ಕೃಷ್ಣರಾಜಪೇಟೆ: ಮಂಡ್ಯದಲ್ಲಿ ನಡೆಯುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಲಕ್ಷ ಲಕ್ಷ ಸಂಖ್ಯೆಯಲ್ಲಿ ಭಾಗವಹಿಸಿ ಕನ್ನಡಾಭಿಮಾನ ಮೆರೆಯಿರಿ ಎಂದು ಸಾಹಿತ್ಯ ಸಮ್ಮೇಳನದ ಸಂಚಾಲಕಿ ಮೀರಾ ಶಿವಲಿಂಗಯ್ಯ ಕರೆ ನೀಡಿದ್ದಾರೆ.
ತಾಲೂಕಿನಲ್ಲಿ ಸಂಚರಿಸುತ್ತಿರುವ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಚಾರ ಜಾಗೃತಿ ರಥವನ್ನು ಸ್ವಾಗತಿಸಿ ತಾಯಿ ಭುವನೇಶ್ವರಿ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಅವರು ಮಾತನಾಡಿದರು.
30 ವರ್ಷಗಳ ನಂತರ ಮಂಡ್ಯ ನಗರದಲ್ಲಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ. ಡಿಸೇಂಬರ್ 20, 21 ಹಾಗೂ 22ರಂದು ನಡೆಯುತ್ತಿರುವ ಕನ್ನಡ ನುಡಿ ಹಬ್ಬದಲ್ಲಿ ಲಕ್ಷ ಲಕ್ಷ ಸಂಖ್ಯೆಯಲ್ಲಿ ಗ್ರಾಮೀಣ ಜನರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿ ಕನ್ನಡತನವನ್ನು ಪ್ರದರ್ಶನ ಮಾಡಿ ಇತಿಹಾಸ ನಿರ್ಮಿಸಬೇಕು ಎಂದು ಹೇಳಿದರು.
ಕನ್ನಡ ಸಾಹಿತ್ಯ ಸಮ್ಮೇಳನ ಮಂಡ್ಯ ನಗರದಲ್ಲಿ ನಡೆಯುತ್ತಿರುವುದು ಕನ್ನಡಿಗರಾದ ನಮಗೆ ಹೆಮ್ಮೆ ಹಾಗೂ ಅಭಿಮಾನದ ವಿಚಾರವಾಗಿದೆ. ಕನ್ನಡ ಸಾಹಿತಿಗಳು ಹಾಗೂ ಕನ್ನಡ ಪರ ಸಂಘಟನೆಗಳ ಮುಖಂಡರು ಸೇರಿದಂತೆ ಸಾಹಿತ್ಯ ಲೋಕದ ದಿಗ್ಗಜರು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಕವಿಗಳು ಹಾಗೂ ಸಾಹಿತಿಗಳನ್ನು ಕಂಡು ಮಾತನಾಡಿಸುವ ಜತೆಗೆ ಸಾಹಿತ್ಯ ಗೋಷ್ಠಿಗಳಲ್ಲಿ ಭಾಗವಹಿಸಿ ವಿಚಾರಗಳ ಮಂಥನ ಮಾಡಿಕೊಳ್ಳ ಬಹುದಾಗಿದೆ ಆದ್ದರಿಂದ ಇಂತಹ ಅಪೂರ್ವ ಅವಕಾಶವನ್ನು ಕಳೆದುಕೊಳ್ಳದೆ ನಮ್ಮ ಊರಿನಲ್ಲಿ ನಡೆಯುತ್ತಿರುವ ಕನ್ನಡ ಜಾತ್ರೆಯಲ್ಲಿ ಭಾಗವಹಿಸಿ ಸಮ್ಮೇಳನದ ಯಶಸ್ಸಿಗೆ ಸಂಪೂರ್ಣ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಗೌರವ ಕಾರ್ಯದರ್ಶಿಗಳಾದ ಹುಸ್ಕೂರು ಕೃಷ್ಣೇಗೌಡ, ಪಣ್ಣೆದೊಡ್ಡಿ ಹರ್ಷ, ಹರಿಹರಪುರ ಗ್ರಾಮ ಪಂಚಾಯತ್ ಅಧ್ಯಕ್ಷೆ ರತಿ ಶ್ರೀಧರ್, ಉಪಾಧ್ಯಕ್ಷ ನಂಧೀಶ್, ಪಿಡಿಓ ನಾಯಿದಾ ಅಖ್ತರ್, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಪೂರ್ಣ ಚಂದ್ರ ತೇಜಸ್ವಿ, ಕೆ.ಆರ್. ನೀಲಕಂಠ, ಮುಖ್ಯ ಶಿಕ್ಷಕ ಜಯರಾಮ್, ಪ್ರಾಂಶುಪಾಲ ರಫಿ ಅಹಮದ್ ಸೇರಿದಂತೆ ನೂರಾರು ಜನರು ಭಾಗವಹಿಸಿದ್ದರು.
ಜಿಲ್ಲೆಯ ಕಲಾವಿದರು ಸಾಹಿತ್ಯ ಸಮ್ಮೇಳನ ಕುರಿತು ನೀಡಿದ ನೃತ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಗ್ರಾಮೀಣ ಜನರು ಹಾಗೂ ವಿದ್ಯಾರ್ಥಿಗಳ ಮೆಚ್ಚುಗೆಗೆ ಪಾತ್ರವಾದವು. – ವರದಿ.ಡಾ.ಕೆ.ಆರ್.ನೀಲಕಂಠ