ಚಿಕ್ಕಬಳ್ಳಾಪುರ: ಗೌರಿಬಿದನೂರಿನ ಇಬ್ಬರು ಮತ್ತು ಬೆಂಗಳೂರಿನಲ್ಲಿ ಒಬ್ಬರಿಗೆ ಕೊರೊನಾ ವೈರಸ್ ಶಂಕೆ ವ್ಯಕ್ತವಾಗಿದ್ದು ಕಟ್ಟೆಚ್ಚರ ವಹಿಸುವಂತೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.
ಶನಿವಾರ ಚಿಕ್ಕ ಬಳ್ಳಾಪುರದಲ್ಲಿ ಮಾತನಾಡಿ, ರಾಜ್ಯದಲ್ಲಿ ಇಂದು ಮೂರನ್ನು ಸೇರಿಸಿ ಒಟ್ಟು 18 ಮಂದಿಯಲ್ಲಿ ವೈರಸ್ ಪತ್ತೆಯಾಗಿದೆ. ಆದರೂ ಅವರೆಲ್ಲರೂ ಗುಣಮುಖರಾಗಲಿದ್ದು, ಅದಕ್ಕೆ ತಕ್ಕ ವ್ಯವಸ್ಥೆಯನ್ನು ಸರ್ಕಾರ ಮಾಡಲಿದೆ. ಅದಕ್ಕೆ ಅವರು ಮತ್ತು ಅವರ ಕುಟುಂಬದ ಸದಸ್ಯರು ಸ್ಪಂದಿಸಬೇಕು. ಈ ಬಗ್ಗೆ ಅಕ್ಕಪಕ್ಕದ ಮನೆಯವರು ಎಚ್ಚರಿಕೆ ವಹಿಸಬೇಕು ಎಂದು ತಿಳಿಸಿದರು.
ಗೌರಿಬಿದನೂರು ತಾಲೂಕಿನ ಹಿರೇಬಿದನೂರಿನಲ್ಲಿರುವ ತಾಯಿ ಮತ್ತು ಮಗ ಇಬ್ಬರಿಗೆ ವೈರಸ್ ತಗುಲಿರುವ ಕುರಿತು ಶಂಕೆ ವ್ಯಕ್ತವಾಗಿದೆ. ಈ ನಿಟ್ಟಿನಲ್ಲಿ ಪ್ರಾಥಮಿಕ ಹಂತವಾಗಿ ಅವರ ಜತೆ ಸಂಪರ್ಕ ಹೊಂದಿರುವವರು ಪತ್ತೆ ಹಚ್ಚಿ ಕ್ವಾರೆಂಟೈನ್ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಆ ಇಬ್ಬರಲ್ಲಿ ಕೊರೊನಾ ವೈರಸ್ ಸೋಂಕು ತಗುಲಿದೆ ಎಂಬ ಮಾಹಿತಿ ಬಂದಿದ್ದು, ಶನಿವಾರ ಸಂಜೆ ವೇಳೆ ವೈದ್ಯಕೀಯ ವರದಿ ಬರಲಿದ್ದು ನಂತರ ಅಧಿಕೃತವಾಗಿ ತಿಳಿಯಲಿದೆ ಎಂದು ಹೇಳಿದರು.
ಕೊರೊನಾ ವೈರಸ್ ತಡೆಗಟ್ಟಲು ಪಿಡಿಒಗಳು, ತಾಲೂಕು ಕಾರ್ಯನಿರ್ವಾಹಣಾಧಿಕಾರಿಗಳು ಮುಂಜಾಗ್ರತೆ ವಹಿಸಬೇಕು. ಈಗಾಗಲೇ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಟಾಸ್ಕ್ ಫೋರ್ಸ್ ಮಾಡಲಾಗಿದೆ. ಈ ಸಮಿತಿ ಸೋಂಕು ಪತ್ತೆಯಾಗಿರುವವರು ವಾಸವಿರುವ ನಗರವನ್ನು ಕ್ವಾರೆಂಟೈನ್ ಮಾಡುವ ರೀತಿ ಕ್ರಮ ಕೈಗೊಳ್ಳಿ. ಪ್ರತಿ ಆಸ್ಪತ್ರೆಗಳಲ್ಲಿ, ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡುವ ವ್ಯಕ್ತಿಗಳು ಸ್ಯಾನಿಟೈಸರ್ ಬಳಸಿ ಒಳಗೆ ಪ್ರವೇಶ ಮಾಡಬೇಕು. ಅಧಿಕವಾಗಿ ಸಾರ್ವಜನಿಕರು ಸೇರುವ ಸ್ಥಳಗಳಲ್ಲಿ ಹೆಚ್ಚಿನ ನಿಗಾ ವಹಿಸಬೇಕು ಎಂದು ತಿಳಿಸಿದರು.