ಬೆಂಗಳೂರು: ಸಿಲಿಕಾನ್ ಸಿಟಿ IT ಉದ್ಯೋಗಿಗಳಿಗೆ ಇನ್ಮುಂದೆ 14 ಗಂಟೆ ಕೆಲಸ ಕಾಯಂ ಆಗುತ್ತಾ? ಇಂತಹದೊಂದು ಪ್ರಸ್ತಾವನೆಯೊಂದು ಬೆಂಗಳೂರಿನ 20 ಲಕ್ಷಕ್ಕೂ ಅಧಿಕ IT ಉದ್ಯೋಗಿಗಳು ಕಂಗಾಲಾಗುವಂತೆ ಮಾಡಿದೆ. ಈ ಬಗ್ಗೆ ಪ್ರತಿಭಟನೆ ನಡೆಸಿರುವ ನೌಕರರು ಕಾರ್ಮಿಕ ಇಲಾಖೆ, ಐಟಿ ಕಂಪನಿಗಳ ವಿರುದ್ಧ ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ಇದರಿಂದ ತುಂಬ ಬೇಸರಗೊಂಡಿರುವ ನೌಕರರು ದೊಡ್ಡ ಮಟ್ಟದಲ್ಲಿ ಹೋರಾಟಕ್ಕೂ ನೌಕರರ ಸಂಘಟನೆ ತಯಾರಿ ನಡೆಸಿದೆ ಎಂದು ಗುಡುಗಿದ್ದಾರೆ.
ಇತ್ತ ಐಟಿ ಉದ್ಯೋಗಿಗಳ 14 ಗಂಟೆ ಕೆಲಸದ ಹೊಸ ರೂಲ್ಸ್ ಜಾರಿಯಾದ್ರೆ ಹಲವರು ಕೆಲಸ ಕಳೆದುಕೊಳ್ಳುವ ಭೀತಿ ಎದುರಾಗಿದೆ. 14 ಗಂಟೆ ಕೆಲಸ ಮಾಡಿದ್ರೆ ಮೂರು ಶಿಫ್ಟ್ನಲ್ಲಿ ಮಾಡುವ ಕೆಲಸ ಎರಡೇ ಶಿಫ್ಟ್ನಲ್ಲಿ ಆಗುತ್ತೆ. ಎರಡೇ ಶಿಫ್ಟ್ಗಳಿಗೆ ಇಡೀ ದಿನವೇ ಮುಗಿದು ಮತ್ತೊಂದು ದಿನ 4 ಗಂಟೆಗಳು ಕೆಲಸ ಮಾಡಬೇಕಾಗುತ್ತದೆ. ಇದರಿಂದ ಕೆಲವರು ಕೆಲಸ ಕಳೆದುಕೊಳ್ಳುವರೆಂಬ ಆತಂಕ ಕೂಡ ಎದುರಾಗಿದೆ.
IT ಎಂಪ್ಲಾಯಿಸ್ ಯೂನಿಯನ್ನಿಂದ ಈ ಬಗ್ಗೆ ಸಭೆ ಕೂಡ ಮಾಡಲಾಗಿದೆ. ಕಳೆದ ಬುಧವಾರ ಈ ಬಗ್ಗೆ ಸಭೆ ನಡೆಸಿ ನಂತರ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರನ್ನು ಭೇಟಿ ಮಾಡಲಾಗಿದೆ. 14 ಗಂಟೆ ಕೆಲಸದ ಅವಧಿ ವಿಸ್ತರಿಸಿದ್ರೆ 4 ದಿನ ಮಾತ್ರ ಕೆಲಸ ಮಾಡಬೇಕಾಗುತ್ತದೆ. 5 ದಿನದ ಬದಲಿಗೆ 4 ದಿನ ಕೆಲಸಕ್ಕೆ ಹಾಜರಾಗಲು ನಿರ್ಧಾರ ಮಾಡಬೇಕಾಗುತ್ತದೆ ಎಂದು ಸಚಿವ ಸಂತೋಷ್ ಲಾಡ್ಗೆ ಮನವಿ ಮಾಡಲು ಚಿಂತನೆ ನಡೆದಿದೆ.
ರಾಜ್ಯ ಸರ್ಕಾರದ ನಿಲುವೇನು? IT ನೌಕರರ ಕೆಲಸದ ಸಮಯ 14 ಗಂಟೆಗೆ ವಿಸ್ತರಣೆ ಮಾಡುವ ವಿಚಾರಕ್ಕೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು ಇದು ಐಟಿ ಇಂಡಸ್ಟ್ರಿ ಕಡೆಯಿಂದ ಬಂದಿರುವ ಡಿಮ್ಯಾಂಡ್ ಆಗಿದೆ. ಈ ಬಗ್ಗೆ IT ಎಂಪ್ಲಾಯಿಸ್ ಜೊತೆ ಅಭಿಪ್ರಾಯ ಸಂಗ್ರಹ ಮಾಡುತ್ತೇವೆ. ಕೆಲವರು ಪರ ಇದ್ದಾರೆ, ಒಂದಿಷ್ಟು ಜನ ವಿರೋಧ ಮಾಡ್ತಿದ್ದಾರೆ. ಸದ್ಯಕ್ಕೆ ಇನ್ನೂ ಪ್ರಸ್ತಾವನೆಯ ಹಂತದಲ್ಲಿದ್ದು, ಈ ಬಗ್ಗೆ ಸರ್ಕಾರ ಅಂತಿಮ ತೀರ್ಮಾನ ಮಾಡುತ್ತೆ ಎಂದು ಸ್ಪಷ್ಟಪಡಿಸಿದ್ದಾರೆ.
14 ಗಂಟೆ ಕೆಲಸ ಮಾಡಿದ್ರೆ ಏನಾಗುತ್ತೆ?: ಬೆಂಗಳೂರಿನ IT ಉದ್ಯೋಗಿಗಳು ಸದ್ಯ 9 ಗಂಟೆ ಕೆಲಸ ಅನ್ನೋದು ಬಾಯಿ ಮಾತಿನಲ್ಲಿದ್ರೂ 10-12 ಗಂಟೆಗಳ ಕಾಲ ಕೆಲಸ ಮಾಡೋದು ಅಲಿಖಿತ ನಿಯಮವಾಗಿದೆ. ಇದರಿಂದ ಬೆನ್ನುನೋವು, ಮಾನಸಿಕ ಒತ್ತಡ ಸೇರಿದಂತೆ ಬಹಳಷ್ಟು ಸಮಸ್ಯೆ ಎದುರಾಗುತ್ತಿದೆ.
ಇನ್ನು ದಿನಕ್ಕೆ 14 ಗಂಟೆ ಕೆಲಸ ಮಾಡೋ ನಿಯಮ ಜಾರಿಯಾದ್ರೆ IT ಉದ್ಯೋಗಿಗಳ ಆರೋಗ್ಯದ ಮೇಲೆ ಇನ್ನಷ್ಟು ದುಷ್ಪರಿಣಾಮಗಳಾಗಲಿದೆ. ಇದೇ ಕಾರಣಕ್ಕೆ ನೌಕರರ ಸಂಘ 14 ಗಂಟೆ ಕೆಲಸದ ನಿಯಮವನ್ನು ವಿರೋಧಿಸುತ್ತಿದೆ.
ಇತ್ತ ಕೆಲಸದ ಅವಧಿ 14 ಗಂಟೆಗೆ ವಿಸ್ತರಿಸಿದ್ರೆ ಐಟಿ ಕಂಪನಿಗಳಿಗೂ ತೊಂದರೆ ಆಗುವ ಸಾಧ್ಯತೆ ಇದೆ. ಕೆಲಸದ ಅವಧಿ ವಿಸ್ತರಿಸಿದ್ರೆ ಬೆಂಗಳೂರಿನಲ್ಲಿರುವ ನೌಕರರು ಬೇರೆ ರಾಜ್ಯಕ್ಕೆ ಹೋಗಬಹುದು. ಅಲ್ಲಿನ ಸಂಸ್ಥೆಗಳಲ್ಲಿ 9 ಗಂಟೆ ಕೆಲಸ ಮಾತ್ರ ಇದ್ದಲ್ಲಿ ಅದೇ ಆಯ್ಕೆ ಆಗುತ್ತೆ.
ಒಂದೇ ಸಂಸ್ಥೆಯ ಬೇರೆ ಊರಿನ ಬ್ರ್ಯಾಂಚ್ಗೂ ಬೇಡಿಕೆ ಇಡುತ್ತಾರೆ. ಅಲ್ಲಿನ ಕೆಲಸದ ಅವಧಿ ಕಡಿಮೆ ಇರೋದ್ರಿಂದ ಅಲ್ಲಿಗೆ ಡಿಮ್ಯಾಂಡ್ ಹೆಚ್ಚಾಗುತ್ತದೆ. ಹೊಸ ನೌಕರರೂ ಬೆಂಗಳೂರಿಗೆ ಬರಲು ಹಿಂದೇಟು ಹಾಕುವ ಸಾಧ್ಯತೆ ಇದೆ. ಇದರಿಂದ ಬೆಂಗಳೂರಿನ ಐಟಿ ಕಂಪನಿಗಳ ಆರ್ಥಿಕತೆಗೆ ಹೊಡೆತ ಬೀಳುವ ಸಾಧ್ಯತೆ ಹೆಚ್ಚಾಗಿದೆ.