ಮೈಸೂರು: ಭ್ರೂಣ ಪತ್ತೆ ಹಾಗೂ ಹತ್ಯೆ ಪ್ರಕರಣ ಸಂಬಂಧ ಜಿಲ್ಲೆಯಲ್ಲಿ ಅಧಿಕಾರಿಗಳು ಅಲರ್ಟ್ ಆಗಿದ್ದು, ಮೈಸೂರು ನಗರ ಹಾಗೂ ಜಿಲ್ಲೆಯ 139 ಸ್ಕ್ಯಾನಿಂಗ್ ಸೆಂಟರ್ನ ಮೇಲೆ ಹದ್ದಿನ ಕಣ್ಣಿಟ್ಟು ಕಾಯುತ್ತಿದ್ದಾರೆ. ಆದರೂ ಕಣ್ತಪ್ಪಿಸಿ ಅಕ್ರಮ ಎಸಗಿದ ಬಗ್ಗೆ ಮಾಹಿತಿ ನೀಡಿದರೆ ಅಂತಹವರಿಗೆ ಬಹುಮಾನ ನೀಡುವುದಾಗಿ ಘೋಷಣೆ ಮಾಡಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕುಮಾರಸ್ವಾಮಿ ಭ್ರೂಣ ಪತ್ತೆ, ಹತ್ಯೆ ಬಗ್ಗೆ ಮಾಹಿತಿ ನೀಡಿದರೆ 50 ಸಾವಿರ ರೂ. ನಗದು ಬಹುಮಾನವಾಗಿ ನೀಡಲಾಗುವುದು ಎಂದು ಘೋಷಣೆ ಮಾಡಿದರು.
ಮೈಸೂರಿನಲ್ಲಿ ಹೆಣ್ಣು ಭ್ರೂಣ ಹತ್ಯೆ ಪ್ರಕರಣ ಸಂಬಂಧ ಮೈಸೂರಿನ ಮಾತಾ ಆಸ್ಪತ್ರೆಯಲ್ಲೇ ಆಪರೇಷನ್ ನಡೆಯುತಿತ್ತು ಎಂಬ ವಿಚಾರ ಬೆಳಕಿಗೆ ಬರುತ್ತಿದ್ದಂತೆ ಮೈಸೂರಿನ ತಾಲೂಕು ಆರೋಗ್ಯಧಿಕಾರಿ ಡಾ.ರಾಜೇಶ್ವರಿ ಮತ್ತು ಈ ಹಿಂದೆ ಕರ್ತವ್ಯ ನಿರ್ವಹಿಸುತ್ತಿದ್ದ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ರವಿ ಅವರನ್ನು ಅಮಾನತು ಮಾಡಲಾಗಿತ್ತು.
ಈಗ ಈ ಪ್ರಕರಣ ಹೆಚ್ಚು ತೀವ್ರತೆ ಪಡೆಯುತ್ತಿದ್ದು, ಮೈಸೂರು ಜಿಲ್ಲೆಯ 139 ಸ್ಕ್ಯಾನಿಂಗ್ ಸೆಂಟರ್ ಮೇಲೆ ತೀವ್ರ ನಿಗಾ ಇಡಲಾಗುತ್ತಿದೆ. ಟಾಸ್ಕ್ ಪೋರ್ಸ್ ನಿಂದ ಎಲ್ಲಾ ಕಡೆ ನಿಗಾ ಇಡಲಾಗಿದೆ. ಭ್ರೂಣ ಪತ್ತೆ, ಹತ್ಯೆ ಬಗ್ಗೆ ಮಾಹಿತಿ ನೀಡಿದರೆ 50 ಸಾವಿರ ನಗದು ಬಹುಮಾನವಾಗಿ ನೀಡಲಾಗುತ್ತೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಕುಮಾರಸ್ವಾಮಿ ಅವರು ಘೋಷಣೆ ಮಾಡಿದ್ದು, ಸಾರ್ವಜನಿಕರು ಇದನ್ನು ಹೇಗೆ ಪರಿಗಣಿಸುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.
ಇನ್ನು ಅಕ್ರಮ ಎಸಗುವ ಸ್ಕ್ಯಾನಿಂಗ್ ಸೆಂಟರ್ಗಳ ಬಗ್ಗೆ ಮಾಹಿತಿ ನೀಡಿದವರ ಬಗ್ಗೆ ಗೌಪ್ಯತೆ ಕಾಪಾಡಲಾಗುವುದಲ್ಲದೆ, ಭ್ರೂಣ ಪತ್ತೆ, ಹತ್ಯೆ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ದೊಡ್ಡಮಟ್ಟದ ಕಾರ್ಯಾಗಾರದ ಮೂಲಕ ಜಾಗೃತಿ ಮೂಡಿಸಲಾಗುವುದು ಎಂದು ಡಾ.ಕುಮಾರಸ್ವಾಮಿ ತಿಳಿಸಿದರು.