
ನಿರ್ವಾಹಕ ಮಹದೇವ ಹುಕ್ಕೇರಿ.
ಬೆಳಗಾವಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಬಸ್ ಕಂಡೆಕ್ಟರ್ ಮೇಲೆ ಹಲ್ಲೆ ನಡೆದ ಘಟನೆ ಬೆನ್ನಲ್ಲೇ ಕರ್ನಾಟಕ-ಮಹಾರಾಷ್ಟ್ರ ಗಡಿ ಭಾಗದಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದ್ದು, ಎರಡೂ ರಾಜ್ಯಗಳ ನಡುವಿನ ಬಸ್ ಸಂಚಾರ ಸ್ಥಗಿತಗೊಂಡಿದೆ.
ಇದರಿಂದ ರಾಜ್ಯ-ರಾಜ್ಯಗಳ ನಡುಗೆ ಪ್ರಯಾಣ ಮಾಡಬೇಕಿದ್ದ ಜನರು ಪರದಾಡುವಂತಾಗಿದೆ. ಇನ್ನು ಇದೇ ರೀತಿ ಮುಂದುವರಿದರೆ ಇನ್ನಷ್ಟು ಸಮಸ್ಯೆಗಳು ಬಿಗಡಾಯಿಸಲಿವೆ ಎಂದು ಕನ್ನಡಪರ ಸಂಘಟನೆಗಳು ಎಚ್ಚರಿಸಿವೆ.
ನಿರ್ವಾಹಕ ಮಹದೇವ ಹುಕ್ಕೇರಿ ಅವರ ಮೇಲೆ ಪುಂಡರು ಹಲ್ಲೆ ಮಾಡಿ ಪೋಕ್ಸೋ ಪ್ರಕರಣ ದಾಖಲಿಸಿರುವುದನ್ನು ಖಂಡಿಸಿ ಬೆಳಗಾವಿ ಭಾಗದಲ್ಲಿ ಕರವೇ, ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸಿವೆ. ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಶಿವಸೇನೆ ಪ್ರತಿಭಟನೆ ತೀವ್ರಗೊಳಿಸಿದೆ. ಈ ಹಿನ್ನೆಲೆಯಲ್ಲಿ ಬಸ್ ಸಂಚಾರ ಸ್ಥಗಿತಗೊಂಡಿದೆ. ಕೊಲ್ಲಾಪುರಕ್ಕೆ ತೆರಳುವ ಎಲ್ಲ ಕರ್ನಾಟಎ ಸರ್ಕಾರಿ ಬಸ್ಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ.
ನಿಪ್ಪಾಣಿ, ಚಿಕ್ಕೋಡಿ, ಬೆಳಗಾವಿ ಮಾರ್ಗವಾಗಿ ತೆರಳುವ ಬಸ್ಗಳ ಸಂಚಾರ ರದ್ದುಗೊಂಡಿದೆ. ಈ ಮಾರ್ಗವಾಗಿ ಪ್ರತಿದಿನ 100ಕ್ಕೂ ಹೆಚ್ಚು ಬಸ್ಗಳು ಸಂಚರಿಸುತ್ತಿದ್ದವು. ಮಹಾರಾಷ್ಟ್ರದಿಂದಲೂ ಯಾವುದೇ ಬಸ್ಗಳು ಕರ್ನಾಟಕದ ಕಡೆ ಬರುತ್ತಿಲ್ಲ. ಬಸ್ ಸಂಚಾರವನ್ನು ಮಹಾ ಸರ್ಕಾರ ಬಂದ್ ಮಾಡಿದೆ.
ನಾಳೆ ಸಾರಿಗೆ ನೌಕರರ ಕೂಟದಿಂದ ಬೃಹತ್ ಜಾಥಾ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಾಲ್ಕೂ ನಿಗಮಗಳ ಸಾರಿಗೆ ನೌಕರರ ಕೂಟ ನಿರ್ವಾಹಕ ಮಹದೇವ ಹುಕ್ಕೇರಿ ಅವರ ಮೇಲೆ ಪುಂಡರು ಹಲ್ಲೆ ಮಾಡಿ ಪೋಕ್ಸೋ ಪ್ರಕರಣ ದಾಖಲಿಸಿರುವುದನ್ನು ಖಂಡಿಸಿ ಇದೇ ಫರ.25ರಂದು ಬೆಳಗಾವಿಯಲ್ಲಿ ಬೃಹತ್ ಜಾಥಾ ಹಮ್ಮಿಕೊಂಡಿದ್ದೇವೆ ಎಂದು ಕೂಡದ ಅಧ್ಯಕ್ಷ ಚಂದ್ರಶೇಖರ್ ತಿಳಿಸಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು ಬೆಳಗಾವಿಯ ಸಾರಿಗೆ ಸಂಸ್ಥೆಯ ನಿರ್ವಾಹಕ ಮಹದೇವ ಹುಕ್ಕೇರಿ ಅವರ ಮೇಲೆ ಮರಾಠಿ ಭಾಷೆಯಲ್ಲಿ ಮಾತನಾಡಲಿಲ್ಲ ಎಂದು ಹಲ್ಲೆ ಮಾಡಿದ್ದು ಅಲ್ಲದೆ ಪೋಕ್ಸೋ ಕಾಯ್ದೆ ಅಡಿಯಲ್ಲಿ ದೂರು ನೀಡಿರುವುದನ್ನು ಖಂಡಿಸುತ್ತೇವೆ ಎಂದು ಹೇಳಿದ್ದಾರೆ.
ಇನ್ನು ಸಮಸ್ತ ಸಾರಿಗೆ ನೌಕರರ ಜತೆಗೂಡಿ ಫೆ.25ರ ಮಂಗಳವಾರ ಬೆಳಗೆ ಹತ್ತು ಗಂಟೆಗೆ ಬೆಳಗಾವಿಯ ಕೇಂದ್ರ ಬಸ್ ನಿಲ್ದಾಣದಿಂದ ಬೃಹತ್ ಜಾಥಾ ಹೊರಟು ಬೆಳಗಾವಿಯ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.
ಕೂಡ ಹಮ್ಮಿಕೊಂಡಿರುವ ಈ ಜಾಥಾದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನೌಕರರು ಭಾಗವಹಿಸಬೇಕು ಎಂದು ಮನವಿ ಮಾಡಿದ್ದಾರೆ.