
- ಸಾಂಪ್ರದಾಯಿಕ ಉಡುಗೆ ತೊಡುಗೆಯಲ್ಲಿ ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರು
- ಗಮನ ಸೆಳೆದ ಎತ್ತಿನ ಗಾಡಿಗಳ ಮೆರವಣಿಗೆ. ವೀರಭದ್ರಸ್ವಾಮಿಯ ವೀರಗಾಸೆ ನೃತ್ಯ
- ಎತ್ತಿನ ಗಾಡಿಗಳ ಮೆರವಣಿಗೆಗೆ ಚಾಲನೆ ನೀಡಿದ ಶಾಸಕ ಮಂಜು
ಕೆ.ಆರ್.ಪೇಟೆ: ಜಾನಪದ ನಮ್ಮ ಬದುಕಿನ ಜೀವ ಸೆಲೆಯಾಗಿದೆ. ಆ ಇಂದು ಇದು ದೃಶ್ಯ ಮಾಧ್ಯಮ ಹಾವಳಿಯಿಂದ ಕಣ್ಮರೆಯಾಗಿ ನೇಪತ್ಯಕ್ಕೆ ಸರಿಯುತ್ತಿದೆ. ಹೀಗಾಗಿ ಈ ಜನಪದ ಕಲೆಗಳ ಸಂರಕ್ಷಣೆಯು ನಮ್ಮೆಲ್ಲರ ಹೊಣೆಯಾಗಿದೆ ಎಂದು ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶಗೌಡ ತಿಳಿಸಿದರು.
ಕೆ.ಆರ್.ಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಜಾನಪದ ಜಾತ್ರೆ, ಉತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪಾಶ್ಚಿಮಾತ್ಯ ಮೋಹಕ್ಕೆ ಒಳಗಾಗಿ ನಮ್ಮ ಸಂಸ್ಕೃತಿ ಹಾಗೂ ಪರಂಪರೆಯನ್ನು ಮರೆಯುತ್ತಿರುವ ಯುವಜನರಿಗೆ ನಮ್ಮ ನೆಲದ ಇತಿಹಾಸದ ಮೇಲೆ ಬೆಳಕು ಚೆಲ್ಲುವ ಜಾನಪದ ಕಲೆಗಳ ಬಗ್ಗೆ ತಿಳಿಸಿ ಕೊಡುವುದು ಇಂದಿನ ಅಗತ್ಯವಾಗಿದೆ ಎಂದು ಹೇಳಿದರು.
ಜಾನಪದ ಕಲೆಗಳು ನಮ್ಮ ಉಸಿರು. ಮೌಢ್ಯವಿಲ್ಲದ ನಮ್ಮ ಇತಿಹಾಸದ ಮೇಲೆ ಬೆಳಕು ಚೆಲ್ಲುವ ಜಾನಪದ ಹಾಡುಗಳು ಹಾಗೂ ಕಲೆಗಳನ್ನು ಸಂರಕ್ಷಣೆ ಮಾಡಲು ನಾಗರೀಕ ಸಮಾಜದ ಪ್ರತಿಯೊಬ್ಬರೂ ಕೈಜೋಡಿಸಿ ಕೆಲಸ ಮಾಡಬೇಕು. ಯುವಜನರು ಮೊಬೈಲ್ ಪ್ರಪಂಚದಿಂದ ಹೊರಬಂದು ಜಾನಪದ ಕಲೆಗಳನ್ನು ಕಲಿತು ಅಭ್ಯಾಸ ಮಾಡುವುದನ್ನು ರೂಢಿಸಿಕೊಂಡು ಜಾನಪದ ಕಲೆಗಳ ಸಂರಕ್ಷಣೆಗೆ ಮುಂದಾಗುವಂತೆ ಕೆ.ಆರ್.ಪೇಟೆ ರೋಟರಿ ಸಂಸ್ಥೆಯ ಅಧ್ಯಕ್ಷ ಹಾಗೂ RTO ಅಧಿಕಾರಿ ಮಲ್ಲಿಕಾರ್ಜುನ ಸಲಹೆ ನೀಡಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಜಿ.ವಿ.ಜಗದೀಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಯುವಜನರು ಜಾನಪದ ಜಾತ್ರೆಯಲ್ಲಿ ವಿಹರಿಸಿ ನಮ್ಮ ನೆಲದ ಇತಿಹಾಸದ ಬಗ್ಗೆ ತಿಳಿದುಕೊಂಡು ಲೋಕ ಜ್ಞಾನವನ್ನು ಹೆಚ್ಚಿಸಿಕೊಂಡು ಸಾಧನೆ ಮಾಡಬೇಕು. ಪಿಜ್ಜಾ ಬರ್ಗರ್ ತಿರಸ್ಕರಿಸಿ, ರಾಗಿಮುದ್ದೆ, ಬಸ್ಸಾರು, ರೊಟ್ಟಿ, ಸೊಪ್ಪಿನ ಪಲ್ಯ ತಿಂದು ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂ ಶುಪಾಲೆ ಡಾ.ಪ್ರತಿಮಾ, ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಕತ್ತರಘಟ್ಟ ವಾಸು, ಕಸಾಪ ಮಾಜಿ ಅಧ್ಯಕ್ಷ ಕೆ.ಎಸ್. ಸೋಮಶೇಖರ್, ಕಾಲೇಜಿನ ಪತ್ರಅಂಕಿತಾ ವ್ಯವಸ್ಥಾಪಕ ಬಳ್ಳೇಕೆರೆ ಮಂಜುನಾಥ್, ಅಧ್ಯಾಪಕ ಜಯಕೀರ್ತಿ ಮಾತನಾಡಿದರು. ವಿದ್ಯಾರ್ಥಿ ಗಳು ತಯಾರಿಸಿದ ಗ್ರಾಮೀಣ ಸೊಗಡಿನ ತಿಂಡಿ ತಿನಿಸುಗಳು ಕಾಯಿ ಪಲ್ಲೆಗಳು ಅತಿಥಿಗಳು ಹಾಗೂ ಗಣ್ಯರ ಮೆಚ್ಚುಗೆಗೆ ಪಾತ್ರವಾದವು.