ಜ.24ರಂದು ಬೇಡಿಕೆ ಈಡೇರಿಸಲು ಆಗ್ರಹಿಸಿ ಕೇಂದ್ರ ಸಚಿವರಿಗೆ EPS-95, BMTC-KSRTC ನಿವೃತ್ತ ನೌಕರರಿಂದ ಮನವಿ ಸಲ್ಲಿಕೆ

ಬೆಂಗಳೂರು: ಕೇಂದ್ರ ಸರ್ಕಾರ ಈ ಬಾರಿ ನಮ್ಮ ಕನಿಷ್ಠ ಹೆಚ್ಚುವರಿ ಪಿಂಚಣಿ 7,500 ರೂ. + ಭತ್ಯೆ ಹಾಗೂ ವೈದ್ಯಕೀಯ ಸೌಲಭ್ಯ ಈ ಬೇಡಿಕೆಗಳನ್ನು ಈಡೇರಿಸಲು ವಿಫಲರಾದಲ್ಲಿ, ಮುಂದಿನ ದಿನಗಳಲ್ಲಿ ಇಪಿಎಸ್ ನಿವೃತ್ತರ ಹೋರಾಟ ಉಗ್ರ ರೂಪ ತಾಳಲಿದೆ ಎಂದು EPS-95, ಬಿಎಂಟಿಸಿ-ಕೆಎಸ್ಆರ್ಟಿಸಿ ನಿವೃತ್ತ ನೌಕರರ ಸಂಘ ದ ಅಧ್ಯಕ್ಷ ನಂಜುಂಡೇಗೌಡ ತಿಳಿಸಿದ್ದಾರೆ.

ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಈಗಾಗಲೇ ದೇಶಾದ್ಯಂತ ಇರುವ 78 ಲಕ್ಷ ಇಪಿಎಸ್ ನಿವೃತ್ತರ ಹೋರಾಟ ಅಂತಿಮ ಘಟ್ಟಕ್ಕೆ ಬಂದು ತಲುಪಿದ್ದು, ಜ.28ರಿಂದ ಪ್ರಾರಂಭವಾಗುವ ಬಜೆಟ್ ಅಧಿವೇಶನ ಇಪಿಎಸ್ ನಿವೃತ್ತರ ಪಾಲಿಗೆ ನಿರ್ಣಾಯಕ ಅಧಿವೇಶನವಾಗಲಿದೆ ಎಂದು ಹೇಳಿದ್ದಾರೆ.
ಇನ್ನು ಒಂದು ವೇಳೆ ಕೇಂದ್ರ ಸರ್ಕಾರ ಈ ಬಾರಿ ನಮ್ಮ ಕನಿಷ್ಠ ಹೆಚ್ಚುವರಿ ಪಿಂಚಣಿ 7,500 ರೂ. + ಭತ್ಯೆ ಹಾಗೂ ವೈದ್ಯಕೀಯ ಸೌಲಭ್ಯ ಈ ಬೇಡಿಕೆಗಳನ್ನು ಈಡೇರಿಸಲು ವಿಫಲರಾದಲ್ಲಿ, ಮುಂದಿನ ದಿನಗಳಲ್ಲಿ ಇಪಿಎಸ್ ನಿವೃತ್ತರ ಹೋರಾಟ ಉಗ್ರ ರೂಪ ತಾಳಲಿದೆ ಎಂದಿದ್ದಾರೆ.
ನಾವು ಈ ಹಿಂದಿನ ಇಪಿಎಸ್ ನಿವೃತ್ತರ ಮಾಸಿಕ ಸಭೆಯಲ್ಲಿ ಚರ್ಚಿಸಿ, ನಿರ್ಧರಿಸಿದಂತೆ, ಇದೇ ಜ. 24ರಂದು ಬೆಳಗ್ಗೆ 11ಗಂಟಿಗೆ ಕೇಂದ್ರ ಸರ್ಕಾರದ ಕಾರ್ಮಿಕ ಹಾಗೂ ಉದ್ಯೋಗ ಖಾತೆ ರಾಜ್ಯ ಸಚಿವರಾದ ಶೋಭಾ ಕರಂದ್ಲಾಜೆ ಅವರನ್ನು ಬೆಂಗಳೂರಿನ ಅವರ ಕಚೇರಿಯಲ್ಲಿ ಭೇಟಿ ಮಾಡಿ, ಇಪಿಎಸ್ ನಿವೃತ್ತರ ಬೇಡಿಕೆಗಳ ಬಗ್ಗೆ ಚರ್ಚಿಸಲು ಕಾಲಾವಕಾಶ ನಿಗದಿಪಡಿಸಲಾಗಿದೆ ಎಂದು ಹೇಳಿದ್ದಾರೆ.
ಶೋಭಾ ಕರಂದ್ಲಾಜೆ ಅವರಿಗೆ ನಾವು ನೀಡುತ್ತಿರುವ ಮನವಿ ಪತ್ರ, ಕನ್ನಡ ಹಾಗೂ ಇಂಗ್ಲಿಷ್ ಭಾಷೆಯಲ್ಲಿದ್ದು, ಇಪಿಎಸ್ ನಿವೃತ್ತರು ಈ ನಾಡಿನಲ್ಲಿ ಸಲ್ಲಿಸಿದ ಸೇವೆ, ನಡೆದು ಬಂದ ದಾರಿ, ನಿವೃತ್ತಿ ನಂತರ ಕಷ್ಟಗಳ ಸರಮಾಲೆ ಇವೆಲ್ಲವನ್ನು ಉಲ್ಲೇಖಿಸಿ ಬರೆಯಲಾಗಿದೆ. ಈ ಬಜೆಟ್ ಅಧಿವೇಶನದಲ್ಲಿ ನಮ್ಮ ಎಲ್ಲ ಬೇಡಿಕೆಗಳನ್ನು ಕೇಂದ್ರ ಸರ್ಕಾರ ಈಡೇರಿಸಲೇಬೇಕು. ಒಂದು ವೇಳೆ ಕೇಂದ್ರ ಸರ್ಕಾರ ವಿಳಂಬ ನೀತಿ ಅನುಸರಿಸಿದಲ್ಲಿ ಇಪಿಎಸ್ ನಿವೃತ್ತರು ಯಾವುದೇ ಶಕ್ತಿ ಪ್ರದರ್ಶನಕ್ಕೂ ಸಿದ್ದ ಎಂಬ ಸಂದೇಶವನ್ನು ಸಹ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಇನ್ನು ಮನವಿ ಪತ್ರ ಸಲ್ಲಿಸುವ ಕಾರ್ಯಕ್ರಮವನ್ನು ಇಪಿಎಸ್-95, ಬಿಎಂಟಿಸಿ & ಕೆಎಸ್ಆರ್ಟಿಸಿ ನಿವೃತ್ತ ನೌಕರರ ಸಂಘ ಹಾಗೂ ಚಿಕ್ಕಬಳ್ಳಾಪುರ ಕೆಎಸ್ಆರ್ಟಿಸಿ ನಿವೃತ್ತ ನೌಕರರ ಟ್ರಸ್ಟ್ ವತಿಯಿಂದ ಆಯೋಜಿಸಲಾಗಿದೆ. ರಾಜ್ಯದ ವಿವಿಧ ಭಾಗಗಳಿಂದ ಆಗಮಿಸುವ ನಮ್ಮ ನಾಲ್ಕೂ ಸಾರಿಗೆ ನಿಗಮಗಳ ನಿವೃತ್ತ ನೌಕರರು, ಇತರೆ ಕಂಪನಿ ಹಾಗೂ ಕಾರ್ಖಾನೆಗಳ ನಿವೃತ್ತ ನೌಕರರು ಸಹಾ ಅಧಿಕ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ.
ನಮ್ಮ ಎಲ್ಲ ಇಪಿಎಸ್ ನಿವೃತ್ತರು ಜ.24ರ ಶನಿವಾರದಂದು ಬೆಳಗ್ಗೆ 11 ಗಂಟೆಗೆ ಸರಿಯಾಗಿ ಬೆಂಗಳೂರಿನ ಮಲ್ಲೇಶ್ವರಂ, 18ನೇ ಅಡ್ಡರಸ್ತೆಯಲ್ಲಿರುವ ಬಿಡಬ್ಲ್ಯೂಎಸ್ಎಸ್ಬಿ, ಸುವರ್ಣ ಭವನದಲ್ಲಿರುವ ಸಚಿವರ ಕಚೇರಿಗೆ ಅಂದು ನಾವೆಲ್ಲರೂ ಹೋಗಿ ಭೇಟಿ ಮಾಡಿ, ನಮ್ಮ ಬೇಡಿಕೆಗಳ ಬಗ್ಗೆ ಚರ್ಚಿಸಿ, ಮನವಿ ಪತ್ರ ಸಲ್ಲಿಸೋಣ, ಇದಕ್ಕೆ ತಾವೆಲ್ಲರೂ ಭಾಗವಹಿಸುವ ಮೂಲಕ ಒಗ್ಗಟ್ಟು ತೋರಿಸೋಣ ಎಂದು ಕಾರ್ಯಕಾರಿ ಸಮಿತಿ ಪರವಾಗಿ ನಂಜುಂಡೇಗೌಡ ವಿನಂತಿಸಿಕೊಂಡಿದ್ದಾರೆ.
Related









