NEWSನಮ್ಮರಾಜ್ಯರಾಜಕೀಯ

ಜಂಟಿ ವಿಶೇಷ ಅಧಿವೇಶನ: ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಗೆ ಅವಕಾಶ ಕೊಡದೇ ಜಾಣತನ ಮೆರೆದ ರಾಜ್ಯಪಾಲರು

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಗುರುವಾರ (ಜ.22) ಬೆಳಗ್ಗೆ ಅಂದರೆ ಇಂದು  ಆರಂಭವಾದ ವಿಧಾನಮಂಡಲದ ಜಂಟಿ ವಿಶೇಷ ಅಧಿವೇಶನದಲ್ಲಿ ಭಾರೀ ಹೈಡ್ರಾಮವೇ ನಡೆಯಿತು. ರಾಜ್ಯಪಾಲರು ಸರ್ಕಾರ ಬರೆದುಕೊಟ್ಟ ಭಾಷಣ ಓದದೆ, ತಮ್ಮದೇ ಆದ ಕೇವಲ ಎರಡೇ ಸಾಲಿನ ಭಾಷಣ ಓದಿ ಒಂದೇ ನಿಮಿಷದಲ್ಲಿ ಹೊರ ನಡೆದರು. ಇದಕ್ಕೆ ಆಡಳಿತ ಪಕ್ಷದ ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಈ ನಡುವೆ ಈ ಜಂಟಿ ಅಧಿವೇಶನದಲ್ಲಿ ರಾಜ್ಯಪಾಲ ಥಾವರ್‌ ಚಂದ್ ಗೆಹ್ಲೋಟ್‌‌ ಚುಟುಕಾಗಿ ಭಾಷಣ ಮಾಡಿದರೂ ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಗೆ ಅವಕಾಶ ಕೊಡದೇ ಜಾಣತನ ಮೆರೆದಿದ್ದಾರೆ ಎಂಬುವುದನ್ನು ಪ್ರತಿಯೊಬ್ಬರು ಗಮನಿಸಬೇಕಿದೆ.

ಹೌದು. ಸಂವಿಧಾನದ ವಿಧಿ 176 (Article 176) ರ ಪ್ರಕಾರ ಪ್ರತಿ ವರ್ಷದ ಮೊದಲ ಅಧಿವೇಶನವು ರಾಜ್ಯಪಾಲರ ಭಾಷಣದೊಂದಿಗೆ ಆರಂಭವಾಗುವುದು ಕಡ್ಡಾಯ. ಹೀಗಾಗಿ ರಾಜ್ಯ ಸರ್ಕಾರದ ಭಾಷಣದಲ್ಲಿ ಕೇಂದ್ರದ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುವ ಅಂಶ ಇರುವ ಕಾರಣ ರಾಜ್ಯಪಾಲರು ಯಾವ ನಿರ್ಧಾರವನ್ನು ಕೈಗೊಳ್ಳುತ್ತಾರೆ ಎಂಬ ಕುತೂಹಲ ಇತ್ತು.

ಸರ್ಕಾರ ಸಿದ್ಧಪಡಿಸಿದ ಭಾಷಣ ಓದಲು ನಿರಾಕರಿಸಿ ಬೆಳಗ್ಗೆ 10:10ರ ತನಕವೂ ಅಧಿವೇಶನಕ್ಕೆ (Joint session) ಬರುವ ಬಗ್ಗೆ ಅಧಿಕೃತವಾಗಿ ಹೇಳದೇ ಸರ್ಕಾರವನ್ನು ಪೇಚಿಗೆ ಸಿಲುಕಿಸಿದರು. ಬಳಿಕ ಅಧಿವೇಶನಕ್ಕೆ ಬರುವ ಬಗ್ಗೆ ತಿಳಿಸಿ 11 ಗಂಟೆಗೆ ವಿಧಾನಸಭೆಗೆ ಆಗಮಿಸಿದ ರಾಜ್ಯಪಾಲರು ಒಂದೇ ನಿಮಿಷದಲ್ಲಿ ಭಾಷಣ ಮುಗಿಸಿ ಸರ್ಕಾರಕ್ಕೆ ಮತ್ತೊಂದು ಶಾಕ್ ನೀಡಿದರು. ಒಂದು ವೇಳೆ ಅಧಿವೇಶನಕ್ಕೆ ಬಾರದೇ ಇದ್ದರೆ ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಯಾಗುವ ಸಾಧ್ಯತೆ ಇತ್ತು. ಆದರೆ ಅಧಿವೇಶನಕ್ಕೆ ಹಾಜರಾಗುವ ಮೂಲಕ ಈ ಸಮಸ್ಯೆಯಿಂದ ಪಾರಾದರು.

ಏನಾಯ್ತು?: ಮನರೇಗಾ ಹೆಸರು ಬದಲಾಯಿಸಿದ್ದನ್ನು ಖಂಡಿಸಿ ರಾಜ್ಯ ಸರ್ಕಾರ ಕರೆದಿರುವ ವಿಶೇಷ ಜಂಟಿ ಅಧಿವೇಶನದಲ್ಲಿ ಮೊದಲ ದಿನ ಹೈಡ್ರಾಮಾ ನಡೆಯಿತು. ತಮಿಳುನಾಡು, ಕೇರಳ ಮಾದರಿಯಲ್ಲೇ ಕರ್ನಾಟಕದಲ್ಲೂ ಸರ್ಕಾರ ಬರೆದುಕೊಟ್ಟ ಭಾಷಣವನ್ನು ರಾಜ್ಯಪಾಲ ಗೆಹ್ಲೋಟ್ ತಿರಸ್ಕರಿಸಿದರು.

ವಿಶೇಷ ಜಂಟಿ ಅಧಿವೇಶನಕ್ಕೆ ಆಗಮಿಸಿದ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್‌ರನ್ನು ಸಿಎಂ ಸಿದ್ದರಾಮಯ್ಯ, ಸ್ಪೀಕರ್ ಖಾದರ್, ಸಭಾಪತಿ ಹೊರಟ್ಟಿ ಸಾಂಪ್ರದಾಯಿಕವಾಗಿ ಸ್ವಾಗತ ಕೋರಿದರು. ವಂದೇಮಾತರಂ ಮೂಲಕ ವಿಧಾನಸಭೆ ಕಲಾಪ ಆರಂಭವಾಯಿತು. ಸದಸ್ಯರಿಗೆ ಸಂವಿಧಾನದ ಪೀಠಿಕೆ ಬೋಧಿಸಿದ ಸ್ಪೀಕರ್, ಎಲ್ಲರಿಗೂ ನಮಸ್ಕಾರ ಎಂದು ಕನ್ನಡದಲ್ಲಿ ಭಾಷಣ ಆರಂಭಿಸಿ, ಸಿಎಂ, ಸ್ಪೀಕರ್ ಎಲ್ಲ ಸದಸ್ಯರಿಗೆ ಜಂಟಿ ಅಧಿವೇಶನಕ್ಕೆ ಸ್ವಾಗತ. ನನ್ನ ಸರ್ಕಾರ ರಾಜ್ಯದ ಆರ್ಥಿಕ, ಸಾಮಾಜಿಕ, ಬೌದ್ಧಿಕ ಅಭಿವೃದ್ಧಿಗೆ ಬದ್ಧವಾಗಿದೆ. ಜೈಹಿಂದ್, ಜೈ ಕರ್ನಾಟಕ ಎಂದು ಹೇಳಿ ಕೇವಲ 1 ನಿಮಿಷದಲ್ಲಿ ನಿರ್ಗಮಿಸಿದರು.

ರಾಜ್ಯಪಾಲರ ಆಕ್ಷೇಪದ ಮೇರೆಗೆ ಕೇಂದ್ರದ ವಿರುದ್ಧದ 11 ಪ್ಯಾರಾಗಳನ್ನು ತೆಗೆಯಲು ಒಪ್ಪದ ರಾಜ್ಯ ಸರ್ಕಾರ ಕೇವಲ 2 ಅಂಶಗಳನ್ನು ಮಾತ್ರ ತೆಗೆದು ಭಾಷಣ ಸಿದ್ಧಪಡಿಸಿತ್ತು. ಇದಕ್ಕೆ ಒಪ್ಪದ ರಾಜ್ಯಪಾಲರು ಔಪಚಾರಿಕ ಭಾಷಣ ಮಾಡಿ ನಿರ್ಗಮನಕ್ಕೆ ಮುಂದಾದರು.

ಈ ವೇಳೆ, ಪರಿಷತ್ ಸದಸ್ಯ ಬಿಕೆ ಹರಿಪ್ರಸಾದ್ ರಾಜ್ಯಪಾಲರನ್ನು ಅಡ್ಡಗಟ್ಟುವ ಪ್ರಯತ್ನ ಮಾಡಿದರು. ಶಾಸಕರಾದ ಮಾಗಡಿ ಬಾಲಕೃಷ್ಣ, ಶರತ್ ಬಚ್ಚೇಗೌಡ, ಪ್ರದೀಪ್ ಈಶ್ವರ್, ಪರಿಷತ್ ಸದಸ್ಯರಾದ ರವಿ, ಸಲೀಂ ಅಹಮದ್, ಐವಾನ್ ಡಿಸೋಜಾ ರಾಜ್ಯಪಾಲರ ಹಿಂದೆಯೇ ಹೋಗಿ ಘೋಷಣೆ ಕೂಗಿದರು. ಹರಿಪ್ರಸಾದ್ ಅವರಂತೂ ಬೆರಳು ತೋರಿಸಿ ಎಚ್ಚರಿಕೆಯ ಸನ್ನೆ ಮಾಡಿದ್ರು. ಆಗ ಮಾರ್ಷಲ್‌ಗಳು ಹರಿಪ್ರಸಾದ್ ಅವರನ್ನು ಎಳೆದು ತಳ್ಳಿದಾಗ ಜುಬ್ಬಾ ಹರಿದ ಘಟನೆಯೂ ನಡೆಯಿತು. ರಾಜ್ಯಪಾಲರ ಹಿಂದೆಯೇ ತೆರಳಿ ಬೀಳ್ಕೊಡುವಾಗ ಸಿಎಂ ಕೂಡ ಅಸಮಾಧಾನ ವ್ಯಕ್ತಪಡಿಸಿದ್ರು

ಭಾಷಣ ಪ್ರತಿಯಲ್ಲೇನಿತ್ತು?: ಕೇಂದ್ರದಿಂದ ರಾಜ್ಯವು ದಮನಕಾರಿ ಪರಿಸ್ಥಿತಿ ಎದುರಿಸುತ್ತಿದೆ. ವಿಶೇಷ ಯೋಜನೆಗಳಲ್ಲಿ ಕೇಂದ್ರದಿಂದ ಅನ್ಯಾಯಕ್ಕೆ ತುತ್ತಾಗಿದ್ದು 15ನೇ ಹಣಕಾಸು ಆಯೋಗದ ಅವಧಿಯಲ್ಲಿ ರಾಜ್ಯಕ್ಕೆ 1.25 ಲಕ್ಷ ಕೋಟಿ ರೂ. ಅನುದಾನ ವಂಚನೆಯಾಗಿದೆ. ನರೇಗಾ ರದ್ದುಗೊಳಿಸಿದ್ದರಿಂದ ಗ್ರಾಮೀಣ ಬದುಕು ದುರ್ಬಲಗೊಂಡಿದೆ.

ಹೊಸ ಕಾಯ್ದೆ ಉದ್ಯೋಗ ಕಿತ್ತುಕೊಂಡಿದ್ದು ಕಾರ್ಪೊರೇಟ್ ಬಂಡವಾಳಗಾರರ ಹಿತಾಸಕ್ತಿ ಕಾಪಾಡುವ ಉದ್ದೇಶವನ್ನು ಹೊಂದಿದೆ. ರಾಷ್ಟ್ರದ ಹಿತಾಸಕ್ತಿ ವಿನಾಶದ ಅಂಚಿಗೆ ದೂಡುವ ಪ್ರಗತಿ ವಿರೋಧಿ ಕ್ರಮವಾಗಿದೆ. ರಾಜ್ಯಗಳನ್ನು ಸಂಪರ್ಕಿಸದೇ ವಿಜಿ-ಜಿ ರಾಮ್‌ಜಿ ಜಾರಿಗೊಳಿಸಿದ್ದು ಸಂವಿಧಾನಬಾಹಿರ.

ಭಾಷಣ ಓದದೇ ಇರುವುದು ಹೊಸದೆನಲ್ಲ: ಇದೇ ರೀತಿ ರಾಜ್ಯಪಾಲರು ಭಾಷಣ ಓದದೇ ಇರುವುದು ಹೊಸದೇನಲ್ಲ. ಅನಾರೋಗ್ಯದ ಕಾರಣದಿಂದಾಗಿ ಅಂದಿನ ರಾಜ್ಯಪಾಲರಾದ ಖುರ್ಷಿದ್ ಅಲಂಖಾನ್ ಭಾಷಣ ಓದದೇ ಮಂಡಿಸಿ ಹೋಗಿದ್ದರು. ಯಡಿಯೂರಪ್ಪ ಸರ್ಕಾರದ ಅವಧಿಯ 2011ರ ಜನವರಿ 6ರಂದು ಅಂದಿನ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಪೂರ್ಣ ಭಾಷಣ ಓದದೇ ಮಂಡಿಸಿ ಹೋಗಿದ್ದರು. ಬಿಎಸ್‌ವೈ ಸರ್ಕಾರದ ವಿರುದ್ಧ ಕಾಂಗ್ರೆಸ್-ಜೆಡಿಎಸ್ ಭ್ರಷ್ಟಾಚಾರ ಆರೋಪ ಮಾಡಿದ್ದವು.

Megha
the authorMegha

Leave a Reply

error: Content is protected !!