ಚಿಕ್ಕಮಗಳೂರು: ಕೊರೊನಾ ವೈರಸ್ ಬಗ್ಗೆ ಯಾರೊಬ್ಬರೂ ಆತಂಕ ಪಡದೇ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದರೊಂದಿಗೆ ಸೋಂಕಿನಿಂದ ದೂರ ಉಳಿಯಬೇಕು ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶ ಕೆ. ಸಿದ್ಧರಾಮಪ್ಪ ತಿಳಿಸಿದರು.
ನಗರದ ಜಿಲ್ಲಾ ಕಾರಾಗೃಹದ ಸಭಾಂಗಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರ ಸಹಯೋಗದಲ್ಲಿ ಜಿಲ್ಲಾ ಕಾರಾಗೃಹದಲ್ಲಿರುವ ವಿಚಾರಣಾಧೀನ ಬಂಧಿಗಳಿಗೆ ಕೊರೊನಾ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಯಾವುದೇ ಕಾಯಿಲೆ ಬಂದು ಚಿಕಿತ್ಸೆ ಪಡೆಯುವ ಬದಲು ರೋಗಗಳು ಬರದಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಂಡಾಗ ನಾವು ಉತ್ತಮ ಆರೋಗ್ಯವನ್ನು ಹೊಂದಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ವಿಶ್ವದಾದ್ಯಂತ ಕೊರೊನಾವು ಎಲ್ಲೆಡೆ ಹರಡುತ್ತಿದ್ದು, ನಮ್ಮ ರಾಜ್ಯದಲ್ಲಿಯೂ ಸಹ ಈಗಾಗಲೇ ಕೆಲವು ಜನರಿಗೆ ಸೋಂಕು ಹರಡಿದೆ. ಇವುಗಳಿಂದ ದೂರ ಉಳಿಯಲು ಆರೋಗ್ಯ ಇಲಾಖೆ ನೀಡುವ ಮುನ್ನೆಚರಕಾ ಕ್ರಮಗಳನ್ನು ತಪ್ಪದೇ ಪಾಲಿಸಬೇಕು ಎಂದರು.
ಒಂದನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಎನ್.ಲಕ್ಷ್ಮೀಶ ಶರ್ಮಾ ಮಾತನಾಡಿ, ಕೊರೊನಾ ರೋಗ ಸಾಮಾನ್ಯವಾಗಿ ಒಬ್ಬ ವ್ಯಕ್ತಿಯಿಂದ ಇನ್ನೊಬ್ಬ ವ್ಯಕ್ತಿಗೆ ವೈರಾಣುಗಳು ಹರಡುವಂತದ್ದಾಗಿದ್ದು, ಸೋಂಕು ಪೀಡಿತ ವ್ಯಕ್ತಿಗಳಿಂದ ದೂರವಿರುವುದು ಒಳಿತು. ಆಗಿಂದಾಗ್ಗೆ ಕೈಯನ್ನು ಸ್ವಚ್ಛಗೊಳಿಸಿಕೊಳ್ಳಬೇಕು ಎಂದರು.
ವೈದ್ಯಾಧಿಕಾರಿ ಪ್ರತ್ಯಕ್ಷ ಭೈರವ ಮಾತನಾಡಿ, ಕೊರೊನಾ ಸೋಂಕಿನಿಂದ ಸಾಮಾನ್ಯವಾಗಿ ಜ್ವರ, ತಲೆ ನೋವು, ಶೀತ, ಉಸಿರಾಟ ತೊಂದರೆ ಹಾಗೂ ಬೇದಿ ಉಂಟಾಗುತ್ತದೆ. ರೋಗದ ಬಗ್ಗೆ ದೃಢಪಡಿಸಿಕೊಳ್ಳಲು ಅಂತಹ ವ್ಯಕ್ತಿಯ ಮೂಗು ಮತ್ತು ಗಂಟಲಿನ ಶ್ರವ್ಯದ ಲೇಪನ ಹಾಗೂ ರಕ್ತವನ್ನು ಪ್ರಯೋಗ ಶಾಲೆಯಲ್ಲಿ ಪರೀಕ್ಷಿಸಲಾಗುವುದು ಎಂದರು.
ಜಿಲ್ಲಾ ಕಾರಾಗೃಹ ಅಧೀಕ್ಷಕ ರಾಕೇಶ್ ಕಾಂಬ್ಳೆ ಮಾತನಾಡಿ, ರೋಗದ ಲಕ್ಷಣ ಕಂಡುಬಂದಲ್ಲಿ ಅದನ್ನು ಮುಚ್ಚಿಟ್ಟುಕೊಳ್ಳದೇ ನಮ್ಮ ಗಮನಕ್ಕೆ ತರಬೇಕು. ಪ್ರತಿಯೊಬ್ಬರೂ ಇನ್ನೊಬ್ಬರ ಅಂತರದಿಂದಿರಬೇಕು. ಅಲ್ಲದೇ ಗುಂಪು ಗುಂಪಾಗಿ ಒಂದೆಡೆ ಸೇರುವುದು ಸುರಕ್ಷಿತವಲ್ಲ ಎಂದರು.