ಮಂಡ್ಯ: ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯ ಆರ್ಭಟ ದಿನದಿಂದ ದಿನಕ್ಕೆ ಹೆಚ್ಚಾಗಿದ್ದು ನಾಡಿನ ಜೀವನದಿ ಕಾವೇರಿಗೆ ಜೀವಕಳೆ ಬಂದಿದೆ.
ವರುಣನ ಕೃಪೆಗೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ KRS ಅಣೆಕಟ್ಟೆಗೆ ಭಾರೀ ಪ್ರಮಾಣದ ಒಳಹರಿವು ಹರಿದು ಬರುತ್ತಿದ್ದು, ಪ್ರತಿ ಗಂಟೆ ಗಂಟೆಗೂ KRS ಒಳ ಹರಿವು ಏರಿಕೆಯಾಗುತ್ತಲೇ ಇದೆ.
ಒಳ ಹರಿವಿನಲ್ಲಿ ನಿರಂತರ ಏರಿಕೆ: 25 ಸಾವಿರಕ್ಕೂ ಅಧಿಕ ಕ್ಯೂಸೆಕ್ ನೀರು ಅಣೆಕಟ್ಟೆಗೆ ಹರಿದು ಬರುತ್ತಿದೆ. ಸೋಮವಾರ ಬೆಳಗ್ಗೆ 10,121 ಕ್ಯೂಸೆಕ್ ನೀರು ಹರಿದು ಬಂದಿದೆ. ಸಂಜೆ ವೇಳೆಗೆ 19,202 ಕ್ಯೂಸೆಕ್ ಏರಿಕೆಯಾಗಿತ್ತು. ಆದರೆ ಇಂದು ಅಂದರೆ ಮಂಗಳವಾರ ಕೂಡ ಒಳ ಹರಿವಿನ ಪ್ರಮಾಣ 25,933 ಕ್ಯೂಸೆಕ್ಗೆ ಏರಿಕೆಯಾಗಿದೆ. ಸಂಜೆಗೆ 30 ಸಾವಿರ ಕ್ಯೂಸೆಕ್ ತಲುಪುವ ಸಾಧ್ಯತೆಯಿದೆ.
ರೈತರ ಮೊಗದಲ್ಲಿ ಮಂದಹಾಸ: ಕಳೆದ 24 ಗಂಟೆಯಲ್ಲೇ 2 ಟಿಎಂಸಿ ನೀರು ಅಣೆಕಟ್ಟೆಯಲ್ಲಿ ಸಂಗ್ರಹವಾಗಿದ್ದು, ನಿನ್ನೆ ಕೆಆರ್ಎಸ್ ಅಣೆಕಟ್ಟೆ 105.40 ಅಡಿಯಿತ್ತು. ಆದರೆ ಇಂದು ಕನ್ನಂಬಾಡಿಕಟ್ಟೆ 107.60ಅಡಿ ಭರ್ತಿಯಾಗಿದೆ. ಅಣೆಕಟ್ಟೆಯಲ್ಲಿ ನೀರಿನ ಮಟ್ಟ ನಿರಂತರವಾಗಿ ಏರಿಕೆಯಾಗುತ್ತಿರುವುದರಿಂದ ರೈತರಲ್ಲಿ ಮೊಗದಲ್ಲಿ ಸಂತಸ ಮನೆಮಾಡಿದೆ.
ಒಳ ಹರಿವು ಇದೇ ರೀತಿ ಬಂದರೆ ಕೆಲವೇ ದಿನದಲ್ಲಿ ಅಣೆಕಟ್ಟೆ ಭರ್ತಿಯಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಾಗೀನ ಅರ್ಪಿಸುವುದರಲ್ಲಿ ಯಾವುದೇ ಡೌಟ್‌ಇಲ್ಲ. ಇನ್ನು ಮತ್ತೊಂದೆಡೆ ಕಾವೇರಿಗಾಗಿ ತಮಿಳುನಾಡು ಕ್ಯಾತೆಯಲ್ಲಿದ್ದ ಕರುನಾಡಿಗೆ ನಿರಾಳವಾಗಲಿದೆ. ವರುಣ ಇದೇ ರೀತಿ ತನ್ನ ಕೃಪೆ ತೋರಿದರೆ ತಮಿಳುನಾಡಿಗೂ ನೀರು ಹರಿಸಲು ಯಾವುದೇ ವಿವಾದವಿರುವುದಿಲ್ಲ.