
ದೇವನಹಳ್ಳಿ: 101 ಸುಸಜ್ಜಿತ ಶಾಲೆಗಳನ್ನು ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲೂ ನಿರ್ಮಾಣಮಾಡಿದ್ದು ಇದೇ ಏ.28 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್. ಮುನಿಯಪ್ಪ ತಿಳಿಸಿದ್ದಾರೆ.
ತಾಲೂಕು ಪಂಚಾಯತಿ ಆವರಣದಲ್ಲಿ ತಾಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊರಚರಪಾಳ್ಯದ ಶತಮಾನೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಅಂದು ನಾನು ದೇವಸ್ಥಾನದಲ್ಲಿ ಕಲಿಕೆ ಆರಂಭಮಾಡಿ 1951 ರಲ್ಲಿ ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದೆ ಎಂದರು.
ಇನ್ನು ಶಿಕ್ಷಕರು ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಕೊಡುವುದಕ್ಕೆ ಹೆಚ್ಚಿನ ಗಮನವನ್ನು ಕೊಡಬೇಕು ಎಂದ ಅವರು, ಅ.2ರ ಮಹಾತ್ಮಗಾಂಧೀಜಿ ಯವರ ಜನ್ಮದಿನಾಚರಣೆಯಂದು ನಾವು ನಮ್ಮ ಸರ್ಕಾರದ ವತಿಯಿಂದ ಕರ್ನಾಟಕ ಪಬ್ಲಿಕ್ ಶಾಲೆಯನ್ನು ಆರಂಭಿಸಿ ಪ್ರತಿ ಗ್ರಾಮಪಂಚಾಯಿತಿ ಮಟ್ಟದಲ್ಲಿ 101 ಸುಸಜ್ಜಿತ ಶಾಲೆಗಳನ್ನು ಸಿಎಸ್ಆರ್ ಅನುದಾನದಡಿ ನಿರ್ಮಾಣಮಾಡಿದ್ದು ಇದೇ ತಿಂಗಳ 28 ರಂದು ಮುಖ್ಯಮಂತ್ರಿಗಳು ಉದ್ಘಾಟನೆ ಮಾಡಲಿದ್ದಾರೆ ಎಂದರು.
ಕೊರಚೆಪಾಳ್ಯದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವತಿಯಿಂದ ನಿರ್ಮಿಸಿದ್ದು ಶಾಲೆಯು ಸುಸಜ್ಜಿತ ವಾಗಿದೆ. ಇಲ್ಲಿ ಹೆಚ್ಚಿನ ಕಲಿಕಾ ಕೊಠಡಿಗಳು ಬೇಕಾಗಿರುವ ಹಿನ್ನೆಲೆಯಲ್ಲಿ ಈಗಾಗಲೇ ಮನವಿ ಸಲ್ಲಿಸಿದ್ದು ತಾಲೂಕು ಮತ್ತು ಜಿಲ್ಲಾಡಳಿತದ ವತಿಯಿಂದ ಚರ್ಚೆ ನಡೆಸಿ ಶೀಘ್ರದಲ್ಲೇ ತೀರ್ಮಾಣ ಮಾಡಲಾಗುವುದು ಎಂದರು.
ಕೇಂದ್ರ ಸರ್ಕಾರವು ರಾಷ್ಟ್ರೀಯ ನೂತನ ಶಿಕ್ಷಣ ನೀತಿ ರೂಪಿಸಿದ್ದು ಅದು ಸಂವಿಧಾನದ ಚೌಕಟ್ಟನಲ್ಲಿರದ ಕಾರಣ ಅದನ್ನು ಅಳವಡಿಸಲು ಸಾದ್ಯವಗಲಿಲ್ಲ. ವಿದ್ಯಾರ್ಥಿಗಳ ಕಲಿಕೆಯ ಹಿತದೃಷ್ಟಿಯಿಂದ ನಾವು ಮಕ್ಕಳ ಕಲಿಕೆಗೆ ಎಲ್ಲ ರೀತಿಯ ನೆರವನ್ನು ಕಲ್ಪಿಸಿ ಶಾಲೆಗಳ ಮೇಲ್ದರ್ಜೆಗೆ ಏರಿಸುವುದರೊಂದಿಗೆ ಕ್ರೀಡಾಂಗಣ, ಪ್ರಯೋಗಾಲಯ, ಗ್ರಂಥಾಲಯ, ಕುಡಿಯುವ ನೀರಿನ ಸೌಲಭ್ಯ ಮುಂತಾದ ವ್ಯವಸ್ಥೆಗಳನ್ನು ಕಲ್ಪಿಸಲಾಗುವುದು ಎಂದರು.
ಸಂಸದ ಕೆ.ಸುಧಾಕರ್, ಮಾಜಿ ಶಾಸಕ ಚಂದ್ರಪ್ಪ,ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾದ ರಾಜಣ್ಣ, ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಜಗನ್ನಾಥ್, ಬಯ್ಯಪ್ಪಾ ಅದ್ಯಕ್ಷರಾದ ಶಾಂತಕುಮಾರ್, ಸದಸ್ಯರಾದ ಪ್ರಸನ್ನ ಕುಮಾರ್, ಹಿರಿಯ ವಿಧ್ಯಾರ್ಥಿಗಳು ಒಕ್ಕೂಟದ ರವಿಕುಮಾರ್, ಗಂಗಾದರಪ್ಪ,ಪುಟ್ಟ ಸ್ವಾಮಿ, ವೆಂಕಟೇಶ್,ಗೀತಾ ಚನ್ನಬಸಪ್ಪ,ವೇದಾವತಿ ಆಶಾ ಉಪಸ್ಥಿತರಿದ್ದರು.