
ಬೆಂಗಳೂರು: ಕನಿಷ್ಠ ಪಿಂಚಣಿ 7500 ರೂಪಾಯಿ ಜಾರಿ ಮಾಡುವಂತೆ ಆಗ್ರಹಿಸಿ ಇಪಿಎಸ್ ಪಿಂಚಣಿದಾರರು ಪ್ರಾದೇಶಿಕ ಭವಿಷ್ಯ ನಿಧಿ ಕಚೇರಿ ಆವರಣದಲ್ಲಿ ಬೃಹತ್ ಪ್ರತಿಭಟನೆ ಮಾಡಿದರು.
ರಾಷ್ಟ್ರೀಯ ಸಂಘರ್ಷ ಸಮಿತಿ, ಬಿಎಂಟಿಸಿ & ಕೆಎಸ್ಆರ್ಟಿಸಿ ಹಾಗೂ ಕೆಎಸ್ಆರ್ಟಿಸಿ ಕ್ಷೇಮಾಭಿವೃದ್ಧಿ ಟ್ರಸ್ಟ್ , ಚಿಕ್ಕಬಳ್ಳಾಪುರ ವತಿಯಿಂದ ನಗರದ ರಿಚ್ಮಂಡ್ ವೃತ್ತದಲ್ಲಿರುವ ಪ್ರಾದೇಶಿಕ ಭವಿಷ್ಯ ನಿಧಿ ಕಚೇರಿ ಆವರಣದಲ್ಲಿ ಗುರುವಾರ “ನಿಧಿ ಆಪ್ಕೆ ನಿಕಟ್” ಕಾರ್ಯಕ್ರಮದಂದು ಹಮ್ಮಿಕೊಂಡಿದ್ದ, ಇಪಿಎಸ್ ಪಿಂಚಣಿದಾರರ ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿದ್ದ ನಿವೃತ್ತ ನೌಕರರು ಆಕ್ರೋಶ ವ್ಯಕ್ತಪಡಿಸಿದರು.
ಗುರುವಾರ ಮಹಾಶಿವರಾತ್ರಿ ದಿನದಂದು ನಿವೃತ್ತರು ಉಪವಾಸ ವ್ರತ ಹಾಗೂ ರಾತ್ರಿ ಜಾಗರಣೆಯಲ್ಲಿ ಭಾಗಿಯಾಗಿದ್ದರೂ ಸಹ ಆ ನಿದ್ರೆ ಮಾಡದೆಯೂ ನೂರಾರು ಸಂಖ್ಯೆಯಲ್ಲಿ ಇಪಿಎಫ್ಒ ಕಚೇರಿಗೆ ಆಗಮಿಸಿದ್ದು, ಇಳಿ ವಯಸ್ಸಿನಲ್ಲಿ ತಮ್ಮ ಬದುಕಿಗಾಗಿ ಇನ್ನಿಲ್ಲದ ಹೋರಾಟ ಮಾಡುತ್ತಿರುವುದು ಕಂಡು ಬಂತ್ತು.
ಇನ್ನು ಕೇಂದ್ರ ಸರ್ಕಾರಕ್ಕೇ ಆಗಲಿ ಅಥವಾ ಅಧಿಕಾರಿಗಳಿಗೆ ಆಗಲಿ ಇದೆಲ್ಲವೂ ತಿಳಿದಿಲ್ಲವೇ?. ತಿಳಿದಿದ್ದು, ಇದೊಂದು ಜಾಣ ಕುರುಡುತನ ಪ್ರದರ್ಶನ ಏಕೆ ಎಂದು ಪ್ರತಿಭಟನಾ ನಿತರು ನಿವೃತ್ತರು ಕಿಡಿಕಾರಿದರು.
ನಾವು ಸಂಯಮ, ಶಿಸ್ತು ಮತ್ತು ಶಾಂತಿಗೆ ಹೆಸರಾದ ಕೆಎಸ್ಆರ್ಟಿಸಿ, ಬಿಎಂಟಿಸಿ ಹಾಗೂ ಇತರೆ ಹತ್ತಾರು ಕಂಪನಿಗಳ ನೂರಾರು ನಿವೃತ್ತ ನೌಕರರು ಒಂದಾಗಿ ಪ್ರತಿಭಟನೆ ಮಾಡುತ್ತಿದ್ದೇವೆ. ಇದನ್ನು ಕಂಡು ಭಯಭೀತರಾದ ಇಪಿಎಫ್ಒ ಅಧಿಕಾರಿಗಳು ಈ ಬಾರಿಯು ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಿಕೊಂಡಿದ್ದರು. ಇದು ನಮಗೆಲ್ಲ ಆಶ್ಚರ್ಯವನ್ನುಂಟು ಮಾಡಿತು ಎಂದು ಅಚ್ಚರಿ ವ್ಯಕ್ತಪಡಿಸಿದರು.
ಇನ್ನು ರಾಷ್ಟ್ರೀಯ ಸಂಘರ್ಷ ಸಮಿತಿ ಮುಖ್ಯಸ್ಥ ಕಮಾಂಡರ್ ಅಶೋಕ ರಾವುತ್ ಅವರ ತಂಡ ಇತ್ತೀಚೆಗೆ ದೆಹಲಿಯಲ್ಲಿ ಕೇಂದ್ರ ಕಾರ್ಮಿಕ ಹಾಗೂ ಉದ್ಯೋಗ ಖಾತೆ ಸಚಿವರನ್ನು (minister for labour & employment) ಭೇಟಿ ಮಾಡಿ, ನಡೆಸಿರುವ ಮಾತುಕತೆ ಫಲಪ್ರದವಾಗಿದ್ದು, ಇಪಿಎಸ್ ನಿವೃತ್ತರದಲ್ಲಿ ಹೊಸ ಆಶಾಕಿರಣ ಮೂಡಿಸಿದೆ ಎಂದು ಬಿಎಂಟಿಸಿ & ಕೆಎಸ್ಆರ್ಟಿಸಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ನಂಜುಂಡೇಗೌಡ ತಿಳಿಸಿದರು.
ಎನ್ಎಸಿ ರಾಜ್ಯಾಧ್ಯಕ್ಷ ಜಿಎಸ್ಎಮ್ ಸ್ವಾಮಿ ಮಾತನಾಡಿ, ದೇಶಾದ್ಯಂತ ಇರುವ ಎಲ್ಲ ಇಪಿಎಸ್ ನಿವೃತ್ತರು, ಬಲಿಷ್ಠ ನಾಯಕತ್ವದ, ಕಮಾಂಡರ್ ಅಶೋಕ್ ರಾಹುತ್ ಅವರ ಜತೆ ಕೈಜೋಡಿಸಿದಲ್ಲಿ ಕೂಡಲೇ ನಮ್ಮ ಜಯ ಶತಸಿದ್ಧ ಎಂದು ತಿಳಿಸಿದರು.
ಸಂಘದ ಕಾರ್ಯಧ್ಯಕ್ಷ ಶಂಕರ್ ಕುಮಾರ್ ಮಾತನಾಡಿ, ಕನಿಷ್ಠ ಹೆಚ್ಚುವರಿ ಪಿಂಚಣಿ ಹಾಗೂ ಅಧಿಕ ಪಿಂಚಣಿ ಇವೆರಡನ್ನು ಇಂದಲ್ಲ ನಾಳೆ ಕೇಂದ್ರ ಸರ್ಕಾರ ನೀಡಬೇಕಾಗುತ್ತದೆ ಎಂಬ ಬಗ್ಗೆ ಆಶಾಭಾವನೆ ವ್ಯಕ್ತಪಡಿಸಿದರು.
ಚಿಕ್ಕಬಳ್ಳಾಪುರ ಕೆಎಸ್ಆರ್ಟಿಸಿ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಮೇಲೂರು ಅಮರ್ ಮಾತನಾಡಿ, ಕರ್ನಾಟಕದ ಎಲ್ಲ ಭಾಗಗಳಲ್ಲಿಯೂ ಎನ್ಎಸಿ ಸಂಘಟನೆ ಇದ್ದು, ನಾವೆಲ್ಲರೂ ಒಂದೇ ಎಂದಿರುತ್ತಾರೆ. ಅಧಿಕಾರಿಗಳು ನಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸದೆ ಹೋದಲ್ಲಿ ದೇಶಾದ್ಯಂತ ಎಲ್ಲ ಇಪಿಎಸ್ ನಿವೃತ್ತರು ವಿನೂತನ ಪ್ರತಿಭಟನೆ ನಡೆಸುತ್ತಾರೆ ಎಂದು ಎಚ್ಚರಿಕೆ ನೀಡಿದರು.
ನಮ್ಮ ಹೋರಾಟದ ಎಲ್ಲ ಬೆಳವಣಿಗೆಯನ್ನು ದೆಹಲಿಯ ಕೇಂದ್ರ ಕಚೇರಿಗೆ ಕಳುಹಿಸಿ ಕೊಟ್ಟಿದ್ದು, ಅವರ ಆದೇಶದ ನಿರೀಕ್ಷೆಯಲ್ಲಿರುವುದಾಗಿ ತಿಳಿಸಿದ್ದು, ಇದಕ್ಕೆ ತೃಪ್ತರಾಗದ ಪ್ರತಿಭಟನಾಕಾರರು, ತಮ್ಮ ಆಕ್ರೋಶ (akrosha) ವ್ಯಕ್ತಪಡಿಸಿ, ಅಧಿಕಾರಿಗಳಿಗೆ ನೀಡುತ್ತಿರುವುದು ಇದೇ ಕೊನೆಯ ಅವಕಾಶ ಎಂಬ ಎಚ್ಚರಿಕೆ ಸಂದೇಶ ನೀಡಿದರು.
ಅಂತಿಮವಾಗಿ ಇಪಿಎಫ್ಒ ಅಧಿಕಾರಿಗಳು ಪ್ರತಿಭಟನಾ ಸ್ಥಳಕ್ಕಾಗಮಿಸಿ ಮನವಿ ಪತ್ರವನ್ನು ಸ್ವೀಕರಿಸಿ, ಈ ದಿನವೇ ನಿಮ್ಮ ಮನವಿ ಪತ್ರವನ್ನು ಕೇಂದ್ರ ಕಾರ್ಮಿಕ ಹಾಗೂ ಉದ್ಯೋಗ ಖಾತೆಯ ಸಚಿವ ಮುನ್ಸೂಖ್ ಮಾಂಡವೀಯ ಹಾಗೂ ಶೋಭಾ ಕರಂದ್ಲಾಜೆ ಅವರಿಗೆ ಫ್ಯಾಕ್ಸ್ ಸಂದೇಶದ ಮೂಲಕ ಕಳುಹಿಸಿ ಕೊಡುವುದಾಗಿ ತಿಳಿಸಿದರು.
ಸಂಘದ ಪದಾಧಿಕಾರಿಗಳಾದ ರಮೇಶ್ , ನಾಗರಾಜು, ರುಕ್ಮಿಶ್ ಹಾಗೂ ಕೃಷ್ಣಮೂರ್ತಿ, ಕೆಎಸ್ಆರ್ಟಿಸಿ ಕ್ಷೇಮಾಭಿವೃದ್ಧಿ ಟ್ರಸ್ಟ್, ಚಿಕ್ಕಬಳ್ಳಾಪುರದ ಪದಾಧಿಕಾರಿಗಳು ಹಾಗೂ ಸದಸ್ಯರು ಭಾಗವಹಿಸಿದ್ದರು.