
ಬೆಂಗಳೂರು: 4,09,549 ಕೋಟಿ ರೂ. ಗಾತ್ರದ ಬಜೆಟ್ನಲ್ಲಿ ಅಲ್ಪಸಂಖ್ಯಾತರಿಗೆ ಕೇವಲ 4,500 ಕೋಟಿ ರೂ. ಕೊಟ್ಟರೆ ಅದು ಹಲಾಲ್ ಬಜೆಟ್ ಹೇಗೆ ಆಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿಪಕ್ಷ ಬಿಜೆಪಿಯನ್ನು ಪ್ರಶ್ನಿಸಿದ್ದಾರೆ.
ಇಂದು ಬಜೆಟ್ ಮಂಡಿಸಿದ ಬಳಿಕ ವಾಡಿಕೆಯಂತೆ ಸಂಜೆ ಸುದ್ದಿಗೋಷ್ಠಿ ಉದ್ದೇಶಿಸಿ ಮಾತಾಡಿದ ಸಿಎಂ ಸಿದ್ದರಾಮಯ್ಯ, ಅಲ್ಪಸಂಖ್ಯಾತರಲ್ಲಿ ಶಿಕ್ಷಣ ಪ್ರಮಾಣ ಕಡಿಮೆ ಇದೆ. ಅಲ್ಪಸಂಖ್ಯಾತರು ಎಂದರೆ ಕೇವಲ ಮುಸ್ಲಿಮರು ಮಾತ್ರ ಅಲ್ಲ. ಅದರಲ್ಲಿ ಜೈನರು, ಬೌದ್ಧರು ಮತ್ತು ಸಿಖ್ಖರು ಸಹ ಬರುತ್ತಾರೆ. ನಾವು ಸಮಾನತೆಯಲ್ಲಿ ನಂಬಿಕೆ ಇಟ್ಟುಕೊಂಡವರು. ಬಿಜೆಪಿ ಸಬ್ಕಾ ಸಾಥ್ ಸಬ್ಕಾ ವಿಕಾಸ್ ಎಂದು ಹೇಳುವ ಮೂಲಕ ಅನ್ಯಾಯ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಹಲಾಲ್ ಬಜೆಟ್, ಪಾಕಿಸ್ತಾನ ಬಜೆಟ್ ಎಂದು ಹೇಳುವ ಮೂಲಕ ಬಿಜೆಪಿ ಜಾತ್ಯತೀತ ವಿರೋಧಿ ಮನಸ್ಥಿತಿಯನ್ನು ತೋರಿಸಿದೆ ಎಂದು ಸಿಎಂ ಕಿಡಿಕಾರಿದರು.
ಎಸ್ಇಪಿ , ಟಿಎಸ್ಪಿಗೆ 42,000 ಕೋಟಿ ರೂ. ನೀಡಲಾಗಿದೆ. ಒಬಿಸಿಗೆ 4,300 ಕೋಟಿ ಹಾಗೂ ಅಲ್ಪಸಂಖ್ಯಾತರಿಗೆ 4,500 ಕೊಡಲಾಗಿದೆ. ಬಿಜೆಪಿಯ ಸಂಕುಚಿತ ಮನೋಭಾವಕ್ಕೆ ಸದನದಲ್ಲಿ ಉತ್ತರ ನೀಡುತ್ತೇನೆ. ಬಿಜೆಪಿ ಬಹುತ್ವಕ್ಕೆ ವಿರುದ್ಧವಾಗಿದೆ ಎಂದು ಸಿಎಂ ಆಕ್ರೋಶ ವ್ಯಕ್ತಪಡಿಸಿದರು.
ಈ ಬಜೆಟ್ ದೂರದೃಷ್ಟಿ ಇರುವ ಹಾಗೂ ಸಮಾನತೆಯನ್ನು ಸಾರುವ ಬಜೆಟ್ ಆಗಿದೆ. ಗ್ಯಾರಂಟಿ ಯೋಜನೆಗಳಿಂದ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ವಾರ್ಷಿಕ 233 ಕೋಟಿ ರೂ. ಸರ್ಕಾರಕ್ಕೆ ಖರ್ಚು ಬರುತ್ತದೆ. ಜನರ ಕೈಗೆ ಹಣ ಸಿಗುವಂತೆ ಯೋಜನೆಗಳನ್ನು ರೂಪಿಸಿದ್ದು, ಅಭಿವೃದ್ಧಿಯ ದ್ಯೋತಕ ಅನ್ನೋದು ವಿರೋಧ ಪಕ್ಷದ ನಾಯಕರಿಗೆ ಅರ್ಥವಾಗುತ್ತಿಲ್ಲ, ಜನರ ಕೈಗೆ ದುಡ್ಡು ಸಿಕ್ಕರೆ ಅವರ ಖರೀದಿ ಶಕ್ತಿ ಹೆಚ್ಚಿ ಆರ್ಥಿಕ ಚಟುವಟಿಕೆಗಳು ಜಾಸ್ತಿಯಾಗುತ್ತವೆ ಎಂದು ಹೇಳಿದರು.
2025-26 ನೇ ಸಾಲಿನ ಮುಂಗಡ ಪತ್ರವನ್ನು ಮಂಡಿಸಲಾಗಿದ್ದು, ಕರ್ನಾಟಕ ಸರ್ಕಾರ ಕಳೆದ ಸಾಲಿನಲ್ಲಿ 3,71,121 ಕೋಟಿ ಬಜೆಟ್ ಮಂಡಿಸಿತ್ತು. ಈ ಬಾರಿಯ ಬಜೆಟ್ ಗಾತ್ರ 4,09,549 ಕೋಟಿಯಾಗಿದೆ. ಮೊದಲ ಬಾರಿಗೆ ನಮ್ಮ ರಾಜ್ಯದ ಆಯವ್ಯಯ ಗಾತ್ರ 4 ಲಕ್ಷ ಕೋಟಿ ರೂ.ಗಳ ಗಡಿ ದಾಟಿರುವುದು ಒಂದು ಹೊಸ ಮೈಲಿಗಲ್ಲು. ಕಳೆದ ಬಾರಿಗಿಂತ ಈ ಬಾರಿ 38,166 ಕೋಟಿ ರೂ.ಗಳು ಹೆಚ್ಚಾಗಿದೆ. ಬಜೆಟ್ ನ ಬೆಳವಣಿಗಯ ದರ 10.3 ರಷ್ಟು ಹೆಚ್ಚಳವಾಗಿದೆ ಎಂದರು.