ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ನೌಕರರ ವೇತನ ಹೆಚ್ಚಳ ಹಾಗೂ ಶೇ.15ರಷ್ಟು ಹೆಚ್ಚವಾಗಿರುವ 38 ತಿಂಗಳ ವೇತನ ಹಿಂಬಾಕಿ ಕೊಡಬೇಕು ಎಂಬುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನೌಕರರ ಸಂಘಟನೆಗಳು ಇದೇ ಜನವರಿ 29ರಂದು ಒಂದು ದಿನದ ಪ್ರತಿಭಟನೆಗೆ ಕರೆ ನೀಡಿವೆ.

ಈ ಹಿಂದೆ ಸಾರಿಗೆ ಕಾರ್ಮಿಕರ ಜಂಟಿ ಕ್ರಿಯಾ ಸಮಿತಿ ಘೋಷಿಸಿದ್ದ ಮುಷ್ಕರವು ವಿವಿಧ ಕಾರಣಗಳಿಂದ ಮುಂದೂಡಿಕೆ ಆಗಿತ್ತು. ಇದೀಗ ಸರ್ಕಾರ ಯಾವುದೇ ರೀತಿಯಲ್ಲಿ ಸಕಾರಾತ್ಮಕವಾಗಿ ಸ್ಪಂದಿಸದ ಕಾರಣಕ್ಕೆ ರಾಜ್ಯವ್ಯಾಪಿ ‘ಬೆಂಗಳೂರು ಚಲೋ’ ನಡೆಸುವುದಾಗಿ ಜಂಟಿ ಕ್ರಿಯಾ ಸಮಿತಿ ಅಧಿಕೃವಾಗಿ ಘೋಷಿಸಿದೆ. ಇನ್ನು ಈ ಪ್ರತಿಭಟನೆ ಜ.29ರ ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆ ವರೆಗೆ ನಗರ ಫ್ರೀಡಂ ಪಾರ್ಕ್‌ನಲ್ಲಿ ನಡೆಯುವುದರಿಂದ ಸಾರಿಗೆ ಬಸ್‌ಗಳ ಓಡಾಟದಲ್ಲಿ ಯಾವುದೆ ವ್ಯತ್ಯಯವಾಗುವುದಿಲ್ಲ ಎಂದು ತಿಳಿದು ಬಂದಿದೆ.
ಈಗಾಗಲೇ ಸರ್ಕಾರದೊಂದಿಗೆ ಸಾರಿಗೆ ನೌಕರರ ಸಂಘಟನೆಗಳು ಹಲವು ಬಾರಿ ಮಾತುಕತೆ ನಡೆಸಿವೆ. ಆದರೆ ಸರ್ಕಾರ ಭರವಸೆ ನೀಡಿತೇ ವಿನಾ ಬೇಡಿಕೆ ಈಡೇರಿಸಲು ಮುಂದಾಗಿಲ್ಲ. ಹೀಗಾಗಿ 2024 ಜನವರಿ 1ರಿಂದ ಜಾರಿಗೆ ಬರಬೇಕಿರುವ ವೇತನ ಹೆಚ್ಚಳ, 2020 ಜನವರಿ 1ರಿಂದ ಜಾರಿಗೆ ಬಂದಿರುವ ಶೇ.15ರಷ್ಟು ವೇತನ ಹೆಚ್ಚಳ ಹಿಂಬಾಕಿ ಇದುವರೆಗೂ ನೌಕರರ ಕೈ ಸೇರಿಲ್ಲ. ಹೀಗಾಗಿ 4 ಸಾರಿಗೆ ನಿಗಮಗಳ ನೌಕರರು ಪ್ರತಿಭಟನೆಯ ಹಾದಿ ಹಿಡಿದಿದ್ದಾರೆ.
ಈ ಒಂದು ದಿನದ ಪ್ರತಿಭಟನೆ ಬೆಂಬಲಿಸುವುದಾಗಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಮಾಜಿ ಉಪಾಧ್ಯಕ್ಷ ಡಾ.ಎಂ.ಆರ್. ವೆಂಕಟೇಶ್ ಅವರು ಮುಖ್ಯಮಂತ್ರಿಗಳಿಗೆ ಬಹಿರಂಗ ಪತ್ರ ಬರೆದು ಕೂಡಲೇ ಬೇಡಿಕೆ ಈಡೇರಿಸಿ ಎಂದು ಒತ್ತಾಯಿಸಿದ್ದಾರೆ. ಜತೆಗೆ ಸಾರಿಗೆ ನಿವೃತ್ತ ನೌಕರರ ಸಂಘಟನೆಯೂ ಬೆಂಬಲ ನೀಡುವುದಾಗಿ ತಿಳಿಸಿದೆ.
4 ಸಾರಿಗೆ ನಿಗಮಗಳ ಮುಷ್ಕರ: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC), ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC), ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC) ಹಾಗೂ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (KKRTC) ನಿಗಮಗಳು ಒಟ್ಟಾರೆ ಸಾರಿಗೆ ಸೇವೆ ನೀಡುತ್ತಿವೆ. ಸರ್ಕಾರದ ಶಕ್ತಿ ಯೋಜನೆ ಜಾರಿಗೆ ಸಾರಿಗೆ ಸಂಸ್ಥೆಗಳ ಪ್ರತಿಯೊಬ್ಬ ನೌಕರರು ಶ್ರಮಿಸಿದ್ದಾರೆ. ಆದ್ದರಿಂದ ವೇತನ ಪರಿಷ್ಕರಣೆ, ಹಿಂಬಾಕಿ ನೀಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಬೇಕೆಂದು ಅವರು ಒತ್ತಾಯಿಸಿದರು. ಇದೂವರೆಗೂ ಕೋರಿದ ಮನವಿಗಳಿಗೆ ಸ್ಪಂದಿಸದ ಕಾರಣ ಪ್ರತಿಭಟನೆ ಅನಿವಾರ್ಯವೆಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.
ಕೊಟ್ಟ ಮಾತಿನಂತೆ ನಡೆದುಕೊಳ್ಳದ ಸರ್ಕಾರ: 2025ರ ಆಗಸ್ಟ್ ತಿಂಗಳಲ್ಲಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನೌಕರರು ಉಪವಾಸ ಸತ್ಯಾಗ್ರಹಕ್ಕೆ ಮುಂದಾಗಿದ್ದರು. ಆದರೆ ಸರ್ಕಾರ ನೀಡಿದ ಭರವಸೆ, ಕರ್ನಾಟಕ ಹೈಕೋರ್ಟ್ ನೀಡಿದ್ದ ಆದೇಶದ ಮೇರೆಗೆ ಅಂದಿನ ಮುಷ್ಕರ ಮುಂದೂಡಿಕೆ ಆಗಿತ್ತು. ಕಳೆದ ದೀಪಾವಳಿ ಹಬ್ಬದ ಹೊತ್ತಿಗೆ ಮತ್ತೆ ಮುಷ್ಕರಕ್ಕೆ ನೌಕರರು ಸಜ್ಜಾಗಿದ್ದರು.
ಆದರೆ, ಅಂದು KSRTC ವ್ಯವಸ್ಥಾಪಕ ನಿರ್ದೇಶಕರು ಮೌಖಿಕ ಭರವಸೆ ನೀಡಿದ್ದರು. ಚರ್ಚೆಗೆ 15 ದಿನಗಳ ಕಾಲಾವಕಾಶ ಕೋರಿದ್ದರು. ಈ ಹಿನ್ನೆಲೆ 38 ತಿಂಗಳ ಹಿಂಬಾಕಿ ಸಿಗುವುದೆಂಬ ಆಶಾಭಾವನೆಯಿಂದ ಮುಷ್ಕರವನ್ನು ಮತ್ತೆ ಕೈ ಬಿಡಲಾಗಿತ್ತು. ಬಳಿಕ ಸರ್ಕಾರ ಭರವಸೆ ನೀಡಿತೇ ಹೊರತು ಕೊಟ್ಟ ಮಾತಿನಂತೆ ನಡೆದುಕೊಂಡಿಲ್ಲ. ಹೀಗಾಗಿ ಕುಪಿತಗೊಂಡಿರುವ ಸಾರಿಗೆ ನೌಕರರ ಸಂಘಟನೆಗಳು ಮತ್ತೆ ಪ್ರತಿಭಟನೆಗೆ ಕರೆ ನೀಡಿವೆ.
ಸಾರಿಗೆ ನಿಗಮಗಳ ಸಾಲದ ಹೊರೆ 7000 ಕೋಟಿ ರೂ.: ಮಹಿಳೆಯರಿಗೆ ಉಚಿತ ಪ್ರಯಾಣ ನೀಡುತ್ತಿರುವ ಸರ್ಕಾರದ ‘ಶಕ್ತಿ ಯೋಜನೆ’ಗೆ ಖರ್ಚಾಗುವ ಸಾವಿರಾರು ಕೋಟಿ ರೂಪಾಯಿಯನ್ನು ಭರಿಸುತ್ತಿಲ್ಲ. ಹೀಗಾಗಿ ಈ ಯೋಜನೆಯ ಯಶಸ್ಸಿಗಾಗಿ ಎಲ್ಲ ಸಾರಿಗೆ ನೌಕರರು ಸಾಕಾರಕ್ಕೆ ಶ್ರಮಿಸಿದ್ದರು ಸಾರಿಗೆ ಸಂಸ್ಥೆಗಳು ಮಾತ್ರ ದಿವಾಳಿಯ ಹಂಚಿನಲ್ಲಿ ಬಂದು ನಿಂತಿವೆ.
ಈಗ ಈ ನಾಲ್ಕೂ ನಿಗಮಗಳ ಒಟ್ಟು ಸಾಲದ ಹೊರೆ 7000 ಕೋಟಿ ರೂಪಾಯಿಗೂ ಹೆಚ್ಚಿದೆ. ಇದರಲ್ಲಿ ಭವಿಷ್ಯ ನಿಧಿ ಹಾಗೂ ನಿವೃತ್ತ ನೌಕರರ ಸವಲತ್ತುಗಳೂ ಕೂಡ ಬಾಕಿಯೂ ಇವೆ. ನಿಗಮಗಳಿಗೆ ಶಕ್ತಿ ತುಂಬಿದ ನೌಕರರಿಗೇ ಶಕ್ತಿಯೇ ಇಲ್ಲದಂತಾಗಿದೆ. ಸಾರಿಗೆ ಇಲಾಖೆ ಲಾಭದಲ್ಲಿದೆ ಎಂದು ಸಚಿವರು, ಸರ್ಕಾರದ ಪ್ರಮುಖ ಹೇಳುತ್ತಾರೆ. ಲಾಭದಲ್ಲಿದ್ದರೆ ನೌಕರರಿಗೆ ಹಂತ ಹಂತವಾಗಿ ಬಾಕಿ ನೀಡಬಹುದಿತ್ತು. ನೀಡದಿರುವುದನ್ನು ನೋಡಿದರೆ ಸಾರಿಗೆ ನಿಗಮಗಳ ಆರ್ಥಿಕ ಸ್ಥಿತಿಗತಿ ಹದಗೆಟ್ಟಿದೆ ಎಂಬುದು ಗೊತ್ತಾಗುತ್ತಿದೆ.
ಜನವರಿ 29ರಂದು ಬಸ್ ಸಂಚಾರ ಇರುತ್ತೆ: ಸದ್ಯದ ಮಾಹಿತಿ ಪ್ರಕಾರ, ಪ್ರತಿ ಬಾರಿ ಪ್ರತಿಭಟನೆ ನಡೆಸಿದಾಗಲೂ ಆಯಾ ನಿಗಮದ ಬಸ್‌ಗಳ ಕಾರ್ಯಾಚರಣೆ ಸ್ಥಗಿತಗೊಂಡಿರುತ್ತವೆ. ಆದರೆ, ಈ ಬಾರಿ ನಾಲ್ಕೂ ಸಾರಿಗೆ ನಿಗಮದ ನೌಕರರು ಪ್ರತಿಭಟನೆ ಮಾಡುವುದು ಖಚಿತವಾಗಿದ್ದರೂ ಕೂಡ ಒಂದು ದಿನದ ಮಟ್ಟಿಗೆ ಇದಾಗಿರುವುದರಿಂದ ಅಂದು ಬೆಂಗಳೂರಲ್ಲಿ ಬಿಎಂಟಿಎಸ್ ಬಸ್, ಇತರ ಆಯಾ ಭಾಗಗಳಲ್ಲಿ ಕೆಎಸ್‌ಆರ್‌ಟಿಸಿ, ಕೆಕೆಆರ್‌ಟಿಸಿ ಹಾಗೂ ಎನ್‌ಡಬ್ಲ್ಯುಕೆಆರ್‌ಟಿಸಿ ಬಸ್‌ಗಳ ಸಂಚಾರ ಇರುವುದಿಲ್ಲ ಎಂದು ಕೆಲ ಮಾಧ್ಯಗಳಲ್ಲಿ ವರದಿಯಾಗುತ್ತಿದೆ. ಆದರೆ ಸಾರಿಗೆ ಸೇವೆಯಲ್ಲಿ ಯಾವುದೇ ಅಸ್ತವ್ಯಸ್ತವಾಗುವುದಿಲ್ಲ. ಕಾರಣ ಇಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 4ಗಂಟೆ ವರೆಗೆ ನಡೆಯುವ ಪ್ರತಿಭಟನೆಯಾಗಿವುದರಿಂದ ಯಥಾಸ್ಥಿತಿಯಲ್ಲಿ ಬಸ್‌ಗಳ ಸಂಚಾರವಿರುತ್ತದೆ.
ಒಂದು ವೇಳೆ ಅಂದಿನ ಪ್ರತಿಭಟನಾ ಸ್ಥಳಕ್ಕೆ ಸಾರಿಗೆ ಸಚಿವರು ಅಥವಾ ಸಂಬಂಧಪಟ್ಟ ಅಧಿಕಾರಿಗಳು ಬಂದು ಬೇಡಿಕೆ ಈಡೇರಿಸುವುದಕ್ಕೆ ಒಂದು ಸಯಮ ನಿಗದಿ ಮಾಡಿಲ್ಲ ಎಂದಾದರೆ ಈ ಒಂದು ದಿನದ ಪ್ರತಿಭಟನೆ ಅನಿರ್ದಿಷ್ಟ ಮುಷ್ಕರವಾಗಿ ತಿರುಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಸಂಘಟನೆಗಳು ಪದಾಧಿಕಾರಿಗಳು ತಿಳಿಸಿದ್ದಾರೆ.
Related










