Please assign a menu to the primary menu location under menu

NEWSಲೇಖನಗಳು

ಪ್ರಪಂಚದ ಕಣ್ಣು ತೆರೆಸಿದ ಕೊರೊನಾ

ಕರೋನಾ ವೈರಸ್ ಪರಿಣಾಮ ಕುರಿತು ಬಿಜೆಪಿ ಯುವ ನಾಯಕ ಬಿ.ವೈ. ವಿಜಯೇಂದ್ರ  ಅವರ  ಬರಹ.

ವಿಜಯಪಥ ಸಮಗ್ರ ಸುದ್ದಿ

ಕೊರೊನಾ ವೈರಾಣುವಿನ ದಾಳಿ ಜಗತ್ತಿನ ದಿಕ್ಕನೇ ಬದಲಿಸಿ ಮಾನವರ ಪಾಲಿಗೆ ಯಮಸ್ವರೂಪಿ ಎನಿಸಿಬಿಟ್ಟಿದೆ. ಜಗತ್ತಿನ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ನಮ್ಮ ಭಾರತದ 130 ಕೋಟಿ ಜನರ ಜೀವ ರಕ್ಷಿಸಲು ಗತ್ಯಂತರವಿಲ್ಲದೇ ಕಠಿಣ ನಿರ್ಧಾರದ ‘ಲಾಕ್‌ಡೌನ್’ ಘೋಷಿಸಿದ ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಠಿತ್ವದ ಕ್ರಮಗಳಿಗೆ ವಿಶ್ವದೆಲ್ಲೆಡೆ ಭರಪೂರ  ಪ್ರಶಂಸೆ ವ್ಯಕ್ತವಾಗುತ್ತಿದೆ.

ಆರಂಭಿಕ ಹಂತದಲ್ಲಿ ಎರಡು, ಮೂರನೇ ಸ್ಥಾನದಲ್ಲಿದ್ದ ಕರ್ನಾಟಕ, ಮುಖ್ಯಮಂತ್ರಿ  ಯಡಿಯೂರಪ್ಪನವರ ನೇತೃತ್ವದ ಸರ್ಕಾರದ ಮಾನವೀಯ ಕಳಕಳಿ ಹಾಗೂ ಬಿಗಿ ನಿಲುವಿನಿಂದಾಗಿ ಕೊರೊನಾ ಪೀಡಿತರ ಸಂಖ್ಯೆ ಏರುವಿಕೆಗೆ ತಡೆಹಾಕುವಲ್ಲಿ ಯಶಸ್ವಿಯಾಗಿ, ಇದೀಗ ಹನ್ನೆರಡು, ಹದಿಮೂರನೇ ಸ್ಥಾನಕ್ಕೆ ಇಳಿಯಲ್ಪಟ್ಟಿದೆ. ಮುಂದಿನ ದಿನಗಳಲ್ಲಿ ಕೊರೊನಾ ವೈರಾಣುವಿನ ಅವಾಂತರ ವಿಸ್ತರಿಸದಂತೆ ನಿಗ್ರಹಿಸಬಲ್ಲೆವು ಎಂಬ ಆತ್ಮವಿಶ್ವಾಸ  ನಮ್ಮ ಆಡಳಿತ ವ್ಯವಸ್ಥೆಗೆ ಮೂಡತೊಡಗಿದೆ.

ಇದು ಏನೇ ಇರಲಿ ಅನಿರೀಕ್ಷಿತವಾಗಿ ಎರಗಿ ಬಂದ ಕೊರೊನಾ ನಮ್ಮ ಜನರನ್ನು ಹಾಗೂ ವ್ಯವಸ್ಥೆಯನ್ನು ಆತಂಕ ಹಾಗೂ ಅತಂತ್ರಗೊಳಿಸಿರುವುದರಲ್ಲಿ ಎರಡು ಮಾತಿಲ್ಲ. ಆದರೆ ಇದೇ ಸಂದರ್ಭದಲ್ಲಿ ಆಗಿರಬಹುದಾದ ಸಕರಾತ್ಮಕ ಬದಲಾವಣೆಗಳನ್ನೂ ನಾವು ಒಮ್ಮೆ ಗಮನಿಸಬೇಕಾಗಿದೆ.

ಕಳೆದ ಮೂರು ದಶಕಗಳಿಂದ ನಮ್ಮ ಭಾರತದ ಬೆಳವಣಿಗೆ ಅನಿರೀಕ್ಷಿತ ತಿರುವುಗಳನ್ನು ಪಡೆದುಕೊಂಡು, ಓಡುತ್ತಿರುವ ವೇಗದ ಜಗತ್ತಿನೊಂದಿಗೆ ಪೈಪೋಟಿ ನಡೆಸಬೇಕಾದ ಅನಿವಾರ‍್ಯತೆಗೆ ಸಿಲುಕಿ ಎಲ್ಲೋ ಒಂದು ಕಡೆ ನಮ್ಮನ್ನು ನಾವು ಕಳೆದುಕೊಂಡು ಬಿಟ್ಟಿದ್ದೆವೆಂಬ ಸತ್ಯ ಈ ’ಲಾಕ್‌ಡೌನ್’ ಅರಿವು ಮಾಡಿಸಿಕೊಡುತ್ತಿದೆ.

ಭಾರತವೆಂದರೆ ‘ಕೂಡು ಕುಟುಂಬದ ವ್ಯವಸ್ಥೆ’ – ಈ ಕಾರಣಕ್ಕಾಗಿಯೇ ವಿಶ್ವದಲ್ಲೇ ಅತ್ಯಂತ ಭವ್ಯ ಪರಂಪರೆಯ ಹಾಗೂ ಮನುಷ್ಯತ್ವವನ್ನು ಅಪ್ಪಿಕೊಂಡ ಸಂಸ್ಕಾರ ತುಂಬಿದ ಸಂಸ್ಕೃತಿಯ ನೆಲವೀಡು ನಮ್ಮದೆನಿಸಿಕೊಂಡಿದೆ, ಆದರೆ ಕ್ರಮೇಣ ನಮ್ಮ ಸಂಸ್ಕೃತಿ-ಆಚಾರ-ವಿಚಾರಗಳನ್ನೇ ಮೂಲೆಗುಂಪಾಗಿಸುವ ರೀತಿಯಲ್ಲಿ ಆಧುನಿಕತೆಯ ಅಬ್ಬರದ ಅಲೆಗಳು ಭಾರತೀಯತೆಯನ್ನು ಬದಿಗೊತ್ತರಿಸಿ ಆರ್ಭಟಿಸುತ್ತಿವೆ. ಕೇವಲ ಐಷಾರಾಮಿ ಜೀವನ ನಡೆಸುವುದೇ ಒಂದು ಮಹಾನ್ ಸಾಧನೆ ಎಂಬ ಭ್ರಮೆಯಲ್ಲಿ ನಮ್ಮ ಅವಿಭಕ್ತ ಕುಟುಂಬಗಳು ಒಡೆದು, ಬಾಂಧವ್ಯದ ಬೆಸುಗೆಗಳ ನನಡುವೆ ಕಂದಕಗಳು ನಿರ್ಮಾಣವಾಗಿವೆ.

ಕುಟುಂಬವೆಂದರೆ ಅದುವೇ ನಮ್ಮ ಮೊದಲ ಪಾಠಶಾಲೆಯಾಗಿರುತ್ತಿತ್ತು. ಅಪ್ಪ, ಅಮ್ಮ, ಚಿಕ್ಕಪ್ಪ, ದೊಡ್ಡಪ್ಪ, ಚಿಕ್ಕಮ್ಮ, ದೊಡ್ಡಮ್ಮ, ಅಣ್ಣ, ಅತ್ತಿಗೆ, ಮೈದುನ, ಅಕ್ಕ, ನಾದಿನಿ, ಅಜ್ಜ-ಅಜ್ಜಿ, ಮುತ್ತಜ್ಜಿ, ಮುತ್ತಜ್ಜ ಹೀಗೆ ಸಂಬಂಧಗಳ ಬೇರು ಬಲವಾಗಿ ಬೇರೂರಿ ಸಂಸಾರದ ವೃಕ್ಷಗಳು, ಮನುಷ್ಯ ಸಂಬಂಧದ ಸಮಾಜ ನಿರ್ಮಾಣಕ್ಕೆ ಕಾರಣವಾಗಿದ್ದವು. ಈ ಹಿನ್ನಲೆಯಲ್ಲಿಯೇ ’ಭಾರತದ ಕುಟುಂಬ ಪರಂಪರೆ’ ಜಗತ್ತಿಗೆ-ಮಾದರಿ ಎನಿಸಿದೆ. ಈ ಕಾರಣದಿಂದಾಗಿಯೇ ’ಕುಟುಂಬ ಸುಖದಿಂದ ವಂಚಿತನಾದ’ ಯಾವುದೇ ವ್ಯಕ್ತಿಯಲ್ಲೂ ಮಾನವೀಯಗುಣ ಮೈದಳೆಯುವುದು ಅಷ್ಟು ಸುಲಭವಲ್ಲ ಎಂಬ ಮಾತು ಕೇಳುತ್ತಿರುತ್ತೇವೆ.

ಕೊರೊನಾ ವೈರಾಣು ಸೃಷ್ಟಿಸಿದ ಆತಂಕ, ’ಲಾಕ್‌ಡೌನ್’ ನಿಂದಾಗಿರುವ ಕಷ್ಟ-ನಷ್ಟ ಏನೇ ಇದ್ದರೂ ಬೆಲೆಕಟ್ಟಲಾರದ ಒಂದಷ್ಟು ಲಾಭಗಳೂ ನಮಗಾಗಿರುವುದನ್ನು ಯಾರೂ ನಿರಾಕರಿಸಲಾಗದು. ವಿದ್ಯಾಭ್ಯಾಸ, ಉದ್ಯೋಗ, ವ್ಯಾಪಾರ, ರಾಜಕಾರಣ ಹಾಗೂ ಇನ್ನಿತರ ಕಾರಣಗಳಿಗಾಗಿ ನಮ್ಮನ್ನು ನಾವು ಕಳೆದುಕೊಂಡು ಬಿಟ್ಟಿದ್ದೆವು. ಕುಟುಂಬವನ್ನಂತೂ ಮರೆತೇಬಿಟ್ಟಿದ್ದೆವು, ದೂರದೂರಿನಲ್ಲಿದ್ದರೆ ಆಗೊಮ್ಮೆ, ಈಗೊಮ್ಮೆ, ಊರಲ್ಲೇ ಇದ್ದರೆ ದಿನಕೊಮ್ಮೆ ಗೂಡು ಸೇರುವ ಹಕ್ಕಿಯಂತೆ ಬಂದು ಮನೆ ಸೇರುತ್ತಿದ್ದ ನಾವು ಪಕ್ಕದಲ್ಲೇ ಅಡ್ಡಾಡುತ್ತಿದ್ದ ನಮ್ಮ ಸಂಬಂಧದ ಜೀವಗಳನ್ನು ಲೆಕ್ಕಿಸಿದೇ ಸೆಲ್‌ಫೋನ್, ಲ್ಯಾಪ್‌ಟಾಪ್‌ಗಳನ್ನು ಮುಷ್ಟಿಯಲ್ಲಿಡಿದುಕೊಂಡು ಅದರಲ್ಲಿ ಮುಳುಗಿ, ಕೊನೆಗೆ ನಮ್ಮನ್ನು ನಾವೇ ಮರೆತು ಬಿಡುತ್ತಿದ್ದೆವು. ಒಟ್ಟಾರೆ ಯಾಂತ್ರಿಕ ಜೀವಿಗಳಾಗಿ ಹೋಗಿದ್ದ, ಗಳಿಸುವುದೊಂದೇ ಜೀವಮಾನದ ಸಾಧನೆ ಎಂದುಕೊಂಡು ಆನ್‌ಲೈನ್ ಜಾಲದಲ್ಲಿ ಮಾಯವಾಗಿ ಹೋಗಿದ್ದ ನಮ್ಮನ್ನು ಕೊರೊನಾ ವೈರಾಣು, ಕಳೆದ ಹತ್ತಿರತ್ತಿರ ಒಂದು ತಿಂಗಳಿನಿಂದ ಎತ್ತಲೂ ಸುಳಿಯದಂತೆ ನಮ್ಮ ಸಂಸಾರದ ಗೂಡಲ್ಲಿ ಬಂದು ಸೇರುವಂತೆ ’ಲಾಕ್‌ಡೌನ್’ ಮಾಡಿಸಿ ’ನಮ್ಮ ಸಂಸಾರ ಆನಂದ ಸಾಗರ…’ ಎಂಬ ಹಳೆಯ ಚಿತ್ರದ ಹಾಡನ್ನು ಮೆಲುಕು ಹಾಕುವಂತೆ ಮಾಡಿ ’ಕೂಡಿ ಬಾಳಿದರೆ ಸ್ವರ್ಗಸುಖ’ ಎಂಬ ಅನುಭವವನ್ನು ನೀಡುತ್ತಿದೆ.

ನಾವು ಆಚರಿಸಲ್ಪಡುವ ಹಬ್ಬ-ಹರಿದಿನಗಳು ಕೇವಲ ಭಗವಂತನನ್ನು ಆರಾಧಿಸುವ ಒಂದೇ ಉದ್ದೇಶದಿಂದ ಕೂಡಿದುದಲ್ಲ. ದೂರದ ಬಂಧುಗಳು ಒಂದೆಡೆ ಸೇರಿ ಬಂಧುತ್ವದ ಮಹತ್ವ ಹಾಗೂ ಸಂತೋಷದ ಕ್ಷಣಗಳನ್ನು ಅನುಭವಿಸಲೀ ಎಂಬ ಕಾರಣಕ್ಕೂ ನಮ್ಮಲ್ಲಿನ ಹಬ್ಬಗಳು, ಊರಬ್ಬಗಳು, ಅದರಲ್ಲೂ ನಮ್ಮ ಹಿರಿಯರನ್ನು ನೆನೆಯುವ ಪಿತೃಪಕ್ಷಗಳ ಆಚರಣೆ ಜಾರಿಯಲ್ಲಿದೆ. ಆದರೆ ಇಂದಿನ ದಿನಗಳಲ್ಲಿ ಅವೆಲ್ಲವೂ ಕೇವಲ ಸಾಂಕೇತಿಕ ಹಾಗೂ ಯಾಂತ್ರಿಕತೆಯ ಆಚರಣೆಗಳಾಗಿ ಉಳಿದು ಹೋಗಿವೆ. ಹೋಗಲಿ ಎಂದರೆ ಮದುವೆ ಹಾಗೂ ಇತರ ಶುಭಕಾರ್ಯಗಳಲ್ಲೂ ಧಾವಂತದಲ್ಲೇ ಬಂದು ಧಾವಂತದಲ್ಲೇ ಹಿಂದಿರುಗಿಬಿಡುವ ಮನಃಸ್ಥಿತಿಯನ್ನು ಕಾಣುತ್ತಿದ್ದೇವೆ. ಒಟ್ಟಾರೆ ನಮ್ಮ ಸಂಬಂಧದ ಮಹತ್ವವನ್ನು ಅರಿಯುವ ಗೋಜಿಗೇ  ನಾವು ಹೋಗುತ್ತಿಲ್ಲ. ಅಪ್ಪಿತಪ್ಪಿ ಸ್ವಲ್ಪ ಬಿಡುವಿನ ವೇಳೆ ಸಿಕ್ಕರೆ ಅದನ್ನು ಸೋಷಿಯಲ್ ಮೀಡಿಯಾ ಸಂಪರ್ಕಗಳು ನುಂಗಿಬಿಡುತ್ತವೆ. ವಾರಕ್ಕೊಮ್ಮೆ ಸಿಗುವ ರಜಾ ಎಂಬ ದಿನವನ್ನಾದರೂ ಕುಟುಂಬದೊಂದಿಗೆ ಕಳೆಯುವುದಕ್ಕೆ ಮನಸ್ಸು ಕರೆದೊಯ್ಯುವುದಿಲ್ಲ ಬದಲಾಗಿ ವೀಕೆಂಡ್ ಪಾರ್ಟಿಗಳತ್ತ ಎಳೆದೊಯ್ದು ದೇಹ ಮತ್ತು ಮನಸ್ಸು ಇನ್ನಷ್ಟು ಕುಸಿಯುವಂತೆ ಮಾಡುವ ಅರ್ಥಹೀನ ಸಂಸ್ಕೃತಿಗೆ ದಾಸರನ್ನಾಗಿಸಿಬಿಡುತ್ತದೆ.

ಅಜ್ಜನೊಂದಿಗೆ ಹೆಜ್ಜೆ ಹಾಕುತ್ತಾ ಅಜ್ಜಿಯೊಂದಿಗೆ ಗೆಜ್ಜೆ ಕಟ್ಟಿ ಕುಣಿಯುತ್ತಿದ್ದ ದಿನಗಳು ಮರೆಯಾಗಿ ಹೋಗಿವೆ, ಕತೆ ಕೇಳುವ, ಕತೆ ಹೇಳುವ ಸಂದರ್ಭಗಳನ್ನು ಕಂಪ್ಯೂಟರ್ ಗೇಮ್‌ಗಳು ಸ್ವಾಹ ಮಾಡಿಕುಳಿತಿವೆ. ಚಿಕ್ಕಪ್ಪನೊಂದಿಗೆ ಒಡನಾಟ, ದೊಡ್ಡಪ್ಪನೊಂದಿಗಿನ ಮುದ್ದಾಟ, ಚಿಕ್ಕಮ್ಮ, ದೊಡ್ಡಮ್ಮ, ಅತ್ತಿಗೆ, ಅಕ್ಕನೊಂದಿಗಿನ ಬಾಂಧವ್ಯ, ಅಣ್ಣ, ತಮ್ಮ, ತಂಗಿಯರೊಂದಿಗಿನ ಆಟೋಟ, ತುಂಟಾಟದ ಜಗಳಗಳೆಲ್ಲವೂ ಸದ್ಯ ಕಳೆದುಹೋದ ನೆನಪುಗಳಾಗಿ ಉಳಿದಿವೆ. ನೈಜ ಮನುಷ್ಯ ಸಂಬಂಧದ ಭವ್ಯ ಸೌಧವೆನಿಸಿದ ‘ಕೂಡು ಕುಟುಂಬದ ವ್ಯವಸ್ಥೆ’ ದುರ್ಬೀನು ಹಾಕಿಹುಡುಕಬೇಕಾದ ಪರಿಸ್ಥಿತಿಯಲ್ಲಿರುವಾಗಲೇ ಇವೆಲ್ಲವನ್ನು ಮತ್ತೆ ನೆನಪಿಸುವ, ನೆನಪಿಸಿಕೊಂಡು ಅನುಭವಿಸುವ ಸಂದರ್ಭ ಲಾಕ್‌ಡೌನ್ ಸೃಷ್ಟಿಸಿದೆ. ಕೊರೊನಾ ವೈರಾಣುವಿನ ವಿರುದ್ಧ ಮನುಕುಲದ ಯುದ್ಧ ಗೆಲ್ಲಲೇಬೇಕು, ಆದರೆ ಆ ಗೆಲುವಿನಲ್ಲಿ ನಮಗಾದ ತೊಂದರೆ ನಷ್ಟಗಳಿಗೆ ಅದನ್ನು ಶಪಿಸಲೂಬೇಕು. ಅದರ ಜತೆಗೇ ಕಳೆದುಹೋಗಿದ್ದ ನಮ್ಮನ್ನು ಹುಡುಕಿಕೊಟ್ಟ ಕೊರೊನಾಗೆ ಕೃತಜ್ಞತೆಯನ್ನೂ ಹೇಳಲೇಬೇಕಲ್ಲವೆ!

ಮನುಷ್ಯನಿಂದ ನಿತ್ಯ ಉಪಟಳ, ದೌರ್ಜನ್ಯ, ಜೀವಭಯ ಅನುಭವಿಸುತ್ತಿದ್ದ ಜೀವ ಸಂಕುಲಗಳು, ಪ್ರಾಣಿ-ಪಕ್ಷಿಗಳು ಆಹಾರದ ಕೊರತೆ ಎದುರಿಸುತ್ತಿದ್ದರೂ ಸ್ವತಂತ್ರದ ಸುಖ ಅನುಭವಿಸುತ್ತಿವೆ. ಮನುಷ್ಯನನ್ನು ಗೃಹ ಬಂಧನಕ್ಕೊಳಪಡಿಸಿದ ಕೊರೊನಾ ಇವುಗಳ ಪಾಲಿಗೆ ವರದಾನವಾಗಿ ಪರಿಣಮಿಸಿದೆ. ಮಲಿನ ರಹಿತ ಶುದ್ಧ ನೀರಿನಲ್ಲಿ ಜಲಚರಗಳು, ಪರಿಶುದ್ಧ ಗಾಳಿಯಲ್ಲಿ ಪಕ್ಷಿಗಳು, ನಿರ್ಭಯದ ಪರಿಸರದಲ್ಲಿ ಪ್ರಾಣಿಗಳು ಸ್ವಚ್ಛಂದವಾಗಿ ಈಜಾಡುತ್ತಾ, ಹಾರಾಡುತ್ತಾ ಸಂಚರಿಸುತ್ತಿವೆ, ಹಕ್ಕಿಗಳ ಚಿಲಿಪಿಲಿಯ ಕಲರವ ಎಲ್ಲೆಲ್ಲೂ ಮಾರ್ದನಿಸುತ್ತಿದೆ.

ಅನೇಕ ಮಹಾನಗರಗಳ ವಾಯುಮಾಲಿನ್ಯ ದಿಢೀರ್ ಇಳಿಕೆಯಾಗುತ್ತಿದೆ. ಸಮುದ್ರ ತೀರಗಳು ಪರಿಶುಭ್ರವಾಗಿವೆ. ಮಾಲಿನ್ಯದ ಪರದೆಯಲ್ಲಿ ಕಾಣದಾಗಿದ್ದ ಪರ್ವತಗಳು ಇದೀಗ ಸುಂದರ ದೃಶ್ಯದೊಂದಿಗೆ ದರುಶನ ನೀಡುತ್ತಿವೆ.

ವನ್ಯಜೀವಿಗಳು ಪಟ್ಟಣದೊಳಗೇ ಬಂದು ನಿರ್ಭಯವಾಗಿ ಅಡ್ಡಾಡುತ್ತಿವೆ. ಎಲ್ಲೆಲ್ಲೂ ಹೊಸಗಾಳಿ ಬೀಸುತ್ತಿವೆ. ನಮ್ಮ ಬೆಂಗಳೂರಂತೂ ಇಡೀ ನಗರವೇ ಬಣ್ಣ, ಬಣ್ಣದ ಹೂದೋಟದಂತೆ ಮಾರ್ಪಟ್ಟು ಪಶ್ಚಿಮ ದೇಶಗಳ ಸುಂದರ ನಗರಗಳನ್ನೂ ನಾಚಿಸುವಂತಿದೆ. ‪ಕಾರ್ಖಾನೆಗಳು ಉಗುಳುವ ವಿಷಕಾರಿ ರಸಾಯಿನಿಕಗಳನ್ನು ತನ್ನೊಡಲಲ್ಲಿ ತುಂಬಿಕೊಂಡು ಮಲಿನಗೊಂಡ ಕೊಚ್ಚೆ ಮೋರಿಯಾಗಿ ಮಾರ್ಪಟ್ಟಿದ್ದ – ಒಂದು ಕಾಲದಲ್ಲಿ ಬೆಂಗಳೂರಿಗೆ ಜೀವನಾಡಿಯಾಗಿದ್ದ ‘ವೃಷಾಭವತಿ ನದಿ’ – ಇದೀಗ ಪರಿಶುದ್ದಗೊಂಡು ಮತ್ತೆ ಜೀವಕಳೆಯಿಂದ ಹರಿಯುತ್ತಿರುವುದನ್ನು ಕಾಣುವುದಕ್ಕೆ ಪುಳಕವೆನಿಸುತ್ತದೆ.

ಅಚಾನಕ್ ಆಗಿ ಬಂದೆರಗಿರುವ ಕೊರೊನಾ ಸೃಷ್ಟಿಸಿರುವ ಕಠೋರ ಪರಿಸ್ಥಿತಿ ಇಂದಲ್ಲ ನಾಳೆ ಕೊನೆಯಾಗಲೇಬೇಕು.

ಆಧುನಿಕ ಜೀವನ ಶೈಲಿಯ ನಾಗಲೋಟದ ಓಟಕ್ಕೆ ಬ್ರೇಕ್ ಬಿದ್ದ ಕಾರಣ ಕೆಲವರು ಖಿನ್ನತೆ, ಮಾನಸಿಕ ಒತ್ತಡಕ್ಕೆ ಸಿಲುಕೊಂಡಿರಲೂಬಹುದು. ಹಾಗೆಂದು ನಾವ್ಯಾರೂ ಕೈಕಟ್ಟಿ ಕೂರಲಾಗದು. ಆಗಿರುವ ಅನಾಹುತ, ನಷ್ಟದ ಪ್ರಮಾಣವನ್ನು ಸರಿದೂಗಿಸಲು ಭಾರತವಷ್ಟೇ ಅಲ್ಲ ಜಗತ್ತಿನ ಅನೇಕ ಪ್ರಬಲ ರಾಷ್ಟ್ರಗಳು ಮುಂದಿನ ದಿನಗಳಲ್ಲಿ ಸೆಣಸಾಡಲೇಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ನಮ್ಮ ರಾಜ್ಯವೂ ಹೊರತಲ್ಲ.

‘ಸರ್ಕಾರ-ಜನತೆ’ ಜೊತೆಯಾಗಿ ಹೆಜ್ಜೆ ಹಾಕಿ ಕಷ್ಟ-ಸಂಕಷ್ಟಗಳನ್ನು ಸಮತೋಲನದಿಂದ ಹೊತ್ತುಕೊಂಡು ಮುನ್ನೆಡದರೆ, ನಮಗಿರುವ ಪ್ರಾಕೃತಿಕ ಮಾನವ ಸಂಪನ್ಮೂಲವನ್ನು ಯೋಜಿತವಾಗಿ ಬದ್ಧತೆಯಿಂದ ಉಪಯೋಗಿಸಿಕೊಂಡು ರಾಷ್ಟ್ರದ ಮೇಲಿರುವ ಶ್ರದ್ಧೆ, ನಿಷ್ಠೆಯನ್ನು ನಿರೂಪಿಸುವ ನಿಟ್ಟಿನಲ್ಲಿ ಸವಾಲಾಗಿ ಸ್ವೀಕರಿಸಿದರೆ, ಭವಿಷ್ಯತ್ತಿನಲ್ಲಿ ಭಾರತ ವಿಶ್ವದಲ್ಲಿ ನಂ.1 ಸ್ಥಾನದಲ್ಲಿ ನಿಲ್ಲುವುದರಲ್ಲಿ ಯಾವುದೇ ಸಂಶಯವಿಲ್ಲ ಅಂತೆಯೇ ದೇಶದಲ್ಲಿ ನಮ್ಮ ಕರ್ನಾಟಕ ನಂ.1 ರಾಜ್ಯವಾಗಿ ತಲೆಎತ್ತಿ ನಿಲ್ಲುವುದರಲ್ಲಿ ಅನುಮಾನವಿಲ್ಲ,

ಇದಕ್ಕಾಗಿ ನಾವೆಲ್ಲರೂ ಪ್ರತಿಜ್ಞೆ ಮಾಡೋಣ. ಈ ನಿಟ್ಟಿನಲ್ಲಿ ಜಾಗತಿಕ ಮಟ್ಟದ ಧೀಮಂತನಾಯಕನಾಗಿ ರೂಪುಗೊಂಡಿರುವ ಪ್ರಧಾನಿ ನರೇಂದ್ರ ಮೋದಿಯವರ ಅಣತಿಯನ್ನು ನಾವೆಲ್ಲ ಪಾಲಿಸೋಣ. ರಾಜ್ಯದಲ್ಲಿ ವಿರಮಿಸದ ’ಶ್ರಮದ ಸಂಕೇತ’ದ ನಾಯಕನೆಂದೇ ಬಣ್ಣಿಸಲ್ಪಡುವ ಮುಖ್ಯಮಂತ್ರಿ ಶ್ರೀ ಯಡಿಯೂರಪ್ಪನವರ ಆಡಳಿತದ ಸುಧಾರಣಾ ಹಾಗೂ ಮುನ್ನೆಚ್ಚರಿಕೆ ಕ್ರಮಗಳನ್ನು ಬೆಂಬಲಿಸೋಣ.

’ಕೊರೊನಾ’ ಪ್ರಾಣಪೀಡಕನಾಗಿ ಬಂದು ಅವಾಂತರ, ಆತಂತಕವನ್ನಷ್ಟೇ ಸೃಷ್ಠಿಸಿಲ್ಲ. ಜಗತ್ತು ಕಳೆದುಕೊಂಡಿದ್ದ ಮನುಷ್ಯತ್ವದ ಪಾಠವನ್ನು ಕಲಿಸುತ್ತಿದೆ. ಸಂಬಂಧದ ಬೇರುಗಳಿಗೆ ನೀರೆರೆದು ಕೌಟುಂಬಿಕ ವೃಕ್ಷಗಳನ್ನು ಗಟ್ಟಿಗೊಳ್ಳಿಸಿಕೊಳ್ಳುವುದರ ಹಿಂದಿರುವ ಮಹತ್ವವನ್ನು ತಿಳಿಸಿಕೊಡುತ್ತಿದೆ. ಅಷ್ಟೇ ಅಲ್ಲದೇ ಆರೋಗ್ಯವಂತ ಮಾನವ ಸಮಾಜದ ನಿಜ ಸಂಗಾತಿಗಳಾದ ಪ್ರಾಣಿ-ಪಕ್ಷಿ ಸಂಕುಲಗಳನ್ನು ಸಂರಕ್ಷಿಸುವಲ್ಲಿ ಅಣ್ಣ ಬಸವಣ್ಣನವರು ನುಡಿದ ’ದಯವಿಲ್ಲದ ಧರ್ಮ ಯಾವುದಯ್ಯ? ದಯವೇ ಬೇಕು ಸಕಲ ಪ್ರಾಣಿಗಳಲ್ಲಿ, ದಯವೇ ಧರ್ಮದ ಮೂಲವಯ್ಯ….’ ವಚನಸಾರದ ಅನುಭವವನ್ನು ಕೊರೊನಾ ಉಣಬಡಿಸುತ್ತಿದೆ. ಪ್ರಕೃತಿಮಾತೆಯ ಒಡಲು ನಮ್ಮನ್ನೆತ್ತ ತಾಯಿಯ ಮಡಿಲಷ್ಟೇ ಪವಿತ್ರವಾದದ್ದು ಎಂಬುದರ ಬಹತ್ವ ತಿಳಿಸಿಕೊಟ್ಟಿದೆ. ಈ ಸಂದರ್ಭದಲ್ಲಿ ಕವಿಯೊಬ್ಬರ ಕವಿತೆಯ ಸಾಲುಗಳು ಇಲ್ಲಿ ಪ್ರಸುತ್ತವೆನಿಸುತ್ತಿದೆ.

’ಪ್ರಕೃತಿ ಮಾತೆ ಸಹಿಸುತಿಹಳು
ಎಲ್ಲ ಕಷ್ಟಕೋಟಲೆ..
ನಮ್ಮ ಬಾಳು ನರಕ ಸದೃಶ
ಅವಳು ಸಿಡಿದಳೆಂದರೆ..

ಉಸಿರು ಕೊಡುವ ಹಸಿರಿಗೆ
ಕೊಡಲಿ ಏಟು ಕೊಡುವರು..
ಜೀವಜಲಕೆ ವಿಷವ ಬೆರೆಸಿ
ಸಾಧನೆಯೆಂದು ಮೆರೆವರು..

ವಿನಾಶದ ಅಂಚಲ್ಲಿದೆ
ಪ್ರಾಣಿ-ಪಕ್ಷಿ ಸಂಕುಲ..
ಆಕ್ರೋಶದಿ ಕೂಗುತಿವೆ
ನಮದೂ ಅಲ್ಲವೇ ಈ ನೆಲ..

ಸಹನಾಮೂರ್ತಿ, ಕ್ಷಮಯಾಧರಿತ್ರಿ
ಈ ವಸುಂಧರೆ…
ವಿಷವನ್ನುಂಡು ಅಮೃತವನೇ
ನೀಡುತಿಹಳು ಸುಮ್ಮನೆ..

ಸಮೀಪಿಸುತಿದೆ ಕೇಡುಗಾಲ
ಮನುಜಕುಲಕೂ ಖಂಡಿತ..
ಇದನರಿತು ಸಂರಕ್ಷಿಸಿದರೆ ಪ್ರಕೃತಿಯ
ಸುಖದ ಕಾಲ ನಿಶ್ಚಿತ..’

ಮನುಷ್ಯಜೀವಿ ಎಲ್ಲವನ್ನೂ ಸಹಿಸಿಕೊಳ್ಳುವ ಹಾಗೂ ಎಂಥಾ ಪರಿಸ್ಥಿತಿಗೂ ಹೊಂದಿಕೊಳ್ಳುವ ಮನೋಬಲವನ್ನು ಸೃಷ್ಟಿಕರ್ತ ನಮಗೆ ಕೊಟ್ಟಿರುವ ಬಳುವಳಿ. ಹಾಗಾಗಿಯೇ ಈ ಹಿಂದಿನಿಂದಲೂ ಸವಾಲಾಗಿ ಕಾಡಿದ್ದ ಅನೇಕ ಯುದ್ಧಗಳನ್ನು, ರೋಗಗಳನ್ನು ಪ್ರಾಕೃತಿಕ ವಿಕೋಪಗಳನ್ನು ಸಹಿಸಿ, ಜಯಿಸಿ ಮಾನವ ಉಳಿದುಕೊಂಡು ಬಂದಿದ್ದಾನೆ. ಹಾಗೆಯೇ ಮಹಾಮಾರಿ ಎಂದೇ ಕರೆಸಿಕೊಳ್ಳುತ್ತಿರುವ ಕೊರೊನಾ ವೈರಾಣುವಿನ ಹೆಡೆಮುರಿ ಕಟ್ಟಿ ಅದರ ಉಪಟಳಕ್ಕೆ ಕೊನೆಯಾಡುವ ಶಕ್ತಿ ಮಾನವನಿಗಿದ್ದೇ ಇದೆ.

ಈ ನಿಟ್ಟಿನಲ್ಲಿ ವೈದ್ಯಕೀಯ ಕ್ಷೇತ್ರಕ್ಕೆ ನಮ್ಮ ಸಹಕಾರ, ನೈತಿಕ ಬೆಂಬಲ ಅತ್ಯಾವಶ್ಯಕವಾಗಿದೆ. ಮಾರಕ ವೈರಾಣು ಕೊರೊನಾ ವೈದ್ಯರನ್ನೂ ಆಪೋಷನ ಮಾಡಲು ಹಿಂದೇಟು ಹಾಕುತಿಲ್ಲ, ಅಂತಹುದರಲ್ಲೂ ವೃತ್ತಿ ಧರ್ಮದ ಶ್ರೇಷ್ಠತೆಯನ್ನು ಸಾರುತ್ತಿರುವ, ಜೀವ ಕಾಯುವ ಸೈನಿಕರಂತೆ ಕೊರೊನಾ ಹಿಮ್ಮೆಟ್ಟಿಸುವ ಕಾರ್ಯದಲ್ಲಿ ವೈದ್ಯರು ಹಾಗೂ ಸಿಬ್ಬಂದಿ ವರ್ಗ ನಿರತರಾಗಿದ್ದಾರೆ. ’ವೈದ್ಯೋ ನಾರಾಯಣ ಹರಿ’ ಎಂಬ ಮಾತನ್ನು ಅಕ್ಷರಶಃ ನಿರೂಪಿಸಿ ತೋರಿಸುತ್ತಿದ್ದಾರೆ. ಅವರ ಹಾಗೂ ಅವರ ಕುಟುಂಬದೊಂದಿಗೆ ನಾವು ನಿಲ್ಲೋಣ.

ಸಮೃದ್ಧ ಕರ್ನಾಟಕದ ನಿರ್ಮಾಣವನ್ನು, ಬಲಿಷ್ಠ ಭಾರತದ ಕನಸನ್ನು, ವಿಶ್ವ ಭಾತೃತ್ವ ಬೆಸೆಯುವ ಸಾಂಸ್ಕೃತಿಕ ಮನಸ್ಸಿನ ಸಮಾಜವನ್ನು ಕಟ್ಟುವ ಸಂಕಲ್ಪ ಮಾಡೋಣ.

Leave a Reply

error: Content is protected !!
LATEST
KSRTC: ಡಿ.31ರಿಂದ ಕರೆ ಕೊಟ್ಟಿರುವ ಮುಷ್ಕರ ಬೆಂಬಲಿಸದ ನೌಕರರು- ವಿಲವಿಲ ಒದ್ದಾಡುತ್ತಿರುವ ಜಂಟಿ ಸಮಿತಿ ಮುಖಂಡರು ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಡಿ.27ರಂದು BMTC & KSRTC ನಿವೃತ್ತ ನೌಕರರ ಪ್ರತಿಭಟನೆ ಮೈಸೂರು: ದೆಹಲಿ ರೈತ ಹೋರಾಟ ಬೆಂಬಲಿಸಿ ಮೇಣದ ಬತ್ತಿ ಬೆಳಗಿಸಿ ಪ್ರತಿಭಟನೆ KSRTC: ಯಾರದೋ ಆರ್ಥಿಕ ಲಾಭಕ್ಕಾಗಿ 4 ವರ್ಷಕ್ಕೊಮ್ಮೆ ನಡೆಯೋ ಈ ಚೌಕಾಸಿ ಪದ್ಧತಿ ಬಿಟ್ಟು ಶಾಶ್ವತ ಪರಿಹಾರಕ್ಕೆ ಬದ್ಧರಾಗೋ... KSRTC: ರಸ್ತೆಗಿಳಿದ 20 ಹೊಸ ಅಂಬಾರಿ ಉತ್ಸವ ಸ್ಲೀಪರ್​​ ಬಸ್​ಗಳು- ಸಚಿವರಿಂದ ಲೋಕಾರ್ಪಣೆ KSRTCಗೆ ₹6543 ಕೋಟಿ ಅನುದಾನ ಬಿಡುಗಡೆ ಮಾಡಿರುವ ನಮಗೆ ₹414 ಕೋಟಿ ಬಿಡುಗಡೆ ಮಾಡುವುದು ಕಷ್ಟವೇ: ರಾಮಲಿಂಗಾರೆಡ್ಡಿ ಗಾಯಾಳು ಅಯ್ಯಪ್ಪ ಮಾಲಾಧಾರಿಗಳ ಆರೋಗ್ಯ ವಿಚಾರಿಸಿದ ಸಚಿವ ಪರಮೇಶ್ವರ್‌ KSRTC ಅಧಿಕಾರಿಗಳಿಲ್ಲದ ಡಿ.31ರ ಸಾರಿಗೆ ಮುಷ್ಕರ ನೌಕರರ ಹರಕೆ ಕುರಿ ಮಾಡುವ ಹೋರಾಟವೇ..!? BBMP- ₹2 ಕೋಟಿ ವೆಚ್ಚದಲ್ಲಿ ರಾಜಕಾಲುವೆ ಅಭಿವೃದ್ಧಿ : ಆಯುಕ್ತ ತುಷಾರ್ ಗಿರಿನಾಥ್ ಡಿ.31 ರಂದು ಇಳಕಲ್‌ನಲ್ಲಿ ಇಪಿಎಸ್ 95 ಪಿಂಚಣಿದಾರರ ಬೃಹತ್‌ ಸಮಾವೇಶ