಿ ತೆಗೆದುಕೊಂಡಿದ್ದು, ಫೆ.1ರಿಂದಲೇ 320 ಬಸ್ಗಳು ಸಂಚಾರ ಆರಂಭಿಸಬೇಕಾಗಿತ್ತು. ಆದರೆ ಆ ಬಸ್ಗಳಿಗೆ ಚಾಲಕರು ದೊರೆಯದ ಹಿನ್ನೆಲೆ ಇನ್ನೂ ಸಂಚಾರಕ್ಕೆ ಮುಕ್ತವಾಗಿಲ್ಲ.
ಈಗಾಗಲೇ ಎಲೆಕ್ಟ್ರಿಕ್ ಎಸಿ ಬಸ್ಗಳ ಟ್ರಯಲ್ ರನ್ ನಗರದಲ್ಲಿ ಯಶಸ್ವಿಯಾಗಿದ್ದು, ಖಾಸಗಿ ಎಜೆನ್ಸಿಗಳ ಮೂಲಕವೆ ಎಲೆಕ್ಟ್ರಿಕ್ ಬಸ್ಗಳಿಗೆ ಚಾಲಕರ ನೇಮಕ ಮಾಡಿಕೊಳ್ಳಲು ಬಿಎಂಟಿಸಿ ಮುಂದಾಗಿತ್ತು. ಆದರೆ ಏಜೆನ್ಸಿಗಳ ಮೂಲಕ ಕೆಲಸಕ್ಕೆ ಬರಲು ಚಾಲಕರು ಹಿಂದೇಟು ಹಾಕುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಬಿಎಂಟಿಸಿ ಚಾಲಕರಿಗೆ 35 ರಿಂದ 40 ಸಾವಿರ ರೂ. ಸಂಬಳ ನೀಡುತ್ತಿದ್ದು, ಏಜೆನ್ಸಿ ಮೂಲಕ ಬರುವ ಚಾಲಕರಿಗೆ ಕೇವಲ 18 ಸಾವಿರ ರೂ. ವೇತನಕೊಡುತ್ತಾರೆ. ಇದು ನಮಗೆ ಸಾಲದು ಎಂದು ಖಾಸಗಿ ಚಾಲಕರು ಎಲೆಕ್ಟ್ರಿಕ್ ಬಸ್ ಚಲಾಯಿಸುವ ಕೆಲಸಕ್ಕೆ ಹಿಂದೇಟು ಹಾಕುತ್ತಿದ್ದಾರೆ.
ಈ ಹೊಸ ಎಸಿ ಎಲೆಕ್ಟ್ರಿಕ್ ಬಸ್ಗಳಿಗೆ ಚಾಲಕರನ್ನು ಗುತ್ತಿಗೆ ಪಡೆದ ಬಸ್ ಕಂಪನಿಗಳಿಂದಲೇ ನೇಮಕ ಮಾಡಲಾಗುತ್ತಿದೆ. ಕಂಡಕ್ಟರ್ ಮಾತ್ರ ಬಿಎಂಟಿಸಿಯಿಂದ ನೇಮಕವಾಗುತ್ತಾರೆ. ಹನ್ನೆರಡು ವರ್ಷಗಳಿಗೆ ಗುತ್ತಿಗೆ ಆಧಾರದಲ್ಲಿ ತೆಗೆದುಕೊಳ್ಳಲಾಗುತ್ತಿದೆ. ಒಂದು ಕಿ.ಮೀಗೆ ಈ ಬಸ್ಗೆ ಬಿಎಂಟಿಸಿ 68 ರೂಪಾಯಿ ನೀಡಲಿದೆ. ಮೊದಲ ಬಾರಿಗೆ ರಾಜಧಾನಿಯಲ್ಲಿ ಸಂಚರಿಸಬೇಕಿದ್ದ ಐದು ಎಸಿ ಎಲೆಕ್ಟ್ರಿಕ್ ಬಸ್ಗಳ ಟ್ರಯಲ್ ರನ್ ಮೆಜೆಸ್ಟಿಕ್ನಿಂದ ಕಾಡುಗೋಡಿವರೆಗೆ ನಡೆಸಲಾಗಿತ್ತು.
ಸರಕಾರದಿಂದ ಇವುಗಳಿಗೆ 150 ಕೋಟಿ ರೂ.. ಸಹಾಯಧನ ನೀಡಲಾಗಿದೆ. ಫೆಬ್ರವರಿಯಲ್ಲಿ ಸಿಎಂ ಸಿದ್ದರಾಮಯ್ಯರಿಂದ ಎಲೆಕ್ಟ್ರಿಕ್ ಎಸಿ ಬಸ್ಗಳಿಗೆ ಚಾಲನೆ ನೀಡಬೇಕಿತ್ತು. ಆದರೆ ಚಾಲಕರು ಸಿಗದೆ ಎಲ್ಲವೂ ನಿಂತುಹೋಗಿದೆ. ವಿಮಾನ ನಿಲ್ದಾಣ, ಮೆಜೆಸ್ಟಿಕ್, ಕತ್ರಿಗುಪ್ಪೆ, ಐಟಿಪಿಎಲ್, ಎಚ್ಎಸ್ಆರ್ ಘಟಕಗಳಿಂದ ಬಸ್ ಹೊರಡಿಸಲು ಚಿಂತನೆ ನಡೆಸಲಾಗಿತ್ತು.
ಈ ಎಸಿ ಎಲೆಕ್ಟ್ರಿಕ್ ಬಸ್ಗಳಿಗೆ ಕಂಡಕ್ಟರ್ ಗಳನ್ನು ಮಾತ್ರ ನಾವು ಕೊಡುತ್ತೇವೆ. ಕೇಂದ್ರ ಸರ್ಕಾರ ಬಸ್ ಕಂಪನಿಗಳಿಗೆ ಸಬ್ಸಿಡಿ ನೀಡುತ್ತದೆ. ಸಬ್ಸಿಡಿ ಪಡೆದ ಕಂಪನಿ ಚಾಲಕರನ್ನು ನೇಮಕ ಮಾಡಿಕೊಳ್ಳುತ್ತದೆ. ನಮಗೆ ಸಬ್ಸಿಡಿ ನೀಡಿದ್ದರೆ ತುಂಬಾ ಸಹಾಯ ಆಗುತ್ತದೆ. ಈ ಬಗ್ಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಕೇಳಬೇಕಿದೆ.
l ರಾಮಲಿಂಗಾ ರೆಡ್ಡಿ, ಸಾರಿಗೆ ಸಚಿವರು