NEWSಬೆಂಗಳೂರು

ಜಿಬಿಎ: ಐದು ನಗರ ಪಾಲಿಕೆಗಳ ಸಲಹೆ ಆಧಾರದಲ್ಲಿ ಸರ್ಕಾರಕ್ಕೆ ಶಿಫಾರಸು – ಆಯೋಗದ ಅಧ್ಯಕ್ಷ ಡಾ. ನಾರಾಯಣ ಸ್ವಾಮಿ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಹೊಸದಾಗಿ ರಚನೆಯಾದ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ)ಗೆ ಅನುಗುಣವಾಗಿ ಶಿಫಾರಸುಗಳನ್ನು ಸಿದ್ಧಪಡಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದೆಂದು 5ನೇ ರಾಜ್ಯ ಹಣಕಾಸು ಆಯೋಗದ ಅಧ್ಯಕ್ಷ ಡಾ.ಸಿ.ನಾರಾಯಣ ಸ್ವಾಮಿ ತಿಳಿಸಿದಾರೆ.

ತಮ್ಮ ಅಧ್ಯಕ್ಷತೆಯಲ್ಲಿ ಇಂದು ಜಿಬಿಎ ಕೇಂದ್ರ ಕಚೇರಿಯ ಸಭಾಂಗಣ–01ರಲ್ಲಿ ನಡೆದ ಸಮಾಲೋಚನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಜಿಬಿಎ ಹಾಗೂ ಐದು ನಗರ ಪಾಲಿಕೆಗಳು ಮತ್ತು 369 ವಾರ್ಡ್‌ಗಳಿಗೆ ಅನುದಾನ ಒದಗಿಸುವ ಕುರಿತಾಗಿ ಎಲ್ಲ ಅಂಶಗಳನ್ನು ಒಳಗೊಂಡಂತೆ ಸಲಹೆಗಳನ್ನು ಕ್ರೋಢೀಕರಿಸಿ ಶಿಫಾರಸುಗಳನ್ನು ಸಿದ್ಧಪಡಿಸಿ ವರದಿ ಸಲ್ಲಿಸಲಾಗುವುದು ಎಂದು ಹೇಳಿದರು.

ರಾಜ್ಯ ಸರ್ಕಾರವು ಎಲ್ಲ ಅಂಶಗಳನ್ನು ಕೂಲಂಕಷವಾಗಿ ಪರಿಶೀಲಿಸಿ, ಪೂರ್ವಸಿದ್ಧತೆಗಳನ್ನು ಕೈಗೊಂಡು ಅತಿ ಕಡಿಮೆ ಅವಧಿಯಲ್ಲಿ ಜಿಬಿಎ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಐದು ನಗರ ಪಾಲಿಕೆಗಳ ಕಾರ್ಯವ್ಯಾಪ್ತಿಯನ್ನು ಸುಗಮವಾಗಿ ನಿರ್ವಹಿಸಲು ಜಿಬಿಎ ರಚಿಸಲಾಗಿದೆ.

ಜಿಬಿಎ ರಚನೆಯಾದ ನಂತರ ಕ್ಷಿಪ್ರಗತಿಯಲ್ಲಿ ಕಾರ್ಯ ನಿರ್ವಹಿಸಲಾಗುತ್ತಿದ್ದು, ಜಿಬಿಎ ಹಾಗೂ ಐದು ನಗರ ಪಾಲಿಕೆಗಳು ಕುಟುಂಬದಂತೆ ಕಾರ್ಯನಿರ್ವಹಿಸುತ್ತಿವೆ. ನಗರ ಪಾಲಿಕೆಗಳಿಂದ ಉತ್ತಮ ಪ್ರತಿಕ್ರಿಯೆ ದೊರೆತಿದ್ದು, ಎಲ್ಲ ಅಂಕಿ-ಅಂಶಗಳೊಂದಿಗೆ ಅಗತ್ಯ ಮಾಹಿತಿಯನ್ನು ಒದಗಿಸಲಾಗುವುದು ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಐದು ನಗರ ಪಾಲಿಕೆಗಳೊಂದಿಗೆ ಈಗಾಗಲೇ ಸಮಾಲೋಚನೆ ನಡೆಸಲಾಗಿದ್ದು, ಕೂಲಂಕುಷ ಚರ್ಚೆ ಮೂಲಕ ಸಲಹೆಗಳನ್ನು ಪಡೆಯಲಾಗಿದೆ. ಅದರ ಜತೆಗೆ ಸಾಂಕೇತಿಕವಾಗಿ ಕೆಲವು ವಾರ್ಡ್‌ಗಳಿಗೆ ಭೇಟಿ ನೀಡಿ, ಅಲ್ಲಿನ ಪರಿಸ್ಥಿತಿಯನ್ನು ಪರಿಶೀಲನೆ ಮಾಡಲಾಗಿದೆ ಎಂದು ತಿಳಿಸಿದರು.

ಆಯಾ ನಗರ ಪಾಲಿಕೆಗಳ ಭೌಗೋಳಿಕ, ಆರ್ಥಿಕ ಮತ್ತು ಸಾಮಾಜಿಕ ಪರಿಸ್ಥಿತಿಯನ್ನು ಅವಲೋಕಿಸಿ, ಜಿಬಿಎ ಹಾಗೂ ಐದು ನಗರ ಪಾಲಿಕೆಗಳಿಂದ ಲಭ್ಯವಾಗುವ ಸಲಹೆಗಳ ಆಧಾರದಲ್ಲಿ ಶಿಫಾರಸುಗಳನ್ನು ಸಿದ್ಧಪಡಿಸಲಾಗುವುದು. ಎಲ್ಲಾ ಅಂಶಗಳನ್ನು ವಿವಿಧ ಆಯಾಮಗಳಲ್ಲಿ ಅಧ್ಯಯನ ಮಾಡಿ, ಸವಿವರವಾದ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಹೇಳಿದರು.

ಜಿಬಿಎ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಅವರು ಮಾತನಾಡಿ, ಬಿಬಿಎಂಪಿ ಯನ್ನು ಜಿಬಿಎ ಆಗಿ ಪುನರ್‌ರಚನೆ ಮಾಡಿ ಐದು ನಗರ ಪಾಲಿಕೆಗಳನ್ನು ಸ್ಥಾಪಿಸಲಾಗಿದೆ. ಪಶ್ಚಿಮ ನಗರ ಪಾಲಿಕೆಯದಲ್ಲಿ 112 ವಾರ್ಡ್‌ಗಳು ಸೇರಲಿದ್ದು, ಬಹುತೇಕ ವಸತಿ ಪ್ರದೇಶಗಳೇ ಇರುವುದರಿಂದ ತೆರಿಗೆ ಸಂಗ್ರಹ ಪ್ರಮಾಣ ಕಡಿಮೆಯಾಗುವ ಸಾಧ್ಯತೆ ಇದೆ. ಆಯಾ ಪಾಲಿಕೆಗಳಲ್ಲಿ ಸಂಗ್ರಹವಾಗುವ ತೆರಿಗೆಯನ್ನು ಬೇರೆ ಪಾಲಿಕೆಗಳಿಗೆ ಯಾವ ರೀತಿಯಲ್ಲಿ ವರ್ಗಾಯಿಸಬೇಕು ಎಂಬುದನ್ನು ಅವಲೋಕಿಸಲಾಗುತ್ತಿದೆ ಎಂದು ಹೇಳಿದರು.

5ನೇ ರಾಜ್ಯ ಹಣಕಾಸು ಆಯೋಗದ ಸದಸ್ಯರಾದ ಮೊಹಮ್ಮದ್ ಸನಾವುಲ್ಲ ಅವರು ಮಾತನಾಡಿ, ಜಿಬಿಎ ವ್ಯಾಪ್ತಿಯಲ್ಲಿ ರಸ್ತೆಗಳು, ಕೆರೆಗಳು, ವಿದ್ಯುತ್ ದೀಪಗಳು, ಕುಡಿಯುವ ನೀರು ಹಾಗೂ ಸ್ವಚ್ಛತೆ ಸೇರಿದಂತೆ ಐದು ಪ್ರಮುಖ ವಿಷಯಗಳಿಗೆ ಹೆಚ್ಚಿನ ಆದ್ಯತೆ ನೀಡಿ ಕಾರ್ಯನಿರ್ವಹಿಸಬೇಕೆಂದು ತಿಳಿಸಿದರು.

ನಗರದಲ್ಲಿನ ಉದ್ಯಾನವನಗಳಲ್ಲಿ ಶೌಚಾಲಯಗಳು ಹಾಗೂ ಗ್ರಂಥಾಲಯಗಳ ನಿರ್ಮಾಣಕ್ಕೆ ಮುಂದಾಗಬೇಕಿದೆ. ನಗರದಲ್ಲಿ ಗ್ರಂಥಾಲಯಗಳ ಸಂಖ್ಯೆ ತೀರಾ ಕಡಿಮೆಯಾಗಿದ್ದು, ಕೊಳಗೇರಿ ಪ್ರದೇಶಗಳು ಸೇರಿದಂತೆ ಅಗತ್ಯವಿರುವ ಸ್ಥಳಗಳಲ್ಲಿ ಗ್ರಂಥಾಲಯಗಳನ್ನು ಸ್ಥಾಪಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂದು ಅವರು ಸಲಹೆ ನೀಡಿದರು.

ಈ ಸಂದರ್ಭದಲ್ಲಿ 5ನೇ ರಾಜ್ಯ ಹಣಕಾಸು ಆಯೋಗದ ಸದಸ್ಯ ಆರ್.ಎಸ್. ಫೋಂಡೆ, ಸಲಹೆಗಾರ ಡಾ. ಛಾಯಾ ದೇಗಾಂವಕರ್, ವಿಶೇಷ ಆಯುಕ್ತರಾದ ಡಾ. ಹರೀಶ್ ಕುಮಾರ್, ಆರ್.ರಾಮಚಂದ್ರನ್, ಸುರೋಳ್ಕರ್ ವಿಕಾಸ್ ಕಿಶೋರ್, ಬೆಂ.ಘ.ತ್ಯಾ.ನಿ.ನಿದ ಸಿಇಒ ಕರೀಗೌಡ, ಬಿಸ್ಮೈಲ್ ತಾಂತ್ರಿಕ ನಿರ್ದೇಶಕ ಬಿ.ಎಸ್.ಪ್ರಹ್ಲಾದ್, ಉಪ ಆಯುಕ್ತರಾದ ಗಾಯತ್ರಿ ನಾಯಕ್, ರವೀಂದ್ರ, ಸಹಾಯಕ ಆಯುಕ್ತ ಗಿರೀಶ್ ನಂದನ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Megha
the authorMegha

Leave a Reply

error: Content is protected !!