Please assign a menu to the primary menu location under menu

NEWSಕೃಷಿ

ರೈತರಿಂದ ಖರೀದಿಸಿ ದುಪ್ಪಟ್ಟು ಬೆಲೆಗೆ  ಮಾರಾಟ ಮಾಡಿದಲ್ಲಿ ಕಠಿಣ ಕ್ರಮ

ಅಂತರಸನಹಳ್ಳಿ ಕೃಷಿ ಉತ್ಪನ್ನ ಮಾರುಕಟ್ಟೆಗೆ ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಎಚ್ಚರಿಕೆ

ವಿಜಯಪಥ ಸಮಗ್ರ ಸುದ್ದಿ

ತುಮಕೂರು: ಕೊರೊನಾ ಸೋಂಕು ಹರಡದಂತೆ ಜಾರಿಯಲ್ಲಿರುವ ಲಾಕ್ಡೌನ್ ಸಂದರ್ಭದಲ್ಲಿ ರೈತರಿಂದ  ಖರೀದಿಸಿದ ಹಣ್ಣು, ತರಕಾರಿಗಳನ್ನು ದುಪ್ಪಟ್ಟು ಬೆಲೆಗೆ ಮಾರಾಟ ಮಾಡುವ ವರ್ತಕರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದೆಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಎಚ್ಚರಿಕೆ ನೀಡಿದರು.

ನಗರದ ಅಂತರಸನಹಳ್ಳಿ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರೈತರು ಬೆಳೆದಂತಹ ತರಕಾರಿ, ಹಣ್ಣುಗಳನ್ನು ನೇರವಾಗಿ ಮಾರಾಟ ಮಾಡಲು  ಎಪಿಎಂಸಿ.ಗೆ ತರುವ ಸಮಯದಲ್ಲಿ ಚೆಕ್ಪೋಸ್ಟ್ಗಳಲ್ಲಿ ಹಾಗು  ಪೊಲೀಸರಿಂದ ಅಡಚಣೆ ಉಂಟಾಗಬಾರದೆಂದು   ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಂಬಂಧಿಸಿದವರಿಗೆ ಈಗಾಗಲೇ ಸೂಚನೆ ನೀಡಿದ್ದಾರೆ.  ಈ ನಿಟ್ಟಿನಲ್ಲಿ ರಾಜ್ಯದ ಎಲ್ಲ ಎಪಿಎಂಸಿಗಳಿಗೆ ಭೇಟಿ ನೀಡಿ ಪರಿಶೀಲಿಸಲಾಗುತ್ತಿದೆ ಎಂದು ತಿಳಿಸಿದರು.

ಸರ್ಕಾರದ ಕಟ್ಟುನಿಟ್ಟಿನ ಆದೇಶವಿದ್ದರೂ ಸಹ ರಾಜ್ಯದ ಕೆಲವು ಕಡೆ ಚೆಕ್ಪೋಸ್ಟ್ಗಳಲ್ಲಿ ರೈತರು ಸಮಸ್ಯೆಗಳನ್ನು ಎದುರಿಸುತ್ತಿರುವ ಬಗ್ಗೆ ದೂರುಗಳು ಬರುತ್ತಿವೆ.  ರೈತರು ಯಾವುದೇ ಬೆಳೆ ಬೆಳೆಯಲಿ, ಮಾರಕಟ್ಟೆಗೆ ತಂದು ಮಾರಾಟ ಮಾಡಲು ಯಾವುದೇ ರೀತಿ ಸಮಸ್ಯೆಯಾಗಬಾರದು.  ರೈತರಿಂದ ಖರೀದಿಸಿ ಹಣ್ಣು, ತರಕಾರಿಯನ್ನು ವರ್ತಕರು   ತಮಗಿಷ್ಟ ಬಂದ ದರದಲ್ಲಿ ಮಾರಾಟ ಮಾಡುತ್ತಿದ್ದು, ಇದಕ್ಕೆ ಕಡಿವಾಣ ಹಾಕಲು ಕೃಷಿ ಉತ್ಪನ್ನ ಮಾರುಕಟ್ಟೆ ಅಧಿಕಾರಿಗಳಿಗೆ ನಿರ್ದೇಶಿಸಲಾಗಿದೆ ಎಂದು ತಿಳಿಸಿದರು.

ಮುಂಜಾಗ್ರತಾ ಕ್ರಮವಾಗಿ ಕೃಷಿ ಉತ್ಪನ್ನ ಮಾರುಕಟ್ಟೆಗೆ ಮಾರಾಟ ಮಾಡಲು ಬರುವ ಪ್ರತಿಯೊಬ್ಬ ರೈತರಿಗೂ ಕಡ್ಡಾಯವಾಗಿ ಮಾಸ್ಕ್ ವಿತರಣೆ, ಸೋಂಕು ನಿವಾರಕ ದ್ರಾವಣ ಸಿಂಪಡಣೆ ಮಾಡಬೇಕು.  ಎಪಿಎಂಸಿಗಳಲ್ಲಿ ಸಾಮಾಜಿಕ ಅಂತರ ಕಾಪಾಡಲು ಸಮಸ್ಯೆಯಾಗುತ್ತಿದ್ದು, ರೈತರಿಗೆ ಅರಿವು ಮೂಡಿಸುತ್ತಿರುವುದರಿಂದ ಸಮಸ್ಯೆ ಬಗೆಹರಿಯುತ್ತಿದೆ.  ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸಾರ್ವಜನಿಕರೂ ಸಹ ಸಹಕರಿಸಬೇಕೆಂದು ಮನವಿ ಮಾಡಿದರು.

ರೈತರಿಂದ ಖರೀದಿಸಿದ ಹಣ್ಣು, ತರಕಾರಿಗಳನ್ನು ದುಪ್ಪಟ್ಟು ಬೆಲೆಗೆ ಮಾರಾಟ ಮಾಡುತ್ತಿರುವ ಬಗ್ಗೆ ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಚಿವರು,  ಹೆಚ್ಚಿನ ದರಕ್ಕೆ ಮಾರಾಟ ಮಾಡುವವರ ಮಾಹಿತಿ ಕಲೆ ಹಾಕಲು   ಅಧಿಕಾರಿಗಳಿಗೆ ಸೂಚಿಸಲಾಗಿದೆ.  ಮುಖ್ಯಮಂತ್ರಿ ಯಡಿಯೂರಪ್ಪ ಅವರು ನೆನ್ನೆ ಬೆಂಗಳೂರಿನ ತರಕಾರಿ, ಹಣ್ಣಿನ ಅಂಗಡಿಗಳಿಗೆ ಭೇಟಿ ನೀಡಿ ಎಪಿಎಂಸಿ ಮಾರುಕಟ್ಟೆ ದರ ಹಾಗೂ ವರ್ತಕರು ಮಾರಾಟ ಮಾಡುವ ದರಗಳ   ವ್ಯತ್ಯಾಸದ ಮಾಹಿತಿ ಪಡೆದಿದ್ದಾರೆ.  ದುಪ್ಪಟ್ಟು ಹಾಗೂ ಅದಕ್ಕಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡಲು ಅವಕಾಶ ನೀಡುವುದಿಲ್ಲವೆಂದು ತಿಳಿಸಿದರು.

ರೈತರು ಬೆಳೆದ ಬೆಳೆ ನಷ್ಟವಾಗದೆ ಮಾರಾಟವಾಗಬೇಕೆನ್ನುವ ದೃಷ್ಟಿಯಿಂದ ಮನೆ-ಮನೆಗೆ ಹೋಗಿ ಮಾರಾಟ ಮಾಡಲು ರೈತರಿಗೆ ಅವಕಾಶ ಮಾಡಿಕೊಡಲಾಗಿದೆ.  ಯಾವುದೇ ಕಾರಣಕ್ಕೂ ರೈತರಿಗೆ ಅನ್ಯಾಯವಾಗಬಾರದೆನ್ನುವ ನಿಟ್ಟಿನಲಿ ಜನವಾಸಿ ಪ್ರದೇಶಗಳಿಗೆ ನೇರವಾಗಿ ಸ್ವಂತ/ಬಾಡಿಗೆ ವಾಹನಗಳಲ್ಲಿ ರೈತರು ಹೋಗಿ ಮಾರಾಟ ಮಾಡಬಹುದಾಗಿದೆ ಎಂದು ತಿಳಿಸಿದರು.

ಲಾಕ್ಡೌನ್ ಘೋಷಣೆಯಾಗಿರುವ ಸಂದರ್ಭದಲ್ಲಿ ಆಂಧ್ರಪ್ರದೇಶದ ಗಡಿಭಾಗವನ್ನು ಹಾದು ಬರುವಂತಹ ಪಾವಗಡ ತಾಲೂಕಿನ ರೈತರು ತಮ್ಮ ಬೆಳೆಯನ್ನು ಎಪಿಎಂಸಿ.ಗೆ ತರಲು ಸಮಸ್ಯೆಯಾಗುತ್ತಿದೆ.  ಆಂಧ್ರದ ಪೊಲೀಸರು ಜಿಲ್ಲೆಗೆ ಪ್ರವೇಶಿಸಲು ಅಡ್ಡಿಯುಂಟು ಮಾಡುತ್ತಿದ್ದಾರೆಂಬ ಪ್ರಶ್ನೆಗೆ ಸ್ಪಂದಿಸಿದ ಸಚಿವರು ಎಪಿಎಂಸಿಯಲ್ಲಿ ಮಾರಾಟ ಮಾಡುವ ಎಲ್ಲ ರೈತರಿಗೂ ಕೃಷಿ ಇಲಾಖೆಯಿಂದ ಪಾಸ್ ನೀಡಲಾಗುತ್ತಿದ್ದು, ಅಂತರ ರಾಜ್ಯಗಳಲ್ಲೂ ಮಾರಾಟ ಮಾಡಲು ವ್ಯವಸ್ಥೆ ಕಲ್ಪಿಸಲಾಗಿರುವುದರಿಂದ  ಈ ಸಮಸ್ಯೆ ಬಗೆಹರಿಯಲಿದೆ ಎಂದು ತಿಳಿಸಿದರು.

Leave a Reply

error: Content is protected !!
LATEST
KSRTC: ಪುರುಷ ನೌಕರರಿಗೂ ಶಿಶುಪಾಲನಾ ರಜೆ ಸೌಲಭ್ಯ- ಇಂದಿನಿಂದಲೇ ಜಾರಿ- ಎಂಡಿ ಆದೇಶ KSRTC: ಶೇ.15ರಷ್ಟು ಬಸ್‌ ಟಿಕೆಟ್‌ ದರ ಹೆಚ್ಚಳ- ಜ.5ರಿಂದ ಜಾರಿಗೆ ಸಚಿವ ಸಂಪುಟ ಸಭೆ ಅಸ್ತು ದಲೈವಾಲ ಜೀವಕ್ಕೆ ಅಪಾಯವಾದರೆ ದೇಶದಲ್ಲಿ ರೈತದಂಗೆ ಆಗಲಿದೆ: ಕುರುಬೂರು ಶಾಂತಕುಮಾರ್‌ ಎಚ್ಚರಿಕೆ KSRTCಗೆ ರಾಷ್ಟ್ರದ ಮಟ್ಟದ ಒಂಬತ್ತು ಪ್ರಶಸ್ತಿಗಳು- 3ರಾಜ್ಯಗಳಲ್ಲಿ ಪ್ರದಾನ KSRTC 4 ನಿಗಮಗಳ ನಷ್ಟ ಪರಿಹಾರಕ್ಕೆ ಬಸ್ ಪ್ರಯಾಣ ದರ ಹೆಚ್ಚಿಸುವುದು ಅನಿವಾರ್ಯ: ಸಾರಿಗೆ ಸಚಿವ ರಾಮಲಿಂಗಾರೆಡ್ಡಿ KSRTC: ನೌಕರರ ನಗದು ರಹಿತ ವೈದ್ಯಕೀಯ ಚಿಕಿತ್ಸಾ ಯೋಜನೆಗೆ ಜ.6ರಂದು ಸಿಎಂ ಚಾಲನೆ ಪತ್ರಿಕೋದ್ಯಮ ಕ್ಷೇತ್ರಗಳಲ್ಲಿ ವಿಶಿಷ್ಟ ಸಾಧನೆ ಮಾಡಿದ 32 ಪತ್ರಕರ್ತರಿಗೆ ಪ್ರಶಸ್ತಿ ಕ್ಯಾನ್ಸರ್ ಗೆದ್ದ ಶಿವಣ್ಣ: ಡಬಲ್‌ ಪವರ್‌ನೊಂದಿಗೆ ಬರುತ್ತೇನೆ ಅಂದ ನಟ  ಹೊಸ ವರ್ಷದ ಸಂಭ್ರಮದಲ್ಲಿದ್ದ ಪ್ರಿಯಕರನಿಗೆ ಇರಿದ ಪ್ರೇಯಸಿ -ಅಷ್ಟಕ್ಕೂ ಆಗಿದ್ದೇನು? ಸಿಡ್ನಿಯಲ್ಲಿ 2025ರ ನೂತನ ವರ್ಷ ಸ್ವಾಗತಿಸಿದ ಮಿಲಿಯನ್‌ಗಿಂತಲೂ ಹೆಚ್ಚು ಜನರು