
ನ್ಯೂಡೆಲ್ಲಿ: ಲಾರಿ ಬಸ್ ನಡುವೆ 16 ವರ್ಷಗಳ ಹಿಂದೆ ಸಂಭವಿಸಿದ ಅಪಘಾತದಲ್ಲಿ ಐವರು ಮೃತಪಟ್ಟ ಪ್ರಕರಣದಲ್ಲಿ ಒಂದು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಮಂಗಳೂರು ವಿಭಾಗ ಕುಂದಪುರ ಘಟಕ ವೋಲ್ವೋ ಬಸ್ ಚಾಲಕರೊಬ್ಬರಿಗೆ ಇಂದು ಸುಪ್ರೀಂಕೋರ್ಟ್ ರಿಲೀಫ್ ನೀಡಿದೆ.
2009 ಮೇ 18 ರಂದು ಉಪ್ಪಿನಂಗಡಿ ಬಳಿ ಮಂಗಳೂರು- ಬೆಂಗಳೂರು ಹೆದ್ದಾರಿಯಲ್ಲಿ ಸಂಭವಿಸಿದ ಲಾರಿ ಮತ್ತು KSRTC ಬಸ್ ಮುಖಾಮುಖಿ ಅಪಘಾತದಲ್ಲಿ ಲಾರಿಯಲ್ಲಿದ್ದ ಐವರು ಮೃತಪಟ್ಟಿದ್ದರು. ಈ ಸಂಬಂಧ ಕುಂದಪುರ ಘಟಕ ವೋಲ್ವೋ ಬಸ್ ಚಾಲಕ ತೋಟಯ್ಯ ಅವರಿಗೆ ಪುತ್ತೂರು JMFC ನ್ಯಾಯಾಲಯ ಐಪಿಸಿ ಸಕ್ಷನ್ 304A ಅಡಿ ಒಂದು ವರ್ಷ ಜೈಲುಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು.
ಪುತ್ತೂರು JMFC ನ್ಯಾಯಾಲಯ ನೀಡಿದ ತೀರ್ಪನ್ನು ಪ್ರಶ್ನಿಸಿ ಚಾಲಕ ತೋಟಯ್ಯ ಜಿಲ್ಲಾ ನ್ಯಾಯಲಯದ ಮೆಟ್ಟಿಲ್ಲೇರಿದ್ದರು. ಪ್ರಕರಣವನ್ನು ಕೈಗೆತ್ತಿಕೊಂಡ ಜಿಲ್ಲಾ ಹೆಚ್ಚುವರಿ ನ್ಯಾಯಾಲ JMFC ನ್ಯಾಯಾಲಯ ನೀಡಿದ ತೀರ್ಪನ್ನೇ ಎತ್ತಿಹಿಡಿದಿತ್ತು. ಇದರಿಂದ ನಿರಾಸೆಗೊಂಡ ಚಾಲಕ ಮತ್ತೆ ಹೈಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿದರು.
ಇನ್ನು ಹೈಕೋರ್ಟ್ಕೂಡ ಪುತ್ತೂರು JMFC ನ್ಯಾಯಾಲಯ ಮತ್ತು ಜಿಲ್ಲಾ ಹೆಚ್ಚುವರಿ ನ್ಯಾಯಾಲಯಗಳ ಆದೇಶವನ್ನೇ ಎತ್ತಿಹಿಡಿದು ಒಂದು ವರ್ಷ ಜೈಲುಶಿಕ್ಷೆ ವಿಧಿಸಿರುವುದು ಸರಿಯಾಗಿದೆ ಎಂದು ಹೇಳಿತು.
ಈ ಮೂರು ನ್ಯಾಯಾಲಯಗಳ ತೀರ್ಪಿನಿಂದ ದಾರಿಕಾಣದಂತಾದ ಚಾಲಕ ತೋಟಯ್ಯ ಬಳಿಕ ಸುಪ್ರೀಂಕೋರ್ಟ್ ಮತ್ತು ಹೈ ಕೋರ್ಟ್ ವಕೀಲ ಎಚ್.ಬಿ.ಶಿವರಾಜು ಅವರನ್ನು ಸಂಪರ್ಕಿಸಿದಾಗ ಅವರು ಕೂಡಲೇ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಲು ತಿಳಿಸಿದರು. ಹೀಗಾಗಿ ವಕೀಲ ಶಿವರಾಜು ಅವರ ಮೂಲಕವೇ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿದರು.
ಈ ಮೇಲ್ಮನವಿ ಸಲ್ಲಿಸುವ ಕಾರ್ಯ ಕೇವಲ ಒಂದು ವಾರದಲ್ಲೇ ನಡೆಯಿತು. ಸುಪ್ರೀಂಕೋರ್ಟ್ ತೋಟಯ್ಯ ಸಲ್ಲಿಸಿದ ಮೇಲ್ಮನವಿಯನ್ನು ಪುರಸ್ಕರಿಸಿ ಪ್ರಕರಣವನ್ನು ಕೈಗೆತ್ತಿಕೊಂಡಿತು. ಅದರಂತೆ ಇಂದು (ಫೆ.28) ಮಧ್ಯಾಹ್ನ 12.30ರ ಸುಮಾರಿಗೆ ಪ್ರಕರಣದ ವಾದ ಪ್ರತಿವಾದ ಆಲಿಸಿದ ಸುಪ್ರೀಂ ಕೋರ್ಟ್ ಏಕಸದಸ್ಯ ಪೀಠದ ನ್ಯಾಯಮೂರ್ತಿ ಆರ್.ಮಹದೇವನ್ ಅವರಿದ್ದ ಪೀಠ ಕೆಳಹಂತ ನ್ಯಾಯಾಲಯಗಳು ನೀಡಿದ ತೀರ್ಪಿಗೆ ತಡೆಯಾಜ್ಞೆ ನೀಡಿ ಆದೇಶ ಮಾಡಿದೆ.
ಸುಪ್ರೀಂ ಕೋರ್ಟ್ನ ಈ ಆದೇಶದಿಂದ ಇಂದು ಸಂಜೆಯೊಳಗೆ ಜೈಲು ಸೇರಬೇಕಿದ್ದ ಚಾಲಕ ತೋಟಯ್ಯ ನಿರಾಳರಾಗಿದ್ದು ನೆಮ್ಮದಿಯ ಉಸಿರು ಬಿಟ್ಟಿದ್ದಾರೆ. ಇನ್ನು ಮುಂದಿನ ಆದೇಶದವರೆ ಚಾಲಕ ಯಾವುದೇ ತೊಂದರೆ ಇಲ್ಲದೆ ಸದ್ಯ ಡ್ಯೂಟಿಯಲ್ಲಿ ಮುಂದುವರಿಯುವಂತಾಗಿದೆ.
ಇನ್ನು ವಕೀಲ ಶಿವರಾಜು ಅವರು ತೋಟಯ್ಯ ಪರ ವಕಾಲತು ವಹಿಸದಿದ್ದಿದ್ದರೆ ಇಂದು ಜೈಲಿಗೆ ಹೋಗಬೇಕಿತ್ತು. ಜತೆಗೆ ಕೆಲಸವನ್ನು ಕಳೆದುಕೊಳ್ಳಬೇಕಿತ್ತು. ಆದರೆ, ಅಂತ ಯಾವುದೆ ಸಂದರ್ಭ ಬರದಂತೆ ವಕೀಲರು ನೋಡಿಕೊಂಡಿರುವುದು ಇಂಥ ಪ್ರಕರಣಗಲ್ಲಿ ಸಿಲುಕಿರುವ ನೂರಾರು ಚಾಲಕರಿಗೆ ಈ ಪ್ರಕರಣ ಭರವಸೆಯ ಬೆಳಕಿನಂತಾಗಿದೆ.