ಕಿರುತೆರೆಯ ನಟ, ನಟಿಯರೂ ಸೇರಿ 139 ಜನರಿಗೆ ಸೈಟ್ ಕೊಡಿಸುವುದಾಗಿ ಹೇಳಿ ಕೋಟಿ ಕೋಟಿ ರೂ. ಪಡೆದು ವಂಚನೆ: FIR ದಾಖಲು


ಬೆಂಗಳೂರು: ಕಿರುತೆರೆಯ ನಟ, ನಟಿಯರೂ ಸೇರಿ 139 ಜನರಿಂದ ಲಕ್ಷ ಲಕ್ಷ ರೂಪಾಯಿ ಹಣ ಪಡೆದು ಸೈಟ್ ಕೊಡಿಸುವುದಾಗಿ ಹೇಳಿ ವಂಚನೆ ಮಾಡಿರುವ ಪ್ರಕರಣ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.
ಈ ಸಂಬಂಧ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಭಾವನಾ ಬೆಳಗೆರೆ ಅವರು ಬಿಲ್ಡರ್ ಸೇರಿದಂತೆ ಐವರ ವಿರುದ್ಧ ದೂರು ನೀಡಿದ್ದು, ಎಫ್‌ಐಆರ್ ದಾಖಲಾಗಿದೆ.
ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್‌ನ 139 ಸದಸ್ಯರಿಗೆ ಸೈಟು ಕೊಡಿಸುವುದಾಗಿ ಕಿಡಿಗೇಡಿಗಳು ವಂಚನೆ ಮಾಡಿದ್ದಾರೆ. ಈ ಕುರಿತು ಅಸೋಸಿಯೇಷನ್ ಸದಸ್ಯೆ ಭಾವನಾ ಬೆಳಗೆರೆ ಅವರು ನೀಡಿದ ದೂರಿನ ಮೇರೆಗೆ ಬಿಲ್ಡರ್ ಭಗೀರಥ, ಸಂಜೀವ್ ತಗಡೂರು, ಗುರುಪ್ರಸಾದ್, ರವೀಂದ್ರ, ಉಮಾಕಾಂತ್ ಎಂಬುವವರ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ಕೆಟಿವಿಎನಲ್ಲಿ ಸೈಟ್ ಕಮಿಟಿ ಸದಸ್ಯನಾಗಿದ್ದ ಸಂಜೀವ್ ತಗಡೂರು, ಸದಸ್ಯರಿಗೆ ಸೈಟ್ ಕೊಡಿಸುವುದಾಗಿ ಬಿಲ್ಡರ್ ಜತೆಗೆ ವ್ಯವಹಾರ ಕುದುರಿಸಿದ್ದ. ತಾವರೆಕೆರೆ ಬಳಿ ಸೈಟ್ ಕೊಡಿಸುವುದಾಗಿ ಹೇಳಿ ಅಸೋಸಿಯೇಷನ್ ಸದಸ್ಯರಿಂದ ಲಕ್ಷ ಲಕ್ಷ ಹಣ ಪಡೆದಿದ್ದ.
ಆರ್.ಆರ್.ನಗರ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಶುದ್ಧ ಕ್ರಯ ಸಹ ಮಾಡಿಸಲಾಗಿತ್ತು. ಆ ಬಳಿಕ ಖಾತೆ ಮಾಡಿಸಲು ಮೀನಮೇಷ ಎಣಿಸುತ್ತಿದ್ದ. ಈ ವೇಳೆ ಕೆಲ ಸದಸ್ಯರು ಖುದ್ಧಾಗಿ ಖಾತೆ ಮಾಡಿಸಲು ತೆರಳಿದಾಗ ತಾವು ವಂಚನೆಗೆ ಒಳಗಾಗಿರುವುದು ಬೆಳಕಿಗೆ ಬಂದಿದೆ.
ಒಟ್ಟು 1.6 ಕೋಟಿ ರೂ. ವಂಚನೆ ಮಾಡಲಾಗಿದೆ ಎಂದು ಅಸೋಸಿಯೇಷನ್ ಸದಸ್ಯರು ದೂರಿನಲ್ಲಿ ತಿಳಿಸಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದೆ.

Related
