ಬೆಂಗಳೂರು: ಫೆಬ್ರವರಿ 14ರ ವ್ಯಾಲೆಂಟೈನ್ಸ್ ಡೇ ದಿನ ಪ್ರೇಮಿಗಳ ಪಾರ್ಟಿ, ಸೆಲೆಬ್ರೇಷನ್ ಜೋರಾಗಿರುತ್ತದೆ. ಆದರೆ ಸೆಲೆಬ್ರೇಷನ್ ಮೂಡ್ ನಲ್ಲಿದ್ದ ಪ್ರೇಮಿಗಳಿಗೆ ಈ ಬಾರಿ ನಿರಾಶೆ ಕಾದಿದ್ದು, ಮದ್ಯ ಸಿಗ್ತಿಲ್ಲ.
ಆದರೆ ಮದ್ಯ ಮಾರಾಟ ನಿಷೇಧಕ್ಕೆ ಹೋಟೆಲ್ ಅಸೋಸಿಯೇಷನ್‌ನಿಂದ ವಿರೋಧ ವ್ಯಕ್ತವಾಗಿದೆ. ಹೌದು! ಬೆಂಗಳೂರು ಶಿಕ್ಷಕರ ಕ್ಷೇತ್ರಕ್ಕೆ ವಿಧಾನಪರಿಷತ್ ಉಪಚುನಾವಣೆ ಹಿನ್ನೆಲೆ ವ್ಯಾಲೆಂಟೈನ್ಸ್ ಡೇ ಅಂದ್ರೆ ಫೆಬ್ರವರಿ 14ರ ಸಂಜೆ 5 ಗಂಟೆಯಿಂದ ಫೆಬ್ರವರಿ 17ರ ಬೆಳಗ್ಗೆ 6 ಗಂಟೆವರೆಗೆ ನಗರದ ಕೆಲವು ಭಾಗಗಳಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿದೆ.
14, 15, 16 ಹಾಗೂ 20ನ್ನು ಡ್ರೈ ಡೇ ಅಂತ ಘೋಷಣೆ ಮಾಡಲಾಗಿದ್ದು, ಬೆಂಗಳೂರಿನಲ್ಲಿ ಫೆಬ್ರವರಿ 14ನ್ನು ವಿಜೃಂಭಣೆಯಿಂದ ಆಚರಿಸಲು ಸಿದ್ಧರಾಗಿದ್ದ ಯುವಜನತೆಗೆ ಇದರಿಂದ ನಿರಾಸೆಯಾಗಿದೆ.
ಪ್ರೇಮಿಗಳ ದಿನಕ್ಕಾಗಿ ವಿಶೇಷ ಸಿದ್ಧತೆಗಳನ್ನು ಮಾಡಿಕೊಂಡಿದ್ದ ರೆಸ್ಟೋರೆಂಟ್, ಪಬ್, ಬಾರ್‌ಗಳಲ್ಲಿ ಮದ್ಯ ಮಾರಾಟಕ್ಕೆ ನಿರ್ಬಂಧ ಹೇರಿದೆ. ಇದಕ್ಕೆ ಹೋಟೆಲ್ ಅಸೋಸಿಯೇಷನ್ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಇಂಥ ವಿಶೇಷ ದಿನಗಳಲ್ಲಿ ನಮ್ಮ ಕೈ ಕಟ್ಟಿಹಾಕುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದೆ.
ಇನ್ನು ನಾಲ್ಕು ದಿನದ ಮದ್ಯ ಮಾರಾಟ ನಿಷೇಧದಿಂದ ಕಾರ್ಮಿಕರ ಸಂಬಳ, ಕಟ್ಟಡ ಬಾಡಿಗೆ ಮುಂತಾದ ಖರ್ಚುಗಳನ್ನು ನಿಭಾಯಿಸಲು ತೊಂದರೆಯಾಗಲಿದೆ. ಕೇವಲ 16 ಸಾವಿರ ಮತ ಚಲಾವಣೆಗೆ ಹೀಗೇಕೆ? ಚುನಾವಣೆಗೆ ನಾಲ್ಕು ದಿನ ಮದ್ಯ ಮಾರಾಟ ನಿಷೇಧದ ಆದೇಶವನ್ನು ಪುನರ್ ಪರಿಶೀಲನೆ ನಡೆಸಬೇಕೆಂದು ಬೆಂಗಳೂರು ಚುನಾವಣಾ ಅಧಿಕಾರಿಗಳಿಗೆ ಹೋಟೆಲ್ ಅಸೋಸಿಯೇಷನ್ ಪತ್ರ ಬರೆದು ಮನವಿ ಮಾಡಿದೆ.
ಒಟ್ಟಿನಲ್ಲಿ ವ್ಯಾಲೆಂಟೆನ್ಸ್ ಡೇ ಖುಷಿಯಲ್ಲಿದ್ದ ಮದ್ಯ ಪ್ರೇಮಿಗಳಿಗೆ ಹಾಗೂ ಆದಾಯದ ನಿರೀಕ್ಷೆಯಲ್ಲಿದ್ದ ಹೋಟೆಲ್, ರೆಸ್ಟೋರೆಂಟ್‌ಗಳಿಗೆ ನಿರಾಶೆಯಾಗಿರೋದಂತೂ ನಂಬಲಾಗದಿದ್ದರೂ ಇದೇ ಸತ್ಯ.