ನಾಳೆ EPS ನಿವೃತ್ತರ ವಿವಿಧ ಬೇಡಿಕೆಗಳ ಈಡೇರಿಕಗೆ ಆಗ್ರಹಿಸಿ ಪಿಎಫ್ ಕಚೇರಿ ಮುಂದೆ 38ನೇ ಬೃಹತ್ ಪ್ರತಿಭಟನೆ: ನಂಜುಡೇಗೌಡ

ಬೆಂಗಳೂರು: ಇಪಿಎಸ್ ನಿವೃತ್ತರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಾಳೆ ಅಂದರೆ ಫೆ. 27ರ ಶುಕ್ರವಾರ ಬೆಳಗ್ಗೆ 10:30ಕ್ಕೆ ಬೃಹತ್ ಪ್ರತಿಭಟನೆಯನ್ನು ನಗರದ ರಿಚ್ಮಂಡ್ ವೃತ್ತದಲ್ಲಿರುವ ಪ್ರಾದೇಶಿಕ ಭವಿಷ್ಯ ನಿಧಿ ಕಚೇರಿ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಪ್ರತಿಭಟನೆಗೆ ಎಲ್ಲ ಇಪಿಎಸ್ ನಿವೃತ್ತರು ಆಗಮಿಸಬೇಕೆಂದು EPS-95, ಬಿಎಂಟಿಸಿ ಹಾಗೂ ಕೆಎಸ್ಆರ್ಟಿಸಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ನಂಜುಂಡೇಗೌಡ ವಿನಂತಿಸಿಕೊಂಡಿದ್ದಾರೆ.

ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಫೆ. 27ರಂದು “ನಿಧಿ ಆಪ್ಕೆ ನಿಕಟ್” ಇಪಿಎಸ್ ಪಿಂಚಣಿದಾರರ 38ನೇ ಪ್ರತಿಭಟನೆ ನಗರದ ರಿಚ್ಮಂಡ್ ವೃತ್ತದಲ್ಲಿರುವ ಪಿಎಫ್ ಕಚೇರಿ ಆವರಣದಲ್ಲಿ ನಡೆಯಲಿದೆ ಎಂದು ತಿಳಿಸಿದ್ದಾರೆ.
ನಾವು ಸಂಸ್ಥೆಯ ಸ್ವಾಭಿಮಾನಿ ನಿವೃತ್ತರೆಂದು ಹೇಳಿಕೊಳ್ಳಲು ಹೆಮ್ಮೆ ಇದೆ. ಇಪಿಎಸ್ ನಿವೃತ್ತರಲ್ಲಿ ಯಾರು ಶ್ರೇಷ್ಠರು ಇಲ್ಲ, ಯಾರು ಕನಿಷ್ಠರು ಇಲ್ಲ, ನಾವೆಲ್ಲರೂ ಒಂದೇ. ಸಂಸ್ಥೆಯ ನೌಕರರಾದ ನಾವು, ಕೆಲವೊಂದು ತತ್ವ ಸಿದ್ಧಾಂತಗಳಿಗೆ ಬದ್ಧರಾಗಿದ್ದು ಎಂದಿಗೂ ರಾಜಿ ಮಾಡಿಕೊಂಡವರಲ್ಲ.
ಕಳೆದ ಜನವರಿ 13 ಹಾಗೂ ಇದೇ ಫೆಬ್ರವರಿ 19ರಂದು ನಗರದ ಫ್ರೀಡಂ ಪಾರ್ಕ್ ನಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಾಲ್ಕೂ ಸಾರಿಗೆ ನಿಗಮಗಳ ಜಂಟಿ ಕ್ರಿಯಾ ಸಮಿತಿ ಹಮ್ಮಿಕೊಂಡಿದ್ದ “ಬೆಂಗಳೂರು ಚಲೋ” ಪ್ರತಿಭಟನಾ ಸಮಾವೇಶ ಅಭೂತ ಪೂರ್ವಾಗಿತ್ತು. ಈ ಸಭೆಗೆ ನಮ್ಮ 4ಸಾರಿಗೆ ನಿಗಮಗಳ ಇಪಿಎಸ್ ನಿವೃತ್ತರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಮೆರಗು ತಂದರು ಎಂದರೆ ತಪ್ಪಾಗಲಾರದು.
ಸಂಸ್ಥೆಯ ನಿವೃತ್ತರು ಹಾಗೂ ಸೇವೆಯಲ್ಲಿರುವ ನೌಕರರ ಮಧ್ಯೆ ಸಹೋದರ ಭ್ರಾತೃತ್ವ ಇದ್ದು, ನಮ್ಮಿಬ್ಬರ ಸಂಕಷ್ಟಗಳು ಒಂದೇ ಆಗಿವೆ. ಮುಂದಿನ ದಿನಗಳಲ್ಲಿ ಜಂಟಿಯಾಗಿ ಹೋರಾಟ ಮಾಡುವ ಮೂಲಕ ಯಶಸ್ಸು ಕಾಣೋಣ ಎಂದು ತಿಳಿಸಿದ್ದಾರೆ.
ಇನ್ನು ಮೊದಲನೇ ಹಂತದ ಪಾರ್ಲಿಮೆಂಟ್ ಬಜೆಟ್ ಅಧಿವೇಶನ ಇಪಿಎಸ್ ನಿವೃತ್ತರ ಪಾಲಿಗೆ ಅತ್ಯಂತ ನಿರಾಶದಾಯಕವಾಗಿತ್ತು. ಎರಡನೇ ಹಂತದ ಅಧಿವೇಶನ ಮಾರ್ಚ್ 9 ರಿಂದ ಏಪ್ರಿಲ್ 2ರವರೆಗೆ ಒಟ್ಟು 15 ದಿನಗಳ ಕಾಲ ನಡೆಯಲಿದ್ದು, ನಂಬಲಾರ್ಹ ಮೂಲಗಳ ಪ್ರಕಾರ, ಈ ಅವಧಿಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಅವರು ಇಪಿಎಸ್ಗೆ ಸಂಬಂಧಿಸಿದಂತೆ ಸಪ್ಲಿಮೆಂಟರಿ ಬಜೆಟ್ ಮಂಡಿಸಲಿದ್ದಾರೆ ಎಂಬ ಮಾಹಿತಿ ಇದೆ.
ಜತೆಗೆ ಮಾರ್ಚ್ 2 ರಂದು ದೆಹಲಿಯ ಕೇಂದ್ರೀಯ ಭವಿಷ್ಯ ನಿಧಿ ಕಚೇರಿಯಲ್ಲಿ 239ನೇ ಸಿಬಿಟಿ ಸಭೆ ಆಯೋಜಿಸಿದ್ದು, ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಹಾಗೂ ಇಪಿಎಫ್ಒ ಅಧಿಕಾರಿಗಳಿಗೆ ಎಚ್ಚರಿಕೆಯ ಸಂದೇಶ ನೀಡಲು, ಪ್ರತಿಭಟನೆಯನ್ನು ಫೆ.27ರಂದು ಆಯೋಜಿಸಲಾಗಿದೆ ಎಂದು ವಿವರಿಸಿದ್ದಾರೆ.
ಇನ್ನು ಸಮರಸವೇ ಜೀವನ, ವಿರಸವೇ ಮರಣ ಎಂಬ ನಾಣ್ನುಡಿ ಎಂದಿಗೂ ಪ್ರಸ್ತುತ. ಕಠಿಣ ಪರಿಶ್ರಮದಿಂದ, ಸಂಸ್ಥೆಯ ನೌಕರರು ತಮ್ಮ ಬದುಕಿನುದ್ದಕ್ಕೂ ಹೋರಾಟ ಮಾಡುತ್ತಲೇ ಬಂದಿದ್ದು, ಇದು ಹೊಸತೇನಲ್ಲ. ನಿವೃತ್ತಿಗೂ ಮೊದಲು ಅಥವಾ ನಂತರ ಹೋರಾಟವೇ ನಮ್ಮ ಬದುಕು ಎಂದರೆ ತಪ್ಪಾಗಲಾರದು.
2 ನೇ ಹಂತದ ಬಜೆಟ್ ಅಧಿವೇಶನದಲ್ಲಿ ವಿವಿಧ ದಿನಾಂಕಗಳು ಸೇರಿ, 3 ದಿನಗಳ ಕಾಲ ಹಾಗೂ ರಾಜ್ಯಸಭೆಯಲ್ಲಿ 3 ದಿನಗಳ ಕಾಲ ಇದ್ದು, ಇಪಿಎಸ್ ಪಿಂಚಣಿ ವಿಷಯಕ್ಕೆ ಸಂಬಂಧಿಸಿದಂತೆ ಸದಸ್ಯರು ಕೇಳುವ ಪ್ರಶ್ನೆಗಳಿಗೆ ಕಾರ್ಮಿಕ ಹಾಗೂ ಉದ್ಯೋಗ ಖಾತೆ ಸಚಿವರು ಉತ್ತರಿಸುವ ಪ್ರಶ್ನೋತ್ತರ ಕಾರ್ಯಕ್ರಮದೆ. ಈ ದೃಷ್ಟಿಯಿಂದ ಫೆ.27ರ “ನಿಧಿ ಆಪ್ಕೆ ನಿಕಟ್” ಕಾರ್ಯಕ್ರಮದಂದು, ಪಿಎಫ್ ಕಚೇರಿ ಆವರಣದಲ್ಲಿ ಇಪಿಎಸ್ ನಿವೃತ್ತರು ಕೈಗೊಳ್ಳುವ, ಪ್ರತಿಭಟನಾ ಸಭೆ ಹಾಗೂ ಸಲ್ಲಿಸುವ ಮನವಿ ಪತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ತಿಳಿಸಿದ್ದಾರೆ.
ಇನ್ನು ಇಪಿಎಸ್ ನಿವೃತ್ತರ ಬಹುದಿನಗಳ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ, ಭಾರತೀಯ ಮಜ್ದೂರ್ ಸಂಘ, ರಾಷ್ಟ್ರೀಯ ಸಂಘರ್ಷ ಸಮಿತಿ, ರಾಷ್ಟ್ರೀಯ ಸಮನ್ವಯ ಸಮಿತಿ, ಇನ್ನು ಹಲವಾರು ರಾಷ್ಟ್ರಯ ಸಂಘಟನೆಗಳು ನಿರಂತರವಾಗಿ ಹೋರಾಟ ಮಾಡುತ್ತಿದ್ದು, ಸರ್ವರೂ ಸಮಾನರು, ನಾವೆಲ್ಲರೂ ಇಪಿಎಸ್ ಪಿಂಚಣಿದಾರರು, ನಮಗೆ ಬದುಕು ಮುಖ್ಯ !!!. ಈ ಬಾರಿ 2020ರ ನಂತರ ನಿವೃತ್ತರಾದ ಸಂಸ್ಥೆಯ ನೌಕರರೂ ಅಧಿಕ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಬಿಎಂಟಿಸಿ & ಕೆಎಸ್ಆರ್ಟಿಸಿ ಹಾಗೂ ಕೆಎಸ್ಆರ್ಟಿಸಿ ಕ್ಷೇಮಾಭಿವೃದ್ಧಿ ಟ್ರಸ್ಟ್, ಚಿಕ್ಕಬಳ್ಳಾಪುರ ವತಿಯಿಂದ ಆಯೋಜಿಸಿರುವ ಈ ಇಪಿಎಸ್ ನಿವೃತ್ತರ ಪ್ರತಿಭಟನಾ ಕೂಗು ದೆಹಲಿಯ ಸಿಬಿಟಿ ಸಭೆ ಹಾಗೂ ಬಜೆಟ್ ಅಧಿವೇಶನಕ್ಕೆ ತಲಪಬೇಕು, ಹಾಗಾಗಿ ಕನಿಷ್ಠ ಹೆಚ್ಚುವರಿ ಪಿಂಚಣಿ ಹಾಗೂ ಅಧಿಕ ಪಿಂಚಣಿ ಈ ಎರಡು ಅಂಶಗಳಿಗೆ ಸಂಬಂಧಿಸಿದಂತೆ ಪ್ರತಿಭಟನೆ ಹಾಗೂ ಮನವಿಪತ್ರ ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.
ಪ್ರತಿಭಟನೆಯಲ್ಲಿ ಕಾರ್ಮಿಕ ಮುಖಂಡರು, ನಮ್ಮ ಸಂಘದ ಎಲ್ಲ ಪದಾಧಿಕಾರಿಗಳು, ಚಿಕ್ಕಬಳ್ಳಾಪುರ ಕೆಎಸ್ಆರ್ಟಿಸಿ ಕ್ಷೇಮಾಭಿವೃದ್ಧಿ ಟ್ರಸ್ಟ್ ನ ಪದಾಧಿಕಾರಿಗಳು, ಸದಸ್ಯರು, ವಿವಿಧ ಸಂಘಟನೆಗಳ ಎಲ್ಲ ಇಪಿಎಸ್ ನಿವೃತ್ತರು, ಕಂಪನಿ ಹಾಗೂ ಕಾರ್ಖಾನೆಗಳ ನಿವೃತ್ತರು ಆಗಮಿಸಲಿದ್ದು, ಅಧಿಕಾರಿಗಳು ನಮ್ಮ ಮುಖಂಡರಿಗೆ ಲಿಖಿತ ರೂಪದಲ್ಲಿ ಕೊಟ್ಟ ಭರವಸೆಯನ್ನು ಕೇಂದ್ರ ಸರ್ಕಾರ ಈಡೇರಿಸಲೇಬೇಕು?. ತಪ್ಪಿದಲ್ಲಿ ಮುಂದಿನ ಆಗು ಹೋಗುಗಳಿಗೆ ಕೇಂದ್ರ ಸರ್ಕಾರವೇ ಹೊಣೆಯಾಗಬೇಕಾಗುತ್ತದೆ ಎಂದು ಎಚ್ಚರಿಸಲಾಗುವುದು.
ಹೀಗಾಗಿ ಅಂದು ನಗರದ ರಿಚ್ಮಂಡ್ ವೃತ್ತದ ಪ್ರಾದೇಶಿಕ ಭವಿಷ್ಯ ನಿಧಿ ಕಚೇರಿ ಆವರಣದಲ್ಲಿ ಜರುಗುವ ಪ್ರತಿಭಟನೆಯಲ್ಲಿ ಎಲ್ಲ ಇಪಿಎಸ್ ನಿವೃತ್ತರು ಭಾಗವಹಿಸಬೇಕೆಂದು ಕಾರ್ಯಕಾರಿ ಸಮಿತಿ ಪರವಾಗಿ ನಂಜುಂಡೇಗೌಡ ವಿನಂತಿಸಿಕೊಂಡಿದ್ದಾರೆ.
Related









