
ಬೆಂಗಳೂರು: ವಿಶ್ವ ಪಾರಂಪರಿಕ ಲಾಲ್ಬಾಗ್ ಹೂತೋಟದಲ್ಲಿ ಇದೇ ಮಾ.2ರಂದು ಬೆಳಗ್ಗೆ 8 ಗಂಟೆಗೆ ಇಪಿಎಸ್ ಪಿಂಚಣಿದಾರರ 86ನೇ ಮಾಸಿಕ ಸಭೆ ಆಯೋಜಿಸಲಾಗಿದೆ ಎಂದು KSRTC & BMTC ನಿವೃತ್ತ ನೌಕರರ ಸಂಘದ ಅಧ್ಯಕ್ಷ ನಂಜುಂಡೇಗೌಡ ತಿಳಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಕಳೆದ ಫೆಬ್ರವರಿ 27 ರಂದು ನಗರದ ರಿಚ್ಮಂಡ್ ವೃತ್ತದ ಪ್ರಾದೇಶಿಕ ಭವಿಷ್ಯ ನಿಧಿ ಕಚೇರಿ ಆವರಣದಲ್ಲಿ ಇಪಿಎಸ್ ನಿವೃತ್ತರು ನಡೆಸಿದ ಪ್ರತಿಭಟನಾ ಸಭೆ ಹಾಗೂ ಮನವಿ ಸಲ್ಲಿಸುವ ಕಾರ್ಯ ಅಭೂತಪೂರ್ವವಾಗಿತ್ತು.
ಫೆ. 28 ರಂದು ದೆಹಲಿಯಲ್ಲಿ ಉದ್ಯೋಗ ಮತ್ತು ಕಾರ್ಮಿಕ ಖಾತೆ (minister for labour & employment) ಸಚಿವರಾ ಮುನ್ಸೂಖ್ ಮಾಂಡವೀಯ ಅವರ ಅಧ್ಯಕ್ಷತೆಯಲ್ಲಿ ಜರುಗಿದ, 237ನೇ ಸಿಬಿಟಿ ಸಭೆ ಇಪಿಎಸ್ ನಿವೃತ್ತರ ಪಾಲಿಗೆ ಅತ್ಯಂತ ನಿರಾಶಾದಾಯಕವಾಗಿತ್ತು.
ಸಭೆಯಲ್ಲಿ ಇಪಿಎಸ್ ನಿವೃತ್ತರ ಕನಿಷ್ಠ ಪಿಂಚಣಿ (₹ 7500/- + ಭತ್ಯೆ, ವೈದ್ಯಕೀಯ ಸೌಲಭ್ಯ) ಅಥವಾ ಅಧಿಕ ಪಿಂಚಣಿಯ ಬಗ್ಗೆ ಯಾವುದೇ ಪ್ರಸ್ತಾಪ ಇಲ್ಲದೆ ಇರುವುದನ್ನು ಕಂಡು, ನಿವೃತ್ತರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ ಎಂದು ತಿಳಿಸಿದ್ದಾರೆ.
ಇನ್ನು 2ನೇ ಅಂತದ ಬಜೆಟ್ ಅಧಿವೇಶನದ ಅವಧಿ ಮಾರ್ಚ್ 10 ರಿಂದ ಪ್ರಾರಂಭವಾಗಿ ಏಪ್ರಿಲ್ 04ಕ್ಕೆ ಮುಕ್ತಾಯವಾಗಲಿದ್ದು, ಈ ಅಧಿವೇಶನದಲ್ಲಿ ನಮ್ಮ ಬೇಡಿಕೆಗಳು ಈಡೇರದೆ ಹೋದಲ್ಲಿ ಮುಂದೆ ನಮ್ಮ ಹೋರಾಟದ ದಿಕ್ಕನ್ನೇ ಬದಲಾಯಿಸಿ ಕೊಳ್ಳಬೇಕಾಗುತ್ತದೆ. ಏನೇ ಆಗಲಿ? ನಾವೆಲ್ಲರೂ ಹಿರಿಯ ನಾಗರಿಕರಾಗಿದ್ದು, ವಿವೇಚನೆಯಿಂದ ನಮ್ಮ ಮುಂದಿನ ಹೋರಾಟದ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗುತ್ತದೆ.
ಜತೆಗೆ “ನಮಗೆ ಕಾಯುವ ಸಹನೆ ಇದ್ದರೆ, ಬಯಸಿದ್ದೆಲ್ಲ ಪಡೆಯುವ ಅವಕಾಶ ಇದ್ದೇ ಇರುತ್ತದೆ. ಎಷ್ಟೋ ಸಲ ನಾವು ಬಯಸಿದ್ದು, ಸಿಗದೇ ಇರಲು ನಮ್ಮ ಅವಸರವೇ ಕಾರಣವಾಗಬಹುದು” ಎಂದು ಹೇಳಿದ್ದಾರೆ.
ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ನಂತರ ಇಪಿಎಫ್ಒ ಅಧಿಕಾರಿಗಳು ಹೊರಡಿಸಿರುವ ಹಲವಾರು ಸುತ್ತೋಲೆಗಳು ದೋಷ ಪೂರ್ಣವಾಗಿದ್ದು, ನ್ಯಾಯಾಲಯದ ತೀರ್ಪಿಗೆ ವಿರುದ್ಧವಾಗಿದ್ದು, ಇವುಗಳನ್ನು ಸಮರ್ಥಿಸಿಕೊಳ್ಳಲು ಅಧಿಕಾರಿಗಳು ಹಲವಾರು ಹಿಂಬರಹಗಳನ್ನು ನೀಡಿದ್ದಾರೆ. ಆರ್ಟಿಐನಲ್ಲಿ ಇವರು ನೀಡಿರುವ ಸಮಜಾಯಿಷಿ, ಇವೆಲ್ಲವನ್ನೂ ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗುತ್ತಿದೆ. ನ್ಯಾಯಾಲಯದ ತೀರ್ಪಿನ ಬಗ್ಗೆ ನಮಗೆ ಸಂಪೂರ್ಣ ನಂಬಿಕೆ ಹಾಗೂ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.
ಇನ್ನು ಈ ಎಲ್ಲದರ ನಡುವೆ ಮಾಸಿಕ ಸಭೆಗೆ ಎನ್ಎಸಿ ರಾಜ್ಯಾಧ್ಯಕ್ಷ ಜಿಎಸ್ಎಮ್ ಸ್ವಾಮಿ, ಚಿಕ್ಕಬಳ್ಳಾಪುರದ ಕೆಎಸ್ಆರ್ಟಿಸಿ, ಕ್ಷೇಮಾಭಿವೃದ್ಧಿ ಟ್ರಸ್ಟ್ ಎಲ್ಲ ಪದಾಧಿಕಾರಿಗಳು/ ಸದಸ್ಯರು, ಎಚ್ಎಎಲ್, ಎಚ್ಎಂಟಿ, ಕಿರ್ಲೋಸ್ಕರ್, ಲಿಡ್ಕರ್, ಎಸ್ಕಾರ್ಟ್ಸ್ ಇನ್ನು ಹಲವಾರು ಕಂಪನಿಗಳ ಇಪಿಎಸ್ ನಿವೃತ್ತರು ಭಾಗವಹಿಸಲಿದ್ದು, ಮುಖಂಡರು ಇತ್ತೀಚಿನ ಎಲ್ಲ ಬೆಳವಣಿಗೆಗಳು ಹಾಗೂ ನಮ್ಮ ಮುಂದಿನ ಹೋರಾಟದ ರೂಪರೇಷೆ ಬಗ್ಗೆ ಪ್ರಸ್ತುತಪಡಿಸಲಿದ್ದಾರೆ.
ತಾವೆಲ್ಲರೂ ವಿಶ್ವ ಪಾರಂಪರಿಕ ಲಾಲ್ ಬಾಗ್ ಹೂತೋಟದಲ್ಲಿ ವಾಯು ವಿಹಾರ ನಡೆಸಿ, ತಮ್ಮ ಹಳೆಯ ಸ್ನೇಹಿತರ ಭೇಟಿ, ವಿಚಾರ ವಿನಿಮಯ ಹಾಗೂ ಈ ಮೇಲ್ಕಂಡ ಎಲ್ಲಾ ಅಂಶಗಳ ಬಗ್ಗೆ ಚರ್ಚಿಸೋಣ. ಅದಕ್ಕಾಗಿ ಎಲ್ಲ ನಿವೃತ್ತ ನೌಕರರು ಭಾಗವಹಿಸಬೇಕೆಂದು ಎಂದು ಮನವಿ ಮಾಡಿದ್ದಾರೆ.