ನ್ಯೂಡೆಲ್ಲಿ: ಕಾಂಗ್ರೆಸ್ ಅಧಿನಾಯಕಿ ಸೋನಿಯಾಗಾಂಧಿ ಅವರು ಸಿಮ್ಲಾದಲ್ಲಿದ್ದು, ಇಂದು ಮಧ್ಯಾಹ್ನ ದೆಹಲಿಗೆ ಆಗಮಿಸಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಈಗ ಬಂದ ಮಾಹಿತಿ ಪ್ರಕಾರ ಅವರು ಮೇ 20ವರೆಗೂ ಸಿಮ್ಲಾದಲ್ಲೇ ಇರಲಿದ್ದಾರೆ ಎಂದು ತಿಳಿದು ಬಂದಿದೆ.
ಹೀಗಾಗಿ ಅವರೊಂದಿಗೆ ಮಾತನಾಡಬೇಕು ಎಂದು ದೆಹಲಿಯಲ್ಲಿ ಬೀಡುಬಿಟ್ಟಿರುವ ರಾಜ್ಯದ ಕೈ ನಾಯಕರ ಭೇಟಿ ಮಾಡುವ ಸಾಧ್ಯತೆ ತೀರ ಕಡಿಮೆ ಇದೆ. ಹೀಗಾಗಿ ದೆಹಲಿಯಲ್ಲಿ ಬೀಡುಬಿಟ್ಟವರಿಗೆ ಬಿಗ್‌ಶಾಕ್ ನೀಡಿದ್ದಾರೆ ಸೋನಿಯಾಗಾಂಧಿ ಎಂದೇ ಹೇಳಲಾಗುತ್ತಿದೆ.
ಈ ನಡುವೆ ಅವರು ಇಂದು ದೆಹಲಿಗೆ ಆಗಮಿಸದಿದ್ದರೆ ಸಿಎಂ ಸ್ಥಾನದ ಆಕಾಂಕ್ಷಿಗಳ ಮುಂದಿನ ನಡೆಯೇನು ಎಂಬ ಲೆಕ್ಕಾಚಾರವು ನಡೆಯುತ್ತಿದೆ. ಆದರೆ, ಸೋನಿಯಾಗಾಂಧಿ ಕಾಂಗ್ರೆಸ್ ಅಧಿನಾಯಕಿಯಾಗಿದ್ದಾರೆ, ಅವರು ಪಕ್ಷದಲ್ಲಿ ಯಾವುದೇ ಹುದ್ದೆ ಹೊಂದಿಲ್ಲ.
ಹೀಗಾಗಿ ಸಿಎಂ ಯಾರಾಗಬೇಕು ಎಂಬುದರ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ತೀರ್ಮಾನ ತೆಗೆದುಕೊಂಡು ಇವರೆ ಕರ್ನಾಟಕದ ಸಿಎಂ ಎಂದು ಘೋಷಣೆ ಮಾಡಬಹುದು. ಆ ಅಧಿಕಾರ ಖರ್ಗೆ ಅವರಿಗೆ ಇದೆ.
ಇನ್ನು ಈ ಎಲ್ಲವನ್ನು ಗಮನಿಸಿದರೆ ಸೋನಿಯಾಗಾಂಧಿ ಅವರು ಖರ್ಗೆ ಅವರಿಗೆ ಇಂಥವರನ್ನೇ ಸಿಎಂ ಎಂದು ನೀವು ಘೋಷಣೆ ಮಾಡಿ ಎಂದು ಹೇಳುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಹೀಗಾಗಿ ಇಂದು ಸಂಜೆ ವೇಳೆಗೆ ಎಲ್ಲವನ್ನು ಅಳೆದು ತೂಗಿ ಸಿಎಂ ಅಭ್ಯರ್ಥಿ ಯಾರು ಎಂದು ಘೋಷಣೆ ಮಾಡುವ ಸಾಧ್ಯತೆ ಹೆಚ್ಚಿದೆ.