ಬೆಂಗಳೂರು: ಎರಡು ವಾರ ರಾಜ್ಯ ರಾಜಕೀಯ ಗುದ್ದಾಟಕ್ಕೆ ಬಿದ್ದಿದ್ದ ಬ್ರೇಕ್ ಈಗ ತೆರವಾಗಿದೆ ಅನ್ಸುತ್ತೆ. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ವಿದೇಶ ಪ್ರವಾಸ ಮುಗಿಸಿ ವಾಪಸ್ ಬರುತ್ತಿದ್ದಂತೆ ಚಾರ್ಜ್‌ಶೀಟ್ ಪಾಲಿಟಿಕ್ಸ್ ಶುರುವಾಗಿದೆ. ಪೊಲೀಸ್ ಮೆಸ್‍ನಲ್ಲಿ ವೈಎಸ್‍ಟಿ (YST) ಹಾಜರ್ ಬಾಂಬ್ ಹಾಕಿದ್ದಾರೆ.
ವಿದೇಶ ಪ್ರವಾಸದಿಂದ ಹಿಂದಿರುಗುತ್ತಿದ್ದಂತೆ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ವರ್ಗಾವಣೆ ದಂಧೆ, ಭ್ರಷ್ಟಾಚಾರ, ಕಮೀಷನ್ ಸಂಗ್ರಹದ ಬಗ್ಗೆ ಗುರುತರ ಆರೋಪಗಳನ್ನು ಮಾಡಿದ್ದಾರೆ. ಕಳೆದ ರಾತ್ರಿ ಯುರೋಪ್ ಪ್ರವಾಸ ಮುಗಿಸಿಕೊಂಡು ಬೆಂಗಳೂರಿಗೆ ವಾಪಸ್ ಆದ ಎಚ್ಡಿಕೆ 250 ಕೋಟಿ ರೂ. ಕಲೆಕ್ಷನ್ ಮಾಡಲು ಬಿಡಿಎಗೆ ಸರ್ಕಾರ ತಾಲೀತು ಮಾಡಿದೆ ಎಂದು ಆರೋಪಿಸಿದ್ದಾರೆ.
ಕಾಂಗ್ರೆಸ್ ಪಕ್ಷ ಈಸ್ಟ್ ಇಂಡಿಯಾ ಪಕ್ಷದಂತೆ ರಾಜ್ಯವನ್ನು ಲೂಟಿ ಮಾಡುತ್ತಿದೆ. ಪೊಲೀಸ್ ವರ್ಗಾವಣೆಯಲ್ಲಿ ವೈಎಸ್‌ಟಿ ದಂಧೆಕೋರರು ಶಾಮೀಲಾಗಿದ್ದಾರೆ, ಬಿಡಿಎ ಅಧಿಕಾರಿಗಳಿಂದ 250 ಕೋಟಿ ರೂಪಾಯಿ ಡಿಮ್ಯಾಂಡ್ ಮಾಡಲಾಗಿದೆ. ರಾಜ್ಯದಲ್ಲಿ ಪರ್ಸೆಂಟೇಜ್ ಸಂಗ್ರಹ ಅವ್ಯಾಹತವಾಗಿ ನಡೆಯುತ್ತಿದೆ ಎಂದು ದೂರಿದ್ದಾರೆ.
ಗರುಡಾ ಮಾಲ್ ಬಳಿಯ ಪೊಲೀಸ್ ಮೆಸ್‍ನಲ್ಲಿ ಸಭೆ ನಡೆದಿತ್ತು ಎಂದು ಎಚ್‍ಡಿಕೆ ಫ್ರೆಶ್ ಫೈಲ್ಸ್ ಬಿಟ್ಟಿದ್ದಾರೆ. ಹಲವು ಪೊಲೀಸ್ ಇನ್ಸ್‌ಪೆಕ್ಟರ್‌ಗಳ ವರ್ಗಾವಣೆಗೆ ತಡೆ ಬೆನ್ನಲ್ಲೇ ಎಚ್‍ಡಿಕೆ ವೈಎಸ್‍ಟಿ ರಹಸ್ಯ ಬಾಂಬ್ ಹಾಕಿರುವುದು ಚರ್ಚೆಗೆ ಗ್ರಾಸವಾಗಿದೆ.
ಪೊಲೀಸ್ ವರ್ಗಾವಣೆ ಸಂಬಂಧ ಸಿಎಂ, ಪರಂ ರಹಸ್ಯ ಸಭೆ ನಡೆಸಿದ್ರು. ರಹಸ್ಯ ಸಭೆ ನಡೆಸಿರುವುದನ್ನು ಸ್ವತಃ ಗೃಹ ಸಚಿವ ಪರಮೇಶ್ವರ್ ಒಪ್ಪಿಕೊಂಡಿದ್ದರು. ಆದರೆ ಆ ಸಭೆ ನಡೆದಿದ್ದು ಪೊಲೀಸ್ ಮೆಸ್‍ನಲ್ಲಿ, ವರ್ಗಾವಣೆ ಸಂಬಂಧಿತ ಸಭೆಯಲ್ಲಿ ಗೃಹ ಸಚಿವರು ಚರ್ಚೆ ಮಾಡುವಾಗ ವೈಎಸ್‍ವಿ ಟ್ಯಾಕ್ಸ್ (YST Tax) ನವರು ಏಕೆ ಇದ್ರು..? ಎಂದು ಎಚ್‍ಡಿಕೆ ಖಾರವಾಗಿ ಪ್ರಶ್ನಿಸಿದ್ದಾರೆ.
ಇದೇ ವೇಳೆ ನಾವು ಕುಟುಂಬ ಸಮೇತ ಹೋಗಿದ್ದು ಯುರೋಪ್ ಪ್ರವಾಸಕ್ಕೆ. ಸರ್ಕಾರ ಬೀಳಿಸಲು ಹೋಗಿದ್ವಿ ಅಂತಾ ಸೃಷ್ಟಿಸಿದ್ದಾರೆ. 19 ಸೀಟ್ ಗೆದ್ದ ನಮ್ ಬಗ್ಗೆ ಭಯ ಎಷ್ಟಿರಬಹುದೆಂದು ಡಿಕೆಶಿಗೂ ಟಾಂಗ್ ಕೊಟ್ಟಿದ್ದಾರೆ. ಇನ್ನು ಸಚಿವರೊಬ್ಬರು ನೇರವಾಗಿ ಗುತ್ತಿಗೆದಾರರಿಂದ ಕಮೀಷನ್ ಡಿಮ್ಯಾಂಡ್ ಮಾಡುತ್ತಿದ್ದಾರೆ. ಇತ್ತೀಚೆಗೆ ಆ ಸಚಿವರನ್ನು ಭೇಟಿಯಾಗಲು ಹೋಗಿದ್ದ ಗುತ್ತಿಗೆದಾರರಿಗೆ, ಹಣ ತಂದಿದ್ದರೆ ಒಳಕ್ಕೆ ಬನ್ನಿ. ಇಲ್ಲವಾದರೆ ಹೊರಗೆ ಇರಿ ಎಂದು ಆ ಸಚಿವರ ಚೇಲಾಗಳು ತಾಕೀತು ಮಾಡಿದ್ದಾರೆ.
ಇವರು ಹೋಗಿ ದೆಹಲಿಯಲ್ಲಿ ಭ್ರಷ್ಟಾಚಾರ ಕಡಿಮೆ ಮಾಡುತ್ತೇವೆ ಎಂದು ರಾಹುಲ್ ಗಾಂಧಿ ಅವರಿಗೆ ಹೇಳುತ್ತಾರೆ. ಇಂಥವರಿಂದ ರಾಜ್ಯದ ಉದ್ಧಾರ ಸಾಧ್ಯವೇ? ಪಾರದರ್ಶಕ ಆಡಳಿತ ನೀಡಲು ಆಗುತ್ತದೆಯೇ ಎಂದು ಪ್ರಶ್ನಿಸಿದ್ದಾರೆ.
250 ಕೋಟಿಗೆ ಡಿಮ್ಯಾಂಡ್: ಬಿಡಿಎ ಅಧಿಕಾರಿಗಳಿಂದಲೂ ಹಣಕ್ಕೆ ಬೇಡಿಕೆ ಇಡಲಾಗಿದೆ. ದಿಲ್ಲಿಗೆ ಈ ಹಣ ಕಳಿಸಬೇಕು, ಕೊನೆಪಕ್ಷ 250 ಕೋಟಿ ರೂಪಾಯಿ ಕಲೆಕ್ಷನ್ ಆಗಬೇಕು ಎಂದು ಅಧಿಕಾರಿಗಳಿಗೆ ಒಬ್ಬರು ಮಹಾನುಭಾವರು ತಾಕೀತು ಮಾಡುತ್ತಾರೆ. ದುಡ್ಡು ಯಾರಿಗೆ ಸೇರಬೇಕು ಅವರ ಪಟ್ಟಿ ಕೊಡುತ್ತೇವೆ, ಅವರಿಗೆ ನೇರವಾಗಿ ದುಡ್ಡು ತಲುಪಿಸಿ ಎಂದು ಹೇಳುತ್ತಾರಂತೆ.
ಕಾಂಗ್ರೆಸ್ ಪಕ್ಷವು ಕರ್ನಾಟಕವನ್ನು ಈಸ್ಟ್ ಇಂಡಿಯಾ ಕಂಪನಿಯಂತೆ ಲೂಟಿ ಮಾಡುತ್ತಿದೆ. ಜನರಿಗೆ ಗ್ಯಾರಂಟಿ ತುಪ್ಪ ಸವರಿ ವರ್ಗಾವಣೆ ದಂಧೆಯಲ್ಲಿ ಕೊಳ್ಳೆ ಹೊಡೆಯುತ್ತಿದೆ. ಬೆಂಗಳೂರನ್ನು ಸಿಂಗಾಪುರ ಮಾಡುತ್ತೇವೆ ಎಂದು ಹೇಳಿದವರು ಇವತ್ತು ಇದೇ ಬೆಂಗಳೂರನ್ನು ಕೊಳ್ಳೆ ಹೊಡೆಯುತ್ತಿದ್ದಾರೆ. ಹೊರನೋಟಕ್ಕೆ ಭ್ರಷ್ಟಾಚಾರವನ್ನು ತೊಡೆದು ಹಾಕುವ ಮಾತು ಹೇಳುತ್ತಿದ್ದಾರೆ. ನಿಜಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಅಂತಹ ಮನಃಸ್ಥಿತಿ ಇಲ್ಲ ಎಂದು ಕಿಡಿಕಾರಿದ್ದಾರೆ.
ಭ್ರಷ್ಟಾಚಾರದ ರಿಪೋರ್ಟ್ ಕಾರ್ಡು ಕೊಡಲು ಹೋಗಿರಬೇಕು: 36 ಜನ ಮಂತ್ರಿಗಳನ್ನು ದೆಹಲಿಗೆ ಕರೆದುಕೊಂಡು ಹೋಗಿದ್ದರು. ಅವರ ಹೈಕಮಾಂಡ್‌ಗೆ ರಿಪೋರ್ಟ್ ಕಾರ್ಡು ಕೊಡೋದಕ್ಕೆ ಅವರು ಹೋಗಿದ್ದರಂತೆ. ಅವರು ರಿಪೋರ್ಟ್ ಕಾರ್ಡ್ ಇಡಬೇಕಿರುವುದು ರಾಜ್ಯದ ಆರೂವರೆ ಕೋಟಿ ಜನತೆಯ ಮುಂದೆಯೇ ಹೊರತು ಹೈಕಮಾಂಡ್ ಮುಂದೆ ಅಲ್ಲ. ಈ ರಾಜ್ಯದ ಜನರು ವೋಟು ಹಾಕಿ ಇವರನ್ನು ಗೆಲ್ಲಿಸಿದ್ದಾರೆ. ನಾವೇನು ಮಾಡಿದ್ದೇವೆ, ಮಾಡುತ್ತೇವೆ ಎನ್ನುವ ವರದಿಯನ್ನು ಈ ಜನರ ಮುಂದೆ ಇಡಬೇಕು. ಇವರೇನು ಭ್ರಷ್ಟಾಚಾರದ ರಿಪೋರ್ಟ್ ಕಾರ್ಡು ಕೊಡಲು ಹೋಗಿರಬೇಕು ಎಂದು ಕಟುವಾಗಿ ಟೀಕಿಸಿದರು.
ಇವರು ಲೂಟಿ ಮಾಡುವುದಕ್ಕೆ ಖಜಾನೆ ಖಾಲಿ ಎಂದು ತೋರಿಸುವ ಹುನ್ನಾರ ನಡೆಸಿದ್ದಾರೆ. ಗ್ಯಾರಂಟಿ ಗೊಂದಲ ಮಾಡಿಕೊಂಡು, ವಿಧಾನಸಭೆ ಕ್ಷೇತ್ರಗಳಿಗೆ ಹಣ ಇಲ್ಲ ಎನ್ನುವ ಸಬೂಬು ಹೇಳುತ್ತಿದ್ದಾರೆ. ರಾಜ್ಯದಲ್ಲಿ ಹಣಕ್ಕೆ ಕೊರತೆ ಇಲ್ಲ. ಖಜಾನೆ ಸಮೃದ್ಧವಾಗಿದೆ. ಕಾಂಗ್ರೆಸ್ ಶಾಸಕರೇ ಅಭಿವೃದ್ಧಿಗೆ ಹಣ ಇಲ್ಲ ಎಂದು ಹೇಳುತ್ತಿದ್ದಾರೆ. ನನಗೆ ನಿಜಕ್ಕೂ ಆಶ್ಚರ್ಯವಾಗುತ್ತಿದೆ ಎಂದಿದ್ಧಾರೆ.
ಶ್ವೇತಪತ್ರ ಹೊರಡಿಸಿ: ಗ್ಯಾರಂಟಿಗಳಿಗೆ 20ರಿಂದ 25 ಸಾವಿರ ಕೋಟಿ ರೂಪಾಯಿ ಸಾಕು. ಕಳೆದ ವರ್ಷ 40,000 ಕೋಟಿ ರೂಪಾಯಿ ಹೆಚ್ಚುವರಿ ತೆರಿಗೆ ಆದಾಯ ಬಂದಿದೆ. ತೆರಿಗೆಯ ಎಲ್ಲ ಬಾಬ್ತುಗಳಲ್ಲಿ ನಿರೀಕ್ಷೆಗೂ ಮೀರಿ ತೆರಿಗೆ ಸಂಗ್ರಹ ಆಗಿದೆ. ಹಾಗಾದರೆ ಹದಿನಾಲ್ಕು ಬಜೆಟ್ ಮಂಡಿಸಿದ ಮಹಾನುಭಾವರು ಕೊರತೆ ಬಜೆಟ್ ಮಂಡಿಸಿದ್ದು ಯಾಕೆ? ಅದರ ಹಿಂದಿನ ಹುನ್ನಾರವೇನು.
ರಾಜ್ಯದಲ್ಲಿ ಹಣದ ಕೊರತೆ ಇಲ್ಲ. ದೊಡ್ಡ ನಾಟಕ ನಡೆಯುತ್ತಿದೆ. ಒಂದು ಕಡೆ ಸಾಲ ಪ್ರಮಾಣ ಹೆಚ್ಚಳ ಮಾಡಿಕೊಂಡಿದ್ದಾರೆ, ಇನ್ನೊಂದು ತೆರಿಗೆ ಸಂಗ್ರಹದಲ್ಲಿ ಗುರಿ ಮೀರಿದ ಸಾಧನೆ ಆಗಿದೆ. ಕೇಂದ್ರ ಸರಕಾರದಿಂದಲೂ ಯಾವುದೇ ಬಾಕಿ ಇಲ್ಲ. ನಾನು ಸಿಎಂ ಆಗಿದ್ದಾಗ ರೈತರ ಸಾಲ ಮನ್ನಾ ಮಾಡಲು 25,000 ಕೋಟಿ ರೂಪಾಯಿ ನೀಡಿದ್ದೆ. ಅಭಿವೃದ್ಧಿ ಎಲ್ಲೂ ನಿಲ್ಲಲಿಲ್ಲ, ಶಾಸಕರ ಅನುದಾನಕ್ಕೆ ಕೂಡ ಕತ್ತರಿ ಬೀಳಲಿಲ್ಲ. ಅವರ ಭಾಗ್ಯಗಳಿಗೂ ಹಣ ನೀಡಿದೆ. ಎಲ್ಲವನ್ನೂ ಜನರ ಮುಂದೆ ಇಡಿ. ನಿಮಗೆ ಧೈರ್ಯ ಇದ್ದರೆ ಶ್ವೇತಪತ್ರ ಹೊರಡಿಸಿ ಎಂದು ಆಗ್ರಹಿಸಿದ್ದಾರೆ.