
ಬೆಂಗಳೂರು: ಸ್ಯಾಂಡಲ್ವುಡ್ ನಟಿ ರನ್ಯಾ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದ ಹಿಂದೆ ರಾಜ್ಯದ ಕೆಲ ಸಚಿವರು ಇರುವ ಮಾಹಿತಿ ಇದ್ದು, ಅಂಥ ಸಚಿವರ ಹೆಸರನ್ನು ಬಹಿರಂಗಪಡಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಸಿಎಂಗೆ ಆಗ್ರಹಿಸಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಬಂಧಿತರಾದ ರನ್ಯಾ ರಾವ್ ಹಿಂದೆ ಅನೇಕ ಘಟಾನುಘಟಿಗಳಿದ್ದಾರೆ ಎಂಬ ಅಂಶ ಹೊರಕ್ಕೆ ಬರುತ್ತಿದೆ. ಇದೇನೂ ಸಣ್ಣ ಘಟನೆಯಲ್ಲ.
ಕೆಲವು ತಿಂಗಳುಗಳಲ್ಲಿ 30ಕ್ಕೂ ಹೆಚ್ಚು ಬಾರಿ ಆಕೆ ದುಬೈಗೆ ಹಾಗೂ ಬೇರೆ ಬೇರೆ ದೇಶಗಳಿಗೆ ಹೋಗಿ ಬಂದ ಮಾಹಿತಿ ಹೊರಬಿದ್ದಿದೆ. ಆಕೆ ಪ್ರತಿ ಬಾರಿಯೂ ಬೆಂಗಳೂರಿಗೆ ಮರಳಿದಾಗ ಸಂಪೂರ್ಣವಾದ ಪ್ರೋಟೋಕಾಲ್ ವ್ಯವಸ್ಥೆ ನೀಡುತ್ತಿದ್ದರು ಎಂದು ಆರೋಪಿಸಿದರು.
ಇನ್ನು ರನ್ಯಾ ರಾವ್ ಒಬ್ಬ ಹಿರಿಯ ಐಪಿಎಸ್ ಅಧಿಕಾರಿಯ ಮಗಳು. ಏರ್ಪೋರ್ಟ್ಗೆ ವಾಪಸ್ ಬಂದಾಗ ವಿಮಾನ ನಿಲ್ದಾಣದಿಂದ ಪೊಲೀಸರೇ ಎಸ್ಕಾರ್ಟ್ ನೀಡಿ ಕರೆದೊಯ್ಯುತ್ತಿದ್ದರು. ಆಕೆ ಸಾಮಾನ್ಯ ಮಹಿಳೆ ಅಲ್ಲ ಎಂಬುದು ಇದರಿಂದ ಗೊತ್ತಾಗುತ್ತದೆ ಎಂದರು.
ಕೆಂಪೇಗೌಡ ಏರ್ಪೋರ್ಟ್ನಲ್ಲಿ ಪ್ರೋಟೋಕಾಲ್ ಸಿಗುತ್ತದೆ. ಸೆಕ್ಯುರಿಟಿ ತಪಾಸಣೆ ಆಗುವುದಿಲ್ಲ ಎಂದಾದರೆ, ಇದರ ಹಿಂದೆ ಕೆಲವು ಘಟಾನುಘಟಿಗಳಿದ್ದಾರೆ. ಅಲ್ಲದೇ ಕೆಲವು ಸಚಿವರಿದ್ದಾರೆ ಎಂಬುದು ಕೂಡ ಹೊರಕ್ಕೆ ಬರುತ್ತಿದೆ. ಈಗಾಗಲೇ ಸಿಬಿಐ, ಇ.ಡಿ. ತನಿಖೆ ನಡೆಯುತ್ತಿದೆ. ಈ ಗಂಭೀರ ಪ್ರಕರಣದ ಹಿಂದಿರುವವರ ಮಾಹಿತಿ ಮುಖ್ಯಮಂತ್ರಿಗಳಿಗೆ ಇದ್ದೇ ಇರುತ್ತದೆ ಎಂದರು.
ಸ್ಮಗ್ಲಿಂಗ್ ಹಿಂದೆ ಇರುವ ಹವಾಲಾ ನಿರತರು, ಚಿನ್ನ ಕಳ್ಳಸಾಗಾಟದ ಮಾಫಿಯಾಗಳು, ಬೆಂಬಲ ಕೊಟ್ಟ ರಾಜಕಾರಣಿಗಳು, ಮಂತ್ರಿಗಳು, ಮಾಜಿ ಮಂತ್ರಿಗಳು, ಶಾಸಕರು, ಮಾಜಿ ಶಾಸಕರು ಯಾರೆಂಬುದನ್ನು ಸಿಎಂ ಅವರು ಬಹಿರಂಗಪಡಿಸಲಿ ಎಂದು ಒತ್ತಾಯಿಸಿದರು.
ಒಬ್ಬ ಹಿರಿಯ ಐಪಿಎಸ್ ಪೊಲೀಸ್ ಅಧಿಕಾರಿ ಮಗಳ ನೇತೃತ್ವದಲ್ಲಿ ಇಷ್ಟು ದೊಡ್ಡ ಚಿನ್ನ ಕಳ್ಳಸಾಗಾಟ ನಡೆದಿರುವುದನ್ನು ನಾವೆಂದೂ ಕೇಳಿರಲಿಲ್ಲ. ಇದು ಗಂಭೀರ ಸ್ವರೂಪ ಪಡೆದುಕೊಂಡಿದೆ. ಇಲ್ಲಿ ಶಕ್ತಿಶಾಲಿ ಮುಖ್ಯಮಂತ್ರಿ ಇದ್ದು, ಅವರಿಗೆ ಪ್ರಕರಣದ ಮಾಹಿತಿ ಇರುತ್ತದೆ. ಅವರು ಅದನ್ನು ಬಹಿರಂಗಪಡಿಸಲಿ. ಇದು ಗಾಳಿಯಲ್ಲಿ ಗುಂಡು ಹೊಡೆಯುವ ಕೆಲಸವೂ ಅಲ್ಲ ಎಂದು ಸ್ಪಷ್ಟಪಡಿಸಿದರು.