ಚಿಕ್ಕಮಗಳೂರು: ಲಾಕ್‌ಡೌನ್ ಆಗಿರುವ ಹಿನ್ನೆಲೆ ಕೆಲವರು ಸ್ವಯಂಪ್ರೇರಿತರಾಗಿ ಕಡುಬಡವರಿಗೆ, ಅಸಹಾಯಕರಿಗೆ ತಮ್ಮ ಕೈಲಾದ ನೆರವು ನೀಡಿ ಮಾನವೀಯತೆ ತೋರಬೇಕು ಎಂದು ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಯುವಸಬಲೀಕರಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ. ರವಿ ಹೇಳಿದರು.
ಬುಧವಾರ ನಗರದ ಗವ್ವನಹಳ್ಳಿಯ ಆಶ್ರಯ ಬಡಾವಣೆ, ರಾಂಪುರ, ಗೌರಿ ಕಾಲುವೆ, ಕ್ರಿಶ್ಚಿಯನ್ ಕಾಲೋನಿ, ಪೆನ್ಷನ್ ಮೊಹಲ್ಲಾ, ಶಂಕರಪುರದಲ್ಲಿ ಸ್ಥಳೀಯ ಮುಖಂಡರು ಹಾಗೂ ಸ್ವಯಂ ಸಂಘಗಳ ವತಿಯಿಂದ ಆಯೋಜಿಸಿದ್ದ ಕಡುಬಡ ಕುಟುಂಬಗಳಿಗೆ ಉಚಿತವಾಗಿ ದಿನಸಿ ಆಹಾರ ಪದಾರ್ಥಗಳ ವಿತರಣೆ ಸಂದರ್ಭದಲ್ಲಿ ಮಾತನಾಡಿದರು.
ಲಾಕ್‌ಡೌನ್ ಆಗಿರುವ ಹಿನ್ನೆಲೆ ನಗರದಾದ್ಯಂತ 14 ಸಾವಿರಕ್ಕೂ ಹೆಚ್ಚು ಬಡ ಕುಟುಂಬಗಳಿಗೆ ವಿವಿಧ ಸ್ವಯಂ ಸಂಘಗಳು, ಹಾಗೂ ಸ್ಥಳೀಯ ಮುಖಂಡರುಗಳ ಸಹಕಾರದಿಂದ ಬೇಳೆ, ಅಡುಗೆ ಎಣ್ಣೆ, ರವೆ, ಉಪ್ಪು, ಸಾಂಬಾರು ಪದಾರ್ಥಗಳು ಒಳಗೊಂಡ ಆಹಾರ ದಿನಸಿ ಪದಾರ್ಥಗಳ ಕಿಟ್‌ಗಳನ್ನು ವಿತರಣೆ ಮಾಡಲಾಗುತ್ತಿದೆ ಎಂದ ಅವರು ಮುಂದಿನ ದಿನಗಳಲ್ಲಿ ಜಿಲ್ಲೆಯ ಪರಿಸ್ಥಿತಿಯನ್ನು ಅವಲೋಕಿಸಿ ಗ್ರಾಮೀಣ ಭಾಗದ ಬಡಕುಟುಂಬಗಳಿಗೂ ಆಹಾರ ಪದಾರ್ಥಗಳ ಕಿಟ್‌ಗಳನ್ನು ವಿತರಿಸುವ ಕ್ರಮ ಕೈಗೊಳ್ಳಲಾಗುವುದು ಎಂದರು.
ಜಿಲ್ಲೆಯ ಕೈಗಾರಿಕೆಗಳು, ಕಾರ್ಖಾನೆಗಳು, ಕಾಫಿ ತೋಟಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಮಾಲೀಕರು ಆಹಾರ ಪದಾರ್ಥಗಳು ಸೇರಿದಂತೆ ತಮ್ಮ ಕೈಲಾದ ನೆರವು ನೀಡಿ ಅವರ ರಕ್ಷಣೆಗೆ ಮುಂದಾಗಬೇಕು ಎಂದ ಅವರು ಯಾರೊಬ್ಬರೂ ಕೂಡ ಹಸಿವಿನಿಂದ ಇರದಂತೆ ನೋಡಿಕೊಳ್ಳಲು ಸ್ಥಳೀಯ ಮುಖಂಡರು, ಸಂಘ-ಸಂಸ್ಥೆಗಳು ಸ್ವಯಂ ಇಚ್ಚೆಯಿಂದ ಸೇವೆ ಸಲ್ಲಿಸಬೇಕು ಎಂದರು.
ನಗರ ವ್ಯಾಪ್ತಿಯಲ್ಲಿ ಆದರ್ಶ ನಗರ, ಉಂಡೇದಾಸರಹಳ್ಳಿ, ಶಂಕರಪುರ, ಟಿಪ್ಪುನಗರ, ಆದಿಶಕ್ತಿನಗರ, ಬಾರ್‌ಲೈನ್ ರಸ್ತೆ, ಅಯ್ಯಪ್ಪನಗರ, ಕೋಟೆ ಭಾಗದಲ್ಲಿ ಬಡಕುಟುಂಬಗಳಿಗೂ ಆಹಾರ ಸಾಮಗ್ರಿಗಳ ವಿತರಣೆ ಮಾಡಲು ಮುಂದಾಗಿದ್ದು ಸ್ಥಳೀಯ ಮುಖಂಡರು, ದಾನಿಗಳು, ಸೇವಾಭಾರತಿ, ಪತಂಜಲಿ ಯೋಗ ಶಿಕ್ಷಣ ಸಮಿತಿ, ಕೈ ಜೋಡಿಸಿ ಸ್ವಯಂಸೇವೆ ಒದಗಿಸುತ್ತಿವೆ ಎಂದರು.
ಇದನ್ನೂ ಓದರಿ ಕೊರೊನಾಗೆ ಆರನೇ ಬಲಿ
ನಗರ ಸಭೆಯ ಮಾಜಿ ಉಪಾಧ್ಯಕ್ಷ ಶ್ರೀನಿವಾಸ್, ಮುಖಂಡರಾದ ಆನಂದ್ ಮತ್ತಿತರರು ಉಪಸ್ಥಿತರಿದ್ದರು.