
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ಬಸ್ ಪ್ರಯಾಣ ದರವನ್ನು ಶೇ.15ರಷ್ಟು ಹೆಚ್ಚಿಸುವ ಮೂಲಕ ರಾಜ್ಯ ಸರ್ಕಾರ ನಿಗಮಗಳ 10 ವರ್ಷದ ಮನವಿಗೆ ಸ್ಪಂದಿಸಿದೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC)ಮತ್ತು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(BMTC) ಸೇರಿದಂತೆ ನಾಲ್ಕೂ ನಿಗಮಗಳ ಬಸ್ ಟಿಕೆಟ್ ದರವನ್ನು ಶೇ.15ರಷ್ಟು ಹೆಚ್ಚಳ ಮಾಡಲು ಗುರುವಾರ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಇದರಿಂದ ಹೊಸ ವರ್ಷದ ಆರಂಭದಲ್ಲೇ ಪ್ರಯಾಣಿಕರು ಶಾಕ್ ಒಳಗಾಗಿದ್ದಾರೆ.
ಆದರೆ, ಕಳೆದ 10 ವರ್ಷದಿಂದ ಬಿಎಂಟಿಸಿ ನಿಗಮದ ಬಸ್ ಟಿಕೆಟ್ ದರವನ್ನು ಹೆಚ್ಚಿಸಿರಲಿಲ್ಲ. ಜತೆಗೆ ಕಳೆದ 5 ವರ್ಷದ ಬಳಿಕ ಉಳಿದ ಮೂರು ನಿಗಮಗಳಲ್ಲೂ ಟಿಕೆಟ್ ದರ ಏರಿಸಿಲ್ಲದಿದ್ದರಿಂದ ಸಾರಿಗೆಯ ನಾಲ್ಕೂ ನಿಗಮಗಳ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿವೆ. ಹೀಗಾಗಿ ಇಂದು ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಸಾರಿಗೆ ಸಂಸ್ಥೆಗಳ ಬಸ್ ಪ್ರಯಾಣ ದರವನ್ನು ಶೇ.15 ರಷ್ಟು ಹೆಚ್ಚಿಸಲು ಅನುಮೋದನೆ ನೀಡಲಾಗಿದೆ.
ಸಚಿವ ಸಂಪುಟ ಸಭೆ ಬಳಿಕ ಮಾತನಾಡಿದ ಸಚಿವ ಎಚ್.ಕೆ. ಪಾಟೀಲ್ ಅವರು, ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳ ಬಸ್ ಟಿಕೆಟ್ ದರ ಹೆಚ್ಚಳಕ್ಕೆ ಸಚಿವ ಸಂಪುಟ ನಿರ್ಧರಿಸಿದ್ದು, ಜನವರಿ 5ರಿಂದ ಪರಿಷ್ಕೃತ ಟಿಕೆಟ್ ದರ ಅನ್ವಯವಾಗಲಿದೆ ಎಂದರು.
ನಾಲ್ಕು ಸಾರಿಗೆ ನಿಗಮಗಳ ಟಿಕೆಟ್ ದರ ಪರಿಷ್ಕರಿಸಿದ್ದೇವೆ. ಟಿಕೆಟ್ ದರ ಶೇ.15ರಷ್ಟು ಹೆಚ್ಚಿಸಲು ಅನುಮೋದಿಸಲಾಗಿದೆ. ದರ ಹೆಚ್ಚಳದಿಂದ ನಿತ್ಯ 7.84 ಕೋಟಿ ರೂ. ಆದಾಯ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಸಚಿವರು ತಿಳಿಸಿದರು.
ಬಿಎಂಟಿಸಿ, ಕೆಎಸ್ಆರ್ಟಿಸಿ, ಎನ್ಡಬ್ಲ್ಯುಕೆಆರ್ಟಿಸಿ ಮತ್ತು ಕೆಕೆಆರ್ಟಿಸಿ ಸೇರಿದಂತೆ ನಾಲ್ಕೂ ಸಾರಿಗೆ ನಿಗಮಗಳು ಈ ಹಿಂದೆ ಶೇ.40 ರಷ್ಟು ದರ ಏರಿಕೆಗೆ ಪ್ರಸ್ತಾವನೆ ಸಲ್ಲಿಸಿದ್ದವು. ಡೀಸೆಲ್ ಬೆಲೆಯ ಏರಿಕೆಯನ್ನು ಗಮನಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದರು.
ಬಿಎಂಟಿಸಿ ಬಸ್ ದರಗಳನ್ನು 2015ರಲ್ಲಿ ಮತ್ತು ಕೆಎಸ್ಆರ್ಟಿಸಿ, ಕೆಕೆಆರ್ಟಿಸಿ ಮತ್ತು ಎನ್ಡಬ್ಲ್ಯುಕೆಆರ್ಟಿಸಿಯ ದರಗಳನ್ನು 2020ರಲ್ಲಿ ಪರಿಷ್ಕರಿಸಲಾಗಿತ್ತು. ಈಗ ಡೀಸೆಲ್ ಮತ್ತು ಬಸ್ ಬಿಡಿಭಾಗಗಳ ಬೆಲೆಗಳು ಏರಿಕೆಯಾಗಿವೆ. ಜತೆಗೆ ಸಿಬ್ಬಂದಿ ವೇತನವೂ ಹೆಚ್ಚಿದೆ. ಈ ಎಲ್ಲ ಕಾರಣಗಳಿಂದ ಪ್ರಯಾಣ ದರ ಏರಿಕೆ ಅನಿವಾರ್ಯವಾಗಿದೆ ಎಂದು ಸಚಿವರು ಹೇಳಿದರು.
ಬಿಎಂಟಿಸಿ ಬಸ್ ದರವನ್ನು ಜನವರಿ 10, 2015 ರಂದು ಹೆಚ್ಚಳ ಮಾಡಲಾಗಿತ್ತು. ಅಂದು ಡೀಸೆಲ್ ಬೆಲೆ ಲೀಟರ್ಗೆ 60.90 ರೂ. ಇತ್ತು. 10 ವರ್ಷಗಳ ಹಿಂದೆ ನಾಲ್ಕು ಸಾರಿಗೆ ನಿಗಮಗಳಿಗೆ ನಿತ್ಯ 9.16 ಕೋಟಿ ರೂ. ಡೀಸೆಲ್ ಬಳಕೆಯಾಗುತ್ತಿತ್ತು. ಈಗ ಅದು 13.21 ಕೋಟಿ ರೂ.ಗೆ ಏರಿಕೆಯಾಗಿದೆ. ಹೀಗಾಗಿ ಟಿಕೆಟ್ ದರ ಪರಿಷ್ಕರಣೆ ಅಗತ್ಯ ಎಂದು ಪಾಟೀಲ್ ಸಮರ್ಥಿಸಿಕೊಂಡರು.
ಇದರ ಜತೆಗೆ ರಾಜ್ಯ ಸರ್ಕಾರವು 2,000 ಕೋಟಿ ರೂಪಾಯಿಯ ಎಲ್ಲ ಭವಿಷ್ಯ ನಿಧಿ(ಪಿಎಫ್) ಬಾಕಿಗಳನ್ನು ಪಾವತಿಸುವ ಮೂಲಕ ಎಲ್ಲವನ್ನು ಚುಕ್ತ ಮಾಡಿದೆ ಎಂದು ಸಚಿವರು ತಿಳಿಸಿದರು.