
ಗಂಗಾವತಿ: ಬಸ್ ಟಿಕೆಟ್ ದರ ಹೆಚ್ಚಾಗಿದ್ದನ್ನು ಪ್ರಶ್ನಿಸಿ ಪ್ರಯಾಣಿಕಂಬ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಗದ ನಿರ್ವಾಹರೊಬ್ಬರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ಪರಿಣಾಮ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ನಿರ್ವಾಹಕರೊಬ್ಬರ ಮೇಲೆ ಮರಾಠಿ ಮಾತನಾಡಬೇಕು ಎಂದು ಕಿಡಿಗೇಡಿಗಳು ಹಲ್ಲೆ ಮಾಡಿ, ಅದು ಉದ್ವಿಗ್ನಸ್ಥಿತಿ ತಲುಪಿರುವ ಹೊತ್ತಿನಲ್ಲೇ ಕೆಕೆಆರ್ಟಿಸಿ ಬಸ್ ನಿರ್ವಾಹಕರ ಮೇಲೆ ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಹಲ್ಲೆ ಮಾಡಿರುವುದು ಮತ್ತಷ್ಟು ಆತಂಕ ಸೃಷ್ಟಿಸಿದೆ.
ನಿರ್ವಾಹಕ ಹನುಮಂತ ಎಂಬುವರ ಮೇಲೆ ಶ್ರೀಧರ್ ಎಂಬಾತ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದು, ಹಲ್ಲೆಯಿಂದಾಗಿ ನಿರ್ವಾಹಕನ ಬಲಭಾಗದ ಕಣ್ಣಿಗೆ ಗಂಭೀರ ಗಾಯವಾಗಿದೆ. ಗಂಗಾವತಿ ತಾಲೂಕಿನ ವಿರುಪಾಪುರ ಗಡ್ಡಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಇನ್ನು ಬಸ್ ಟಿಕೆಟ್ ದರ ಹೆಚ್ಚಾಗಿದ್ದಕ್ಕೆ ಕುಡಿದ ಮತ್ತಿನಲಿ ಶ್ರೀಧರ್ ಕಂಡಕ್ಟರ್ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾನೆ ಎಂದು ಹೇಳಲಾಗುತ್ತಿದೆ. ಕುಡಿದು ಏನು ಬೇಕಾದರು ಮಾಡಬಹುದಾ? ಅಲ್ಲದೆ ಬಸ್ ಟಿಕೆಟ್ ದರ ಹೆಚ್ಚಾಗಿರುವುದಕ್ಕೆ ಈ ನಿರ್ವಾಹಕರು ಕಾರಣರ? ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕು ಎಂಬಂತೆ ಇಲ್ಲಿ ಸರ್ಕಾರ ಮಾಡಿರುವುದಕ್ಕೆ ನಿರ್ವಾಹಕರ ಮೇಲೆ ಹಲ್ಲೆ ಮಾಡುವುದು ಮೂರ್ಖತನವಲ್ಲವೇ ಎಂದು ಪ್ರಜ್ಞಾವಂತ ನಾಗರಿಕರು ಕಿಡಿಕಾರಿದ್ದಾರೆ.
ನಿರ್ವಾಹಕ ಹನುಮಂತ ಅವರ ಮೇಲೆ ಹಲ್ಲೆ ಮಾಡಿದ ಆರೋಪಿ ಶ್ರೀಧರ್ ಬಸ್ ಟಿಕೆಟ್ ದರವನ್ನು ಯಾರನ್ನು ಕೇಳಿ ಜಾಸ್ತಿ ಮಾಡಿದ್ದೀರಾ ಎಂದು ಕೂಗಾಡಿ ಹೊಡೆದಿದ್ದಾನೆ. ಇದರಿಂದ ನಿರ್ವಾಹಕರು ಗಾಯಗೊಂಡಿದ್ದಾರೆ.
ಇತ್ತ ವಿಷಯ ತಿಳಿದ ಕೂಡಲೇ ಗಂಗಾವತಿ ಪೊಲೀಸರು ಆರೋಪಿ ಶ್ರೀಧರನನ್ನು ವಶಕ್ಕೆ ಪಡೆದುಕೊಂಡಿದ್ದು ಮುಂದಿನ ಕ್ರಮ ಜರುಗಿಸಿದ್ದಾರೆ.